ಕೃಷಿ ಸಾಲ ಮನ್ನಾ v/s ಕಾರ್ಪೊರೇಟ್‌ ಸಾಲ ಮನ್ನಾ: ಜನರ ಹಣ ಕೊಳ್ಳೆ ಹೊಡೆಯುತ್ತಿರುವ ನಿಜವಾದ ದೇಶದ್ರೋಹಿಗಳು ಯಾರು?

Banks Paying Heavily for Corporate Loan Waivers

ನೀವು ಇದೇ ಜುಲೈ 19 ರಂದು ಈದಿನ.ಕಾಂ ನಲ್ಲಿ “ಕೃಷಿ ಸಾಲ ಮನ್ನಾ: ಕೇವಲ ಶೇ. 50 ಭಾಗ ರೈತರಿಗೆ ಮಾತ್ರ ಉಪಯೋಗ; ಎಸ್‌ಬಿಐ ಪರಿಣಿತರ ವರದಿ” ಬರಹವನ್ನು ಓದಿರಬಹುದು. ಅದರ ಮುಖ್ಯಾಂಶಗಳು ಹೀಗಿವೆ:

 • ಕೃಷಿ ಸಾಲ ಮನ್ನಾ ಮಾಡಿದ್ದರಿಂದ ಕೇವಲ ಶೇ. 50 ಭಾಗ ರೈತರಿಗೆ ಮಾತ್ರ ಉಪಯೋಗವಾಗಿದೆ. 
 • ಈ ಸಾಲ ಮನ್ನಾ ಯೋಜನೆ ಎಲ್ಲ ರೈತರಿಗೂ ಅನ್ವಯವಾಗಿರಲಿಲ್ಲ. ಆರ್ಹತೆ ಅಧರಿಸಿ ಸಾಲ ಮನ್ನಾ ಮಾಡಲಾಗಿತ್ತು. 
 • ಮಾರ್ಚ್ 2022 ಕ್ಕೆ ಕೊನೆಗೊಂಡಂತೆ ಮಾಡಲಾದ ಆಧ್ಯಯನದ ಪ್ರಕಾರ ಒಂಭತ್ತು ರಾಜ್ಯಗಳ ಪೈಕಿ ತೆಲಂಗಾಣ ಶೇ.5, ಮಧ್ಯಪ್ರದೇಶ ಶೇ.12, ಜಾರ್ಖಂಡ್ ಶೇ.13, ಪಂಜಾಬ್ ಶೇ.24, ಕರ್ನಾಟಕ ಶೇ.38 ಮತ್ತು ಉತ್ತರ ಪ್ರದೇಶ ಶೇ.52 ಭಾಗ ರೈತರ ಸಾಲಗಳು ಮಾತ್ರ ಮನ್ನಾ ಆಗಿದ್ದವು.
 • ಇದಕ್ಕೆ ವ್ಯತಿರಿಕ್ತ ಪರಿಸ್ಥಿತಿ 2018ರಲ್ಲಿ ಛತ್ತೀಸ್‌ಗಢದಲ್ಲಿ ಮತ್ತು 2020ರಲ್ಲಿ ಮಹಾರಾಷ್ಟ್ರದಲ್ಲಿ ಇತ್ತು. ಈ ಎರಡೂ ರಾಜ್ಯಗಳಲ್ಲಿ ಕ್ರಮವಾಗಿ ಶೇ. 100 ಮತ್ತು ಶೇ. 92 ಭಾಗ ರೈತರ ಸಾಲಗಳು ಮನ್ನಾ ಆಗಿದ್ದವು. 
 • ಅದೇ, 2017ರಲ್ಲಿ ಮಹಾರಾಷ್ಟ್ರದಲ್ಲಿ 34,000 ಕೋಟಿ ರುಪಾಯಿಗಳ ವೆಚ್ಚದಲ್ಲಿ 67 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿತ್ತು; ಇದು ಅಂದಿಗೆ ಶೇ. 68 ಭಾಗ ಮಾತ್ರ ಆಗಿತ್ತು ಎಂದು ಎಸ್‌ಬಿಐ ಸಂಶೋಧಕರು ಹೇಳಿದ್ದರು. 
 • ಈ ಒಂಭತ್ತು ರಾಜ್ಯಗಳಲ್ಲಿ ಮನ್ನಾ ಮಾಡಲಾಗಿದ್ದ ಸಾಲದ ಒಟ್ಟು ಮೊತ್ತ 2.53 ಲಕ್ಷ ಕೋಟಿ ರುಪಾಯಿಗಳು.  
 • ಆಂಧ್ರ ಪ್ರದೇಶದಲ್ಲಿ ಶೇ 42 ಲಕ್ಷ ರೈತರು ಇದರಿಂದ ಲಾಭ ಪಡೆದಿದ್ದರು, ಶೇಕಡಾವಾರು ಇವರ ಸಂಖ್ಯೆ 92% ಆಗಿತ್ತು. ಆದರೆ, ತೆಲಂಗಾಣದದಲ್ಲಿ ಈ ಸಾಲ ಮನ್ನಾ ಲಾಭ ಸಿಕ್ಕಿದ್ದು ಕೇವಲ ಶೇ. 5 ಭಾಗ ರೈತರಿಗೆ ಮಾತ್ರ.

ಈ ಎಸ್‌ಬಿಐ ಎಂಬ ಘನತೆವೆತ್ತ ಬ್ಯಾಂಕ್ ಸಮೂಹಕ್ಕೆ ರೈತರ ಬಗ್ಗೆ ಅಪಾರ ಕಾಳಜಿ ಇದೆ! ಅವರಿಗೆ ಕೊಡುವ ಸಾಲಗಳ ಬಗ್ಗೆ ಇದಕ್ಕಿರುವ ಅಸಕ್ತಿಯನ್ನು ಗಮನಿಸಿದರೆ ನಿಂತ ನಿಲುವಿನಲ್ಲೇ ರೈತರನ್ನು ಉದ್ಧಾರ ಮಾಡಿ ಬಿಸಾಕುವ ಉಮೇದು ಇರುವಂತೆ ಕಾಣುತ್ತದೆ! ಆದರೆ, ಇದು 2-3 ವರ್ಷಗಳಿಗೊಮ್ಮೆ ಏಕೆ ಕೇವಲ “ಕೃಷಿ ಸಾಲ ಮನ್ನಾ” ಅಧ್ಯಯನವನ್ನು ತನ್ನ ಪರಿಣಿತರ ಮೂಲಕ ಮಾಡಿಸುತ್ತದೆ ಮತ್ತು ಅದಕ್ಕೆ ಗರಿಷ್ಠ ಪ್ರಚಾರ ಕೊಡಲು ಪ್ರಯತ್ನಿಸುತ್ತದೆ ಎಂಬುದು ಮಾತ್ರ ಈ ಶತಮಾನದ ನಿಗೂಢ ವಿಚಾರ! 

ಸುಮ್ಮನೆ ಮುಂದಿನ ಅಂಕಿ ಅಂಶಗಳನ್ನು ಗಮನಿಸುತ್ತಾ ಹೋಗಿ; ಈ ಬ್ಯಾಂಕಿನ ಪರಿಣಿತರು ಅಧ್ಯಯನ ಅವಧಿಯನ್ನು 2018 ರಿಂದ 2022 ಮಾರ್ಚ್ ಎಂದು ಹೇಳಿರುವ ಕಾರಣ ಇಲ್ಲಿ ಈ ಆವಧಿಯ “ರಾಷ್ಟ್ರೀಯ ಆರ್ಥಿಕ ನೌಟಂಕಿ”ಗಳನ್ನು ಮಾತ್ರ ಪರಿಗಣಿಸಲಾಗಿದೆ. ಎಸ್‌ಬಿಐ ನಿಜಕ್ಕೂ ಏನನ್ನು, ಯಾರಿಗಾಗಿ, ಏತಕ್ಕೋಸ್ಕರ ಈ ಕೃಷಿ ಸಾಲ ಮನ್ನಾ ಬಗ್ಗೆ ಇಷ್ಟೊಂದು ಒತ್ತು ಕೊಟ್ಟು ಹೇಳಲು ಹೊರಟಿದೆ ಎಂಬುದಕ್ಕೆ ಇಲ್ಲಿ ಉತ್ತರ ಕಂಡುಕೊಳ್ಳಬೇಕಿದೆ.

ಎಸ್‌ಬಿಐ ಪ್ರಕಾರ, ಒಂಭತ್ತು ರಾಜ್ಯಗಳಲ್ಲಿ ಮನ್ನಾ ಮಾಡಲಾಗಿದ್ದ ಕೃಷಿ ಸಾಲದ ಒಟ್ಟು ಮೊತ್ತ 2.53 ಲಕ್ಷ ಕೋಟಿ ರೂಪಾಯಿಗಳು. ಇದು ಆಯ್ಕೆ ಮಾಡಿರುವ ಆರ್ಥಿಕ ವರ್ಷದ ಹಿನ್ನೆಲೆಯನ್ನು ಇನ್ನೂ ಖಚಿತವಾಗಿ ದಾಖಲಿಸುವುದಾದರೆ, 2017-18ರಲ್ಲಿ ಮನ್ನಾ ಮಾಡಲಾದ ಕೃಷಿ ಸಾಲದ ಮೊತ್ತ 1,84,800 ಕೋಟಿ ರುಪಾಯಿಗಳು. ಅದೇ ಅವಧಿಯಲ್ಲಿ ಭಾರತದ 10 ಅತಿದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ನೀಡಲಾಗಿದ್ದ ಸಾಲ ಬಹುಪಾಲು ಇದರ ನಾಲ್ಕು ಪಟ್ಟು ಹೆಚ್ಚು; ಅಂದರೆ 7,31,000 ಕೋಟಿ ರೂಪಾಯಿಗಳು. ಇದರಲ್ಲಿ, ಈ ಬ್ಯಾಂಕುಗಳ ಭಾಷೆಯಲ್ಲಿ ಎನ್ ಪಿ ಎ (Non-Performing Assets- ಚಾಲ್ತಿಯಲ್ಲಿಲ್ಲದ ಅಥವಾ ಕ್ರಿಯಾಶೀಲವಲ್ಲದ ಅಥವಾ ಲಾಭದಾಯಕವಲ್ಲದ ಆಸ್ತಿ) ಎಂದು ಕರೆಯುವ 12 ಕಾರ್ಪೊರೇಟ್ ಕಂಪನಿಗಳ ಎನ್ ಪಿ ಎ ಮೊತ್ತ 3,45,000 ಕೋಟಿ ರೂಪಾಯಿಗಳು!

ಒಂದು ಅಂದಾಜಿಗೆ, ಪ್ರತಿ ವರ್ಷ 10 ಲಕ್ಷ ಕೋಟಿ ರೂಪಾಯಿಗಳ ಕೃಷಿ ಸಾಲವನ್ನು ಸರ್ಕಾರಗಳು ಮನ್ನಾ ಮಾಡುತ್ತವೆ ಎಂದಿಟ್ಟುಕೊಳ್ಳೋಣ. ಭಾರತದ ಒಟ್ಟು ಬ್ಯಾಂಕಿಂಗ್ ವ್ಯವಹಾರದಲ್ಲಿ ಈ ಮೊತ್ತ ಕೇವಲ ಶೇಕಡ 13-14 ಭಾಗ ಮಾತ್ರ. ಆದರೆ ಪ್ರತಿ ವರ್ಷ ಯಾವ ಸದ್ದುಗದ್ದಲವಿಲ್ಲದೆ, ರಾಜಕೀಯ ಘೋಷಣೆಗಳಿಲ್ಲದೆ ಮನ್ನಾ ಮಾಡಲಾಗುತ್ತಿರುವ ಕಾರ್ಪೊರೇಟ್ ಸಾಲದ ಮೊತ್ತ 26-27 ಲಕ್ಷ ಕೋಟಿಗಳು ರೂಪಾಯಿ. ಅಂದರೆ, ಒಟ್ಟು ಬ್ಯಾಂಕಿಂಗ್ ವ್ಯವಹಾರದ ಶೇ. 35 ಭಾಗ.

ಇಲ್ಲಿ ಈ ಎರಡೂ ರೀತಿಯ ಸಾಲಗಳನ್ನು ಬ್ಯಾಂಕುಗಳು ಮತ್ತು ಸರ್ಕಾರ ಹೇಗೆ ನೋಡುತ್ತವೆ ಎಂಬ ಅಂಶ ಇಲ್ಲಿ ಮಹತ್ವದ್ದು. 30ನೇ ಜುಲೈ 2020ರಲ್ಲಿ ಆರ್ ಟಿ ಐ ಅಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿಗೆ ಸಲ್ಲಿಸಲಾಗಿದ್ದ ಅರ್ಜಿಗೆ ಬಂದ ಉತ್ತರದ ಪ್ರಕಾರ, “2014 ರಿಂದ 2019ರವರೆಗೆ ಭಾರತೀಯ ವಾಣಿಜ್ಯ ಬ್ಯಾಂಕುಗಳು ʼರಿಟನ್ ಆಫ್ʼ (ಈ ಪದವನ್ನು ಗಮನಿಸಿ, ಇದಕ್ಕೆ ಅವರು ಹೇಳುವ ಅರ್ಥ: ಕಡತದಿಂದ ಅಥವ ಬ್ಯಾಲೆನ್ಸ್ ಶೀಟಿನಿಂದ ತಗೆಯಲಾದ ಅಥವ ಕೈಬಿಡಲಾದ ಎಂದಾಗುತ್ತದೆ) ಮಾಡಲಾದ ಕೆಟ್ಟ ಸಾಲಗಳ ಮೊತ್ತ 6.35 ಲಕ್ಷ ಕೋಟಿ ರೂಪಾಯಿಗಳು”. ಈ “ʼರಿಟನ್ ಆಫ್ʼ ಸೂತ್ರದ ಪ್ರಕಾರ ಈ ಮೊತ್ತದಲ್ಲಿ ವಸೂಲಿ ಮಾಡಿದ ಮೊತ್ತ 62,220 ಕೋಟಿ ರೂಪಾಯಿ ಮಾತ್ರ.

ಇಲ್ಲಿ ಕೃಷಿ ಸಾಲಗಳ ವಿಷಯದಲ್ಲಿ ಇವರು ಬಳಸುವ ಪದ “waiver- ವೇವರ್”, ಅಂದರೆ “ಮನ್ನಾ”. ಕಾರ್ಪೊರೇಟ್ ಸಾಲದ ವಿಷಯದಲ್ಲಿ ಬಳಸುವ ಪದ “written off-ರಿಟನ್ ಆಫ್”. ಅಂದರೆ, ಅವರ ಬ್ಯಾಲೆನ್ಸ್ ಶೀಟನ್ನು ಸ್ವಚ್ಛವಾಗಿಟ್ಟುಕೊಳ್ಳಲು, ಅವರ ಸಾಧನೆಗಳನ್ನು ಕಣ್ಣಿಗೆ ಕಾಣುವಂತೆ ತೋರಿಸಲು ಕಡತದಿಂದ ತೆಗೆಯಲಾದ ಅಥವಾ ಬದಿಗಿಡಲಾದ ಸಾಲ. ಇದು ವಜಾ ಮಾಡಿದ್ದಲ್ಲ!!.

ʼರಿಟನ್ ಆಫ್ʼ ಸಾಲದ ಬಾಬತ್ತು ಎಷ್ಟು ಮೊತ್ತವನ್ನು ಯಾರು ಯಾರಿಂದ ವಸೂಲಿ ಮಾಡಲಾಗಿದೆ ಎಂಬ ವಿವರಗಳನ್ನು ರಿಸರ್ವ್ ಬ್ಯಾಂಕ್ ಕೊಟ್ಟಿಲ್ಲ. ಆದರೆ, ಹಣಕಾಸು ಸಚಿವಾಲಯ ಲೋಕಸಭೆಯಲ್ಲಿ ಸಂಬಂಧಿತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ “ಇದು ಬ್ಯಾಂಕುಗಳ ಬ್ಯಾಲೆನ್ಸ್ ಶೀಟನ್ನು ಕ್ರಮವಾಗಿ ಇಟ್ಟುಕೊಳ್ಳಲು, ತೆರಿಗೆ ಸಂಗತಿಗಳೊಂದಿಗೆ ವ್ಯವಹರಿಸಲು ಪ್ರತಿ ವರ್ಷ ಮಾಡುವ ಒಂದು ಸಾಮಾನ್ಯ ಕ್ರಮ” ಎಂದು ಹೇಳಿತು. “ಈ ಸಾಲವನ್ನು ಕಡತ ಅಥವಾ ಬ್ಯಾಲೆನ್ಸ್ ಶೀಟಿನಿಂದ ಹೊರಗಿಡಲಾಗುತ್ತದೆ ಮತ್ತು ಆನಂತರ ವಸೂಲಾದ ಸಾಲದ ಮೊತ್ತವನ್ನು ಲಾಭ ಎಂದು ಪರಿಗಣಿಸಲಾಗುತ್ತದೆ” ಎಂದು ಹೇಳಿತು. ಅಂದರೆ, ಇದರ ಅರ್ಥ ಏನು?!

ಆದರೆ, ಇಡೀ ಭಾರತೀಯ ಬ್ಯಾಂಕ್ ವಲಯದ ಯಾವುದೇ ದತ್ತಾಂಶಗಳನ್ನು ಪರಿಶೀಲಿಸಿದರೂ ಈ ʼರಿಟನ್ ಆಫ್ʼ ಸಾಲವನ್ನು ಸಂಪೂರ್ಣ ವಸೂಲಿ ಮಾಡಿದ ಒಂದೇ ಒಂದು ದಾಖಲೆ ಲಭ್ಯವಿಲ್ಲ. “ಇದರಿಂದ 10-12%ಗಿಂತ ಹೆಚ್ಚು ವಸೂಲಿ ಆಗುವುದಿಲ್ಲ ಮತ್ತು ಬ್ಯಾಂಕುಗಳಾಗಲಿ, ಸರ್ಕಾರವಾಗಲಿ ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸರ್ಕಾರ, ಬ್ಯಾಂಕುಗಳು ಮತ್ತು ಕಾರ್ಪೊರೇಟ್ ವಲಯಗಳು ಜಂಟಿಯಾಗಿ ಆಡುವ ನಾಟಕ ಇದು” ಎಂದು ರಿಸರ್ವ್ ಬ್ಯಾಂಕಿನ ನಿವೃತ್ತ ಉಪ ಗೌರ್ನರ್ ಕೆ.ಸಿ. ಚಕ್ರವರ್ತಿ ಹೇಳುತ್ತಾರೆ.

ಬ್ಯಾಂಕುಗಳು

ರಿಟನ್‌ ಆಫ್‌ ಸಾಲಗಳ ಮೊತ್ತ

ವಸೂಲಿ ಮಾಡಲಾದ 

ಸಾಲಗಳ ಮೊತ್ತ

ವಸೂಲಾತಿಯ ಶೇಕಡಾವಾರು

ಎಲ್ಲ ವಾಣಿಜ್ಯ ಬ್ಯಾಂಕುಗಳು

₹ 6,35,164 ಕೋಟಿಗಳು

₹ 62,220 ಕೋಟಿಗಳು

9.7%

ಸಾರ್ವಜನಿಕ ವಲಯದ ಬ್ಯಾಂಕುಗಳು

₹ 5,15,636 ಕೋಟಿಗಳು

₹ 51,419 ಕೋಟಿಗಳು

9.9%

ಎಸ್‌ ಬಿ ಐ (ಸಹಯೋಗಿ ಬ್ಯಾಂಕುಗಳು ಕೂಡಿ)

₹ 1,69,546 ಕೋಟಿಗಳು

₹ 20,519 ಕೋಟಿಗಳು

12.1%

ಈಗ ಯೋಚಿಸಿ, ಇಷ್ಟೆಲ್ಲ ಆರ್ಥಿಕ ಅಪಚಾರಗಳು ಸರ್ಕಾರ, ಬ್ಯಾಂಕುಗಳು ಮತ್ತು ಕಾರ್ಪೊರೇಟ್ ವಲಯಗಳ ಮೂಲಕ ಜಂಟಿಯಾಗಿ ಅಭಿನಯಿಸಲ್ಪಡುತ್ತಿರುವಾಗ ಎಸ್‌ಬಿಐನಂತಹ ಲೀಡ್ ಬ್ಯಾಂಕುಗಳು ರೈತರ ಹೆಸರಿನಲ್ಲಿ ಪ್ರತ್ಯೇಕವಾಗಿ ಏಕೆ ಅಭಿನಯ ಮಾಡುತ್ತಿರಬಹುದು?

ಕೃಷಿ ಸಾಲದ ವಿಷಯದಲ್ಲಿ "ಸ್ಥಿತಿವಂತ ರೈತರು" ಎಂದು ವಿಂಗಡಿಸುವ ಎಸ್‌ಬಿಐ ಈ ಕಾರ್ಪೊರೇಟ್‌ ಜನರನ್ನು ಏನೆಂದು ಕರೆಯುತ್ತದೆ? ಮತ್ತು ಇವರ ʼರಿಟನ್ ಆಫ್ʼ ಸಾಲಗಳ ಬಗ್ಗೆ ಅಧ್ಯಯನ ಮಾಡುವುದಿಲ್ಲ ಏಕೆ? 

 • ಬ್ಯಾಂಕುಗಳ ಅದಕ್ಷತೆ, ಅಸಮರ್ಥತೆಗಳನ್ನು ಮುಚ್ಚಿಕೊಳ್ಳಲೆಂದೇ?
 • ಜನಸಾಮಾನ್ಯರ ಕಣ್ಣಿಗೆ ಕಾಣದಂತೆ ನಡೆಯುತ್ತಿರುವ ಮಹಾ ಲೂಟಿಯನ್ನು ಮುಚ್ಚಿಟ್ಟು, ಜನರ ಗಮನವನ್ನು ಬೇರೆಡೆಗೆ ಸೆಳೆಯಲೆಂದೇ?
 • ರೈತರನ್ನು ಲೂಟಿಕೋರರಂತೆ ಬಿಂಬಿಸಿ ಅವರ ಹಿತಾಸಕ್ತಿ ಕಾಪಾಡುವ ಕಾರ್ಪೊರೇಟ್‌ಗಳನ್ನು ಬೆಳೆಸಿ, ಕಾಪಾಡಲೆಂದೇ?
 • ಆಳುವ ವರ್ಗ ಮತ್ತು ಅಧಿಕಾರ ಶಾಹಿಗಳೂ ಈ ಲೂಟಿಯಲ್ಲಿ ಪಾಲು ಹೊಂದಿರುವುರಿಂದಲೇ?

ಜನ ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡರೆ ಎಸ್‌ಬಿಐ ಕೃಷಿ ಸಾಲ ಮನ್ನಾ ಬಗ್ಗೆ ಮಾಡಿರುವ ಅಧ್ಯಯನ ಮತ್ತು ಹೇಳಿರುವ ಮಾತುಗಳ ಹಿಂದಿನ ಹುನ್ನಾರಗಳು ಅರ್ಥವಾಗುತ್ತವೆ. ದೇಶಕ್ಕೆ ಅನ್ನ ಬೆಳೆದು ಕೊಡಲು ರೈತನಿಗೆ ನೀಡಿದ ಸಾಲವನ್ನೇ ಬೃಹತ್ ಎಂದು ತೋರಿಸುವ ಬ್ಯಾಂಕುಗಳು, ಬೃಹತ್ ಮೊತ್ತದ ಸಾಲಗಳನ್ನು ಕಾರ್ಪೊರೇಟ್ ವಲಯಕ್ಕೆ ನೀಡಿ ಕೈತೊಳೆದುಕೊಳ್ಳುತ್ತಿವೆ. ನಿಜವಾದ ದೇಶದ್ರೋಹಿಗಳು ಎಂದರೆ ಇವರೇ. 

ನಿಮಗೆ ಏನು ಅನ್ನಿಸ್ತು?
11 ವೋಟ್