ಕಬ್ಬಿನ ದರ ನಿಗದಿಗೆ ಒತ್ತಾಯಿಸಿ ಜುಲೈ 4ರಂದು ಧರಣಿ : ಕುರುಬೂರು ಶಾಂತಕುಮಾರ್

Kurubur Shantakumar in Press Conference
  • ಟನ್ ಕಬ್ಬಿಗೆ ₹ 3,500 ಬೆಲೆ ನಿಗದಿ ಮಾಡಬೇಕು: ಕಬ್ಬು ಬೆಳೆಗಾರರ ಸಂಘದ ಒತ್ತಾಯ
  • ಬಾಕಿಯಿರುವ 300 ಕೋಟಿ ಎಫ್‌ಆರ್‌ಪಿ ಹಣಕ್ಕೆ ಶೇ 15ರ ಬಡ್ಡಿ ಸೇರಿಸಿ ಕೊಡಬೇಕು

ಈ ವರ್ಷದ ಕಬ್ಬಿನ ದರ ನಿಗದಿ ಮಾಡುವಂತೆ ಒತ್ತಾಯಿಸಿ ಜುಲೈ 4 ರಂದು 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಮತ್ತು ಜುಲೈ 5ರಂದು ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು ಈ ಬೆಲೆಯನ್ನು ನಿಗದಿ ಮಾಡುವಾಗ ರಾಜ್ಯದಲ್ಲಿ ಹೆಚ್ಚಿರುವ ಡೀಸೆಲ್, ಪೆಟ್ರೋಲ್, ರಸಗೊಬ್ಬರ, ಬಿತ್ತನೆ ಬೀಜ. ಕಟಾವು, ಕೂಲಿ, ಸಾಗಣೆ ವೆಚ್ಚ ಇತ್ಯಾದಿ ಬೆಲೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸಬೇಕು ಎಂದು ಹೇಳಿದ್ದಾರೆ.

ಕಬ್ಬು ಬೆಳೆಗಾರರ ಬೇಡಿಕೆಗಳು

  • ಉತ್ತರ ಪ್ರದೇಶದಲ್ಲಿ ಈಗಾಗಲೇ ಒಂದು ಟನ್ ಕಬ್ಬಿಗೆ ₹ 3,500 ಬೆಲೆ ನಿಗದಿ ಮಾಡಿರುವುದನ್ನು ಸರ್ಕಾರ ಗಮನಿಸಬೇಕು. ಹಾಗೆಯೇ ಕಟಾವು ಸಾಗಣೆ ದರದಲ್ಲಿ ಆಗುತ್ತಿರುವ ಮೋಸವನ್ನು ಗಮನಿಸಬೇಕು.
  • ರಾಜ್ಯದಲ್ಲಿ ಕಳೆದ ವರ್ಷ ಸುಮಾರು 70 ಸಕ್ಕರೆ ಕಾರ್ಖಾನೆಗಳು ₹ 6.50 ಕೋಟಿ ಮೊತ್ತದ ಕಬ್ಬು ನುರಿಸಿವೆ. ಇದರ ಬಾಬ್ತು ರಾಜ್ಯದ ರೈತರಿಗೆ ಇನ್ನೂ ₹ 300 ಕೋಟಿಯಷ್ಟು ಎಫ್‌ಆರ್‌ಪಿ ಹಣ ಬಾಕಿ ಉಳಿದಿದೆ. ಈ ಬಾಕಿ ಮೊತ್ತಕ್ಕೆ ಕಾನೂನು ಪ್ರಕಾರ ಶೇ. 15 ಬಡ್ಡಿ ಸೇರಿಸಿ ತಕ್ಷಣವೇ ಕೊಡಿಸಬೇಕು.
  • ಈ ಬಗ್ಗೆ 9-6-22 ರಂದು ನಡೆದ ರಾಜ್ಯ ಸರ್ಕಾರದ ಕಬ್ಬು ಖರೀದಿ ಹಾಗೂ ಸರಬರಾಜು ಮಂಡಳಿ ಸಭೆಯಲ್ಲಿ ಭಾಗವಹಿಸಿ ರಾಜ್ಯಾಧ್ಯಕ್ಷನಾಗಿ ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆ ಸಂಕಷ್ಟವನ್ನು ವಿವರಿಸಿದ್ದೇನೆ. ಆದುದರಿಂದ ಸಕ್ಕರೆ ಸಚಿವರು ಕೂಡಲೇ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ. 
  • ಪ್ರತಿ ವರ್ಷ ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚವನ್ನು ಸಕ್ಕರೆ ಕಾರ್ಖಾನೆಯವರು ಯಾವುದೇ ಮಾನದಂಡವಿಲ್ಲದೆ ರೈತರ ಹಣದಿಂದ ಕಡಿತಗೊಳಿಸುತ್ತಿದ್ದಾರೆ. ಕಬ್ಬು ನುರಿಸುವ ಹಂಗಾಮಿನ ಅಂತಿಮ ದಿನಗಳ ಕಟಾವು ಕೂಲಿ  ಒಂದು ಸಾವಿರ ರೂಪಾಯಿಗಿಂತ ಹೆಚ್ಚು. ವೆಚ್ಚ ರೈತರಿಂದ ಕಡಿತ ಮಾಡುತ್ತಿದ್ದಾರೆ. ಇದು ರೈತರ ಶೋಷಣೆಯಾಗಿದೆ. ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು.
  • ಸಕ್ಕರೆ ಕಾರ್ಖಾನೆಗಳು ಕಟಾವು ಕೂಲಿಕಾರರನ್ನು ತಾವೇ ಮುಂಗಡ ನೀಡಿ ಕರೆದುಕೊಂಡು ಬಂದು ಅವರ ಮೂಲಕ ಕಟಾವು ಮಾಡಿಸುತ್ತಿವೆ. ಅದೇ ರೀತಿ ಲಾರಿ ಮತ್ತು ಟ್ಯಾಕ್ಟರ್‌ಗಳನ್ನು ಕಾರ್ಖಾನೆ  ವತಿಯಿಂದ ಗುತ್ತಿಗೆ ಒಪ್ಪಂದ ಮಾಡಿಕೊಂಡು ಸಾಗಣೆ ಮಾಡಿಸಿಕೊಳ್ಳುತ್ತಿದ್ದಾರೆ. ಇದರ ಸಂಪೂರ್ಣ ಉಸ್ತುವಾರಿ, ನಿಯಂತ್ರಣ ವ್ಯವಸ್ಥೆ ಕಾರ್ಖಾನೆ ಮಾಲೀಕರ ಹಂಗಿನಲ್ಲಿ ಇರುವ ಕಾರಣ ʼಕಬ್ಬಿನ ಎಫ್‌ಆರ್‌ಪಿ ದರವನ್ನು ರೈತರ ಹೊಲದಲ್ಲಿನ ದರ”  ಎಂದು ನಿಗದಿ ಮಾಡಿದರೆ ರೈತರಿಗೆ  ಸಮಸ್ಯೆ ತಪ್ಪುತ್ತದೆ. ಆದ್ದರಿಂದ ಕೂಡಲೇ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು.
  • ಕಬ್ಬಿನ ಉಪ ಉತ್ಪನ್ನಗಳ ಲಾಭವನ್ನು ಎರಡು ವರ್ಷಗಳಿಂದ ರೈತರಿಗೆ ನೀಡಿಲ್ಲ. ತೂಕದಲ್ಲಿ ಇಳುವರಿಯಲ್ಲಿ ಕಡಿಮೆ ತೋರಿಸುತ್ತಿರುವ ಕಾರಣ ರೈತರಿಗೆ ವಂಚನೆಯಾಗುತ್ತಿದೆ. 
  • ಆಕಸ್ಮಿಕ ಬೆಂಕಿ ಅಪಘಾತದಿಂದಾಗಿ ಕಬ್ಬು ಸುಟ್ಟು ಹೋದಾಗ ಕಾರ್ಖಾನೆಗಳೇ ಕಟಾವು ಮಾಡಿ ಕಾರ್ಖಾನೆಗೆ ತೆಗೆದುಕೊಂಡು ಹೋಗಿ ಅರೆಯುತ್ತವೆ. ಆದರೆ, ಈ ಮೊತ್ತದಲ್ಲಿ  ಶೇ. 25ರಷ್ಟು ಕಬ್ಬಿನ ದರವನ್ನು ಕಡಿತ ಮಾಡಿಕೊಳ್ಳುತ್ತಿದ್ದಾರೆ. ಇದು ಅವೈಜ್ಞಾನಿಕ ನೀತಿಯಾಗಿದೆ ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು

ಮೇಲ್ಕಂಡ ಒತ್ತಾಯಗಳ ಬಗ್ಗೆ ರಾಜ್ಯ ಸರ್ಕಾರ  ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲು 4/5 ರಂದು ರಾಜ್ಯಾದ್ಯಂತ ಜಿಲ್ಲಾ ಹಾಗೂ ತಾಲ್ಲೂಕು ಕಚೇರಿಗಳ ಮುಂದೆ ಧರಣಿ ನಡೆಸಲು ರಾಜ್ಯಸಮಿತಿ ತೀರ್ಮಾನಿಸಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹತ್ತಳ್ಳಿ ದೇವರಾಜ್, ಕಿರಗಸೂರು ಶಂಕರ್, ಬರಡನಪುರ ನಾಗರಾಜ್, ಕೆಂಡಗಣ್ಣಸ್ವಾಮಿ, ಲಕ್ಷ್ಮಿಪುರ ವೆಂಕಟೇಶ್, ದೇವಮಣಿ ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್