ದೇವನಹಳ್ಳಿ ರೈತ ಹೋರಾಟ | ಜ.26ರಂದು ಭೂಸ್ವಾಧೀನದ ವಿರುದ್ಧ 'ಗಣತಂತ್ರದೆಡೆಗೆ ರೈತರ ನಡಿಗೆ'

ದೇವನಹಳ್ಳಿ ರೈತ ಹೋರಾಟ
  • ಶೇ.60 ರೈತರು ಭೂಸ್ವಾಧೀನ ವಿರೋಧಿಸಿ ದಾಖಲೆ ಸಲ್ಲಿಸಿದರೂ ಸರ್ಕಾರದ ಸ್ಪಂದನೆಯಿಲ್ಲ
  • ಅನಿರ್ದಿಷ್ಟಾವಧಿ ಧರಣಿನಿರತ 13 ಗ್ರಾಮಗಳ ರೈತರಿಂದ 'ಗಣತಂತ್ರದೆಡೆಗೆ ರೈತರ ನಡಿಗೆ'

ರೈತರ ವಿರೋಧದ ನಡುವೆಯೂ ಕೃಷಿ ಭೂಮಿ ಸ್ವಾಧೀನಕ್ಕೆ ಮುಂದಾಗುತ್ತಿರುವ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವಿರುದ್ಧ ದೇವನಹಳ್ಳಿ ಜ.26ರಂದು 'ಗಣತಂತ್ರದೆಡೆಗೆ ರೈತರ ನಡಿಗೆ' ಜಾಥಾ ಆಯೋಜಿಸಲಾಗಿದೆ.

ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1777 ಎಕರೆ ಫಲವತ್ತಾದ ಕೃಷಿ ಭೂಮಿ ಉಳಿಸಲು ನಡೆಸುತ್ತಿರುವ ಹೋರಾಟಕ್ಕೆ ಜ.26ರಂದು 300 ದಿನಗಳಾಗಲಿದೆ.

ದೇವನಹಳ್ಳಿ ರೈತರ ಹೋರಾಟಕ್ಕೆ ಯಾವುದೇ ಜನಪ್ರತಿನಿಧಿಗಳು ಸ್ಪಂದಿಸಿಲ್ಲ. ಹಾಗಾಗಿ ಯಾವುದೇ ದಾರಿ ಕಾಣದೆ ಗಣರಾಜ್ಯೋತ್ಸವದಂದು ಜಾಥಾ ನಡೆಸಲು ಸಜ್ಜಾಗಿದ್ದೇವೆ ಎನ್ನುತ್ತಾರೆ ಧರಣಿ ನಿರತರು.

"ಕೈಗಾರಿಕಾ ಕೆಲಸಕ್ಕೆ ಕೃಷಿ ಭೂಮಿ ನೀಡುವುದಿಲ್ಲ ಎಂದು ಕಳೆದ ಒಂಭತ್ತು ತಿಂಗಳಿನಿಂದ ನಿರಂತರವಾಗಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರೂ ಜಿಲ್ಲಾಡಳಿತ, ಕೆಐಎಡಿಬಿ ಹಾಗೂ ಸರ್ಕಾರ ಯೋಜನೆ ಕೈಬಿಡುತ್ತಿಲ್ಲ. ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಿ ತೀರ್ಮಾನಿಸೋಣ ಎಂದು ಜಿಲ್ಲಾಧಿಕಾರಿ ನೀಡಿದ್ದ ಭರವಸೆಯೂ ಈಡೇರಿಲ್ಲ. ಬದಲಾಗಿ ಜಿಲ್ಲೆಯ ಹಲವೆಡೆ ಭೂಸ್ವಾಧೀನಕ್ಕೆ ದರ ನಿಗದಿ ಸಭೆ, ಎರಡನೇ ಹಂತದ ಭೂಸ್ವಾಧೀನಕ್ಕಾಗಿ ಸರ್ವೆ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ. ಇದೆಲ್ಲ ರೈತ ವಿರೋಧಿ ನಡೆಯಾಗಿದೆ" ಎಂದು ಈ ಬಗ್ಗೆ ರೈತ ಮುಖಂಡ ಮಾರೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವನಹಳ್ಳಿ ರೈತ ಹೋರಾಟ

"ನಮ್ಮ ಭೂಮಿ ಉಳಿಸಿಕೊಳ್ಳಲು ಉಸ್ತುವಾರಿ ಸಚಿವ ಡಾ ಕೆ ಸುಧಾಕರ್‌, ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆಲ್ಲ ಮನವಿ ಮಾಡಲಾಗಿದೆ. ಸದನದಲ್ಲೂ ಈ ಕುರಿತು ಚರ್ಚೆಯಾಗಿದೆ. ಭೂಮಿ ಕೊಡುವುದಿಲ್ಲ ಎಂದು ರೈತರು ದಾಖಲೆ ಸಲ್ಲಿಸಿದ್ದಾರೆ. ಅದಾಗ್ಯೂ, ಭೂಮಿ ಕಿತ್ತುಕೊಳ್ಳುವುದನ್ನು ನಿಲ್ಲಿಸುವುದಿಲ್ಲ ಎಂಬ ಧೋರಣೆ ತೋರುತ್ತಿದ್ದಾರೆ. ಹಾಗಾಗಿ ಜ.26ರಂದು ಯಾವುದೇ ರೀತಿಯ ಪ್ರತಿಭಟನೆ ಮಾಡುವುದಿಲ್ಲ. ಬದಲಾಗಿ 13 ಗ್ರಾಮಗಳ ರೈತರು ರಾಷ್ಟ್ರಧ್ವಜ ಹಾಗೂ ಹಸಿರು ಬಾವುಟ ಹಿಡಿದು ಮೌನ ಮೆರವಣಿಗೆ ನಡೆಸುತ್ತೇವೆ" ಎಂದು ಸಮಿತಿ ಮುಖಂಡ ಕಾರಳ್ಳಿ ಶ್ರೀನಿವಾಸ್‌ ಮಾಹಿತಿ ನೀಡಿದರು.

ಈ ಸುದ್ದಿ ಓದಿದ್ದೀರಾ? ದೇವನಹಳ್ಳಿ ರೈತ ಹೋರಾಟ | ಭೂ ಸರ್ವೆಗೆ ಬಂದವರಿಗೆ ಘೇರಾವ್ ಹಾಕಿ ವಾಪಸ್‌ ಕಳಿಸಿದ ರೈತರು

"ಜಾಥಾ ಆರಂಭಿಸುವುದರೊಳಗೆ ಸಂಬಂಧಪಟ್ಟ ಸಚಿವರು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಧರಣಿನಿರತ ರೈತರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವ ನಿರೀಕ್ಷೆಯಿತ್ತು. ಆದರೆ, ಜ.21 ಶನಿವಾರ ಎರಡನೇ ಹಂತದ ಭೂ ಸ್ವಾಧೀನಕ್ಕಾಗಿ ಸರ್ವೆ ಮಾಡಲು ಅಧಿಕಾರಿಗಳನ್ನು ಕಳುಹಿಸಲಾಗಿದೆ. ನಂತರ ಸಮಯೋಚಿತವಾಗಿ ಚಿಂತಿಸಿದ ರೈತರು, ಅಧಿಕಾರಿಗಳನ್ನು ತಡೆದು ಘೇರಾವ್ ಮಾಡಿ ವಾಪಸ್ ಕಳುಹಿಸಿದ್ದಾರೆ. ಹಾಗಾಗಿ ಈ ಜಾಥಾ ನಡೆಸುವುದು ಅನಿವಾರ್ಯವಾಗಿದೆ" ಎಂದು ಅವರು ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app