'ಡ್ರಾಗನ್‌ ಫ್ರೂಟ್'ಗೆ ಉತ್ತೇಜನ: 50,000 ಹೆಕ್ಟೇರ್‌ ಗುರಿ; ರೈತರಿಗೆ ಧನಸಹಾಯ ಯೋಜನೆ

ಪ್ರಸ್ತುತ ಭಾರತದಲ್ಲಿ ಸುಮಾರು 3,000 ಹೆಕ್ಟೇರ್‌ಗಳಲ್ಲಿ ಈ ಹಣ್ಣಿನ ಕೃಷಿ ನಡೆಯುತ್ತಿದ್ದು, ಇದನ್ನು 50,000 ಹೆಕ್ಟೇರ್‌ಗಳಿಗೆ ವಿಸ್ತರಿಸಲು ಸರ್ಕಾರ ತೀರ್ಮಾನಿಸಿದೆ. ಈಗಾಗಲೇ ಗುಜರಾತ್‌ ಮತ್ತು ಹರಿಯಾಣ ರಾಜ್ಯಗಳು ಈ ವಿಷಯದಲ್ಲಿ ಮುಂದಡಿ ಇಟ್ಟಿವೆ.
dragon fruit cultivation in 50,000

"ಸೂಪರ್‌ ಫ್ರೂಟ್”‌ ಎಂದೂ ಕರೆಯಲಾಗುವ “ಡ್ರಾಗನ್‌ ಫ್ರೂಟ್”‌ ಕೃಷಿಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ. ಬೆಳೆಯ ವೆಚ್ಚ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬೇಡಿಕೆ ಹಾಗೂ ಪೌಷ್ಟಿಕಾಂಶದ ಮೌಲ್ಯಗಳನ್ನು ಗಮನದಲ್ಲಿರಿಸಿಕೊಂಡು ಈ ಹಣ್ಣಿನ ಬೆಳೆಯನ್ನು ಪ್ರೋತ್ಸಾಹಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಪ್ರಸ್ತುತ ಭಾರತದಲ್ಲಿ ಸುಮಾರು 3,000 ಹೆಕ್ಟೇರ್‌ಗಳಲ್ಲಿ ಈ ಹಣ್ಣಿನ ಕೃಷಿ ನಡೆಯುತ್ತಿದ್ದು, ಇದನ್ನು 50,000 ಹೆಕ್ಟೇರ್‌ಗಳಿಗೆ ವಿಸ್ತರಿಸಲು ಸರ್ಕಾರ ತೀರ್ಮಾನಿಸಿದೆ. ಈಗಾಗಲೇ ಗುಜರಾತ್‌ ಮತ್ತು ಹರಿಯಾಣ ರಾಜ್ಯಗಳು ಈ ವಿಷಯದಲ್ಲಿ ಮುಂದಡಿ ಇಟ್ಟಿದ್ದು, ಇವುಗಳ ಮಾದರಿಯನ್ನು ಅನುಸರಿಸಲು ಕೇಂದ್ರ ಸಿದ್ಧವಾಗಿದೆ ಎಂದು ಹೇಳಲಾಗಿದೆ.

ಗುಜರಾತ್‌ ಸರ್ಕಾರವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಈ ಹಣ್ಣಿಗೆ “ಕಮಲಮ್”‌ ಎಂದು ಬಿಜೆಪಿಯ ಚುನಾವಣಾ ಚಿನ್ಹೆಯಾದ ಕಮಲದ ಹೆಸರನ್ನು ಮರುನಾಮಕರಣ ಮಾಡಿದೆ. ಈ ಎರಡೂ ಸರ್ಕಾರಗಳು ಈ ಹಣ್ಣಿನ ಬೆಳೆಗಾರರಿಗೆ ಧನಸಹಾಯವನ್ನು ನೀಡುತ್ತವೆ.

ಕಡಿಮೆ ಕ್ಯಾಲೋರಿಗಳಿದ್ದು, ಹೆಚ್ಚಿನ ಪೌಷ್ಟಿಕಾಂಶಗಳನ್ನು ಹೊಂದಿರುವ ಈ ಹಣ್ಣಿನಲ್ಲಿ ಕಬ್ಬಿಣ. ಕ್ಯಾಲ್ಸಿಯಂ, ಪೊಟಾಷಿಯಮ್‌ ಮತ್ತು ಜ಼ಿಂಕ್‌ಗಳು ಯಥೇಚ್ಛವಾಗಿರುವುದರಿಂದ ಸಕ್ಕರೆ ಕಾಯಿಲೆಗೆ ಇದು ಉತ್ತಮ ಪರಿಹಾರವಾಗಿದೆ ಎಂದು ಹೇಳಲಾಗಿದೆ.

ಜುಲೈ 5ರಂದು ನಡೆದ ಈ ಹಣ್ಣನ್ನು ಕುರಿತ ಸಮಾವೇಶದಲ್ಲಿ ಭಾರತದ ಕೃಷಿ ಕಾರ್ಯದರ್ಶಿಗಳಾದ ಮನೋಜ್‌ ಅಹುಜ ಇದರ ಬಗ್ಗೆ ಮಾತನಾಡುತ್ತಾ “ಇದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆ ಹೊಂದಿದೆ ಹಾಗೂ ಉತ್ತಮ ಪೌಷ್ಟಿಕಾಂಶದ ಮೌಲ್ಯಗಳನ್ನು ಒಳಗೊಂಡಿದೆ. ಇದನ್ನೆಲ್ಲಾ ಆಧರಿಸಿ ಭಾರತದಲ್ಲಿ 50,000 ಹೆಕ್ಟೇರ್‌ಗಳಲ್ಲಿ ಈ ಬೆಳೆಯನ್ನು ಬೆಳೆಯಲು ಉತ್ತೇಜನ ನೀಡಲಾಗುತ್ತದೆ. ಆನಂತರ ಸಹ ಇದರ ಬೇಡಿಕೆ ಕಡಿಮೆಯಾಗುವುದಿಲ್ಲ. ರೈತರಿಗೆ ಉತ್ತಮ ಬೆಲೆ ಸಿಗುತ್ತದೆ. ಇದಕ್ಕೆ ಫಲವತ್ತಾದ ಭೂಮಿಯೇ ಬೇಕೆಂದಿಲ್ಲ. ಬರಡು ಭೂಮಿಯಲ್ಲೂ ಸಹ ಇದನ್ನು ಬೆಳೆಯಬಹುದು” ಎಂದು ಹೇಳಿದ್ದಾರೆ.

“ಕೇಂದ್ರ ಸರ್ಕಾರವು ರಾಜ್ಯಗಳಿಗೆ ಉತ್ತಮ ಸಸಿಗಳನ್ನು ಒದಗಿಸಲು ಸಿದ್ಧವಾಗಿದೆ” ಎಂದೂ ಅವರು ಹೇಳಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಮನೋಜ್‌ ಅಹುಜ “ಕೇಂದ್ರ ಸರ್ಕಾರವು ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ ಅಡಿಯಲ್ಲಿ ರಾಜ್ಯಗಳಿಗೆ ಮತ್ತು ಬೆಳೆಗಾರರಿಗೆ ಕೆಲವು ನಿರ್ದಿಷ್ಟ ಸಹಾಯಗಳನ್ನು ಮಾಡಲು ತಯಾರಿದೆ. ಆಹಾರ ಸಂಸ್ಕರಣಾ ಸಚಿವಾಲಯದೊಂದಿಗೆ ಕೂಡಿ ಈ ಹಣ್ಣುಗಳ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಸಹ ಸಹಾಯ ಮಾಡಬಹುದಾಗಿದೆ. ಇದು ಬೆಳೆಗಾಗರಿಗೆ ಮತ್ತು ಗ್ರಾಹಕರಿಬ್ಬರಿಗೂ ಲಾಭದಾಯಕವಾಗಿರುತ್ತದೆ” ಎಂದು ಹೇಳಿದರು.

ಭಾರತೀಯ ಕೃಷಿ ಸಂಶೋಧನಾ ಕೇಂದ್ರ ಮತ್ತು ಇತರೆ ತಜ್ಞರ ಅಭಿಪ್ರಾಯದಂತೆ ಇದಕ್ಕೆ ಹೆಚ್ಚು ನೀರಿನ ಅಗತ್ಯವಿಲ್ಲ. ಇದನ್ನು ಒಣ ಬೇಸಾಯದಲ್ಲೂ ಬೆಳೆಯಬಹುದಾಗಿದೆ. ತೋಟಗಾರಿಕಾ ಆಯುಕ್ತ ಪ್ರಭಾತ್‌ ಕುಮಾರ್‌ ಈ ಬಗ್ಗೆ ಮಾಹಿತಿ ನೀಡುತ್ತಾ, “ಸದ್ಯಕ್ಕೆ ಈ ಹಣ್ಣಿನ ಬೆಲೆ ಒಂದು ಕೇಜಿಗೆ 400 ರೂಪಾಯಿ ಇದೆ, ಈಗ ಮಾಡುತ್ತಿರುವ ಪ್ರಯತ್ನ ಸಫಲವಾದಲ್ಲಿ ಇದನ್ನು 100 ರೂಪಾಯಿಗೆ ಕೊಡಬಹುದು. ಆರಂಭದಲ್ಲಿ ಇದರ ಕೃಷಿ ವೆಚ್ಚ ಹೆಚ್ಚಿರುತ್ತದೆ. ಆದರೆ, ಇದಕ್ಕೆ ಫಲವತ್ತಾದ ಭೂಮಿಯ ಅಗತ್ಯ ಇಲ್ಲ. ಎಂಥ ಬರಡು ಭೂಮಿಯಲ್ಲೂ ಅತ್ಯುತ್ತಮ ಇಳುವರಿ ನೀಡುತ್ತದೆ ” ಎಂದರು.

“ಹೆಚ್ಚು ಹೆಚ್ಚು ರಾಜ್ಯ ಸರ್ಕಾರಗಳನ್ನು ಈ ಯೋಜನೆ ಅಡಿ ತರಲು ಕೇಂದ್ರ ಸರ್ಕಾರ ಒಂದು ಕ್ರಿಯಾ ಯೋಜನೆಯನ್ನು ರೂಪಿಸುತ್ತಿದೆ. ಸದ್ಯಕ್ಕೆ ಮಿಜ಼ೋರಾಂ ಇದರ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಶೀತ ಪ್ರದೇಶಗಳನ್ನು ಹೊರತುಪಡಿಸಿ ದೇಶದ ಎಲ್ಲ ರಾಜ್ಯಗಳಲ್ಲೂ ಇದನ್ನು ಬೆಳೆಯಬಹುದು. ಮಾರುಕಟ್ಟೆಯಲ್ಲಿ ಇದಕ್ಕೆ ವಿಪರೀತ ಬೇಡಿಕೆ ಇದೆ. ಆದರೆ ಉತ್ಪಾದನೆಯ ಕೊರತೆ ಇದೆ” ಎಂದು ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಜಿ.ಕರುಣಾಕರನ್‌ ಹೇಳಿದ್ದಾರೆ.

ಮುಂದುವರಿದು ಮಾತನಾಡುತ್ತಾ, “ಸದ್ಯಕ್ಕೆ ಭಾರತ 15,491 ಟನ್ ಹಣ್ಣುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಇದು ಬಹುಪಾಲು ಚೀನಾದ ಉತ್ಪಾದನೆಗೆ ಸಮ. ಇಷ್ಟು ಇಳುವರಿ ಪಡೆಯಲು ಸುಮಾರು 40,000 ಹೆಕ್ಟೆರ್‌ ಭೂಮಿ ಬೇಕು. ಸದ್ಯಕ್ಕೆ ವಿಯೆಟ್ನಾಮ್ 60,000 ಹೆಕ್ಟೇರುಗಳಲ್ಲಿ ಇದರ ಕೃಷಿ ಮಾಡುತ್ತಿದೆ. ಇದು ಆರಂಭಿಕ ಹೆಚ್ಚು ಬಂಡವಾಳವನ್ನು ನಿರೀಕ್ಷಿಸುತ್ತದೆ. ಅದರೆ ಒಂದು ವರ್ಷದಲ್ಲಿ ಇದನ್ನು ಹಿಂತಿರುಗಿ ಪಡೆಯಬಹುದು” ಎಂದು ಹೇಳಿದರು.

ಮೂಲತಃ ಇದು ದಕ್ಷಿಣ ಮತ್ತು ಮಧ್ಯ ಅಮೆರಿಕಾದ ತಳಿ. ಇದರ ಮೂಲ ಬ್ರಿಸಿಲ್ ಎಂದು ಗುರುತಿಸಲಾಗುತ್ತದೆ. ಕಳ್ಳಿ ಜಾತಿಗೆ ಸೇರಿದ ಈ ಹಣ್ಣನ್ನು ಅದರ ಮೂಲದಲ್ಲಿ “ಪಿಟಾಯ” ಅಥವ “ಪಿಟಹಾಯ” ಎನ್ನುವ ಹೆಸರಿನಿಂದ ಕರೆಯುತ್ತಾರೆ. ವಿಯೆಟ್ನಾಂನಲ್ಲಿ ಇದಕ್ಕೆ “ಥಾನ್ಲಾಂಗ್”‌ ಎಂಬ ಹೆಸರಿದೆ. ಈ ವಿದೇಶಿ ಫಲವನ್ನು ಬೆಳೆಯಲು ಸದ್ಯಕ್ಕೆ ಹರಿಯಾಣ ಸರ್ಕಾರ ಧನ ಸಹಾಯದ ಮೂಲಕ ಪೀಠಿಕೆ ಹಾಕಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್