ಕಬ್ಬಿನ ಉಪ ಉತ್ಪನ್ನ ಲಾಭಾಂಶ ಹಂಚಿಕೆ |ಐದು ದಿನಗಳಲ್ಲಿ ತೀರ್ಮಾನ: ಸಚಿವ ಮುನೇನಕೊಪ್ಪ

ಸಕ್ಕರೆ ಸಚಿವರ ಸಭೆ
  • ಉಪ ಉತ್ಪನ್ನ ಲಾಭಾಂಶ ಕೊಡಲು ಒಪ್ಪುವರೇ ಕಾರ್ಖಾನೆ ಮಾಲೀಕರು?
  • ಸರ್ಕಾರ ಸಮಸ್ಯೆ ಬಗೆಹರಿಸಲಿದ್ದು, ಕಬ್ಬು ಬೆಳೆಗಾರರು ಸತ್ಯಾಗ್ರಹ ಕೈಬಿಡಬೇಕು 

ರಾಜ್ಯದಲ್ಲಿ ಕಬ್ಬು ದರ ನಿಗದಿ ಹಾಗೂ ಉಪ ಉತ್ಪನ್ನಗಳ ಲಾಭಾಂಶ ಹಂಚಿಕೆ ಕುರಿತು ಮುಂದಿನ ಐದು ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ್ ಬಿ ಪಾಟೀಲ್ ಮುನೇನಕೊಪ್ಪ ಹೇಳಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ವ್ಯವಸ್ಥಾಪಕ ನಿರ್ದೇಶಕರ ಜೊತೆ ಕಬ್ಬು ದರ ನಿಗದಿ ಮತ್ತು ಆದಾಯ ಹಂಚಿಕೆ ಸಾಧಕ- ಬಾಧಕಗಳ ಕುರಿತು ಸಭೆ ನಡೆಸಿದ ಸಚಿವರು ನಂತರ ಸುದ್ದಿಗೋಷ್ಠಿ ನಡೆಸಿ, ಈ ಮಾಹಿತಿ ನೀಡಿದರು.

"ಆದಾಯ ಹಂಚಿಕೆಯಲ್ಲಿ ಸಾಧಕ- ಬಾಧಕ ಕುರಿತು ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಇಂದು ಚರ್ಚೆ ನಡೆಸಿದ್ದು, ಈ ಕುರಿತು ಸಕ್ಕರೆ ಕಾರ್ಖಾನೆಗಳ ಮಾಲೀಕರು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ. ಸರ್ಕಾರ ಮತ್ತು ಮುಖ್ಯಮಂತ್ರಿಗಳ ಅಭಿಪ್ರಾಯಕ್ಕೆ ಅಭಿಮತ ಸೂಚಿಸಿದ್ದು, ಮುಂದಿನ ಐದು ದಿನಗಳಲ್ಲಿ ತಮ್ಮ‌ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ" ಎಂದರು.

ಪ್ರಸ್ತುತ, ಉಪ ಉತ್ಪನ್ನಗಳ ಲಾಭಾಂಶ ಬೇಕು ಎಂಬುದು ರೈತರ ಬೇಡಿಕೆಯಾಗಿದ್ದು, ಈ ಬಗ್ಗೆ ಸಕ್ಕರೆ ಕಾರ್ಖಾನೆ ಮಾಲೀಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಉಪ ಉತ್ಪನ್ನ ಲಾಭಾಂಶ ವಿಷಯದಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರ ಮತ್ತು ರೈತರ ಪರವಾಗಿ ತಾವು ನಿಲ್ಲುವುದಾಗಿ ತಿಳಿಸಿದ್ದು, ಇದೊಂದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.

ಎಚ್.ಎನ್.ಟಿ.ಯಲ್ಲಿ ದೊಡ್ಡ ಮೋಸ ಆಗುತ್ತಿದೆ ಎಂಬ ರೈತರ ಆತಂಕವನ್ನು ಕೂಡ ನಿವಾರಿಸಲಾಗಿದೆ. ಎಚ್‌ಎನ್‌ಟಿ, ಇಳವರಿ, ತೂಕ ವ್ಯತ್ಯಾಸ ಇತ್ಯಾದಿ ಬಗ್ಗೆ ಸರ್ಕಾರ ಕಾನೂನಾತ್ಮಕ ಕ್ರಮ ಕೈಗೊಳ್ಳುವುದು ಎಂದು ಭರವಸೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

"ರಾಜ್ಯದಾದ್ಯಂತ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ನುರಿಸುವಿಕೆ ಪ್ರಾರಂಭವಾಗಿದ್ದು, ರೈತರಿಗೆ ಎಫ್‌ಆರ್‌ಪಿಗಿಂತ ಹೆಚ್ಚು ಮೊತ್ತವನ್ನು ಪಾವತಿಸಲಾಗುತ್ತಿದೆ. ಕೆಲವು ಕಡೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಸತ್ಯಾಗ್ರಹ, ಸಕ್ಕರೆ ಕಾರ್ಖಾನೆಗೆ ಮುತ್ತಿಗೆಯಂಥ ಘಟನೆಗಳು ನಡೆದಿವೆ. ಸತ್ಯಾಗ್ರಹ ಕೈಬಿಟ್ಟು, ಕಬ್ಬು ಬೆಳೆಗಾರರಿಗೆ ಕಬ್ಬು ಸಾಗಾಟಕ್ಕೆ ಯಾರೂ ಅಡ್ಡಿ ಮಾಡಬಾರದು ಎಂಬ ಮನವಿಗೆ ರೈತರು ಸಹಕರಿಸಿದ್ದಾರೆ.‌ ಅನೇಕ ರೈತ ಹೋರಾಟಗಾರರು ಕೂಡ ಸಂಪೂರ್ಣ ಸಹಕಾರ ನೀಡಿದ್ದಾರೆ" ಎಂದು ಅವರು ಹೇಳಿದರು.

ಈ ಸುದ್ದಿ ಓದಿದ್ದೀರಾ? ಕಬ್ಬು ಬೆಳೆಗೆ ದರ ನಿಗದಿ -2 | ಎಸ್‌ಎಪಿ, ಎಫ್‌ಆರ್‌ಪಿ ಎಂದರೇನು? ರೈತರಿಗೆ ಆಗುತ್ತಿರುವ ದ್ರೋಹವೇನು?

"ರೈತರ ಸಮಸ್ಯೆ ಆಲಿಸಿ ಬಗೆಹರಿಸಲು ಕಾಲ್ ಸೆಂಟರ್ ತೆರೆಯುವಿಕೆ, ಇಲಾಖೆಯಲ್ಲಿ ತಂತ್ರಜ್ಞಾನದ ಅಳವಡಿಕೆಯಂತಹ ಕ್ರಮಗಳನ್ನು ರೈತರಿಗಾಗಿ ಕೈಗೊಳ್ಳಲಾಗಿದೆ. ಸಕ್ಕರೆ ಕಾರ್ಖಾನೆಗಳು ಮತ್ತು ರೈತರ ನಡುವೆ ಸಂಘರ್ಷ ಉಂಟಾದಾಗ ಸರ್ಕಾರ ಮುಂದೆ ನಿಂತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸುತ್ತದೆ. ಅಧಿಕಾರಿ ವರ್ಗ ಒಂದು ತಂಡವಾಗಿ ಕೆಲಸ‌ ಮಾಡುತ್ತದೆ. ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತರು ಸೌಹಾರ್ದಯುತವಾಗಿ, ಒಂದಾಗಿ ಇರುವುದು ಅತ್ಯಾವಶ್ಯಕ. ಈ ನಿಟ್ಟಿನಲ್ಲಿ ಸರ್ಕಾರ ಸದಾ ಕಾರ್ಯನಿರ್ವಹಿಸುತ್ತದೆ" ಎಂದು ಸಚಿವರು ಭರವಸೆ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180