
- ವಚನಭ್ರಷ್ಟ ಸರ್ಕಾರಗಳನ್ನು ಎಚ್ಚರಿಸಲು ರೈತರ ಬಳಿ ಅಸ್ತ್ರಗಳಿವೆ
- ಗುರುವಾರ ಸಂಜೆಯೊಳಗೆ ಸರ್ಕಾರದ ನಿರ್ಧಾರ ಪ್ರಕಟಿಸುವಂತೆ ಆಗ್ರಹ
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕಬ್ಬು ಬೆಳೆಗಾರರು ಬೆಲೆ ನಿಗದಿಗಾಗಿ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ 9ನೇ ದಿನ ಪೂರೈಸಿದ್ದು, ಬುಧವಾರ ತಲೆ ಮೇಲೆ ಕಲ್ಲು ಹೊತ್ತುಕೊಂಡು ಅರೆಬೆತ್ತಲೆ ಧರಣಿ ಮುಂದುವರೆಸಿದ್ದಾರೆ.
ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು, "ನಮ್ಮ ಆಕ್ರೋಶ, ಆಗ್ರಹಕ್ಕೆ ಬಗ್ಗದ ಸರ್ಕಾರದ ಪ್ರತಿನಿಧಿಗಳು ಕುಂಭಕರ್ಣ ನಿದ್ದೆಯಲ್ಲಿದ್ದಾರೆ. ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಮೌನ ತಾಳಿದ್ದು, ಕಬ್ಬು ಬೆಳೆಗಾರರ ತಲೆ ಮೇಲೆ ಕಲ್ಲುಚಪ್ಪಡಿ ಎಳೆದಿದೆ, ಕಬ್ಬು ಬೆಳೆಗಾರರನ್ನು ಬೀದಿಗೆ ತಳ್ಳಿ ಬೆತ್ತಲೆಗೊಳಿಸಿದೆ" ಎಂದು ಆರೋಪಿಸಿದರು.
"ಟನ್ ಕಬ್ಬಿಗೆ ₹3500 ಎಫ್ಆರ್ಪಿ ದರ ನಿಗದಿ ಮಾಡಬೇಕು, ಕಬ್ಬಿನ ಉಪ ಉತ್ಪನ್ನಗಳ ಲಾಭಾಂಶದಲ್ಲಿ ರೈತರಿಗೂ ಹಂಚಿಕೆ ಮಾಡಬೇಕು. ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚದಲ್ಲಿ ಹೆಚ್ಚುವರಿ ಸುಲಿಗೆ, ಕಬ್ಬಿನ ತೂಕದಲ್ಲಿ ರೈತರಿಗೆ ಮೋಸ ಮಾಡುವುದನ್ನು ತಪ್ಪಿಸಲು ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು" ಎಂದು ಆಗ್ರಹಿಸಿದರು.
ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, "ನಾಟಕೀಯ, ವಚನಭ್ರಷ್ಟ ಸರ್ಕಾರಗಳನ್ನು ಎಚ್ಚರಿಸಲು ರೈತರ ಬಳಿ ಅಸ್ತ್ರಗಳಿವೆ. ಅದನ್ನು ಪ್ರಯೋಗ ಮಾಡಿದರೆ ಸರ್ಕಾರಕ್ಕೆ ಗಂಡಾಂತರ ಖಚಿತ. ಉದ್ಯಮಿಗಳ, ಮಾರ್ವಾಡಿಗಳ ಮರ್ಜಿಯಲ್ಲಿ ಆಡಳಿತ ನಡೆಸುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ರೈತ ಪರ ಎಂದು ಹೇಳುವ ಸರ್ಕಾರ ರೈತರನ್ನ ಬೀದಿಯಲ್ಲಿ ಮಲಗುವಂತೆ ಮಾಡಿರುವುದು ಏಕೆ? ಕಬ್ಬು ಬೆಳೆಗೆ ದರ ನಿಗದಿಗೆ ಸಂಬಂಧಿಸಿದಂತೆ ಗುರುವಾರ ಸಂಜೆ ಒಳಗೆ ಸರ್ಕಾರದ ನಿರ್ಧಾರ ಹೊರಬೀಳದಿದ್ದರೆ, ಹೋರಾಟದ ಕಠಿಣ ಅಸ್ತ್ರ ಪ್ರಯೋಗಿಸುತ್ತೇವೆ" ಎಂದು ಎಚ್ಚರಿಸಿದರು.
ಕಬ್ಬು ಬೆಳೆಗಾರರ ಸಂಘದ ಹೋರಾಟಕ್ಕೆ ರೈತ ನಾಯಕ ಕರ್ನಾಟಕ ರಾಜ್ಯ ರೈತ ಸಂಘ(ಪ್ರೊ. ಎಂ ಡಿ ನಂಜುಂಡಸ್ವಾಮಿ ಸ್ಥಾಪಿತ)ದ ರಾಜ್ಯಾಧ್ಯಕ್ಷ ವಿ ಆರ್ ನಾರಾಯಣರೆಡ್ಡಿ ಬೆಂಬಲ ವ್ಯಕ್ತಪಡಿಸಿದರು.
"ಸರ್ಕಾರ ಹಿಂದುತ್ವದ ಅಜೆಂಡಾ ಇಟ್ಟುಕೊಂಡು ಆಡಳಿತ ಮಾಡುತ್ತಿದೆ. ಆದರೆ, ಹಿಂದುಗಳು ಊಟ ಮಾಡಿದ್ದಾರಾ ಎಂಬುದನ್ನು ಕೇಳುವುದಿಲ್ಲ. ರಾಜ್ಯದ ರೈತರ ಹೆಸರಲ್ಲಿ ಪ್ರಮಾಣ ಮಾಡುತ್ತಾರೆ. ಆದರೆ, ರೈತರನ್ನು ಅನಿರ್ದಿಷ್ಟಾವಧಿ ಕಾಲ ಬೀದಿಯಲ್ಲಿ ಮಲಗುವಂತೆ ಮಾಡುತ್ತಾರೆ. ಕಬ್ಬು ಬೆಳೆಗೆ ದರ ನಿಗದಿ ಮಾಡದೆ ರೈತರ ಪರ ಇದ್ದೆವೆ ಎನ್ನುತ್ತಾರೆ. ಹಾಗಾಗಿ ಸರ್ಕಾರ ನಿಜವಾಗಿಯೂ ಯಾರ ಪರ ಇದೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ರೈತರ ಹೋರಾಟವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಅದರ ಪರಿಣಾಮಗಳನ್ನು ಮುಂದಿನ ದಿನಗಳಲ್ಲಿ ಕಾಣಬೇಕಾಗುತ್ತದೆ" ಎಂದು ವಿ ಆರ್ ನಾರಾಯಣರೆಡ್ಡಿ ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಎಸಿ ರೂಮ್ಗಳಲ್ಲಿ ಕೆಲಸ ಮಾಡುವವರಿಗೆ ಬಿಟ್ಟಿ ಚಾಕರಿ ಮಾಡಿ ಅಂದರೆ ಮಾಡುತ್ತಾರಾ?
ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ಸುರೇಶ್ ಮಾ ಪಾಟೀಲ್, ರೈತ ಮುಖಂಡ ವಿ ಅರ್ ನಾರಾಯಣರೆಡ್ಡಿ, ಬೆಳಗಾವಿ ಜಿಲ್ಲಾಧ್ಯಕ್ಷ ಗುರುಸಿದ್ದಪ್ಪ ಕೋಟಗಿ, ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಶಿವಮ್ಮ,
ಹಾಸನ ಮಂಜೇಗೌಡ ಸೇರಿದಂತೆ ಹಲವರಿದ್ದರು.