ಮೋದಿ ಆಡಳಿತದಲ್ಲಿ ಒಬ್ಬ ರೈತನೂ ಆತ್ಮಹತ್ಯೆ ಮಾಡಿಕೊಂಡಿಲ್ಲ: ಬಿಜೆಪಿ ಸಂಸದನ ಹೇಳಿಕೆ! ಎನ್‌ಸಿಆರ್‌ಬಿ ಹೇಳುತ್ತಿರುವ ಸತ್ಯವೇನು?

ಸಾಲು ಸಾಲು ಸುಳ್ಳು ಮತ್ತು ತಿರುಚು ಹೇಳಿಕೆಗಳೆಂಬ ಎರಡು ಎಳೆಗಳ ಹಗ್ಗ ಹೊಸೆದು ಅದಕ್ಕೆ ಪ್ರಜಾತಂತ್ರವನ್ನು ನೇಣಿಗೇರಿಸಲು ತೀರ್ಮಾನಿಸಿದಂತಿರುವ ಈ ಸರ್ಕಾರ ಮತ್ತು ಸಂಸದರು ಇನ್ನೊಂದು ಮಹಾಸುಳ್ಳಿನ ದಾಳವನ್ನು ದೇಶದ ಆತ್ಮಸಾಕ್ಷಿಯಾದ ಸಂಸತ್ತಿನಲ್ಲಿಯೇ ಉರುಳಿಸಿದ್ದಾರೆ.
BJP MP Nishikant Dubey Claims No Farmer Suicides Under Modi Government

“ಮೋದಿ ಆಡಳಿತಾವಧಿಯ ಕಳೆದ ಎಂಟು ವರ್ಷಗಳಲ್ಲಿ ಒಬ್ಬನೇ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿಲ್ಲ” ಇದು ಲೋಕಸಭೆಯಲ್ಲಿ ಜಾರ್ಖಂಡ್‌ನ ಸಂಸದ ನಿಶಿಕಾಂತ್ ದುಬೆ ಅವರ ಹೇಳಿಕೆ. ಒಂದಿಷ್ಟು ಸಮಾಧಾನದಿಂದ ಇದರ ಸತ್ಯಾಸತ್ಯೆಗಳನ್ನು ಪರಿಶೀಲಿಸೋಣ.

“ಎಂಟು ವರ್ಷಗಳಿಂದ ವಿರೋಧ ಪಕ್ಷಗಳು ರೈತರ ಆತ್ಮಹತ್ಯೆ ಬಗ್ಗೆ ಒಮ್ಮೆಯೂ ಚರ್ಚಿಸಿಲ್ಲ. ಏಕೆಂದರೆ, ಒಬ್ಬ ರೈತನೂ ಆತ್ಮಹತ್ಯೆಯಿಂದ ಮರಣ ಹೊಂದಿಲ್ಲ. ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದರೆ ಬಿಜೆಪಿ ಅಷ್ಟು ಸಾಮರ್ಥ್ಯವನ್ನು ರೈತರಿಗೆ ತಂದುಕೊಟ್ಟಿದೆ ಮತ್ತು ನಮ್ಮ ವಿರುದ್ಧವೇ ಪ್ರತಿಭಟಿಸುವ ಶಕ್ತಿಯನ್ನು ಒದಗಿಸಿದೆ ಎಂದು ಅರ್ಥ. ಅವರು ನಮ್ಮನ್ನು ವಿರೋಧಿಸುತ್ತಿದ್ದ ಒಂದು ವರ್ಷ ಪೂರ್ತಿ ಮೋದಿಯವರೇ ಅಧಿಕಾರದಲ್ಲಿದ್ದರು. ರೈತರು ಪ್ರತಿಭಟನೆಯಲ್ಲಿದ್ದರೂ ಅವರ ಭದ್ರತೆಗೆ ಬೇಕಾದ ನಿಧಿಯನ್ನು ಮೋದಿಯವರು ಒದಗಿಸಿದರು. ಹೀಗೆ ಅವರು ರೈತರನ್ನು ಸಬಲೀಕರಣಗೊಳಿಸಿದ್ದಾರೆ. ಏಕೆಂದರೆ, ಈ ಅವಧಿಯಲ್ಲಿ ಒಬ್ಬ ರೈತನೂ ಆತ್ಮಹತ್ಯೆ ಮಾಡಿಕೊಂಡಿಲ್ಲ” ಎಂದು ದುಬೆ ಹೇಳಿದ್ದಾರೆ.

ಇದು ಸಂಸತ್ತಿನಲ್ಲಿ ಆಡಳಿತಾರೂಢ ಪಕ್ಷದ ಪ್ರತಿನಿಧಿಯ ಹೇಳಿಕೆ. ಆದರೆ, ಇದೇ ಸರ್ಕಾರದ ಅಡಿಯಲ್ಲಿ ಬರುವ “ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ-ಎನ್‌ಸಿಆರ್‌ಬಿ, ”2020ರಲ್ಲಿ ಒಟ್ಟು 1,53,052 ಆತ್ಮಹತ್ಯೆಗಳು ಸಂಭವಿಸಿವೆ. ಇದರಲ್ಲಿ 10,677 ಕೃಷಿ ಕ್ಷೇತ್ರದಲ್ಲಿ ಸಂಭವಿಸಿದ ಆತ್ಮಹತ್ಯೆಗಳು. ಇದರಲ್ಲಿ 5,579 ಮಂದಿ ರೈತರು ಮತ್ತು 5,098 ಮಂದಿ ಕೃಷಿ ಕಾರ್ಮಿಕರು"  ಎಂದು ದಾಖಲಿಸಿದೆ. ಇದನ್ನು ಆಧರಿಸಿ ಎನ್‌ಡಿಟಿವಿ “2020ರ ಆತ್ಮಹತ್ಯೆಗಳು” ಎಂಬ ವರದಿಯನ್ನೂ ಮಾಡಿದೆ.

ದುಬೆ ತಮ್ಮ ಹೇಳಿಕೆಯನ್ನು ಮುಂದುವರೆಸಿ “ಮೋದಿ ಆಡಳಿತವಿರುವ ಎಂಟು ವರ್ಷಗಳ ಅವಧಿಯಲ್ಲಿ ಅಂದರೆ, 2014-2021ರ ವರೆಗೆ ಒಬ್ಬ ರೈತನೂ ಆತ್ಮಹತ್ಯೆ ಮಾಡಿಕೊಂಡಿಲ್ಲ” ಎಂದಿದ್ದಾರೆ. 

ಆದರೆ, ಕುತೂಹಲಕ್ಕಾಗಿ ಎನ್‌ಸಿಆರ್‌ಬಿ ದಾಖಲೆಗಳನ್ನು ಪರಿಶೀಲಿಸಿದಾಗ ಸಿಗುವ ವಿವರಗಳು ಹೀಗಿವೆ (ಇಲ್ಲಿ 2020ರವರೆಗೆ ಮಾತ್ರ ದಾಖಲೆಗಳಿವೆ. 20121ರ ದಾಖಲೆಗಳನ್ನು ಇದು ಇನ್ನೂ ತನ್ನ ವೆಬ್‌ಸೈಟಿನಲ್ಲಿ ಪ್ರಕಟಿಸಿಲ್ಲ):

  • 2014: ಒಟ್ಟು ಆತ್ಮಹತ್ಯೆಗಳ ಸಂಖ್ಯೆ: 1,31,666. ಇದರಲ್ಲಿ ರೈತರ ಸಂಖ್ಯೆ: 5,650 
  • 2015: ಒಟ್ಟು ಆತ್ಮಹತ್ಯೆಗಳ ಸಂಖ್ಯೆ: 1,33,623. ಇದರಲ್ಲಿ ರೈತರ ಸಂಖ್ಯೆ: 8,007
  • 2016: ಕೃಷಿ ಕ್ಷೇತ್ರದ  ಸಾವುಗಳ ಪ್ರಮಾಣ: 11,379. ಇದರಲ್ಲಿ 6,270 ಮಂದಿ ರೈತರು ಮತ್ತು 5,109 ಮಂದಿ ಕೃಷಿ ಕಾರ್ಮಿಕರು
  • 2017: ಒಟ್ಟು ಆತ್ಮಹತ್ಯೆಗಳ ಸಂಖ್ಯೆ: 1,29,887. ಇದರಲ್ಲಿ ಕೃಷಿ ಕ್ಷೇತ್ರದ ಪ್ರಮಾಣ: 8.2%. ಈ ಸಾಲಿನಲ್ಲಿ ಕೃಷಿ ಕ್ಷೇತ್ರಾವಲಂಬಿತರ ಆತ್ಮಹತ್ಯೆ ಸಂಖ್ಯೆ 10,655. ಇದರಲ್ಲಿ 5,955 ಮಂದಿ ರೈತರು ಮತ್ತು 4,700 ಮಂದಿ ಕೃಷಿ ಕಾರ್ಮಿಕರು
  • 2018: ಒಟ್ಟು ಆತ್ಮಹತ್ಯೆಗಳ ಸಂಖ್ಯೆ: 1,34,516. ಇದರಲ್ಲಿ ಕೃಷಿ ಕ್ಷೇತ್ರದ ಪ್ರಮಾಣ: 7.7%. ಈ ಸಾಲಿನಲ್ಲಿ ಕೃಷಿ ಕ್ಷೇತ್ರಾವಲಂಬಿತರ ಆತ್ಮಹತ್ಯೆ ಸಂಖ್ಯೆ 10,349 
  • 2019: ಒಟ್ಟು ಕೃಷಿ ಕ್ಷೇತ್ರಾವಲಂಬಿತರ ಆತ್ಮಹತ್ಯೆಗಳ ಸಂಖ್ಯೆ; 10,281. ಇದು ಒಟ್ಟು ಆತ್ಮಹತ್ಯೆಗಳ ಪೈಕಿ ಶೇ. 7.4.ರಷ್ಟು. ಇದರಲ್ಲಿ 5,957 ಮಂದಿ ರೈತರು ಮತ್ತು 4,324 ಮಂದಿ ಕೃಷಿ ಕಾರ್ಮಿಕರು

“ಗೋಧಿ ಮೀಡಿಯಾ” ಹೇಳಿದ್ದೇನು?

ಈ 'ಮೋದಿ ಸಮರ್ಥಕ ಮಾಧ್ಯಮ'ಗಳಲ್ಲಿ ಅಗ್ರಪಂಕ್ತಿಯಲ್ಲಿರುವ ಬಿಜೆಪಿಯ ಉಗ್ರ ಸಮರ್ಥಕರಾದ “ಆಜ್ ತಕ್” 28 ನೇ ಜುಲೈ 2021ರಂದು ಇದೇ ಎನ್‌ಸಿಆರ್‌ಬಿ ವರದಿಯನ್ನು ಆಧರಿಸಿ ಒಂದು ಸ್ಟೋರಿ ಮಾಡಿತ್ತು. ಅದರಲ್ಲಿ ರಾಜ್ಯವಾರು ವಿವರಗಳನ್ನು ನೀಡಲಾಗಿತ್ತು. ಅದು ಪ್ರಸಾರ ಮಾಡಿರುವ ವಿವರಗಳ ಪ್ರಕಾರ 2017 ರಿಂದ 2019 ನಡುವೆ ನಡೆದ ರೈತರ ಆತ್ಮಹತ್ಯೆಗಳಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಮುಂಚೂಣಿಯಲ್ಲಿವೆ ಎಂದು ಹೇಳಲಾಗಿತ್ತು. ವಿವರಗಳು ಈ ಕೆಳಕಂಡಂತಿವೆ:

ರಾಜ್ಯವಾರು ಆತ್ಮಹತ್ಯೆಗಳು:

  • ಮಹಾರಾಷ್ಟ್ರ: 2017ರಲ್ಲಿ- 2,426 ರೈತರು. 2018ರಲ್ಲಿ- 2,239 ರೈತರು ಮತ್ತು 2019ರಲ್ಲಿ- 2,680 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.
  • ಕರ್ನಾಟಕ: 2017ರಲ್ಲಿ: 1,157 ರೈತರು, 2018ರಲ್ಲಿ: 1,365 ರೈತರು, ಮತ್ತು 2019ರಲ್ಲಿ: 1,331 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೇ ಅಂಕಿ ಅಂಶಗಳನ್ನು ನೀವು data.gov.in ನಲ್ಲಿ ಸಹ ನೋಡಬಹುದು ಮತ್ತು ದೇಶದ ಇತರೆ ರಾಜ್ಯಗಳ 2018-19ರ ಆತ್ಮಹತ್ಯೆಗಳ ಸಂಖ್ಯೆಯನ್ನು ಸಹ ಪರಿಶೀಲಿಸಬಹುದು.

ಎನ್‌ಸಿಆರ್‌ಬಿ ಪ್ರಕಟಿತ ದತ್ತಾಂಶಗಳ ಪ್ರಕಾರ 2014 ರಿಂದ 2020ರವರೆಗೆ ಒಟ್ಟು ಕೃಷಿ ಕ್ಷೇತ್ರಾವಲಂಬಿತರ ಆತ್ಮಹತ್ಯೆಗಳ ಸಂಖ್ಯೆ: 78,303. ಇದರಲ್ಲಿ ರೈತರ ಸಂಖ್ಯೆ: 43,181 ಆಗಿದೆ. ಈಗ ಯೋಚಿಸಿ, ದೇಶದ ವಸ್ತುಸ್ಥಿತಿಗಳ ಆತ್ಮಸಾಕ್ಷಿಯಾಗಿರಬೇಕಾದ ಸಂಸತ್ತಿನಲ್ಲಿ ಚುನಾಯಿತ ಸಂಸದನೊಬ್ಬ ರೈತರ ಆತ್ಮಹತ್ಯೆಗಳ ಬಗ್ಗೆ ಹೇಳಿದ್ದು ಏನನ್ನು? ಮತ್ತು ಏಕೆ? 

ಈ ಪ್ರಶ್ನೆಗಳಿಗೆ ನಾವು ಉತ್ತರ ಕಂಡುಕೊಳ್ಳಲು ಹೊರಟರೆ ರೈತರ ಆತ್ಮಹತ್ಯೆಗಳು ಮತ್ತು ಅದಕ್ಕೆ ಕಾರಣವಾದ ಅಂಶಗಳು, ರೈತರು ಮತ್ತು ಕೃಷಿ ಬಗ್ಗೆ ಕೇಂದ್ರ ಸರ್ಕಾರದ ನೀತಿ, ನಿಲುವುಗಳು.. ಇವುಗಳಿಗೆ ಸಂಬಂಧಿಸಿದ ವಂಚನೆಯ, ಸುಳ್ಳಿನ, ಕ್ರೌರ್ಯದ ರೈತವಿರೋಧಿ ಕಥನ ನಮ್ಮ ಮುಂದೆ ಅನಾವರಣಗೊಳ್ಳಲಿದೆ.    

ನಿಮಗೆ ಏನು ಅನ್ನಿಸ್ತು?
0 ವೋಟ್