ಭಾರತದ ಬಹುಪಾಲು ಜನ ವಿಷಯುಕ್ತ ನೀರನ್ನು ಕುಡಿಯುತ್ತಿದ್ದಾರೆ; ಸರ್ಕಾರ ಇದಕ್ಕೆ ಸೂಚಿಸುತ್ತಿರುವ ಪರಿಹಾರವೇನು ಗೊತ್ತಾ?

ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಕುಡಿಯುವ ನೀರಿನ ಲಭ್ಯತೆ ಕ್ಷೀಣಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ದೇಶವನ್ನು ತೀವ್ರವಾಗಿ ಕಾಡುತ್ತಿದೆ. ಕಾರಣಗಳು ಹಲವಾರಿವೆ; ಆದರೆ, ಜಗತ್ತಿನ ಒಟ್ಟು ಜನಸಂಖ್ಯೆಯ ಶೇ.18 ಭಾಗವನ್ನು ಹೊಂದಿರುವ ನಮ್ಮ ದೇಶದಲ್ಲಿ ಶುದ್ಧ ನೀರಿನ ಲಭ್ಯತೆ ಇರುವುದು ಕೇವಲ ಶೇ.4 ಭಾಗ ಮಾತ್ರ.
Toxic Metal Found in Groundwater in Almost All States, Says Govt Data

ಭೂಗೋಳದ ಶೇ. 70 ಭಾಗವನ್ನು ನೀರು ಆವರಿಸಿದೆ. ಇದರ ಅರ್ಥ ಇದೆಲ್ಲವೂ ನಮ್ಮ ಬಳಕೆಗೆ- ಅದರಲ್ಲೂ ಪ್ರಧಾನವಾಗಿ ಕುಡಿಯುವ ನೀರಾಗಿ ಬಳಸಬಹುದು- ಎಂದು ಭಾವಿಸಿದರೆ ಅದಕ್ಕಿಂತ ಘೋರ ತಪ್ಪು ಇನ್ನೊಂದಿಲ್ಲ. ಏಕೆಂದರೆ, ಈ ಭೂಮಂಡಲದಲ್ಲಿರುವ ಅಷ್ಟು ನೀರಿನಲ್ಲಿ ಮನುಷ್ಯನ ಬಳಕೆಗೆ ದಕ್ಕಬಹುದಾದ ನೀರಿನ ಪ್ರಮಾಣ ಕೇವಲ ಶೇ. 3 ಭಾಗ ಮಾತ್ರ. ಇದರಲ್ಲೂ 2/3 ಭಾಗ ನೀರು ಹಿಮಗಟ್ಟಿ ಕೂತಿದೆ, ಇಲ್ಲವೇ ಮನುಷ್ಯನ ಬಳಕೆಗೆ ಲಭ್ಯವಿಲ್ಲ. ಇದು ಜಾಗತಿಕ ಜಲ ವಾಸ್ತವ.

ಪರಿಣಾಮವಾಗಿ ಈ ಕ್ಷಣ ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ 110 ಕೋಟಿ ಜನ ಕುಡಿಯುವ ನೀರಿನ ಕೊರತೆಯಿಂದ ಪರದಾಡುತ್ತಿದ್ದಾರೆ. 210 ಕೋಟಿ ಜನರು ವರ್ಷದಲ್ಲಿ ಕನಿಷ್ಠ ಒಂದು ತಿಂಗಳು ನೀರಿನ ಬವಣೆಗೆ ಈಡಾಗುತ್ತಿದ್ದಾರೆ. ಇದೇ ಕೊರತೆಯ ಕಾರಣದಿಂದ 240 ಕೋಟಿ ಜನರು ಸಮರ್ಪಕ ಶೌಚ ವ್ಯವಸ್ಥೆಯ ಕೊರತೆಯನ್ನು ಎದುರಿಸುತ್ತಿದ್ದಾರೆ.  ಈ ಶೌಚ ಅಸಮರ್ಪಕತೆಯ ಕಾರಣ ಈ ಮೊತ್ತದಲ್ಲಿ ಮುಕ್ಕಾಲು ಪಾಲು ಜನ ಕಾಲರಾ, ಥೈರಾಯ್ಡ್‌, ಜ್ವರ, ಭೇದಿಯೇ ಮೊದಲಾದ ಅನೇಕ ಜಲಸಂಬಂಧಿತ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಪರಿಣಾಮವಾಗಿ, ಪ್ರತಿ ವರ್ಷ 20 ಲಕ್ಷ ಜನರು, ಪ್ರಧಾನವಾಗಿ ಮಕ್ಕಳು, ಭೇದಿಯ ಒಂದೇ ಕಾರಣದಿಂದ ಸಾವನ್ನಪ್ಪುತ್ತಿದ್ದಾರೆ.

ಹಾಗಾದರೆ, ಭಾರತದಂತಹ ಅತೀ ಜನಸಾಂದ್ರತೆಯುಳ್ಳ ದೇಶದಲ್ಲಿ ಕುಡಿಯುವ ನೀರಿನ ಲಭ್ಯತೆ, ಕೊರತೆ, ಗುಣಮಟ್ಟ ಹೇಗಿರಬಹುದು? ಒಮ್ಮೆ ಯೋಚಿಸಿ! ವರ್ಷದಿಂದ ವರ್ಷಕ್ಕೆ ದೇಶದಲ್ಲಿ ಕುಡಿಯುವ ನೀರಿನ ಲಭ್ಯತೆ ಕ್ಷೀಣಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ಬೇಸಿಗೆ ಕಾಲದಲ್ಲಿ ಇದು ದೇಶವನ್ನು ತೀವ್ರವಾಗಿ ಕಾಡುತ್ತಿದೆ. ಕಾರಣಗಳು ಹಲವಾರಿವೆ; ಆದರೆ ಜಗತ್ತಿನ ಒಟ್ಟು ಜನಸಂಖ್ಯೆಯ ಶೇ. 18 ಭಾಗವನ್ನು ಹೊಂದಿರುವ ಈ ದೇಶದಲ್ಲಿ ಶುದ್ಧ ನೀರಿನ ಲಭ್ಯತೆ ಇರುವುದು ಕೇವಲ ಶೇ. 4 ರಷ್ಟು ಮಾತ್ರ.  ಹೀಗಾಗಿ ಮುಂದಿನ ದಿನಮಾನಗಳಲ್ಲಿ ಭಾರತದಲ್ಲಿ ಕುಡಿಯುವ ನೀರಿನ ಕೊರತೆ ತೀವ್ರವಾಗಲಿದೆ ಎಂದು ನಮ್ಮ ನೀತಿ ಆಯೋಗ ಹೇಳಿದೆ.

ಭಾರತ ನೀರಿಗಾಗಿ ಬಹುತೇಕ ಮುಂಗಾರು ಮಳೆಯ ಮೇಲೆ ಆಧಾರಿತವಾಗಿದೆ. ಆದರೆ, ಮುಂಗಾರು ವರ್ಷದಿಂದ ವರ್ಷಕ್ಕೆ ಅನಿಶ್ಚಿತ ಮತ್ತು ಅಕಾಲಿಕ ಆಗುತ್ತಿದೆ. ಈ ಅಸ್ತವ್ಯಸ್ತತೆಯನ್ನು ಹವಾಮಾನ ಬದಲಾವಣೆ ಇನ್ನಷ್ಟು ಉಲ್ಭಣಗೊಳಿಸುತ್ತಿದೆ. ಹೀಗಾಗಿ ಸದ್ಯಕ್ಕಂತೂ ದೇಶ ನೀರಿನ ಕೊರತೆಯ ತೂಗುಕತ್ತಿಯಡಿ ಬದುಕುತ್ತಿದೆ.

ಇದಕ್ಕೆ ತಾಜಾ ಉದಾಹರಣೆಯೊಂದು ನಮ್ಮ ಸಂಸತ್ತಿನಿಂದಲೇ ಹೊರಬಿದ್ದಿದೆ.

ಭಾರತದಾದ್ಯಂತ ಬಹುಪಾಲು ಜನ ವಿಷಯುಕ್ತ ನೀರನ್ನು ಕುಡಿಯುತ್ತಿದ್ದಾರೆ. 25 ರಾಜ್ಯಗಳ 209 ಜಿಲ್ಲೆಗಳ ಜನರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಹುತೇಕ ಜನರು ವಿಷಯುಕ್ತ ನೀರನ್ನು ಕುಡಿಯುತ್ತಿದ್ದಾರೆ ಎಂದು ಜಲಶಕ್ತಿ ಸಚಿವಾಲಯ  ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದೆ. ರಾಜ್ಯಸಭೆಯಲ್ಲಿ ಕೇಳಲಾಗಿದ್ದ ಪ್ರಶ್ನೆಯೊಂದಕ್ಕೆ ಉತ್ತರವಾಗಿ ದೇಶವನ್ನು ಬೆಚ್ಚಿಬೀಳಿಸುವ ಈ ಸಂಗತಿಯನ್ನು ಹೊರಗೆಡಹಲಾಗಿದೆ.

ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ರಾಜ್ಯ ಜಲಶಕ್ತಿ ಸಚಿವ ವಿಶ್ವೇಶ್ವರ್‌ ಟುಡು, "ಸಂಗ್ರಹಿಸಲಾಗಿರುವ ದತ್ತಾಂಶಗಳ ಪ್ರಕಾರ ಬಹುತೇಕ ರಾಜ್ಯಗಳ, ಬಹುತೇಕ ಜಿಲ್ಲೆಗಳ ಕುಡಿಯುವ ನೀರು ಲೋಹದ ಅಂಶಗಳನ್ನು ಒಳಗೊಂಡಿದೆ" ಎಂದು ತಿಳಿಸಿದ್ದಾರೆ.

ಯಾವ ಲೋಹ, ಎಷ್ಟು ಜಿಲ್ಲೆಗಳು?

 • 21 ರಾಜ್ಯಗಳ 176 ಜಿಲ್ಲೆಗಳಲ್ಲಿ ಕುಡಿಯುವ ನೀರಿನಲ್ಲಿ ಸೀಸದ ಅಂಶ ಕಂಡುಬಂದಿದೆ.
 • 29 ರಾಜ್ಯಗಳ 491 ಜಿಲ್ಲೆಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕುಡಿಯುವ ನೀರಿನಲ್ಲಿ ಕಬ್ಬಿಣದ ಅಂಶ ಕಂಡು ಬಂದಿದೆ.
 • 11 ರಾಜ್ಯಗಳ 29 ಜಿಲ್ಲೆಗಳಲ್ಲಿ  ಕುಡಿಯುವ ನೀರಿನಲ್ಲಿ ಕ್ಯಾಡ್ಮಿಯಮ್ ಅಂಶ ಕಂಡುಬಂದಿದೆ.
 • 16 ರಾಜ್ಯಗಳ 62 ಜಿಲ್ಲೆಗಳಲ್ಲಿ  ಕುಡಿಯುವ ನೀರಿನಲ್ಲಿ ಕ್ರೋಮಿಯಮ್ ಅಂಶ ಕಂಡುಬಂದಿದೆ.

ಇಷ್ಟೇ ಅಲ್ಲದೆ, ಅನೇಕ ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಮೂಲಗಳು ಭಾರಲೋಹಗಳ ಮಿಶ್ರಣದಿಂದ ಕಲುಷಿತಗೊಂಡಿರುವುದು ಕಂಡುಬಂದಿವೆ.  ಅವುಗಳಲ್ಲಿ;

 • 14,079 ಜನವಸತಿಗಳಲ್ಲಿ ಕಬ್ಬಿಣ ಮಿಶ್ರಣ
 • 471 ಜನವಸತಿಗಳಲ್ಲಿ ಫ್ಲೋರೈಡ್ ಮಿಶ್ರಣ
 • 814 ಜನವಸತಿಗಳಲ್ಲಿ ವಿಷ ವಸ್ತುಗಳ ಮಿಶ್ರಣ
 • 9,930 ಜನವಸತಿಗಳಲ್ಲಿ ಚರಂಡಿ ನೀರಿನ ಮಿಶ್ರಣ  
 • 517 ಜನವಸತಿಗಳಲ್ಲಿ ನೀರು ನೈಟ್ರೇಟ್ ಮಿಶ್ರಿತವಾಗಿದೆ
 • 111 ಜನವಸತಿಗಳಲ್ಲಿನ ನೀರು ಭಾರಲೋಹಗಳಿಂದ ಕಲುಷಿತವಾಗಿದೆ 

ಮೇಲ್ಮನೆಯಲ್ಲಿ ಜಲಶಕ್ತಿ ರಾಜ್ಯ ಸಚಿವ ಪ್ರಹ್ಲಾದ್‌ ಸಿಂಗ್ ಪಟೇಲ್, ಮತ್ತೊಂದು ಪ್ರಶ್ನೆಗೆ ಲಿಖಿತ ಉತ್ತರ ನೀಡುತ್ತಾ, ಒಟ್ಟಾರೆ 10,182 ಸ್ಯಾಂಪಲ್‌ಗಳನ್ನು ಮೇ ತಿಂಗಳಿನಿಂದ ದೆಹಲಿ ಜಲ ನಿಗಮದ ಗುಣಮಟ್ಟ ನಿಯಂತ್ರಣ ಮಂಡಳಿಯ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪರೀಕ್ಷಾ ಫಲಿತಾಂಶಗಳು 1.95 ರಿಂದ 2.99 ರವರೆಗೆ ವಿಷಯುಕ್ತತೆಯ ಪ್ರಮಾಣವನ್ನು ತೋರಿಸಿದ್ದವು. ಇದು 2017ರಲ್ಲಿ ವಿಶ್ವ ಆರೋಗ್ಯ ಸಂಘಟನೆ ನಿಗದಿ ಪಡಿಸಿರುವ ಮಾನದಂಡಗಳಿಗೆ ಪೂರಕವಾಗಿಲ್ಲ ಎಂದು ಅವರು ಹೇಳಿದ್ದಾರೆ.

"ಈ ವಿಷಯುಕ್ತತೆಯನ್ನು ನಿಯಂತ್ರಿಸಲು ನಿಯಮದ ಪ್ರಕಾರ ಪ್ರಕ್ರಿಯೆ ಆರಂಭಿಸಿದ್ದೇವೆ. ಇದಕ್ಕಾಗಿ ಯಾವುದೇ ತಜ್ಞರ ಸಮಿತಿಯನ್ನು ನೇಮಿಸುವ ಪ್ರಸ್ತಾಪ ಇಲಾಖೆಯ ಮುಂದೆ ಇಲ್ಲ" ಎಂದೂ ಅವರು ತಿಳಿಸಿದ್ದಾರೆ.

ಈ ಲೋಹದ ಅಂಶಗಳು ಆರೋಗ್ಯದ ಮೇಲೆ ಬೀರುವ ಪರಿಣಾಮಗಳೇನು?

ಕುಡಿಯಲು ಬಳಸುವ ಅಂತರ್ಜಲದಲ್ಲಿ ಕಂಡುಬಂದಿರುವ ಕಬ್ಬಿಣ, ಸೀಸ, ಕ್ಯಾಡ್ಮಿಯಮ್, ಕ್ರೋಮಿಯಮ್‌ ಮತ್ತು ಯುರೇನಿಯಮ್‌ ಲೋಹಗಳು ನಿಗದಿತ ಪ್ರಮಾಣಕ್ಕಿಂತ ಜಾಸ್ತಿ ಇರುವುದರಿಂದ ಅವುಗಳ ಬಳಕೆದಾರರ ಮೇಲೆ ಆ ನೀರು ಅಪಾಯಕಾರಿ ಪರಿಣಾಮಗಳನ್ನು ಉಂಟುಮಾಡಬಲ್ಲದು. ಉದಾಹರಣೆಗೆ;

 • ವಿಷಮಿಶ್ರಿತ ನೀರು ಚರ್ಮ ರೋಗಗಳನ್ನು ಉಲ್ಭಣಗೊಳಿಸುತ್ತದೆ ಮತ್ತು ಕ್ಯಾನ್ಸರ್‌ ರೋಗಕ್ಕೆ ದಾರಿ ಮಾಡುತ್ತದೆ.
 • ಕಬ್ಬಿಣದ ಅಂಶ ಹೆಚ್ಚಾಗಿರುವ ನೀರಿನ ಸೇವನೆಯಿಂದ ಆಲ್ಜಮೈರ್ ಮತ್ತು ಪಾರ್ಕಿನ್ಸನ್‌ ಅಂತಹ ನರಸಂಬಂಧಿ ರೋಗಗಳು ಉಂಟಾಗುತ್ತವೆ.
 • ಸೀಸದ ಅಂಶ ಹೆಚ್ಚಾಗಿದ್ದಲ್ಲಿ ಮನುಷ್ಯನ ನರವ್ಯೂಹ ಬಾಧಿತವಾಗುತ್ತದೆ.
 • ಆಧಿಕ ಪ್ರಮಾಣದ ಕ್ಯಾಡ್ಮಿಯಮ್‌ ಮೂತ್ರಪಿಂಡಗಳನ್ನು ಘಾಸಿಗೊಳಿಸುತ್ತದೆ.
 • ಆಧಿಕ ಪ್ರಮಾಣದ ಕ್ರೋಮಿಯಮ್ ಸಣ್ಣ ಕರುಳಿನಲ್ಲಿನ ಕೋಶಗಳ ಮೇಲೆ ನಿಧಾನ ಪರಿಣಾಮ ಬೀರುತ್ತದೆ ಮತ್ತು ಅದರ ಪ್ರಸರಣದ ಪರಿಣಾಮವಾಗಿ ಅಂಗದ ಅತಿಯಾದ ಅಥವಾ ಅಸಹಜ ಬೆಳವಣಿಗೆಗೆ ಕಾರಣವಾಗಿ ಕರುಳಿನಲ್ಲಿ ಗೆಡ್ಡೆಗಳನ್ನು ಸೃಷ್ಟಿಸುತ್ತದೆ.
 • ಆಧಿಕ ಪ್ರಮಾಣದ ಯುರೇನಿಯಮ್ ಮೂತ್ರಪಿಂಡಗಳನ್ನು ಘಾಸಿಗೊಳಿಸುವುದಲ್ಲದೆ, ಅದು ಕ್ಯಾನ್ಸರ್‌ಕಾರಕ ಸಹ ಆಗಿದೆ.

ಸರ್ಕಾರದ ಕ್ರಮಗಳೇನು?
ಕುಡಿಯುವ ನೀರು ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿದೆ. ಈ ಸಂಗತಿ ಕುರಿತ ಅಂಶಗಳು ರಾಜ್ಯಗಳ ಜವಾಬ್ದಾರಿಯಾಗಿರುತ್ತವೆ. ಆದರೂ, ಕೇಂದ್ರ ಸರ್ಕಾರ ಆರೋಗ್ಯಕರ ಕುಡಿಯು ನೀರಿನ ಸರಬರಾಜಿಗೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ ಎಂದು ಲೋಕಸಭೆಯಲ್ಲಿ ಹೇಳಲಾಗಿದೆ.

ಜುಲೈ 21ರಂದು ಲೋಕಸಭೆಯಲ್ಲಿ ಇದಕ್ಕೆ ಉತ್ತರಿಸುತ್ತಿದ್ದ ಸರ್ಕಾರ, 2019ರಲ್ಲಿ “ಜಲ್‌ ಜೀವನ್‌ ಮಿಷನ್”‌ ಸ್ಥಾಪಿಸಲಾಗಿದೆ. ಇದರ ಅಡಿಯಲ್ಲಿ ಪ್ರತಿಯೊಂದು ಗ್ರಾಮಾಂತರದ ಜನವಸತಿಗಳಿಗೆ ನಲ್ಲಿ ನೀರು ಒದಗಿಸುವ ಗುರಿ ಹೊಂದಲಾಗಿದೆ. 2024 ಅಂತ್ಯದೊಳಗೆ ಈ ಗುರಿ ತಲುಪಲಾಗುವುದು.

19.15 ಕೋಟಿ ಗ್ರಾಮಾಂತರ ವಸತಿಗಳ ಪೈಕಿ 9.18 ಕೋಟಿ ವಸತಿಗಳಿಗೆ ಸುರಕ್ಷಿತ ಕುಡಿಯುವ ನೀರನ್ನು ಈವರೆಗೆ ಒದಗಿಸಲಾಗಿದೆ. ಇದರೊಂದಿಗೆ “ಅಮೃತ್ 2.0”  ಯೋಜನೆಯನ್ನು ಕೇಂದ್ರ ಸರ್ಕಾರ ಅಕ್ಟೋಬರ್‌ 2021ರಲ್ಲಿ ಆರಂಭಿಸಿದೆ. ಇದರ ಅಡಿಯಲ್ಲಿ ಐದು ವರ್ಷಗಳ ಒಳಗೆ, ಅಂದರೆ 2026ರ ಹೊತ್ತಿಗೆ, ಪ್ರತಿ ನಗರದ ಎಲ್ಲರಿಗೂ ನಲ್ಲಿ ನೀರನ್ನು ಒದಗಿಸುವ ಗುರಿ ನಿಗದಿಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಮುಂದೇನು?

ಸ್ವಾತಂತ್ರಾನಂತರದ ಭಾರತದಲ್ಲಿ ಅಧಿಕಾರಾರೂಢ ಸರ್ಕಾರಗಳೆಲ್ಲ ಇಂಥವೇ ಹೇಳಿಕೆಗಳನ್ನು ಕೊಡುತ್ತಾ ಬಂದಿವೆ. ಈ ಹೇಳಿಕೆಗಳ ಪ್ರಮಾಣದಷ್ಟು ಸಮಸ್ಯೆಯ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಲಾಗದು. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರಗಳು ಈ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡು, ನೀರು ಸರಬರಾಜನ್ನು ಖಾಸಗಿಯವರ ಕೈಗೆ ಒಪ್ಪಿಸುವ ಹುನ್ನಾರ ಕಟ್ಟುತ್ತವೆ. ಆಗ ಜನರು ಮಾರುಕಟ್ಟೆ ದರದಲ್ಲಿ ನೀರನ್ನು ಕೊಂಡು ಬಳಸುವುದು ಅನಿವಾರ್ಯವಾಗುತ್ತದೆ. ಈ ನೀರಿನ ಖಾಸಗೀಕರಣದ ಪ್ರಯತ್ನಗಳು ಕಳೆದ ಎರಡು ದಶಕಗಳಿಂದ ಅನೂಚಾನವಾಗಿ ಚಾಲ್ತಿಯಲ್ಲಿವೆ. 

ಈ ಖಾಸಗೀಕರಣದ ಪ್ರಕ್ರಿಯೆ ಭಾರತಕ್ಕೆ ಮಾತ್ರ ಸೀಮಿತವಾದದ್ದಲ್ಲ. ಇದು ವಿಶ್ವವ್ಯಾಪಿಯಾಗಿದೆ. ಹಿಂದೊಮ್ಮೆ ಬೆಂಗಳೂರಿನ ಜಲಮಂಡಳಿಯನ್ನೂ ಖಾಸಗೀಕರಿಸುವ ಪ್ರಯತ್ನ ನಡೆದಿತ್ತು. ಆದರೆ, ಅದರ ವಿರುದ್ಧ ಪ್ರಬಲ ಜನಾಂದೋಲನ ಆರಂಭವಾದ ಕಾರಣ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.  

ಹುಬ್ಬಳ್ಳಿ, ಧಾರವಾಡ, ಗದಗ ಮತ್ತು ಬೆಳಗಾವಿಯಂತಹ ನಗರಗಳಿಗೆ ಸುರಕ್ಷಿತ ನೀರನ್ನು ಒದಗಿಸಬಹುದಾಗಿದ್ದ ಕಳಸ-ಬಂಡೂರಿ ಯೋಜನೆಗಳನ್ನು ಅನಗತ್ಯವಾಗಿ ಮಹದಾಯಿ ವಿವಾದದೊಂದಿಗೆ ತಳುಕು ಹಾಕಿ ಆರು ದಶಕಗಳಿಂದ ಅದನ್ನು ನೆನೆಗುದಿಗೆ ಕೆಡವಲಾಗಿದೆ.  

ಇಂತಹ ನಡೆಗಳು ನಾಡಿನ ಜನತೆಯನ್ನು ಕಷ್ಟದ ಕೂಪಕ್ಕೆ ತಳ್ಳುತ್ತವೆ. ಜನ ಎಚ್ಚೆತ್ತುಕೊಂಡು, “ನೀರು ನಮ್ಮ ಆಜನ್ಮಸಿದ್ಧ ಹಕ್ಕು” ಎಂಬುದನ್ನು ಅರ್ಥಮಾಡಿಕೊಳ್ಳುವವರೆಗೂ ಇದೇ ಸ್ಥಿತಿ ಮುಂದುವರೆಯುವುದರಲ್ಲಿ ಮತ್ತು ಸಮಸ್ಯೆ ಇನ್ನಷ್ಟು ಉಲ್ಭಣಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

ನಿಮಗೆ ಏನು ಅನ್ನಿಸ್ತು?
3 ವೋಟ್