
- ಜಾಥಾ ನಡೆಸಲು ಮುಂದಾದ ರೈತರ ವಿರುದ್ಧ ದೂರು ದಾಖಲು
- ಸರ್ಕಾರದ ದೌರ್ಜನ್ಯಕ್ಕೆ ಹೆದರುವುದಿಲ್ಲ ಎಂದ ಧರಣಿನಿರತ ರೈತರು
ಭೂ ಸ್ವಾಧೀನ ವಿರೋಧಿಸಿ ʼಗಣತಂತ್ರದೆಡೆಗೆ ರೈತರ ನಡಿಗೆʼ ಜಾಥಾ ನಡೆಸಲು ಮುಂದಾಗಿದ್ದ ರೈತರ ಮೇಲೆ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಸುವೊ ಮೋಟೋ ದೂರು ದಾಖಲಿಸಲಾಗಿದೆ.
ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ನಾಡಕಚೇರಿ ಮುಂದೆ 13 ಗ್ರಾಮಗಳ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ 294ನೇ ದಿನಕ್ಕೆ ಕಾಲಿಟ್ಟಿದೆ.
ಗಣರಾಜ್ಯೋತ್ಸವದಂದು ಜಾಥಾ ನಡೆಸುವುದರಿಂದ ರಾಷ್ಟ್ರೀಯ ಹಬ್ಬದ ಸಂಭ್ರಮಾಚರಣೆಗೆ ಕಳಂಕ ತರುವ ಅಥವಾ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಘಟನೆಗಳು ಸಂಭವಿಸಬಹುದು ಎಂಬ ಕಾರಣ ನೀಡಿ ಮುಂಜಾಗ್ರತೆ ಕ್ರಮವಹಿಸಲು ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಮುಖಂಡರು ಹಾಗೂ ಪ್ರತಿಭಟನಾನಿರತ ರೈತರು ಸೇರಿದಂತೆ ಒಂಭತ್ತು ಜನರ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ.
"ಕಳೆದ ಡಿಸೆಂಬರ್ನಲ್ಲಿ ಧರಣಿನಿರತ ಸ್ಥಳದಲ್ಲೇ ಕೆಐಎಡಿಬಿ ಅಧಿಕಾರಿಗಳಿಗೆ ಶೇ. 60ರಷ್ಟು ರೈತರು ಭೂ ಸ್ವಾಧೀನವನ್ನು ವಿರೋಧಿಸುವ ಕುರಿತು ದಾಖಲೆ ಸಲ್ಲಿಸಿದ್ದರೂ ಇದುವರೆಗೂ ಸರ್ಕಾರ ಭೂಸ್ವಾಧೀನ ಕೈಬಿಡುವ ಬಗ್ಗೆ ಯಾವುದೇ ತೀರ್ಮಾನ ಪ್ರಕಟಿಸಿದ ಹಿನ್ನೆಲೆಯಲ್ಲಿ ಶಾಂತಿಯುತ ಹಾಗೂ ಮೌನ ಕಾಲ್ನಡಿಗೆ ಜಾಥಾ ನಡೆಸುತ್ತೇವೆ" ಎಂದು ರೈತರು ತೀರ್ಮಾನಿಸಿದ್ದರು. ಆದರೆ ಈಗ ಜಾಥಾ ನಡೆಸುವ ಕುರಿತಂತೆ ರೈತರ ಮೇಲೆ ದೂರು ದಾಖಲಿಸಿಲಾಗಿದೆ.
ರೈತ ಮುಖಂಡರು ಹಾಗೂ ಧರಣಿನಿರತರಾದ "ಚನ್ನರಾಯಪಟ್ಟಣ ಗ್ರಾಮದ ಮಾರೇಗೌಡ, ಅಶ್ವತ್ಥಪ್ಪ, ಮುನಿರಾಜ ಹಾಗೂ ನಂಜೇಗೌಡ, ಹೊಸಹಳ್ಳಿಯ ನಾರಾಯಣಸ್ವಾಮಿ, ದೇವನಹಳ್ಳಿ ನಗರದ ಎಂ ವೆಂಕಟೇಶ್, ತಿಮ್ಮರಾಯಪ್ಪ, ಅಣ್ಣೇಶ್ವರ ಗ್ರಾಮದ ನಾರಾಯಣಸ್ವಾಮಿ ಹಾಗೂ ಕಾರಳ್ಳಿ ಶ್ರೀನಿವಾಸ್" ಅವರುಗಳ ವಿರುದ್ಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲಾಗಿದೆ. ಅಲ್ಲದೆ, ಜ.23ರಂದು ವಿಚಾರಣೆಗೆ ಹಾಜರಾಗಿ ಒಂದು ವರ್ಷದವರೆಗೂ ಶಾಂತಿ ಕಾಪಾಡುವುದಾಗಿ ಹೆಚ್ಚಿನ ಮೊತ್ತದ ಮುಚ್ಚಳಿಕೆ ಬರೆದುಕೊಡುವಂತೆ ಸೂಚಿಸಿ ನೋಟಿಸ್ ನೀಡಲಾಗಿದೆ.
ಈ ಕುರಿತು ರೈತ ಮುಖಂಡ ಕಾರಳ್ಳಿ ಶ್ರೀನಿವಾಸ್ ಈ ದಿನ.ಕಾಮ್ಗೆ ಪ್ರತಿಕ್ರಿಯೆ ನೀಡಿ, "ಜ.26ರಂದು ನಾವು ಯಾವುದೇ ರೀತಿಯ ಪ್ರತಿಭಟನೆ ಮಾಡುವುದಿಲ್ಲ. ಮೌನ ಮೆರವಣಿಗೆ ಮಾಡುವುದಾಗಿ ಘೋಷಿಸಿದ್ದೇವೆ. ಅದಾಗ್ಯೂ, ಸರ್ಕಾರ ಪೊಲೀಸರ ಮೂಲಕ ರೈತರ ಹೋರಾಟವನ್ನು, ಭೂಮಿ ಉಳಿಸಿಕೊಳ್ಳುವ ಹಕ್ಕನ್ನು ಕಸಿಯಲು ದಮನಕಾರಿ ನೀತಿ ಅನುಸರಿಸುತ್ತಿರುವುದು ಸರಿಯಾದ ಬೆಳೆವಣಿಗೆಯಲ್ಲ. ಅನಾವಶ್ಯಕವಾಗಿ ರೈತರ ಮೇಲೆ ದೂರು ದಾಖಲಿಸಿ ಬೆದರಿಸುವ ಸಂಚು ಮಾಡಲಾಗಿದೆ" ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ದೇವನಹಳ್ಳಿ ರೈತ ಹೋರಾಟ | ಜ.26ರಂದು ಭೂಸ್ವಾಧೀನದ ವಿರುದ್ಧ 'ಗಣತಂತ್ರದೆಡೆಗೆ ರೈತರ ನಡಿಗೆ'
"ಆ.15ರಂದು ನಡೆದ ಗಲಾಟೆಯಲ್ಲಿರೂ ರೈತರು ಶಾಂತಿಯುತ ಧರಣಿ ನಡೆಸಲು ಮುಂದಾಗಿದ್ದರು. ಆದರೆ ಪೊಲೀಸರೇ ಮಹಿಳೆಯರು, ಮಕ್ಕಳು ಎಂಬುದನ್ನು ಕಾಣದೆ ಲಾಠಿಚಾರ್ಜ್ ಮಾಡಿ ದೌರ್ಜನ್ಯವೆಸಗಿ ದೂರು ದಾಖಲಿಸಿದ್ದರು. ಈಗ ಅದೇ ರೀತಿಯಲ್ಲಿ ಗಲಾಟೆ ನಡೆಸುತ್ತಾರೆಂದು ರೈತರ ಮೇಲೆ ಗುಮಾನಿ ತೋರುವುದು ಸರಿಯಲ್ಲ. ರೈತರು ಶಾಂತಿಯುತವಾಗಿ ಜಾಥಾ ನಡೆಸುವುದು ಶತಃಸಿದ್ಧ. ಸರ್ಕಾರ ನಮ್ಮನ್ನು ತಡೆಯುವ ಪ್ರಯತ್ನವನ್ನು ಮಾಡಿದರೆ, ಅದರ ಜನವಿರೋಧಿ, ರೈತ ವಿರೋಧಿ ನಡೆ ಮತ್ತೆ ಜಗಜ್ಜಾಹಿರಾಗುತ್ತದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.