ದೆಹಲಿ ರೈತ ಹೋರಾಟಕ್ಕೆ 2 ವರ್ಷ | ಕೃಷಿ ಕಾಯ್ದೆ ಹಿಂಪಡೆಯದ ರಾಜ್ಯ ಸರ್ಕಾರ; ನ.26ಕ್ಕೆ ಬೃಹತ್‌ ಪ್ರತಿಭಟನೆ

ದೆಹಲಿ ರೈತ ಹೋರಾಟ
  • ಕೊಟ್ಟ ಮಾತಿಗೆ ತಪ್ಪಿದ ಕೇಂದ್ರ ಸರ್ಕಾರ, ಕಾಯ್ದೆ ಹಿಂಪಡೆಯದ ರಾಜ್ಯ ಸರ್ಕಾರಗಳಿಗೆ ವಿರೋಧ
  • ಚರಿತ್ರಾರ್ಹ ದೆಹಲಿ ಹೋರಾಟದ ಫೋಟೋ ಗ್ಯಾಲರಿ, ಪುಸ್ತಕ ಬಿಡುಗಡೆ ಮತ್ತು ಪ್ರತಿಭಟನೆಗೆ ಸಜ್ಜು

ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆದ ಐತಿಹಾಸಿಕ ಹೋರಾಟ ನ.26ರಂದು ಎರಡು ವರ್ಷ ಪೂರೈಸುತ್ತಿದ್ದು, ಅದರ ಭಾಗವಾಗಿ ರಾಜ್ಯದ ರೈತ ಸಂಘಟನೆಗಳೆಲ್ಲ ಒಟ್ಟಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆಯನ್ನು ಆಯೋಜಿಸಿವೆ.

ರೈತ ಹೋರಾಟಕ್ಕೆ ಎರಡು ವರ್ಷ ಪೂರೈಸುತ್ತಿರುವುದರಿಂದ ನ.26ರಂದು ದೇಶದಾದ್ಯಂತ ʼರಾಜಭವನ್‌ ಚಲೋʼ ನಡೆಸಲು ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ಕರೆ ನೀಡಿತ್ತು. ಅದರ ಭಾಗವಾಗಿ ಕರ್ನಾಟಕದಲ್ಲಿಯೂ ರೈತ ಸಂಘಟನೆಗಳ ಒಕ್ಕೂಟ ʼಸಂಯುಕ್ತ ಹೋರಾಟ ಕರ್ನಾಟಕʼದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ, ಈ ಹೋರಾಟದಿಂದ ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದ ರೈತ ಸಂಘಟನೆಯನ್ನು ಹೊರಗಿಡಲಾಗಿದೆ.

Eedina App

ಕೇಂದ್ರ ಸರ್ಕಾರ ರೈತರ ಒಗ್ಗಟ್ಟಿನ ಹೋರಾಟಕ್ಕೆ ಮಣಿದು ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದರೂ ರಾಜ್ಯ ಸರ್ಕಾರ ಇದುವರೆಗೂ ರೈತರು ವಿರೋಧಿಸುತ್ತಿರುವ ಕೃಷಿ ಕಾನೂನುಗಳನ್ನು ಹಿಂಪಡೆದಿಲ್ಲ. ಕರ್ನಾಟಕ ರಾಜ್ಯ ಭೂ ಸುಧಾರಣಾ ತಿದ್ದಪಡಿ ಕಾಯ್ದೆ-2020, ಕರ್ನಾಟಕ ರಾಜ್ಯ ಎಪಿಎಂಸಿ ತಿದ್ದುಪಡಿ ಕಾಯ್ದೆ-2020, ವಿದ್ಯುತ್‌ ಖಾಸಗೀಕರಣ ಮತ್ತು ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಕೆ ಕಾನೂನು, ದೆಹಲಿ ರೈತ ಹೋರಾಟದಲ್ಲಿ ಹುತಾತ್ಮರಾದ 750 ರೈತ ಕುಟುಂಬಕ್ಕೆ ಪರಿಹಾರ ಕೊಡದಿರುವುದು, ರೈತರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ರದ್ದುಪಡಿಸದಿರುವುದು, ಬೆಂಬಲ ಬೆಲೆ ಘೋಷಿಸುವ ಸಮಿತಿಯಲ್ಲಿ ರೈತರನ್ನು ಒಳಗೊಳ್ಳದಿರುವುದು, ಬೆಂಬಲ ಬೆಲೆ ಖಾತ್ರಿ ಪಡಿಸುವ ಕಾನೂನು ಜಾರಿಯಾಗದಿರುವುದನ್ನು ವಿರೋಧಿಸಿ ನ.26ರಂದು ಹೋರಾಟ ನಡೆಯಲಿದೆ.

ಈ ಬಗ್ಗೆ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ್‌, ಈ ದಿನ.ಕಾಮ್‌ಗೆ ಮಾಹಿತಿ ನೀಡಿದ್ದಾರೆ. "ಕೇಂದ್ರ ಸರ್ಕಾರ ರೈತದಿಗೆ ಬೆದರಿ ರದ್ದುಪಡಿಸಿರುವ ಕರಾಳ ಕೃಷಿ ಕಾಯ್ದೆಗಳ ತದ್ರೂಪಿ ಕಾನೂನುಗಳನ್ನು ರಾಜ್ಯ ಸರ್ಕಾರಗಳ ಮೂಲಕ ಜಾರಿಗೊಳಿಸಲು ಹುನ್ನಾರ ನಡೆಸಲಾಗುತ್ತಿದೆ. ಬೆಳಗಾವಿ ಖಾಸಗಿ ಕೃಷಿ ಮಾರುಕಟ್ಟೆ ವಿರೋಧಿಸಿ ಹೋರಾಟ ಮಾಡಿದ ಸಂದರ್ಭದಲ್ಲಿ ಎಪಿಎಂಸಿ ಮಂತ್ರಿ ಎಸ್‌ ಟಿ ಸೋಮಶೇಖರ್‌ ಭೇಟಿಯಾದಾಗ ʼನಾವು ಈ ಕಾನೂನುಗಳನ್ನು ರದ್ದುಪಡಿಸಿಲು ಸಿದ್ಧರಿದ್ದೇವೆ. ಆದರೆ, ನರೇಂದ್ರ ಮೋದಿಯವರು ನಾವು ಹೇಳುವವರೆಗೂ ಆ ಕಾಯ್ದೆಗಳನ್ನು ರದ್ದುಪಡಿಸಬೇಡಿ, ಹಾಗೇ ಇರಿಸಿಕೊಂಡಿರಿ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ನಮ್ಮ ಕೈ ಕಟ್ಟಿ ಹಾಕಿದೆʼ ಎಂದಿದ್ದರು. ಅಂದರೆ ಇದರರ್ಥ ಕೇಂದ್ರ ಸರ್ಕಾರ, ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆದಂತೆ ರೈತರನ್ನು ನಂಬಿಸಿ ಹಿಂಬಾಗಿಲಿನಿಂದ ರಾಜ್ಯ ಸರ್ಕಾರಗಳ ಮೂಲಕ ಅನುಷ್ಠಾನ ಮಾಡಿಸಿ ವಂಚಿಸುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

AV Eye Hospital ad

ಈ ಸುದ್ದಿ ಓದಿದ್ದೀರಾ? ದೆಹಲಿ ರೈತ ಹೋರಾಟ | ಎರಡನೇ ವರ್ಷದ ನೆನಪಿನಲ್ಲಿ ರೈತ ಚಳವಳಿಯಿಂದ ಕಲಿಯಬೇಕಾದ ಪಾಠಗಳು

"ಜಾನುವಾರು ಹಕ್ಕು ನಿಷೇಧ ಕಾಯ್ದೆ ಮೂಲಕ ರೈತಾಪಿ ವರ್ಗದಲ್ಲಿ ಹೈನುಗಾರಿಕೆ ವ್ಯವಸ್ಥೆಯನ್ನು ನಾಶ ಮಾಡಿ ಕಾರ್ಪೊರೇಟ್‌ ವ್ಯವಸ್ಥೆಗೆ ಲಾಭ ಮಾಡಿಕೊಡುವ ಕುತಂತ್ರ ಮಾಡಲಾಗಿದೆ. ರೈತರು ತಾವು ಸಾಕುವ ದನ-ಕರುಗಳನ್ನು ಸಂತೆಯಲ್ಲಿ ಮಾರಾಟ ಮಾಡುವಂತಿಲ್ಲ. ಅಡೂಳಿ (ತವರಿಂದ ಮಗಳಿಗೆ ಉಡುಗೊರೆ ರೂಪದಲ್ಲಿ ನೀಡುವುದು), ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಜಾನುವಾರು ಮಾರಾಟ ಮಾಡದಂತೆ ಕಾನೂನು ತಂದು ರೈತರನ್ನು ದಿವಾಳಿ ಮಾಡಲು ಮುಂದಾಗುತ್ತಿದೆ. ಕಬ್ಬು, ತೊಗರಿ, ಹೆಸರು, ಭತ್ತ ಎಲ್ಲ ಕೃಷಿ ಬೆಳೆಗಳ ಬೆಲೆ ಕುಸಿದಿದೆ. ಅದಕ್ಕೆ ಪ್ರಮುಖ ಕಾರಣ, ಕೃಷಿ ಉತ್ಪನ್ನಗಳ ಖರೀದಿ ವ್ಯವಹಾರಕ್ಕೆ ಅಂಬಾನಿ, ಅದಾನಿಯಂತಹ ದೈತ್ಯ ಕಂಪನಿಗಳು ಪ್ರವೇಶ ಮಾಡಿದ್ದು, ಅವುಗಳ ಲಾಭ-ನಷ್ಟವನ್ನು ಖಾತ್ರಿಪಡಿಸಲು ಕೃಷಿ ಉತ್ಪನ್ನಗಳಿಗೆ ದರ ನಿಗದಿ ಮಾಡುತ್ತಿಲ್ಲ. ಹಾಗಾಗಿ ರೈತ ವಿರೋಧಿಯಾದ ಯಾವುದೇ ಕಾನೂನು ಜಾರಿಗೆ ಬರದಂತೆ ತಡೆಯವುದು ಅನಿವಾರ್ಯವಾಗಿದೆ" ಎಂದರು.

"ಚಳಿಗಾಲದಲ್ಲಿ ವಿದ್ಯುತ್‌ ಕಾಯ್ದೆ ಜಾರಿಯಾಗುವ ಅಪಾಯವಿದ್ದು, ರೈತರು ಕೃಷಿಯಿಂದ ಹಿಂದುಳಿಯುವ ಅಪಾಯಕಾರಿ ಸಂದರ್ಭ ಎದುರಾಗಲಿದೆ. ಹಾಗಾಗಿ ವಿದ್ಯುತ್‌ ಖಾಸಗೀಕರಣ ಆಗಬಹುದು. ಎಲ್ಲ ಬೆಳೆಗಳಿಗೂ ಅವುಗಳದ್ದೇ ಆದ ಬೋರ್ಡ್‌ಗಳು ಸ್ಥಾಪನೆಯಾಗಬೇಕು. ಈ ಎಲ್ಲ ಉದ್ದೇಶಗಳು ಈಡೇರಬೇಕೆಂದು ದೆಹಲಿ ಹೋರಾಟದಿಂದ ಪ್ರೇರಣೆಗೊಂಡು ಈ ಹೋರಾಟ ಸಂಘಟಿಸಿದ್ದು, ಚರಿತ್ರಾರ್ಹ ದೆಹಲಿ ಹೋರಾಟದ ಫೋಟೋ ಗ್ಯಾಲರಿ, ಪುಸ್ತಕ ಬಿಡುಗಡೆ ಕೂಡ ಇರಲಿದೆ. ಹಾಗಾಗಿ ಇದು ಭಾರತ ಸ್ವರೂಪಿ ಹೋರಾಟವಾಗಿದ್ದು, ʼಅನ್ನ ತಿನ್ನುವ ಎಲ್ಲರೂʼ ಈ ಹೋರಾಟದಲ್ಲಿ ಭಾಗಿಯಾಗಬೇಕು" ಎಂದು ಯಶವಂತ ಕರೆ ನೀಡಿದರು.

ಈ ಹೋರಾಟದಲ್ಲಿ ʼಸಂಯುಕ್ತ ಹೋರಾಟ ಕರ್ನಾಟಕʼ ನೇತೃತ್ವದಲ್ಲಿ ರಾಜ್ಯದ ರೈತ, ದಲಿತ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳು ಸೇರಿದಂತೆ 40 ಸಮಾನ ಮನಸ್ಕ ಸಂಘಟನೆಗಳು ಒಳಗೊಂಡಿವೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app