'ಮೇಘ ಸ್ಫೋಟ'ದ ಹಿಂದೆ ವಿದೇಶಿ ಕೈವಾಡ | ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್

Farmer
  • ಗೋದಾವರಿಯಲ್ಲಿ ಸುರಿಯುತ್ತಿರುವ ಮಳೆಗೆ ಮೇಘ ಸ್ಫೋಟ ಕಾರಣ
  • ಉದ್ದೇಶಪೂರ್ವಕವಾಗಿ ಬೇರೆ ರಾಷ್ಟ್ರಗಳ ಮೇಲೆ ಮೇಘ ಸ್ಫೋಟ ಪ್ರಯೋಗ

"ಗೋದಾವರಿ ನದಿ ಪಾತ್ರದಲ್ಲಿ ಸುರಿಯುತ್ತಿರುವ ಅಪಾರ ಮಳೆಗೆ ಮೇಘ ಸ್ಫೋಟ ಕಾರಣ. ಈ ಮೇಘ ಸ್ಫೋಟದ ಹಿಂದೆ ವಿದೇಶಿ ಶಕ್ತಿಗಳ ಕೈವಾಡ ಇದೆ" ಎಂದು ತೆಲಂಗಾಣದ ಮುಖ್ಯಮಂತ್ರಿ ಕೆ, ಚಂದ್ರಶೇಖರ ರಾವ್‌ (ಕೆಸಿಆರ್) ಹೇಳಿದ್ದಾರೆ.

“ಮೇಘ ಸ್ಫೋಟ ಎಂಬ ತಂತ್ರವೊಂದು ಚಾಲನೆಗೆ ಬಂದಿದ್ದು, ಅದರ ಪ್ರಯೋಗವನ್ನು ಕೆಲವು ವಿದೇಶಿ ಶಕ್ತಿಗಳು ಉದ್ದೇಶಪೂರ್ವಕವಾಗಿ ಬೇರೆ ರಾಷ್ಟ್ರಗಳ ಮೇಲೆ ಪ್ರಯೋಗ ಮಾಡುತ್ತಿವೆ. ಈ ಹಿಂದೆ ಲೇಹ್‌ (ಲಡಾಕ್)ನಲ್ಲಿ ಮತ್ತು ನಂತರ ಉತ್ತರಾಖಂಡದಲ್ಲಿ ಇದರ ಪ್ರಯೋಗ ಮಾಡಲಾಗಿತ್ತು. ಈಗ ಅದೇ ಪ್ರಯೋಗವನ್ನು ಗೋದಾವರಿ ನದಿ ಪಾತ್ರದಲ್ಲಿ ಮಾಡಲಾಗಿದೆ ಎಂಬ ಮಸುಗು ಮಸುಗು ಮಾಹಿತಿ ದೊರಕಿದೆ. ಆದರೆ ಇದಕ್ಕೆ ಹವಾಮಾನ ಬದಲಾವಣೆ ಪರಿಣಾಮ ಎಂದು ಹೆಸರು ನೀಡಲಾಗುತ್ತಿದೆ” ಎಂದು ನದಿ ಪಾತ್ರದ ಮಳೆಹಾನಿಯ ಆಂತರಿಕ್ಷ ಸಮೀಕ್ಷೆಯ ನಂತರ ಕೆಸಿಆರ್‌ ಹೇಳಿದ್ದಾರೆ.

Image

"ಭಾರತೀಯ ಹವಾಮಾನ ಇಲಾಖೆ ಮತ್ತು ಕೆಲವು ಖಾಸಗಿ ಹವಾಮಾನ ಮುನ್ಸೂಚಕರು ಈ ರೀತಿಯ ಮಳೆ ಜುಲೈ 29ರವರೆಗೂ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ. ಹಾಗಾಗಿ ನಾವು ಈಗಲೇ ಎಲ್ಲವನ್ನೂ ಸರಿಪಡಿಸಲು ಸಾಧ್ಯವಿಲ್ಲ ಮತ್ತು ಪರಿಹಾರ ಕಾರ್ಯಗಳನ್ನು ನಿಲ್ಲಿಸಲೂ ಸಾಧ್ಯವಿಲ್ಲ" ಎಂದು ಸ್ಥಳೀಯ ಅಧಿಕಾರಿಗಳಿಂದ ಪರಿಹಾರ ಕಾರ್ಯಗಳ ಮಾಹಿತಿಯನ್ನು ಪಡೆದ ನಂತರ ತಿಳಿಸಿದರು. ಹಾಗೆಯೇ ಅಧಿಕಾರಿಗಳಿಗೆ ಪರಿಹಾರ ಮತ್ತು ಜನರ ಸುರಕ್ಷೆಯ ಕ್ರಮಗಳನ್ನು ಮುಂದುವರೆಸುವಂತೆ ಸೂಚಿಸಿದರು.

ಮುಖ್ಯಮಂತ್ರಿಗಳ ಮೇಘ ಸ್ಫೋಟದ ಹೇಳಿಕೆಗೆ ಪ್ರತಿಕ್ರಿಯಿಸಿದ ತೆಲಂಗಾಣ ಬಿಜೆಪಿ ಅಧ್ಯಕ್ಷ ಮತ್ತು ಕರೀಂನಗರದ ಸಂಸತ್‌ ಸದಸ್ಯ ಬಂಡಿ ಸಂಜಯ ಕುಮಾರ್‌ “ಇದು ಶತಮಾನದ ಜೋಕು” ಎಂದು ವ್ಯಂಗ್ಯವಾಡಿದ್ದಾರೆ. "ಕೆಸಿಆರ್‌ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಈ ನಾಟಕ ಕಟ್ಟಿದ್ದಾರೆ. ಕಾಳೇಶ್ವರಂ ಯೋಜನೆಯ ಮುಳುಗಡೆಯ ಪ್ರಕರಣದಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ಇದಾಗಿದೆ” ಎಂದು ಅವರು ಆರೋಪಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಟೊಮೆಟೊ : ನಿನ್ನೆ ನೂರು ಇಂದು ಮೂರು! ಎರಡೂ ಕಡೆ ತಪ್ಪುಗಳದೇ ಕಾರುಬಾರು! ಕೇಳುವವರಾರು?

ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಮತ್ತು ಸಂಸದ ಎ. ರೇವಂತ ರೆಡ್ಡಿ “ ಹಾಗಿದ್ದ ಪಕ್ಷದಲ್ಲಿ ಅಂತಹ ಮಾಹಿತಿಯೊಂದು ಅವರಿಗೆ ದೊರಕಿದ್ದಲ್ಲಿ ಇದನ್ನು ಗುಪ್ತಚಾರ ಇಲಾಖೆ ಅಥವ ರಾ ಸಂಸ್ಥೆಗೆ ನೀಡಬೇಕಾದ್ದು ಒಬ್ಬ ಮುಖ್ಯಮಂತ್ರಿಯ ಕರ್ತವ್ಯ” ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳ ಸಂಪೂರ್ಣ ಸಮೀಕ್ಷಾ ಕಾರ್ಯದಲ್ಲಿ ಮುಖ್ಯಮಂತ್ರಿಗಳೊಂದಿಗೆ ಮಂತ್ರಿ ಮಂಡಲದ ಇತರೆ ಸದಸ್ಯರು ಮತ್ತು ಉನ್ನತ ಅಧಿಕಾರಿಗಳ ಸಮೂಹವೇ ಪಾಲ್ಗೊಂಡಿತ್ತು. ಸಮೀಕ್ಷೆಯ ನಂತರ ಮುಳುಗು, ಭುಪಲ್‌ ಪಲ್ಲಿ, ಮೆಹಬೂಬಾಬಾದ್‌ ಮತ್ತು ನಿರ್ಮಲ್‌ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ತುರ್ತು ಪರಿಹಾರ ಕಾರ್ಯಗಳಿಗಾಗಿ ತಲಾ ಒಂದು ಕೋಟಿ ರುಪಾಯಿಯನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿ ಆದೇಶಿಸಿದ್ದಾರೆ. 

ಶನಿವಾರ ತಡರಾತ್ರಿ ಮುಖ್ಯಮಂತ್ರಿಗಳ ಕಚೇರಿಯಿಂದ ಹೊರಡಿಸಲಾದ ಆದೇಶದಲ್ಲಿ “ಯಾವುದೇ ಪರಿಹಾರ ಕಾರ್ಯ, ಆಪತ್ಕಾಲೀನ ಶಿಬಿರಗಳನ್ನು ನಿಲ್ಲಿಸದಂತೆ ಸೂಚಿಸಲಾಗಿದೆ. ಅಗತ್ಯವಾದ ಎಲ್ಲ ವೈದ್ಯಕೀಯ ನೆರವು ಮತ್ತು ಔಷಧಗಳನ್ನು ಬೇಡಿಗೆಕೆ ಅನುಸಾರ ಒದಗಿಸುವಂತೆಯೂ, ಎಲ್ಲ ಕಡೆ ಆರೋಗ್ಯ ಶಿಬಿರಗಳನ್ನು ಸ್ಥಾಪಿಸುವಂತೆಯೂ ಆರೋಗ್ಯ ಮಂತ್ರಿ ಹರೀಶ್‌ ರಾವ್‌ ಅವರಿಗೆ ನಿರ್ದೇಶನ ನೀಡಲಾಗಿದೆ.

Image
Cloud burst

ಹೈದರಾಬಾದಿಗೆ ಹಿಂತಿರುಗಿದ ಮುಖ್ಯಮಂತ್ರಿಗಳು ಉನ್ನತ ಅಧಿಕಾರಿಗಳು ಮತ್ತು ಪ್ರವಾಹ ಪೀಡಿತ ಪ್ರದೇಶಗಳ ಶಾಸಕರ ಸಭೆಯನ್ನು ಕರೆದು ಚರ್ಚಿಸಿರುವುದಲ್ಲದೆ, ಮಳೆಹಾನಿ ಮತ್ತು ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಸಮೀಕ್ಷೆ ಮಾಡಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಗೋದಾವರಿ ನದಿ ಪಾತ್ರದ ಅಪಾಯಕಾರಿ ಪ್ರದೇಶಗಳಲ್ಲಿರುವ ಜನರನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್