ಗ್ರಾಮೀಣ ಆರ್ಥಿಕತೆ ಸುಧಾರಣೆಗೆ ಎರಡು ಲಕ್ಷ ಪ್ರಾಥಮಿಕ ಕೃಷಿ ಸಾಲ ಸೊಸೈಟಿಗಳ ಸ್ಥಾಪನೆ: ಕೇಂದ್ರ ಸಚಿವ ಅಮಿತ್‌ ಶಾ

Amit Shah
  • ₹ 10 ಲಕ್ಷ ಕೋಟಿ ಕೃಷಿ ಸಾಲದ ಗುರಿ
  • 5 ವರ್ಷಗಳಲ್ಲಿ 63,000 ಸೊಸೈಟಿಗಳ ಕಂಪ್ಯೂಟರೀಕರಣ

ದೇಶದಲ್ಲಿ ಇನ್ನೂ ಎರಡು ಲಕ್ಷ “ಪ್ರಾಥಮಿಕ ಕೃಷಿ ಸಾಲ ಸೊಸೈಟಿ” (ಪ್ರೈಮರಿ ಅಗ್ರಿಕಲ್ಚರ್ ಕ್ರೆಡಿಟ್ ಸೊಸೈಟೀಸ್-ಪ್ಯಾಕ್ಸ್) ಗಳನ್ನು ಸ್ಥಾಪಿಸಿದರೆ ಮಾತ್ರವೇ ₹10 ಲಕ್ಷ ಕೋಟಿ ಕೃಷಿ ಸಾಲಗಳನ್ನು ಸಹಕಾರಿ ಪದ್ಧತಿಯಲ್ಲಿ ವಿತರಿಸಲು ಸಾಧ್ಯ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ.

ಸಹಕಾರ ಸಚಿವಾಲಯ ಮತ್ತು ರಾಜ್ಯ ಸಹಕಾರಿ ಬ್ಯಾಂಕುಗಳ ರಾಷ್ಟ್ರೀಯ ಒಕ್ಕೂಟ ದೆಹಲಿಯಲ್ಲಿ ಏರ್ಪಡಿಸಿದ್ದ ಗ್ರಾಮೀಣ ಸಹಕಾರಿ ಬ್ಯಾಂಕುಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಾ ಶಾ ಈ ವಿಷಯವನ್ನು ತಿಳಿಸಿದರು.

Eedina App

"ದೇಶದಲ್ಲಿ ಈಗಾಗಲೇ 95,000 ಇಂತಹ ಸೊಸೈಟಿಗಳಿದ್ದು, ಅವುಗಳಲ್ಲಿ ಕೇವಲ 63,000 ಮಾತ್ರ ಕಾರ್ಯನಿರತವಾಗಿವೆ. ಈ ಸೊಸೈಟಿಗಳು ಸಾಲ ವಿತರಣಾ ಪದ್ಧತಿಯ ಅತ್ಮಗಳಂತಿದ್ದು, ಇರುವ ಸೊಸೈಟಿಗಳನ್ನು ಬಲಪಡಿಸುವ ಮತ್ತು ವಿಸ್ತರಿಸುವ ಮೂಲಕ ಮಾತ್ರವೇ ನಾವು ನಮ್ಮ ಗುರಿ ತಲುಪಲು ಸಾಧ್ಯ" ಎಂದು ಅವರು ಹೇಳಿದ್ದಾರೆ.

"ದೇಶದಲ್ಲಿ 3 ಲಕ್ಷ ಪಂಚಾಯ್ತಿಗಳಿವೆ. ಆದರೆ, ಸೊಸೈಟಿಗಳ ಸಂಖ್ಯೆ ಕೇವಲ 95,000. ನಾವು ಇನ್ನೂ 2 ಲಕ್ಷ ಸೊಸೈಟಿಗಳನ್ನು ಸ್ಥಾಪಿಸಬೇಕಿದೆ ಎಂದು ಹೇಳುತ್ತಾ, ಇದಕ್ಕೆ 5 ವರ್ಷಗಳ ಗಡುವನ್ನು ನಿಗದಿ ಮಾಡಿ, ಅಷ್ಟರಲ್ಲಿ ಈ ಗುರಿ ಸಾಧಿಸಬೇಕು" ಎಂದು ರಾಜ್ಯ ಸಹಕಾರಿ ಬ್ಯಾಂಕುಗಳ ಹಿರಿಯ ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.

AV Eye Hospital ad

"ಸಹಕಾರಿ ಬ್ಯಾಂಕುಗಳ ಮೂಲಕ ಕೃಷಿ ಸಾಲ ವಿತರಣೆಯ ಪ್ರಮಾಣ ಕುಸಿಯುತ್ತಿದೆ. 63,000 ಸೊಸೈಟಿಗಳ ಮೂಲಕ ವಿತರಣೆಯಾಗಿರುವ ಸಾಲ ₹2 ಲಕ್ಷ ಕೋಟಿಗಳು ಮಾತ್ರ. ಈ ಮೊತ್ತ ₹3 ಲಕ್ಷ ಕೋಟಿಗಳಿಗೆ ಏರಿಕೆಯಾದಲ್ಲಿ ನಾವು ₹10 ಲಕ್ಷ ಕೋಟಿ ಕೃಷಿ ಸಾಲದ ಗುರಿ ತಲುಪಲು ಸಾಧ್ಯ" ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

"ಕಂಪ್ಯೂಟರೀಕರಣ ನೂರಾರು ಖಾಯಿಲೆಗಳಿಗೆ ಔಷಧಿಯಾಗಿದೆ. ಇದರಿಂದ ಮಾನವ ಸಂಪನ್ಮೂಲದ ಕೊರತೆ ನಿಯಂತ್ರಣಕ್ಕೆ ಬರುತ್ತದೆ ಮತ್ತು ಲೆಕ್ಕಪತ್ರಗಳು ಪಾರದರ್ಶಕವಾಗಿರುತ್ತವೆ. ಆದ್ದರಿಂದ ಈ ಯೋಜನೆಯು ಎಲ್ಲಾ 63,000 ಸೊಸೈಟಿಗಳನ್ನು ಐದು ವರ್ಷಗಳಲ್ಲಿ ಕಂಪ್ಯೂಟರೀಕರಣಗೊಳಿಸುವ ಉದ್ದೇಶ ಹೊಂದಿದ್ದು, ಇದಕ್ಕಾಗಿ 2,516 ಕೋಟಿ ರೂಪಾಯಿಗಳು ವೆಚ್ಚವಾಗಲಿದೆ. ಇದರಲ್ಲಿ ಕೇಂದ್ರ ಸರ್ಕಾರ ₹1,528 ಕೋಟಿಗಳ ಪಾಲು ನೀಡುತ್ತದೆ" ಎಂದು ವಿವರಿಸಿದರು.

"ಪ್ಯಾಕ್‌ಗಳನ್ನು ಹೆಚ್ಚಿಸುವ ಮೂಲಕ ಹೆಚ್ಚು ರೈತರನ್ನು ಇದರ ವ್ಯಾಪ್ತಿಗೆ ತರಬಹುದು. ಇದಕ್ಕೆ ಆಗತ್ಯವಾದ ಕಾನೂನುಗಳ ರಚನೆ ಆರಂಭವಾಗಿದೆ. ಅದರ ಕರಡನ್ನು ಶೀಘ್ರದಲ್ಲಿಯೇ ರಾಜ್ಯ ಸರ್ಕಾರಗಳು ಮತ್ತು ಫಲಾನುಭವಿಗಳ ಮಾಹಿತಿಗೆ ಬಿಡುಗಡೆ ಮಾಡಲಾಗುವುದು. ಅವರ ಸಲಹೆ ಸೂಚನೆಗಳನ್ನು ಆಧರಿಸಿ ಶೀಘ್ರವೇ ಆದೇಶ ಹೊರಡಿಸಲಾಗುವುದು" ಎಂದು ಹೇಳಿದರು.

ಸೊಸೈಟಿಗಳ ಬಹುಮುಖಿ ಚಟುವಟಿಕೆಗಳಿಗೆ ಉತ್ತೇಜನ

"ಈ ಸೊಸೈಟಿಗಳನ್ನು ಸಾಲಕ್ಕೆ ಮಾತ್ರ ಸೀಮಿತಗೊಳಿಸದೆ, ಅವುಗಳಿಗೆ ಪೆಟ್ರೋಲಿಯಂ ಉತ್ಪನ್ನಗಳ ಸಗಟು ವಿತರಣೆಯ ಅನುಮತಿ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತಿತರ 22 ಚಟವಟಿಕೆಗಳನ್ನು ನಡೆಸಲು ಸಹ ಅವಕಾಶ ಕಲ್ಪಿಸಲಾಗುವುದು" ಎಂದು ಅಮಿತ್ ಶಾ ಹೇಳಿದರು. 

"ಪ್ಯಾಕ್‌ಗಳು ಮೂರು ಹಂತಗಳ ಆಡಳಿತ ಹೊಂದಿದ್ದು, ಇದರಲ್ಲಿ ಸೊಸೈಟಿಗಳು ತಳಹಂತದಲ್ಲಿರುತ್ತವೆ. 13 ಕೋಟಿ ರೈತರು ಇದರ ಸದಸ್ಯರಾಗಿರುತ್ತಾರೆ. ಇದು ಗ್ರಾಮೀಣ ಆರ್ಥಿಕತೆಯ ಸುಧಾರಣೆಯಲ್ಲಿ ಗುರುತರ ಪಾತ್ರ ವಹಿಸುತ್ತದೆ" ಎಂದರು.

"ಸರ್ಕಾರ ಹೊಸ ಸಹಕಾರಿ ನೀತಿಯನ್ನು ರಚಿಸುವ ಬಗ್ಗೆ ಕಾರ್ಯನಿರತವಾಗಿದೆ. ಈ ಮೂಲಕ ಇದಕ್ಕಾಗಿಯೇ ಒಂದು ವಿಶ್ವವಿದ್ಯಾಲಯ, ರಫ್ತು ಭವನ ಮತ್ತು ಇಡೀ ಸಹಕಾರಿ ಪದ್ಧತಿಯ ದತ್ತಾಂಶ ಸಂಗ್ರಹಣೆಗೆ ಯೋಜಿಸಲಾಗಿದೆ" ಎಂದು ಹೇಳಿದ್ದಾರೆ. 

"ಇಲ್ಲಿ ರಾಜ್ಯ, ಜಿಲ್ಲೆ ಮತ್ತು ಪಂಚಾಯ್ತಿ ಮಟ್ಟದ ಸಹಕಾರಿ ಸಂಸ್ಥೆಗಳಿದ್ದು ಅವುಗಳೊಂದಿಗೆ 100 ವರ್ಷ ಪೂರೈಸಿರುವ ಅಲ್ಪಾವಧಿ ಸಹಕಾರಿ ಸಾಲ ಸಂಸ್ಥೆಗಳನ್ನೂ ಒಳಗೊಳ್ಳಲಾಗುವುದು. ಇವುಗಳಲ್ಲಿ ಅತ್ಯುತ್ತಮ ಕಾರ್ಯ ಪ್ರದರ್ಶಿಸಿದ ಸಂಸ್ಥೆಗಳನ್ನು ಬಹುಮಾನಿಸಲಾಗುವುದು" ಎಂದು ಶಾ ಅವರು ಹೇಳಿದರು.

ಅಧಿಕೃತ ಹೇಳಿಕೆಯ ಪ್ರಕಾರ ದೇಶದಲ್ಲಿ ರಾಜ್ಯ ಮಟ್ಟದಲ್ಲಿ 34, ಜಿಲ್ಲಾ ಮಟ್ಟದಲ್ಲಿ 351 ಮತ್ತು ಪಂಚಾಯ್ತಿ ಮಟ್ಟದಲ್ಲಿ 96,575 ಅಲ್ಪಾವಧಿ ಸಹಕಾರಿ ಸಾಲ ಸಂಸ್ಥೆಗಳಿರುತ್ತವೆ ಎಂದು ಹೇಳಲಾಗಿದೆ.

ಈ ಸಮಾವೇಶದಲ್ಲಿ ಕೇಂದ್ರ ಸಹಕಾರಿ ರಾಜ್ಯ ಸಚಿವ ಬಿ.ಎಲ್. ವರ್ಮ, ಕೇಂದ್ರ ಸಹಕಾರಿ ಕಾರ್ಯದರ್ಶಿ ಗ್ಯಾನೇಶ್ ಕುಮಾರ್, ರಾಷ್ಟ್ರೀಯ ಸಹಕಾರಿ ಒಕ್ಕೂಟದ ನಿರ್ವಹಣಾ ನಿರ್ದೇಶಕ ಭೀಮ ಸುಬ್ರಹ್ಮಣ್ಯಂ, ಎನ್‌ಸಿಯುಐ ಅಧ್ಯಕ್ಷ ದಿಲೀಪ್ ಸಂಘಾನಿ, ಕ್ರಿಭ್ಕೋ ಅಧ್ಯಕ್ಷ ಚಂದ್ರಪಾಲ್ ಸಿಂಗ್ ಯಾದವ್ ಮತ್ತು ನಫೇದ್ ಅಧ್ಯಕ್ಷ  ಬಿಜೇಂದ್ರ ಸಿಂಗ್ ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app