ಭಾರತದ ಕೃಷಿ ನೈಪುಣ್ಯತೆ ಜಗತ್ತಿಗೆ ಆಹಾರ ಭದ್ರತೆ ಒದಗಿಸಬಲ್ಲದು: ಜಿ 7 ಶೃಂಗಸಭೆಯಲ್ಲಿ ಮೋದಿ ಹೇಳಿಕೆ

ಭಾರತೀಯ ಕೃಷಿ ನೈಪುಣ್ಯತೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ದಿಕ್ಕಿನಲ್ಲಿ ಜಿ7 ಸದಸ್ಯ ರಾಷ್ಟ್ರಗಳು ವ್ಯವಸ್ಥಿತ ಮಾರ್ಗ ರೂಪಿಸಬಲ್ಲವೇ? ಈ ಕೃಷಿ ನೈಪುಣ್ಯತೆಯ ಮೂಲಕ ತನ್ನ ಸದಸ್ಯ ರಾಷ್ಟ್ರಗಳಿಗೆ ಆಹಾರ ಭದ್ರತೆಯ ಭರವಸೆಯನ್ನು ಭಾರತ ನೀಡಬಲ್ಲದೇ? ಇಂತಹ ಕೆಲವು ಪ್ರಶ್ನೆಗಳು ಜಿ7 ರಾಷ್ಟ್ರಗಳ ಸಭೆಯಲ್ಲಿ ಉದ್ಭವವಾಗಿವೆ.

ಭಾರತದ ಕೃಷಿ ನೈಪುಣ್ಯತೆ ಜಿ 7 ರಾಷ್ಟ್ರಗಳಿಗೆ ಆಹಾರ ಭದ್ರತೆಯನ್ನು ಒದಗಿಸಬಲ್ಲದು ಎಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಜಿ 7 ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, "ಉಕ್ರೇನ್-ರಷ್ಯಾ ಯುದ್ಧದ ಕಾರಣದಿಂದ ರಸಗೊಬ್ಬರಗಳ ಪೂರೈಕೆಯಲ್ಲಿ ಅಡಚಣೆಯಾಗಿದೆ. ಎಲ್ಲರೂ ಒಟ್ಟಾಗಿ ಈ ಸರಬರಾಜು ಸುಗಮವಾಗಿ ನಡೆಯುವ ಭರವಸೆ ನೀಡಿದಲ್ಲಿ ಆಹಾರ ಭದ್ರತೆ ಸಾಧ್ಯವಾಗುತ್ತದೆ" ಎಂದು ಹೇಳಿದ್ದಾರೆ. "ಉಕ್ರೇನ್-ರಷ್ಯಾ ದೇಶಗಳು ಮಾತುಕತೆಯ ಮೂಲಕ ಯುದ್ಧವನ್ನು ಕೊನೆಗಾಣಿಸಬೇಕು. ಈ ಯುದ್ಧ ಇಡೀ ಜಗತ್ತಿನ ಮೇಲೆ ಪರಿಣಾಮ ಬೀರುತ್ತಿದೆ" ಎಂದು ಆತಂಕ ವ್ಯಕ್ತಪಡಿಸಿದರು.

“ನಾವು ಯುದ್ಧದ ಜಾಗತಿಕ ಒತ್ತಡದ ನಡುವೆ ಈ ಸಭೆ ನಡೆಸುತ್ತಿದ್ದೇವೆ. ಮಾತುಕತೆಗಳಿಂದ ಬಗೆಹರಿಯದ ಸಮಸ್ಯೆಗಳಿಲ್ಲ. ಈ ಯುದ್ಧವನ್ನೂ ಸಹ ಮಾತುಕತೆ ಮೂಲಕ ಕೊನೆಗೊಳಿಸಬೇಕಿದೆ. ಭಾರತ ಶಾಂತಿಪ್ರಿಯ ದೇಶ. ನಾವು ಯಾವಾಗಲೂ ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕವೇ ವ್ಯವಹರಿಸುತ್ತೇವೆ. ಈ ಯುದ್ಧದ ಆತಂಕ ಕೇವಲ ಯೂರೋಪಿಗೆ ಮಾತ್ರ ಸೀಮಿತವಾಗಿಲ್ಲ. ವಿದ್ಯುತ್‌ ದರ ಹೆಚ್ಚಳ ಮತ್ತು ಆಹಾರ ಧಾನ್ಯಗಳ ಕೊರತೆ ಎಲ್ಲ ರಾಷ್ಟ್ರಗಳನ್ನೂ ಕಾಡುತ್ತಿದೆ. ವಿದ್ಯುತ್‌ ಮತ್ತು ಆಹಾರದ ಅಭದ್ರತೆಗಳು ಮುಂದುವರಿಯುತ್ತಿರುವ ರಾಷ್ಟ್ರಗಳನ್ನು ಅಪಾಯಕ್ಕೀಡುಮಾಡಿವೆ”  ಎಂದು ಶಾಂತಿಯ ಅಗತ್ಯವನ್ನು ಪುನರುಚ್ಚರಿಸಿದರು.

“ನಾವು ಆಹಾರ ಭದ್ರತೆಯ ಗ್ಯಾರಂಟಿ ಗಳಿಸಬೇಕೆಂದರೆ ನಮಗೆ ನಿರಂತರವಾಗಿ ಅಗತ್ಯವಿರುವ ರಸಗೊಬ್ಬರಗಳ ಸರಬರಾಜಿನ ಬಗ್ಗೆ ಗ್ಯಾರಂಟಿ ಅಗತ್ಯವಿದೆ. ಭಾರತ ಸಹ ಇವುಗಳ ಉತ್ಪಾದನೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕಿದೆ. ನಾವೆಲ್ಲ ಕೂಡಿ ಗೊಬ್ಬರ ಸರಬರಾಜು ವ್ಯವಸ್ಥೆಯನ್ನು ಸರಾಗ ಮಾಡುವುದಾದರೆ ನಮಗೆ ಆಹಾರದ ಕೊರತೆ ಕಾಡುವುದಿಲ್ಲ” ಎಂದು ಪ್ರಧಾನಿ ಮೋದಿ ಹೇಳಿದರು.

“ಇತರೆ ಜಿ7 ರಾಷ್ಟ್ರಗಳಿಗೆ ಹೋಲಿಸಿದರೆ ಕೃಷಿ ಕ್ಷೇತ್ರದಲ್ಲಿ ಅಪಾರ ಮಾನವ ಶಕ್ತಿಯನ್ನು ಮತ್ತು ನೈಪುಣ್ಯತೆಯನ್ನು ಭಾರತ ಹೊಂದಿದೆ. ಭಾರತದ ಕೃಷಿ ನೈಪುಣ್ಯತೆಯು ಕೆಲವು ಜಿ7 ರಾಷ್ಟ್ರಗಳ ಕೃಷಿಯ ಪುನರುಜ್ಜೀವನಕ್ಕೆ ಸಹಕಾರ ನೀಡಿದೆ. ಉದಾಹರಣೆಗೆ, ಗಿಣ್ಣು ಮತ್ತು ಆಲೀವ್‌ ಉತ್ಪನ್ನಗಳಿಗೆ ಮರುಜೀವ ನೀಡಲಾಗಿದೆ” ಎಂದು ಹೇಳಿದರು.

“ಭಾರತದಲ್ಲಿ ಸಹಜ ಕೃಷಿ ಕ್ರಾಂತಿಯನ್ನೇ ಮಾಡುತ್ತಿದೆ. ನಿಮ್ಮ ತಜ್ಞರು ಈ ಬಗ್ಗೆ ಅಗತ್ಯ ಅಧ್ಯಯನಗಳನ್ನು ಕೈಗೊಳ್ಳಲು ನಾನು ನಿಮ್ಮೆಲ್ಲರನ್ನೂ ಆಹ್ವಾನಿಸುತ್ತೇನೆ” ಎಂದು ಭಾರತದ ಸಹಜ ಕೃಷಿಯತ್ತ ಉಳಿದವರ ಗಮನ ಸೆಳೆದರು.

“ಮುಂದಿನ ವರ್ಷ ಜಗತ್ತು ಅಂತಾರಾಷ್ಟ್ರೀಯ ಕಿರುಧಾನ್ಯಗಳ ವರ್ಷ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಕಿರುಧಾನ್ಯಗಳನ್ನು ಮುಂದಿಟ್ಟುಕೊಂಡು ನಾವು ಪರ್ಯಾಯ ಪೋಷಕಾಂಶಗಳ ಕುರಿತು ಪ್ರಚಾರಾಂದೋಲನ ಮಾಡಬೇಕಿದೆ. ಈ ಕಿರುಧಾನ್ಯಗಳು ಜಗತ್ತಿಗೆ ಆಹಾರ ಭದ್ರತೆಯ ಭರವಸೆ ನೀಡಬಲ್ಲವು” ಎಂದರು.

"ಭಾರತವು ಅನೇಕ ಅಗತ್ಯ ರಾಷ್ಟ್ರಗಳಿಗೆ ಆಹಾರ ಧಾನ್ಯಗಳನ್ನು ಸರಬರಾಜು ಮಾಡಿದೆ. ಕಳೆದ ಕೆಲವು ತಿಂಗಳಿನಲ್ಲಿ ಭೂಕಂಪದ ಆಘಾತಕ್ಕೆ ಒಳಗಾಗಿದ್ದ ಆಫ್ಘಾನಿಸ್ತಾನಕ್ಕೆ 35,000 ಟನ್‌ ಗೋಧಿಯನ್ನು ಮಾನವೀಯ ನೆರವಿನ ರೂಪದಲ್ಲಿ ಕಳುಹಿಸಿಕೊಟ್ಟಿತ್ತು. ಹಾಗೇಯೇ ನೆರೆಯ ಶ್ರೀಲಂಕೆಗೆ ಸಹ ನಾವು ಆಹಾರ ಭದ್ರತೆ ನೀಡುವಲ್ಲಿ ಸಹಾಯ ಹಸ್ತ ಚಾಚಿದ್ದೇವೆ" ಎಂದು ಹೇಳಿದರು.

ನಿಮಗೆ ಏನು ಅನ್ನಿಸ್ತು?
2 ವೋಟ್