
- 13 ಹಳ್ಳಿಗಳ 1,777 ಎಕರೆ ಕೃಷಿ ಭೂಮಿಯಲ್ಲಿ ಕೈಗಾರಿಕೆ ಸ್ಥಾಪಿಸಲು ಯೋಜನೆ
- ಗೊಂದಲಮಯ ಹೇಳಿಕೆ ನೀಡುವ ನಿರಾಣಿ, ಸರ್ಕಾರದ ನಡೆಗೆ ರೈತರ ಆಕ್ರೋಶ
ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ಯಮಗಳಿಗೆ ನೀಡುವುದಿಲ್ಲ. ಹಾಗಾಗಿ ಸರ್ಕಾರ ರೈತರ ಭೂಮಿಯನ್ನು ಕಸಿಯುವ ನಿರ್ಧಾರ ಕೈಬಿಡಬೇಕೆಂದು ಆಗ್ರಹಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನರಾಯಪಟ್ಟಣ ಹೋಬಳಿ ರೈತರು ನಡೆಸುತ್ತಿರುವ ಹೋರಾಟ 203ನೇ ದಿನ ಪೂರೈಸಿದೆ.
ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಹೋಬಳಿಯ 13 ಹಳ್ಳಿಗಳ 1,777 ಎಕರೆ ಕೃಷಿ ಭೂಮಿಯನ್ನು ಕೈಗಾರಿಕಾ ವಲಯ ಸ್ಥಾಪಿಸಲು ಸ್ವಾಧೀನಕ್ಕೆ ಮುಂದಾಗಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಹಾಗೂ ಸರ್ಕಾರದ ವಿರುದ್ಧ ರೈತರು ದಿಟ್ಟ ಹೋರಾಟ ನಡೆಸುತ್ತಿದ್ದಾರೆ.
ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸೇರಿದಂತೆ ಹಲವಾರು ಸಂಘಟನೆಗಳು ದೇವನಹಳ್ಳಿ ರೈತರು ಭೂಮಿ ಉಳಿವಿಗಾಗಿ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿದ್ದಾರೆ.
ಈ ಕುರಿತು ಪ್ರತಿಭಟನಾ ನಿರತ ಯುವ ರೈತ ರಮೇಶ್ ಚೀಮಾಚನಹಳ್ಳಿ ಅವರು ಈ ದಿನ.ಕಾಮ್ನೊಂದಿಗೆ ಮಾತನಾಡಿ, "ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿ ಪ್ರತಿಭಟನೆ ಆರಂಭವಾದಾಗ ಎರಡು ಸಂದರ್ಭದಲ್ಲಿ ಮಾಧ್ಯಮಗಳಿಗೆ ಮುರುಗೇಶ್ ನಿರಾಣಿ ಶೇ.90-ಶೇ.80 ರಷ್ಟು ರೈತರು ಭೂಮಿ ಕೊಡಲು ಸಿದ್ಧರಿದ್ದಾರೆಂದು ಹೇಳಿಕೆ ನೀಡಿದ್ದರು. ನಂತರ ಸಿದ್ದರಾಮಯ್ಯ ಅವರು ಸದನದಲ್ಲಿ ದೇವನಹಳ್ಳಿ ರೈತರ ಸಮಸ್ಯೆ ಬಗ್ಗೆ ಪ್ರಶ್ನಿಸಿದಾಗ ಶೇ. 70 ರಷ್ಟು ರೈತರು ಭೂಮಿ ಕೊಡಲಿದ್ದಾರೆ ಎಂದು ಹೇಳಿದ್ದರು. ಈ ಕುರಿತು ಆರ್ಟಿನಲ್ಲಿ ಮಾಹಿತಿ ಕೇಳಿದರೆ ಮಾಹಿತಿಯೇ ಇಲ್ಲ ಎನ್ನುತ್ತಿದ್ದಾರೆ. ಸ್ವಷ್ಟ ನಿಲುವಿಲ್ಲದ ಸರ್ಕಾರ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ರೈತರ ನಿಯೋಗ ಬೃಹತ್ ಕೈಗಾರಿಕಾ ಸಚಿವರವನ್ನು ಭೇಟಿ ಮಾಡಿದಾಗ, ಭೂಮಿ ಕೊಡಲು ಒಪ್ಪದ ರೈತರ ಭೂಮಿ ಮುಟ್ಟುವುದಿಲ್ಲ. ಹಾಗಾಗಿ, ಹೋರಾಟ ಕೈಬಿಡಿ ಎಂದು ಹೇಳಿದ್ದು, ಅದನ್ನು ಪತ್ರ ಮುಖೇನ ಕೊಡಿ ನಂತರ ಹೋರಾಟ ಕೈಬಿಡುತ್ತೇವೆ ಎಂದಿದ್ದೇವೆ. ಆದರೆ, ನಿರಾಣಿ ಅವರು ಅದಕ್ಕೆಲ್ಲ ಸಿದ್ದರಿಲ್ಲ. ಬದಲಾಗಿ, ಪ್ರತಿ ಹಂತದಲ್ಲಿಯೂ ಗೊಂದಲಮಯ ಹೇಳಿಕೆ ನೀಡುತ್ತಾ ಬರುತ್ತಿದ್ದು, ರೈತರೆಲ್ಲ ಒಗ್ಗಟ್ಟಿನಿಂದ ಭೂಸ್ವಾಧೀನವನ್ನೇ ಕೈಡಿಬಿ ಎಂದು ಆಗ್ರಹಿಸುತ್ತಿದ್ದೇವೆ" ಎಂದರು.
ಜಿಲ್ಲೆಯ ಮತ್ತೊಂದೆಡೆ ಭೂಸ್ವಾಧೀನಕ್ಕೆ ಮುಂದಾದ ಸರ್ಕಾರ, ರೈತರಿಂದ ಸಭೆ ಬಹಿಷ್ಕಾರ
ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1,777 ಎಕರೆ ಭೂಮಿಯಲ್ಲದೆ, ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ, ನಾಗದೇನಹಳ್ಳಿ, ಕೊನಗಟ್ಟ, ಕುಂದಾಣ ಹೋಬಳಿಯ ಚಪ್ಪರಕಲ್ಲು, ದೊಡ್ಡಗೊಲ್ಲಹಳ್ಳಿ, ಅರವನಹಳ್ಳಿ, ಭೈರದೇನಹಳ್ಳಿಗಳ ಸುತ್ತಮುತ್ತ ಕೆಐಎಡಿಬಿ 867 ಎಕರೆ ಜಮೀನಿನ ಸ್ವಾಧೀನಕ್ಕೆ ಮುಂದಾಗಿದ್ದು, ಈಗಾಗಲೇ ಅಂತಿಮ ಅಧಿಸೂಚನೆಯನ್ನೂ ಹೊರಡಿಸಿದೆ.
"ಕೆಐಎಡಿಬಿಯಿಂದ ಕೈಗಾರಿಕಾ ಉದ್ದೇಶಕ್ಕಾಗಿ ಭೂ ಸ್ವಾಧೀನಪಡಿಸಿಕೊಳ್ಳಲು ಕೃಷಿ ಭೂಮಿಗೆ ದರ ನಿಗದಿ ಸಂಬಂಧ ತಾಲೂಕಿನ ಕುಂದಾಣ-ಚಪ್ಪರಕಲ್ಲು ಬಳಿಯ ಕೃಷ್ಣೋದಯ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ ಗುರುವಾರ ಸಭೆ ಕರೆದಿತ್ತು. ಆದರೆ, ಫಲವತ್ತಾದ ಕೃಷಿ ಭೂಮಿ ಕಳೆದುಕೊಳ್ಳಲು ಸಿದ್ಧರಿಲ್ಲದ ರೈತರು ಸಭೆ ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಜಿಲ್ಲಾಧಿಕಾರಿ ವಾಪಸ್ ತೆರಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ದೇವನಹಳ್ಳಿ ರೈತ ಹೋರಾಟ | 170ನೇ ದಿನಕ್ಕೆ ಕಾಲಿಟ್ಟ ಧರಣಿ; ಬೊಮ್ಮಾಯಿ ಮನೆಗೆ ಮುತ್ತಿಗೆ ಹಾಕುವ ಎಚ್ಚರಿಕೆ

ರೈತರ ಆಕ್ರೋಶ
"ಯಾವುದೇ ಕಾರಣಕ್ಕೂ ಕುಂದಾಣ ಹೋಬಳಿ ವ್ಯಾಪ್ತಿಯಲ್ಲಿನ ಐದು ಗ್ರಾಮಗಳ ಫಲವತ್ತಾದ ಭೂಮಿಯನ್ನು ಕೆಐಎಡಿಬಿಗೆ ಕೊಡುವುದಿಲ್ಲ. ಈ ಹಿಂದೆಯೂ ಜಿಲ್ಲಾಧಿಕಾರಿ ಕಚೇರಿ ಮುಂದೆ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿತ್ತು. ಅದಾಗ್ಯೂ ಭೂಮಿಗೆ ದರ ನಿಗದಿ ಮಾಡಲು ಸಭೆ ಕರೆದಿದ್ದಾರೆ. ಈ ಪ್ರಕ್ರಿಯೆಯನ್ನು ಇಲ್ಲಿಗೆ ಕೈಬಿಡದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು" ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.