ರೈತರ ಅನುಮತಿ ಇಲ್ಲದೇ ಅವರ ಖಾತೆಗಳಲ್ಲಿನ ಹಣ ಕಡಿತ ಮಾಡಕೂಡದು: ಕಿಸಾನ್ ಕಾಂಗ್ರೆಸ್ ಒತ್ತಾಯ

TELANGANA Kisan Congress’ plea to RBI
  • ರೈತರ ಗಮನಕ್ಕೆ ತರದೆ ಮತ್ತು ಅನುಮತಿ ಇಲ್ಲದೆ ಅವರ ಖಾತೆಗಳಲ್ಲಿನ ಮೊತ್ತವನ್ನು ಕಡಿತಗೊಳಿಸಬಾರದು.
  • ರೈತರ ವಿರುದ್ಧದ ಈ ದೌರ್ಜನ್ಯ ತಪ್ಪಿಸಲು ಸೂಕ್ತವಾದ ಯಾಂತ್ರೀಕೃತ ವ್ಯವಸ್ಥೆಯೊಂದನ್ನು ರೂಪಿಸಬೇಕು.

“ರೈತರ  ಗಮನಕ್ಕೆ ತಾರದೆ ಮತ್ತು ಅನುಮತಿ ಇಲ್ಲದೇ ಅವರ ಖಾತೆಗಳಲ್ಲಿನ ಮೊತ್ತವನ್ನು ಏಕಪಕ್ಷೀಯವಾಗಿ ಕಡಿತಗೊಳಿಸದಂತೆ ಬ್ಯಾಂಕುಗಳಿಗೆ ನಿರ್ದೇಶನ ನೀಡಬೇಕು” ಎಂದು ಕಿಸಾನ್ ಕಾಂಗ್ರೆಸ್ ತೆಲಂಗಾಣ ರಾಜ್ಯ ಘಟಕ ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು (ಆರ್‌ಬಿಐ) ಆಗ್ರಹಪಡಿಸಿದೆ. ಮಂಗಳವಾರ ಈ ಹಕ್ಕೊತ್ತಾಯ ಬಗ್ಗೆ ಕಾಂಗ್ರೆಸ್ ಪಕ್ಷದ ರೈತ ವಿಭಾಗವಾದ ಕಿಸಾನ್ ಕಾಂಗ್ರೆಸ್ ನಾಯಕರು ಆರ್‌ಬಿಐ ಪ್ರಾದೇಶಿಕ ನಿರ್ದೇಶಕ ಕೆ. ನಿಖಿಲ್ ಅವರನ್ನು ಭೇಟಿ ಮಾಡಿ ಈ ಮನವಿಯನ್ನು ಸಲ್ಲಿಸಿದರು.

ರಾಜ್ಯ ಸರ್ಕಾರ ನಾಲ್ಕು ಹಂತಗಳಲ್ಲಿ ಕೃಷಿ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದೆ. ಈ ನಡುವೆ ಬ್ಯಾಂಕ್‌ಗಳು ಅನಗತ್ಯವಾಗಿ ರೈತರ ಖಾತೆಗಳಲ್ಲಿನ ಹಣವನ್ನು ಅವರ ಅನುಮತಿ ಇಲ್ಲದೆ ವಜಾ ಮಾಡಿಕೊಂಡು ರೈತರಿಗೆ ಕಿರುಕುಳ ನೀಡಬಾರದು ಎಂದು ವಾಸ್ತವ ಸ್ಥಿತಿಯನ್ನು ಅವರ ಗಮನಕ್ಕೆ ತಂದರು.

ಅಖಿಲ ಭಾರತ ಕಿಸಾನ್ ಕಾಂಗ್ರೆಸ್ ಉಪಾಧ್ಯಕ್ಷ ಎಂ ಕೋದಂಡ ರೆಡ್ಡಿಯವರ ಮುಂದಾಳತ್ವದ ನಿಯೋಗದಲ್ಲಿ ತೆಲಂಗಾಣ ಕಿಸಾನ್ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ಅನ್ವೇಶ್ ರೆಡ್ಡಿ ಮತ್ತು ಸಲಹೆಗಾರ ಡಿ. ನರಸಿಂಹ ರೆಡ್ಡಿ ಇದ್ದರು. 

“ರೈತರು ಕಟಾವಿನ ನಂತರ ಫಸಲು ಮಾರಾಟದ ಹಣ ನೇರವಾಗಿ ನಮ್ಮ ಖಾತೆಗೆ ಬರುತ್ತದೆ ಎಂಬ ಭರವಸೆಯ ಮೇಲೆ ಕೃಷಿ ವೆಚ್ಚಗಳಿಗೆ ಖಾಸಗಿಯವರಿಂದ ಪಡೆದ ಸಾಲಕ್ಕೆ ಪ್ರತಿಯಾಗಿ ಚೆಕ್ ವಿತರಿಸಿರುತ್ತಾರೆ. ಆದರೆ, ಖಾತೆಗೆ ಹಣ ಬಂದಾಗ ಬ್ಯಾಂಕಿನವರು ರೈತರ ಗಮನಕ್ಕೆ ತರದೆ, ಇರುವ ಮೊತ್ತವನ್ನು ಸಾಲಕ್ಕೆ ಜಮೆ ಮಾಡಿಕೊಂಡಿರುತ್ತಾರೆ. ಇದರಿಂದ ಚೆಕ್ ವಿತರಣೆ ಮಾಡಿದ ರೈತರು ಸಾಲಶೂಲೆಯನ್ನು ತಾಳಲಾರದೇ ಆತ್ಮಹತ್ಯೆಯ ಮೊರೆ ಹೋಗುತ್ತಾರೆ” ಎಂದು ರೈತರ ಸಂಕಟವನ್ನು ವಿವರಿಸಿದರು.

“ಇಂಥದ್ದೊಂದು ದೌರ್ಜನ್ಯ ರೈತರ ವಿರುದ್ಧ ನಡೆಯುತ್ತಿದೆ. ಇದನ್ನು ತಪ್ಪಿಸಲು ಸೂಕ್ತವಾದ ಯಾಂತ್ರಿಕ ವ್ಯವಸ್ಥೆಯೊಂದನ್ನು ರೂಪಿಸುವ ಮೂಲಕ, ರೈತರು ಅವರ ಖಾತೆಗಳ ಮೇಲೆ ಅವರೇ ನಿಯಂತ್ರಣ ಹೊಂದಿರುವಂತೆ ಕಾನೂನು ರೂಪಿಸುವ ಅಗತ್ಯವಿದೆ” ಎಂದು ಹೇಳಿದ್ದಾರೆ.

“ಗ್ರಾಮೀಣ ಶಾಖೆಗಳಲ್ಲಿ ಅಗತ್ಯವಿರುವ ಸೂಕ್ತ ಸಿಬ್ಬಂದಿಯನ್ನು ನೇಮಿಸುವ ಮೂಲಕ ಕೃಷಿ ಸಾಲಗಳು ಸಕಾಲದಲ್ಲಿ ಮಂಜೂರಾಗುವ ವ್ಯವಸ್ಥೆ ಮಾಡಬೇಕು. ಕೃಷಿ ಸಾಲ ಮಂಜೂರಾತಿಯ ಮೇಲೆ ವಿಧಿಸಲಾಗಿರುವ ಅನಗತ್ಯ ನಿಯಮಗಳನ್ನು ಆರ್‌ಬಿಐ ಸಡಲಿಸಬೇಕು. ಗ್ರಾಮೀಣ ಬ್ಯಾಂಕುಗಳಲ್ಲಿ ಮಂಜೂರಾದ ಕೃಷಿ ಸಾಲಗಳನ್ನು ನಗದು ಮಾಡಿಕೊಳ್ಳಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಈ ಬ್ಯಾಂಕುಗಳಲ್ಲಿ ಸದಾಕಾಲ ನಿಧಿಯ ಕೊರತೆ ಇರುತ್ತದೆ. ಆದ್ದರಿಂದ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಈ ಕೂಡಲೇ ಜಿಲ್ಲಾ ಸಹಕಾರಿ ಬ್ಯಾಂಕುಗಳಿಗೆ ಕನಿಷ್ಠ 5,000 ಕೋಟಿ ರುಪಾಯಿಗಳನ್ನು ಬೆಳೆ ಸಾಲಕ್ಕಾಗಿ ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್