ಕೇಂದ್ರ ಸರ್ಕಾರ ರಚಿಸಿರುವ ಎಂಎಸ್‌ಪಿ ಸಮಿತಿಯನ್ನು ವಿಸರ್ಜಿಸುವುದಿಲ್ಲ: ಕೃಷಿ ರಾಜ್ಯ ಸಚಿವ ಕೈಲಾಶ್‌ ಚೌಧರಿ

Farmers Protest Against MSP Committee - Insert Picture Kailash Choudhary
  • ಕೇಂದ್ರ ಸರ್ಕಾರ ರಚಿಸಿರುವ ಎಂಎಸ್‌ಪಿ ಸಮಿತಿಯನ್ನು ಮುಂದುವರೆಸಲಾಗುತ್ತದೆ
  • 2013-14ರಲ್ಲಿ 27,000 ಕೋಟಿ ಇದ್ದಂತಹ ಮೊತ್ತ ಸದ್ಯಕ್ಕೆ ₹1.32 ಲಕ್ಷ ಕೋಟಿಗಳನ್ನು ತಲುಪಿದೆ

ಕನಿಷ್ಠ ಬೆಂಬಲ ಬೆಲೆಯನ್ನು ಸಶಕ್ತಗೊಳಿಸುವ ಸಲುವಾಗಿ ರಚಿಸಲಾಗಿರುವ ಎಂಎಸ್‌ಪಿ ಸಮಿತಿಯನ್ನು ಮುಂದುವರೆಸಲಾಗುತ್ತದೆ ಮತ್ತು ಆ ಸಮಿತಿ ನೀಡುವ ಶಿಫಾರಸ್ಸುಗಳನ್ನು ಪರಿಗಣಿಸಲಾಗುತ್ತದೆ ಎಂದು ಕೃಷಿ ರಾಜ್ಯ ಸಚಿವ ಕೈಲಾಶ್ ಚೌಧರಿ ನಿನ್ನೆ ರಾಜ್ಯ ಸಭೆಗೆ ತಿಳಿಸಿದರು.

ಈ ಸಮಿತಿಯನ್ನು ಕೃಷಿ ವೈವಿಧ್ಯೀಕರಣ, ನೈಸರ್ಗಿಕ ಕೃಷಿ ಮತ್ತು ಎಂಎಸ್‌ಪಿ ವಿಷಯಗಳನ್ನು ಆಧರಿಸಿ ರಚಿಸಲಾಗಿದೆ. ಈ ಸಮಿತಿಯು ರೈತ ಪ್ರತಿನಿಧಿಗಳು, ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ಒಳಗೊಂಡಿದೆ ಎಂದು ಡಿಎಂಕೆ ಪಕ್ಷದ ಸಂಸದ ತಿರುಚಿ ಶಿವ ಕೇಳಿದ್ದ ಪ್ರಶ್ನೆಗೆ ಉತ್ತರಿಸುತ್ತಾ ತಿಳಿಸಿದ್ದಾರೆ.

ಈ ಸಮಿತಿಯು ಎಂಎಸ್‌ಪಿ ವ್ಯವಸ್ಥೆಯನ್ನು ಬಲಗೊಳಿಸುವ ಮತ್ತು ಈ ಎಂಎಸ್‌ಪಿ ವ್ಯವಸ್ಥೆಯ ಹೊರತಾಗಿಯೂ ರೈತರು ಹೇಗೆ ಲಾಭ ಪಡೆಯಬಹುದು ಎಂಬ ಸಾಧ್ಯತೆಗಳನ್ನು ಪರಿಶೀಲಿಸುತ್ತದೆ. ಹಾಗೆಯೇ ಸರ್ಕಾರ ಈ ಸಮಿತಿ ನೀಡುವ ಶಿಫಾರಸ್ಸುಗಳನ್ನು ಒಪ್ಪಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಕೃಷಿ ಉತ್ಪನ್ನಗಳ ಎಂಎಸ್‌ಪಿ ದರವನ್ನು ಉತ್ಪಾದನಾ ವೆಚ್ಚದ ಮೇಲೆ ಶೇ. 200ರಷ್ಟು ಹೆಚ್ಚಿಸುವ ಅಂದಾಜು ಸರ್ಕಾರಕ್ಕಿದೆಯೇ ಎಂದು ತಿರುಚಿ ಶಿವ ಕೇಳಿದ್ದ ಪ್ರಶ್ನೆಗೆ ಸಚಿವರು ಉತ್ತರಿಸುತ್ತಿದ್ದರು.

ಟಿಆರ್‌ಎಸ್ ಪಕ್ಷದ ಸಂಸದ ಕೆ ಆರ್ ಸುರೇಶ್ ರೆಡ್ಡಿ ಕೇಳಿದ್ದ ಪ್ರಶ್ನೆಗೆ ಉತ್ತರಿಸುತ್ತಾ “ವರ್ಷದಿಂದ ವರ್ಷಕ್ಕೆ ಕೃಷಿ ಬಜೆಟ್ ಮೊತ್ತ ಹೆಚ್ಚುತ್ತಿದೆ. 2013-14ರಲ್ಲಿ 27,000 ಕೋಟಿ ಇದ್ದಂತಹ ಮೊತ್ತ ಸದ್ಯಕ್ಕೆ ₹1.32 ಲಕ್ಷ ಕೋಟಿಗಳನ್ನು ತಲುಪಿದೆ” ಎಂದು ಹೇಳಿದ್ದಾರೆ. 

ಭಾರತ, ಕೃಷಿ ವಿಭಾಗಕ್ಕೆ ಅತಿ ಹೆಚ್ಚು ಮೊತ್ತವನ್ನು ನೀಡುವ ಟಾಪ್ 10 ರಾಷ್ಟ್ರಗಳಲ್ಲಿ ಒಂದಾಗಿದೆ. 2021-22ನೇ ಸಾಲಿನ ಕೃಷಿ ಬಜೆಟ್‌ನಲ್ಲಿ ತೆಲಂಗಾಣ ರಾಜ್ಯ 15,985 ಕೋಟಿ ರುಪಾಯಿಗಳನ್ನು ಪಡೆದುಕೊಂಡಿದೆ ಎಂದು ಸುರೇಶ್ ರೆಡ್ಡಿ ಕೇಳಿದ್ದ ಪ್ರಶ್ನೆಗೆ ಉತ್ತರಿಸುತ್ತಾ ಸಚಿವರು ರಾಜ್ಯಸಭೆಗೆ ತಿಳಿಸಿದ್ದಾರೆ.

ಮಂತ್ರಿಗಳ ಹೇಳಿಕೆಗೆ ರಾಜ್ಯ ರೈತ ನಾಯಕರು ಹೇಳಿದ್ದೇನು?

ಇದಕ್ಕೆ ತುರ್ತು ಪ್ರತಿಕ್ರಿಯೆ ನೀಡಿದ ಸಂಯುಕ್ತ ಕಿಸಾಸ್ ಮಹಾಸಭಾದ ರಾಜ್ಯ ಮುಖ್ಯಸ್ಥರಾದ ಕುರುಬೂರು ಶಾಂತಕುಮಾರ್ “ಈ ಸಮಿತಿ ನಾವು ಒಪ್ಪಿಲ್ಲ. ಇದು ಸರ್ಕಾರಿ ಪ್ರಾಯೋಜಿತ ಸಮಿತಿ. ಇದನ್ನು ವಿರೋಧಿಸಿ ಆಗಸ್ಟ್ 22ರಂದು ದೆಹಲಿಯಲ್ಲಿ ಬೃಹತ್ ಕಿಸಾನ್ ಮಹಾ ಪಂಚಾಯತಿ ರ್ಯಾಲಿ ನಡೆಸಲಾಗುತ್ತಿದೆ. ಕರ್ನಾಟಕದಿಂದಲೂ ಸಾವಿರಾರು ಸಂಖ್ಯೆಯಲ್ಲಿ ರೈತರು ಭಾಗವಹಿಸುತ್ತಿದ್ದೇವೆ” ಎಂದು ಹೇಳಿದರು.

ರೈತ ನಾಯಕಿ ಶ್ರೀಮತಿ ಸುನಂದ ಜಯರಾಂ ಪ್ರತಿಕ್ರಿಯಿಸುತ್ತಾ, "ಇಲ್ಲಿ ಮೊದಲ ವಿಚಾರ, ಈ ಸರ್ಕಾರಿ ಕೃಪಾಪೋಷಿತ ಸಮಿತಿ ಇರಬೇಕೇ ಬೇಡವೇ ಎಂಬುದು ಇನ್ನೂ ತೀರ್ಮಾನವೇ ಆಗಿಲ್ಲ. ಎರಡನೇ ವಿಚಾರ, ಈ ಸಮಿತಿ ನೀಡುವ ಎಲ್ಲಾ ಶಿಫಾರಸ್ಸುಗಳನ್ನು ಒಪ್ಪುತ್ತೇವೆ ಎಂಬುದು ಸರಿ ಅಲ್ಲ. ಇಲ್ಲಿ ಸಮಿತಿ ನೀಡುವ ಎಲ್ಲಾ ಶಿಫಾರಸ್ಸುಗಳನ್ನು ಒಪ್ಪುತ್ತೇವೆ ಎನ್ನುವುದಾದರೆ ಈ ಸಮಿತಿ ಏಕೆ ಬೇಕಿತ್ತು?! ಸರ್ಕಾರಕ್ಕೆ, ಆ ಮಂತ್ರಿಗೆ ವಿವೇಚನೆ ಎಂಬುದೇ ಇಲ್ಲವೇ? ಇದನ್ನು ಸ್ವಪಕ್ಷ ನೀತಿ ಅನ್ನುತ್ತೇವೆ. ತಮಗೆ ತಾವೇ ಮಾಡಿಕೊಳ್ಳುವಂತಹ ನೀತಿಗಳು ಇವು."  

"ಈ ಎಂಎಸ್‌ಪಿಯನ್ನು ನಾವು ಕೇಳುತ್ತಿರುವುದು ನಮ್ಮ ಬೆಳೆಗೆ, ನಮ್ಮ ಶ್ರಮಕ್ಕೆ ತಕ್ಕ ಬೆಲೆ ಬೇಕು ಎಂದು. ಅದನ್ನು ಅವರ ಸ್ವಪಕ್ಷ ನೀತಿ ಆಧಾರದ ಮೇಲೆ ನಿರ್ಧರಿಸುವುದು ರೈತ ಕುಲಕ್ಕೆ ಮಾಡುವ ಅಪಮಾನ. ನಾನು ಹೇಳಿದ್ದೇ ಸರಿ, ನಾನು ನಡೆದದ್ದೇ ಸರಿ ಎನ್ನುವ ಸರ್ವಾಧಿಕಾರಿ ಧೋರಣೆಯನ್ನು ಕೈ ಬಿಡಬೇಕು. ರೈತರೊಂದಿಗೆ ಕುಳಿತು ಮಾತನಾಡಿ, ಆದ್ಯತಾ ವಲಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಇಂತಹ ಪ್ರಜಾತಾಂತ್ರಿಕ ಮಾರ್ಗಗಳನ್ನು ಬಿಟ್ಟು ಅವರೇನೇ ಮಾಡಿದರೂ ನಾವು ಅದನ್ನು ಒಪ್ಪಲು ಸಿದ್ದರಿಲ್ಲ" ಎಂದು ತಿಳಿಸಿದ್ದಾರೆ.

ಉಳಿದ ಪ್ರಮುಖ ರೈತ ನಾಯಕರು ತುರ್ತು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ. 

ನಿಮಗೆ ಏನು ಅನ್ನಿಸ್ತು?
1 ವೋಟ್