ಆಗಸ್ಟ್ 5-ರಾಜ್ಯದಲ್ಲಿ ರಸ್ತೆ ತಡೆ, ಜನವರಿ 22-ದೆಹಲಿಯಲ್ಲಿ ಕಿಸಾನ್ ಮಹಾ ಪಂಚಾಯತ್: ಸಂಯುಕ್ತ ಕಿಸಾನ್ ಮೋರ್ಚಾ

Press Conference on Karnataka Rasta Roko & Delhi Kisan Maha Panchayat
  • ವಿಮಾ ಯೋಜನೆ ಕಂಪನಿಗಳನ್ನು ಉದ್ಧಾರ ಮಾಡುವ ಯೋಜನೆ
  • ಆಗಸ್ಟ್ 5ರ ನಂತರ ರಾಜ್ಯದಾದ್ಯಂತ ರಸ್ತೆ ತಡೆದು ಪ್ರತಿಭಟನೆ

"ಕೇಂದ್ರ ಸರ್ಕಾರ ರಚಿಸಿರುವ ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಖಾತರಿ ಕಾಯ್ದೆ ಸಮಿತಿ ರೈತರ ಕಣ್ಣಿಗೆ ಮಣ್ಣೆರಚುವ ತಂತ್ರಗಾರಿಕೆಯಾಗಿದೆ. 26 ಜನ ಸದಸ್ಯರಲ್ಲಿ ಇಷ್ಟೂ ಜನರು ಬಿಜೆಪಿ ಅಥವಾ ಮೋದಿಯವರ ಬೆಂಬಲಿಗರಾಗಿದ್ದಾರೆ. ಇದರಿಂದ ರೈತರಿಗೆ ನ್ಯಾಯ ಸಿಗಲು ಸಾಧ್ಯವೇ" ಎಂದು ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ ಕುರುಬೂರು ಶಾಂತಕುಮಾರ್ ಪ್ರಶ್ನಿಸಿದ್ದಾರೆ. 

"ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಆಗಸ್ಟ್ 22ರಂದು ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ 'ಕಿಸಾನ್ ಮಹಾ ಪಂಚಾಯತ್' ಅನ್ನು ಆಯೋಜಿಸಲಾಗಿದೆ. ಅದರಲ್ಲಿ ರಾಜ್ಯದಿಂದ ಸಾವಿರಾರು ರೈತರು ಭಾಗವಹಿಸಲು ತೀರ್ಮಾನಿಸಲಾಗಿದೆ" ಎಂದು ದಕ್ಷಿಣ ಭಾರತ ರಾಜ್ಯಗಳ (ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ) ಸಂಚಾಲಕರೂ ಆದ ಕುರುಬೂರು ಶಾಂತಕುಮಾರ್‌ ಹೇಳಿದ್ದಾರೆ.

"ಕೃಷಿ ಉತ್ಪನ್ನಗಳಿಗೆ ಖಾತರಿ ಕನಿಷ್ಠ ಬೆಂಬಲ ಬೆಲೆ ಕಾಯಿದೆ ಜಾರಿ ಬಗ್ಗೆ ರಚಿಸಿರುವ 26 ಜನ ಸಮಿತಿಗೆ ಅಧ್ಯಕ್ಷರೇ ಇಲ್ಲ, ವರದಿ ನೀಡಲು ನಿರ್ದಿಷ್ಟ ಕಾಲಾವಧಿಯು ಇಲ್ಲ. ಬಹುತೇಕ ಸದಸ್ಯರು ಸರ್ಕಾರದ ಪರವಾಗಿ ವಾದ ಮಾಡುವ ಜನರೇ ಆಗಿದ್ದಾರೆ. ಹೋರಾಟನಿರತ ರೈತರ ಬೇಡಿಕೆಯನ್ನು ವಿರೋಧಿಸುತ್ತಿದ್ದವರೇ ಇವರ ಸಮಿತಿಯಲ್ಲಿ  ಇದ್ದಾರೆ. ಒಂದು ವರ್ಷ ಹೋರಾಟ ಮಾಡಿದ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ವತಿಯಿಂದ ಮೂರು ಜನ ಮಾತ್ರ ಸಮಿತಿಗೆ ಬನ್ನಿ ಎಂದು ಕರೆಯುತ್ತಿರುವುದು ರೈತರ ಕಣ್ಣಿಗೆ ಮಣ್ಣೆರಚುವ ತಂತ್ರಗಾರಿಕೆ. ಆದ್ದರಿಂದ ಸಮಿತಿಯ ರಚನೆಯನ್ನು ಬಹಿಷ್ಕರಿಸುತ್ತೇವೆ" ಎಂದು ಅವರು ಹೇಳಿದ್ದಾರೆ.

"ಕಬ್ಬಿನ ದರ ನಿಗದಿ ಬಗ್ಗೆ ರಾಜ್ಯ ಸರ್ಕಾರಕ್ಕೆ ಆಗಸ್ಟ್  5ರವರಗೆ  ಅಂತಿಮ ಗಡುವು ನೀಡುತ್ತಿದ್ದೇವೆ. ಈವರೆಗಿನ ನಿರ್ಲಕ್ಷ  ಧೋರಣೆಯನ್ನು ಖಂಡಿಸುತ್ತೇವೆ. ಇನ್ನೂ ನಿರ್ಲಕ್ಷ ಮಾಡಿದರೆ ರಾಜ್ಯದಾದ್ಯಂತ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಆಗಸ್ಟ್ 5ರ ನಂತರ ರಾಜ್ಯದಾದ್ಯಂತ ರಸ್ತೆ ತಡೆದು ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ" ಎಂದು ಹೇಳಿದರು.

"ಎಲ್ಲ ಕೃಷಿ ಉತ್ಪನ್ನಗಳಿಗೆ ಎಲ್ಲ ಪ್ರದೇಶಕ್ಕೂ ಎಲ್ಲ ಬೆಳೆಗಳಿಗೂ ಸಮಂಜಸ ರೀತಿಯಲ್ಲಿ  ಫಸಲ್ ಭೀಮಾ ಬೆಳೆ ವಿಮೆ ಜಾರಿಗೆ ತರಬೇಕು. ಈಗಿರುವ ಈ ವಿಮಾ ಯೋಜನೆ ಕಂಪನಿಗಳನ್ನು ಉದ್ಧಾರ ಮಾಡುವ ಯೋಜನೆಯಾಗಿದೆ. ನಮಗೆ ವಿಮೆ ಹೆಸರಿನ ಭಿಕ್ಷೆ ಬೇಕಾಗಿಲ್ಲ. ವೈಜ್ಞಾನಿಕವಾದ ವಿಮೆ ಪರಿಹಾರ ಬೇಕಾಗಿದೆ. ಜೊತೆಯಲ್ಲಿಯೇ ರೈತರ ಕೃಷಿ ಸಾಲ ನೀತಿಯನ್ನೂ ಸಹ ಬದಲಾವಣೆ ಮಾಡಬೇಕು" ಎಂದು ಆಗ್ರಹಿಸಿದರು. 

"ರಾಜ್ಯ ಸರ್ಕಾರ ಮಳೆ ಹಾನಿ ಬೆಳೆನಷ್ಟ ಮಾನದಂಡ ಬದಲಿಸದೆ ಹೋದರೆ ರೈತರಿಗೆ ನ್ಯಾಯ ಸಿಗುವುದಿಲ್ಲ ಮಳೆಹಾನಿ ಬೆಳೆ ನಷ್ಟ ಪರಿಹಾರ ಮಾನದಂಡ ಮತ್ತು ಎನ್ ಡಿ ಆರ್ ಎಫ್ (ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ) ನೀತಿಗಳು ಬದಲಾಗಬೇಕು ಹಾಗೆಯೇ ತಕ್ಷಣವೇ ರಾಜ್ಯದಾದ್ಯಂತ ಮಳೆಹಾನಿ ಬೆಳೆ ನಷ್ಟ ಪರಿಹಾರಗಳನ್ನು ರೈತರಿಗೆ ನೀಡಬೇಕು" ಎಂದು ಒತ್ತಾಯಿಸಿದರು.

"ದುರಂತವೆಂದರೆ, ಬಡ ರೈತರ ಕೃಷಿ ಉತ್ಪನ್ನಗಳಾದ ಮಜ್ಜಿಗೆ, ಮೊಸರು, ಹಪ್ಪಳ, ರಸಗೊಬ್ಬರ, ಕೀಟನಾಶಕಗಳಿಗೆ ಜಿಎಸ್‌ಟಿ ವಿಧಿಸಿರುವುದು, ಕುದುರೆ ಜೂಜು ಬೆಟ್ಟಿಂಗ್, ಕ್ಯಾಸಿನೋ, ಪೆಟ್ರೋಲ್ ಡೀಸೆಲ್‌ಗಳಿಗೆ ವಿನಾಯಿತಿ ನೀಡಿರುವುದು ಜನಪರ ನೀತಿ ಅಲ್ಲ. ಒಂದು ಕಡೆ ಸರ್ಕಾರ ರೈತರಿಗೆ ಸಹಾಯಧನ, ಪ್ರೋತ್ಸಾಹಧನದ ಹೆಸರಿನಲ್ಲಿ 2000 ರೂಪಾಯಿ ನೀಡುತ್ತದೆ. ಆದರೆ, ಮತ್ತೊಂದು ಕಡೆ ಜಿಎಸ್‌ಟಿ ವಿಧಿಸಿ ಅದರ ಹತ್ತು ಪಟ್ಟು ವಸೂಲಿ ಮಾಡುತ್ತಿದೆ. ಇದು ಸರ್ಕಾರದ ದ್ವಂದ್ವ ನೀತಿಯಲ್ಲವೇ? ಎಂದು ಸರ್ಕಾರದ ನಿಲುವನ್ನು ಲೇವಡಿ ಮಾಡಿದರು.

ಪತ್ರಿಕಾ ಗೋಷ್ಠಿಯಲ್ಲಿ ವಿ ಎಚ್ ನಾರಾಯಣರೆಡ್ಡಿ, ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ;  ತೇಜಸ್ವಿ ಪಟೇಲ್, ರಾಜ್ಯ ಉಪಾಧ್ಯಕ್ಷರು; ವೀರನಗೌಡ ಪಾಟೀಲ್, ಕಾರ್ಯಾಧ್ಯಕ್ಷರು, ರಾಜ್ಯ ಕಬ್ಬು ಬೆಳೆಗಾರರ ಸಂಘ; ಯತಿರಾಜ್ ನಾಯ್ಡು, ರಾಜ್ಯಾಧ್ಯಕ್ಷರು,  ಕರ್ನಾಟಕ ನವನಿರ್ಮಾಣ ಸೇನೆ; ಭೀಮಯ್ಯ, ರಾಷ್ಟ್ರೀಯ ಕಿಸಾನ್ ಸಂಘಟನೆ; ಪ್ರೇಮ, ರಾಜ್ಯ ರೈತ ಸಂಘ, ಹಾಸನ ಜಿಲ್ಲಾ ಅಧ್ಯಕ್ಷರು; ಎಂ ಜಿ ಸಿಂದಗಿ, ದೇವಕುಮಾರ್, ಹತ್ತಳ್ಳಿ ದೇವರಾಜ್, ಬಸವರಾಜ ಪಾಟೀಲ್, ಸುರೇಶ್ ಪಾಟೀಲ್, ಗುರುಸಿದ್ದಪ್ಪ, ಮಂಜುನಾಥ್, ತಮ್ಮಯ್ಯಪ್ಪ,  ಬರದನಪುರ ನಾಗರಾಜ್,  ರಾಮಚಂದ್ರ ಮುಂತಾದವರು ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್