ʼಆಪೂಸ್ ಹಣ್ಣಿನ ರಾಜಧಾನಿʼ ಪಟ್ಟ ಕಳೆದುಕೊಳ್ಳುತ್ತಿದೆ ಧಾರವಾಡ

  • ಮಾವು ಬೆಳೆಯುತ್ತಿದ್ದ ಕೃಷಿ ಭೂಮಿ ಶೇ.80ರಷ್ಟು ಕಡಿಮೆಯಾಗಿದೆ
  • ಧಾರವಾಡದಲ್ಲಿ ಬೆಳೆಯುವ ಹಣ್ಣುಗಳಲ್ಲಿ ಶೇ.95ರಷ್ಟು ಆಪೂಸ್ ತಳಿಯದ್ದಾಗಿವೆ

ಅತ್ಯಧಿಕ ಮಾವು ಬೆಳೆಯುತ್ತಿದ್ದ ಧಾರವಾಡದಲ್ಲಿ ಈ ಬಾರಿ ಮಾವು ಇಳುವರಿ ಗಣನೀಯವಾಗಿ ಇಳಿಕೆ ಕಂಡಿದೆ. ಹೀಗಾಗಿ, ʼಆಪೂಸ್ (ಅಲ್ಫೋನ್ಸೊ) ಹಣ್ಣಿನ ರಾಜಧಾನಿʼ ಎಂದು ಹೆಸರು ಪಡೆದಿದ್ದ ಧಾರವಾಡ ಈ ಹೆಗ್ಗಳಿಕೆಯನ್ನು ಕಳೆದುಕೊಳ್ಳುವಂತಾಗಿದೆ.

ಜಿಲ್ಲೆಯ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿತ್ತು. ಇದೀಗ ಕೇವಲ 8,890 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಮಾವು ಬೆಳೆವ ಕೃಷಿ ಭೂಮಿಯ ವಿಸ್ತೀರ್ಣ ಭಾರಿ ಇಳಿಕೆಯಾಗಿದೆ. ಇಲ್ಲಿ ಬೆಳೆಯುವ ಹಣ್ಣುಗಳಲ್ಲಿ ಶೇ.95ರಷ್ಟು ಆಪೂಸ್ ತಳಿಯ ಹಣ್ಣುಗಳಾಗಿವೆ. ಇವುಗಳನ್ನು "ಒಂದು ಜಿಲ್ಲೆ, ಒಂದು ಉತ್ಪನ್ನ” ಎಂಬ ಯೋಜನೆಯಡಿ ಬೆಳೆಯಲಾಗುತ್ತಿದೆ.

2017ರಿಂದ ಮಾವು ಬೆಳೆವ ಪ್ರದೇಶವು ಗಣನೀಯವಾಗಿ ಇಳಿಕೆಯಾಗುತ್ತಾ ಬಂದಿದೆ. ಕೆಲವೇ ವರ್ಷಗಳಲ್ಲಿ ಮಾವು ಬೆಳೆಯುತ್ತಿದ್ದ ಕೃಷಿ ಭೂಮಿ ಶೇ.80ರಷ್ಟು ಕಡಿಮೆಯಾಗಿದೆ. ಹವಾಮಾನ ವೈಪರೀತ್ಯಗಳು, ಮಾರುಕಟ್ಟೆಯ ಬೆಲೆಗಳಲ್ಲಿ ಏರಿಳಿತ ಹೀಗೆ ಹಲವು ಕಾರಣಗಳಿಂದ ಮಾವು ಬೆಳೆಗಾರರು ಪರ್ಯಾಯ ಬೆಳೆಗಳ ಮೊರೆ ಹೋಗಿದ್ದಾರೆ. ಮಾವು ಬೆಳೆಯುತ್ತಿದ್ದ ಕೃಷಿ ಭೂಮಿಯಲ್ಲೀಗ ಪೇರಲೆ, ಅಡಕೆ, ಗೋಡಂಬಿ ಮತ್ತು ಬಾಳೆಯನ್ನು ಬೆಳೆಯಲಾಗುತ್ತಿದೆ. ಅಲ್ಲದೇ ಸಂಸ್ಕರಣಾ ಉದ್ಯಮ ʼಹಣ್ಣುಗಳ ರಾಜʼನನ್ನು ಟೇಬಲ್ ಹಣ್ಣು (ಆಲಂಕಾರಿಕ ಹಣ್ಣು) ಎಂದು ಪರಿಗಣಿಸಿರುವುದು ಸಹ ಇದಕ್ಕೆ ಕಾರಣ.

ತೋಟಗಾರಿಕಾ ಇಲಾಖೆ ಹೇಳುವಂತೆ, ಕಳೆದ ಎರಡು ವರ್ಷಗಳ ಹಿಂದೆ ಜಿಲ್ಲೆಯಲ್ಲಿ 1.37 ಲಕ್ಷ ಟನ್ ಮಾವಿನ ಹಣ್ಣಿನ ಇಳುವರಿ ದಾಖಲಾಗಿತ್ತು. ಆದರೆ, ಈ ವರ್ಷ ಮಾವಿನ ಇಳುವರಿ 60 ಸಾವಿರ ಸಹ ತಲುಪಿಲ್ಲ.

ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ (ಪಿಎಂಎಫ್ಎಂಇ)  ಭಾಗವಾದ ‘ಒಂದು ಜಿಲ್ಲೆ, ಒಂದು ಉತ್ಪನ್ನʼ ಯೋಜನೆಯಡಿ ಆಪೂಸ್ ಹಣ್ಣು ಧಾರವಾಡದ ಪ್ರಮುಖ ಬೆಳೆಯಾಗಿದೆ.

ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಬೆಳೆಯುವ ಆಪೂಸ್ ಹೆಚ್ಚು ಗುಣಮಟ್ಟದ ಹಣ್ಣಾಗಿದ್ದು, ವಿದೇಶಗಳಿಗೆ ರಫ್ತಾಗುತ್ತದೆ. ಯೂರೋಪ್, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಏಷ್ಯಾದ ಕೆಲವು ದೇಶಗಳಿಗೆ ಈ ಜಿಲ್ಲೆಯ ಹಣ್ಣುಗಳನ್ನು ರಫ್ತು ಮಾಡಲಾಗುತ್ತದೆ.
ತೋಟಗಾರಿಕಾ ಇಲಾಖೆಯ ಪ್ರಕಾರ, ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಬಿದ್ದ ಭಾರಿ ಮಳೆಯಿಂದ ಮಾವಿನ ಮರಗಳು ಹೂವು ಬಿಡುವುದು ತಡವಾಗಿದೆ. ನಂತರ ಬಂದ ಗಾಳಿ-ಮಳೆಗೆ ಹೂವುಗಳು ಕಪ್ಪಾಗಿವೆ. ಮಾವಿನ ಕಾಯಿಗಳು ಗಾಳಿ ಹೊಡೆತಕ್ಕೆ ನೆಲಕ್ಕುರುಳಿವೆ. ಈ ಎಲ್ಲ ಕಾರಣಗಳಿಂದಾಗಿ ಮಾವಿನ ಇಳುವರಿಯಲ್ಲಿ ಗಣನಿಯ ಇಳಿಕೆಯಾಗಿದೆ.

ಇನ್ನು ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ವಿವಿಧ ತಳಿಯ ಮಾವನ್ನು ಬೆಳೆಯಲಾಗುತ್ತಿದೆ. ಈ ಭಾಗದಲ್ಲಿಯೂ ಇಳುವರಿ ಕಡಿಮೆಯಾಗಿದ್ದು, ಹೆಕ್ಟೇರ್‌ಗೆ 6 ಟನ್ ಇಳುವರಿ ಬರುತ್ತಿದ್ದ ನೆಲದಲ್ಲಿ, ಇದೀಗ ಎರಡು ಟನ್‌ಗಿಂತ ಕಡಿಮೆ ಇಳುವರಿ ಬಂದಿದೆ.

ಇದನ್ನು ಓದಿದ್ದೀರಾ?: ಅಳಿದುಳಿದ ಮಾವಿಗೂ ಧರ್ಮ ಸಂಕಷ್ಟ; ಮುಸ್ಲಿಮರಿಂದ ಹಣ್ಣು ಖರೀದಿಸಬೇಡಿ ಅಭಿಯಾನಕ್ಕೆ ರೈತ ಕಂಗಾಲು

ಪ್ರತಿ ವರ್ಷ ಏಪ್ರಿಲ್ ಎರಡನೇ ವಾರದಷ್ಟರಲ್ಲಿ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಡುತ್ತಿತ್ತು. ಆದರೆ, ಈ ವರ್ಷ ಇನ್ನೂ 45 ರಿಂದ 50 ದಿನ ತಡವಾಗಿ ಮಾರುಕಟ್ಟೆ ಪ್ರವೇಶಿಸಲಿದೆ. ಇಳುವರಿ ಕಡಿಮೆ ಬಂದಿರುವುದರಿಂದ ಹಣ್ಣಿನ ಬೆಲೆಯಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆಗಳಿವೆ. ಒಂದು ಡಜನ್ ಮಾವಿನ ಹಣ್ಣಿನ ಬೆಲೆ 900 ರೂಪಾಯಿವರೆಗಿತ್ತು. ಈ ಬಾರಿ ಅದು 1,100 ರೂಪಾಯಿವರೆಗೂ ಏರುವ ನಿರೀಕ್ಷೆ ಇದೆ.

ನಿಮಗೆ ಏನು ಅನ್ನಿಸ್ತು?
2 ವೋಟ್