ಕೃಷಿ ಸಾಲ ಮನ್ನಾ: ಕೇವಲ ಶೇ.50ರಷ್ಟು ರೈತರಿಗೆ ಮಾತ್ರ ಉಪಯೋಗ: ಎಸ್‌ಬಿಐ ಪರಿಣಿತರ ವರದಿ  

Farmer
  • ಕೃಷಿ ಸಾಲ ಮನ್ನಾ ಎಲ್ಲ ರೈತರಿಗೂ ಅನ್ವಯಿಸಲ್ಲ
  • 9 ರಾಜ್ಯಗಳಲ್ಲಿ 2.53 ಲಕ್ಷ ಕೋಟಿ ರೂ. ಸಾಲ ಮನ್ನಾ

ಕೃಷಿ ಸಾಲ ಮನ್ನಾ ಮಾಡಿದ್ದರಿಂದ ಕೇವಲ ಶೇ. 50ರಷ್ಟು ರೈತರಿಗೆ ಮಾತ್ರ ಉಪಯೋಗವಾಗಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ)ನ ಪರಿಣಿತರ ತಂಡ ನಡೆಸಿದ ಅಧ್ಯಯನವೊಂದರ ವರದಿ ತಿಳಿಸಿದೆ. 

ಈ ಸಾಲ ಮನ್ನಾ ಯೋಜನೆ ಎಲ್ಲ ರೈತರಿಗೂ ಅನ್ವಯವಾಗಿರಲಿಲ್ಲ. ಆರ್ಹತೆ ಅಧರಿಸಿ ಸಾಲ ಮನ್ನಾ ಮಾಡಲಾಗಿತ್ತು. ಮಾರ್ಚ್‌ 2022ಕ್ಕೆ ಕೊನೆಗೊಂಡಂತೆ ಮಾಡಲಾದ ಆಧ್ಯಯನದ ಪ್ರಕಾರ ಒಂಭತ್ತು ರಾಜ್ಯಗಳ ಪೈಕಿ ತೆಲಂಗಾಣದ ಶೇ.5, ಮಧ್ಯಪ್ರದೇಶದ ಶೇ.12, ಜಾರ್ಖಂಡ್‌ನ ಶೇ.13, ಪಂಜಾಬ್‌ನ ಶೇ.24, ಕರ್ನಾಟಕದ ಶೇ.38 ಮತ್ತು ಉತ್ತರ ಪ್ರದೇಶದ ಶೇ.52  ರೈತರ ಸಾಲಗಳು ಮಾತ್ರ ಮನ್ನಾ ಆಗಿದ್ದವು.

ಇದಕ್ಕೆ ವ್ಯತಿರಿಕ್ತ ಪರಿಸ್ಥಿತಿ 2018ರಲ್ಲಿ ಛತ್ತೀಸ್‌ಘಡದಲ್ಲಿ ಮತ್ತು 2020ರಲ್ಲಿ ಮಹಾರಾಷ್ಟ್ರದಲ್ಲಿ ಇತ್ತು. ಈ ಎರಡೂ ರಾಜ್ಯಗಳಲ್ಲಿ ಕ್ರಮವಾಗಿ ಶೇ. 100 ಮತ್ತು ಶೇ. 92ರಷ್ಟು ರೈತರ ಸಾಲಗಳು ಮನ್ನಾ ಆಗಿದ್ದವು. ಅದೇ, 2017ರಲ್ಲಿ ಮಹಾರಾಷ್ಟ್ರದಲ್ಲಿ 34,000 ಕೋಟಿ ರುಪಾಯಿಗಳ ವೆಚ್ಚದಲ್ಲಿ 67 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿತ್ತು, ಇದು ಅಂದಿಗೆ ಶೇ. 68ರಷ್ಟು ಮಾತ್ರ ಆಗಿತ್ತು ಎಂದು ಎಸ್‌ಬಿಐ ಅಧ್ಯಯನ ತಿಳಿಸಿದೆ. 

ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ಸಾಲ ಮನ್ನಾ ಯೋಜನೆ ಅನ್ವಯವಾಗಿದ್ದ ಒಂಭತ್ತು ರಾಜ್ಯಗಳನ್ನು ಎಸ್‌ಬಿಐ ಸಂಶೋಧಕರ ತಂಡ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿತ್ತು. ಈ ಒಂಭತ್ತು ರಾಜ್ಯಗಳಲ್ಲಿ ಮನ್ನಾ ಮಾಡಲಾಗಿದ್ದ ಸಾಲದ ಒಟ್ಟು ಮೊತ್ತ 2.53 ಲಕ್ಷ ಕೋಟಿ ರುಪಾಯಿಗಳು. ಆಂಧ್ರ ಪ್ರದೇಶದಲ್ಲಿ ಶೇ 42ರಷ್ಟು ರೈತರು ಇದರಿಂದ ಲಾಭ ಪಡೆದಿದ್ದರು, ಶೇಕಡಾವಾರು ಇವರ ಸಂಖ್ಯೆ 92% ಆಗಿತ್ತು. ಆದರೆ ತೆಲಂಗಾಣದದಲ್ಲಿ ಈ ಸಾಲ ಮನ್ನಾ ಲಾಭ ಸಿಕ್ಕಿದ್ದು ಕೇವಲ ಶೇ. 5ರಷ್ಟು ರೈತರಿಗೆ ಮಾತ್ರ.

2014 ರಿಂದ ಮಾರ್ಚ್‌ 2022ರ ವರೆಗೆ ಮಾಡಿದ ಸಾಲ ಮನ್ನಾ ಯೋಜನೆಗಳ ಒಟ್ಟು ಲಾಭಾರ್ಥಿಗಳ ಸಂಖ್ಯೆ 3.7 ಕೋಟಿ. ಇದು ಸಾಲಗಾರರಾಗಿದ್ದ ರೈತರ ಸಂಖ್ಯೆಯಲ್ಲಿ ಶೇ. 50 ಮಾತ್ರ ಆಗಿದೆ ಎಂಬುದು ಎಸ್‌ಬಿಐ ತಂಡದ ಅಧ್ಯಯನವಾಗಿದೆ. ಅತಿಯಾದ ಪ್ರಚಾರ ಮತ್ತು ರಾಜಕೀಯ ಮೈಲೇಜುಗಳನ್ನು ಪಡೆದ ನಂತರವೂ ಈ “ಸಾಲ ಮನ್ನಾ” ಕೃಷಿ ಕ್ಷೇತ್ರದ ಮೇಲೆ ಮಾಡಬೇಕಾಗಿದ್ದ ಪರಿಣಾಮಗಳನ್ನು ಮಾಡಲೇ ಇಲ್ಲ. ಬದಲಾಗಿ ಅನೇಕ ರಾಜ್ಯಗಳಲ್ಲಿ ಸಾಲ ನೀಡಿಕೆಯಲ್ಲಿದ್ದ ಶಿಸ್ತು ನಾಶವಾಗಿ, ಅನೇಕ ಬ್ಯಾಂಕುಗಳು ಮತ್ತು ಅರ್ಥಿಕ ಸಂಸ್ಥೆಗಳು ಕೃಷಿ ಸಾಲ ನೀಡಿಕೆಯ ಬಗ್ಗೆ ಋಣಾತ್ಮಕ ನಿಲುವನ್ನು ತಳೆಯಲು ಕಾರಣವಾಯಿತು.

ಸಂಭಾವ್ಯ ಕಾರಣಗಳು:

“ರೈತರ ಬಹುತೇಕ ಕ್ಲೇಮುಗಳನ್ನು ರಾಜ್ಯ ಸರ್ಕಾರಗಳು ತಿರಸ್ಕರಿಸಿದ್ದು, ಇದಕ್ಕೆ ಅಗತ್ಯವಿದ್ದ ಹಣದ ಮೂಲಗಳ ಕೊರತೆಯಿಂದಾಗಿ ಸರ್ಕಾರಗಳು ಕೊಟ್ಟ ಭರವಸೆಯನ್ನು ಉಳಿಸಿಕೊಳ್ಳಲಾಗದೇ ಹೋದದ್ದು, ಮುಂದಿನ ವರ್ಷಗಳಲ್ಲಿ ಸರ್ಕಾರಗಳು ಬದಲಾವಣೆಯಾದದ್ದು ಸಾಲ ಮನ್ನಾ ಯೋಜನೆಯ ದಯನೀಯ ವೈಫಲ್ಯಕ್ಕೆ ಕಾರಣವಾದವು. ಕಳೆದ ಎಂಟು ವರ್ಷಗಳಲ್ಲಿ ಭರವಸೆ ಮತ್ತು ಅನುಷ್ಠಾನಗಳ ನಡುವೆ ಇದ್ದ ಅಗಾಧ ಅಂತರವೂ ಈ ವೈಫಲ್ಯಕ್ಕೆ ಕಾರಣವಾಗಿವೆ” ಎಂದು ಅಧ್ಯಯನ ತಂಡದ ಪರಿಣಿತರು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ದೇಶದ ಕೃಷಿ ನೀತಿ ಬಗ್ಗೆ ಚರ್ಚಿಸಲು ರಾಷ್ಟ್ರೀಯ ಕೃಷಿ ಸಮ್ಮೇಳನ ವೇದಿಕೆಯಾಗಲಿ : ರಾಜ್ಯ ರೈತ ಸಂಘಟನೆಗಳ ಒಕ್ಕೂಟ

ಅರ್ಹ ರೈತರನ್ನು ಈ ಯೋಜನೆ ತಲುಪದೇ ಇರುವುದನ್ನು ಬದಿಗಿಟ್ಟು ನೋಡಿದರೂ, ನಿಜವಾಗಿಯೂ ಈ ಯೋಜನೆ ಸಂಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡುವ ಉದ್ದೇಶವನ್ನೇನೂ ಹೊಂದಿರಲಿಲ್ಲ ಎಂಬುದು ವೇದ್ಯವಾಗುತ್ತದೆ. ಬಹುತೇಕ ರಾಜ್ಯಗಳಲ್ಲಿ ಈ ಯೋಜನೆಯ ಫಲಾನುಭವಿಗಳ ಹಿನ್ನೆಲೆಯನ್ನು ಗಮನಿಸಿದಲ್ಲಿ ಶೇ. 80ಕ್ಕಿಂತ ಹೆಚ್ಚು ಸ್ಥಿತಿವಂತ ರೈತರೇ ಕಾಣುತ್ತಾರೆ. ಇಲ್ಲಿ ಉದ್ಭವಿಸುವ ಪ್ರಶ್ನೆ ಎಂದರೆ, ಈ ಯೋಜನೆ ವಾಸ್ತವದಲ್ಲಿ ಯಾರ ಹಿತ ಕಾಯಲು ಹೊರಟಿತ್ತು ಎಂದು ಅಧ್ಯಯನದಲ್ಲಿ ಪ್ರಶ್ನಿಸಲಾಗಿದೆ. 

ಈ ಸಾಲ ಮನ್ನಾ ಯೋಜನೆಯ ಫಲಾನುಭವಿಗಳಾದ ಸ್ಥಿತಿವಂತ ರೈತರ ಪ್ರಮಾಣ ಹೆಚ್ಚಾಗಿ ಕಾಣುವುದು ಜಾರ್ಖಂಡ್‌ (ಶೇ.100), ಉತ್ತರ ಪ್ರದೇಶ (ಶೇ.96), ಆಂಧ್ರಪ್ರದೇಶ (ಶೇ.95), ಪಂಜಾಬ್‌ (ಶೇ.86) ಮತ್ತು ತೆಲಂಗಾಣ (ಶೇ.84) ರಾಜ್ಯಗಳಲ್ಲಿ ಎಂದು ವರದಿ ನಮೂದಿಸಿದೆ.

ಇನ್ನು 2020 ರಲ್ಲಿ ಮಹಾರಾಷ್ಟ್ರದಲ್ಲಿ ಮಾಡಲಾದ ಸಾಲ ಮನ್ನಾ ಯೋಜನೆಯ ಫಲಾನುಭವಿಗಳಲ್ಲಿ ಶೇ. 43 ಇಂತಹ ಸ್ಥಿತಿವಂತ ರೈತರಿದ್ದಾರೆ. ಕರ್ನಾಟಕದಲ್ಲಿ 2018 ರಲ್ಲಿ ಜಾರಿಗೊಳಿಸಲಾದ ಈ ಸಾಲ ಮನ್ನಾ ಯೋಜನೆಯ ಮೊತ್ತ 44,000 ಕೋಟಿ ರುಪಾಯಿಗಳು. ಉದ್ದೇಶಿತ ರೈತರ ಸಂಖ್ಯೆ 50 ಲಕ್ಷ. ಆದರೆ ಇದರಲ್ಲಿ ಸ್ಥಿತಿವಂತ ರೈತರ ಪ್ರಮಾಣ ಶೇ. 46ರಷ್ಟು ಆಗಿತ್ತು. ಇದು ಅಧ್ಯಯನದಲ್ಲಿರುವ ಒಂದು ಮುಖ್ಯ ಅಂಶ. 

ಈ ಸಾಲ ಮನ್ನಾ ಯೋಜನೆಯು ಮಧ್ಯ ಮತ್ತು ದೀರ್ಘಕಾಲೀನ ಕೃಷಿ ಸಾಲಗಳ ಪರಂಪರೆಯನ್ನೇ ಹಾಳುಗೆಡವಿ, ರೈತರಿಗೆ ಬಹುಪಾಲು ಹಾನಿಯನ್ನೇ ಮಾಡಿದೆ. ಜೊತೆಗೆ ಕೃಷಿ ಕ್ಷೇತ್ರದ ಮೂಲ ಸೌಕರ್ಯ ವಿಸ್ತರಣೆಗೆ ಬಂಡವಾಳ ಹರಿವಿನ ಸಾಧ್ಯತೆಗಳನ್ನು ಹೊಸಕಿ ಹಾಕಿದೆ ಎಂದು ವರದಿ ತನ್ನ ಅಂತಿಮ ಟಿಪ್ಪಣಿಯಲ್ಲಿ ದಾಖಲಿಸಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್