ಆರ್‌ಎಸ್‌ಎಸ್‌ ಕೃಷಿ ವಿಭಾಗದಿಂದ ಮೋದಿ ಸರ್ಕಾರದ ಕೃಷಿ ನೀತಿಯ ಖಂಡನೆ

ಕಳೆದ ಕೆಲವು ವರ್ಷಗಳಿಂದ ವಾಣಿಜ್ಯ ಸಚಿವಾಲಯವು ಕಟಾವು ಪೂರ್ಣಗೊಳ್ಳುವ ಸಮಯದಲ್ಲಿ ಆಮದು ಆದೇಶವನ್ನು ಹೊರಡಿಸುತ್ತಿದೆ. ಜೊತೆಗೆ, ಇದರ ಬಗ್ಗೆ ಕನಿಷ್ಠ ಕಾಳಜಿಯನ್ನೂ ವಹಿಸುತ್ತಿಲ್ಲ. ಈ ನಿರ್ಲಕ್ಷ್ಯ ರೈತರ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ. ಅದರಲ್ಲೂ ನಿರ್ದಿಷ್ಟವಾಗಿ ಈರುಳ್ಳಿ, ಎಣ್ಣೆ ಕಾಳುಗಳು ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯುವ ರೈತರ ಪಾಲಿಗೆ ಈ ನೀತಿ ತುಂಬಾ ಅಪಾಯಕಾರಿಯಾಗಿದೆ ಎಂದು ಭಾರತೀಯ ಕಿಸಾನ್ ಸಂಘವು ಹೇಳಿದೆ.
Exim coverage for agricultural produce must be long-term and in farmers’

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರೈತ ವಿಭಾಗವಾದ ಭಾರತೀಯ ಕಿಸಾನ್‌ ಸಂಘ (ಬಿಕೆಎಸ್) ಕೇಂದ್ರ ಸರ್ಕಾರದ ಆಮದು-ರಫ್ತು ವಿಮಾ ನೀತಿಗೆ ವಿರೋಧ ವ್ಯಕ್ತಪಡಿಸಿದೆ. ಈ ವಿಮಾ ನೀತಿಯು ದೀರ್ಘಾವಧಿಯದ್ದಾಗಿರಬೇಕು ಮತ್ತು  ರೈತರ ಅಳತೆಗೆ ಹೊಂದುವಂತಿರಬೇಕು ಎಂದು ಬಿಕೆಎಸ್ ಹೇಳಿದೆ.

ಕಳೆದ ವಾರ ರಾಯಪುರದಲ್ಲಿ ಸಭೆ ಸೇರಿದ್ದ ಬಿಕೆಎಸ್ ಆಖಿಲ ಭಾರತ ಉಸ್ತುವಾರಿ ಸಮಿತಿ “ಕಳೆದ ಕೆಲವು ವರ್ಷಗಳಿಂದ ವಾಣಿಜ್ಯ ಸಚಿವಾಲಯವು ಕಟಾವು ಪೂರ್ಣಗೊಳ್ಳುವ ಸಮಯದಲ್ಲಿ ಆಮದು ಆದೇಶವನ್ನು ಹೊರಡಿಸುತ್ತಿದೆ. ಜೊತೆಗೆ, ಇದರ ಬಗ್ಗೆ ಕನಿಷ್ಠ ಕಾಳಜಿಯನ್ನೂ ವಹಿಸುತ್ತಿಲ್ಲ. ಈ ನಿರ್ಲಕ್ಷ್ಯ ರೈತರ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ. ಅದರಲ್ಲೂ ನಿರ್ದಿಷ್ಟವಾಗಿ ಈರುಳ್ಳಿ, ಎಣ್ಣೆ ಕಾಳುಗಳು ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯುವ ರೈತರಿಗೆ ಈ ನೀತಿ ತುಂಬಾ ಅಪಾಯಕಾರಿಯಾಗಿದೆ” ಎಂದು ಹೇಳಿದೆ.

“ಇಂತಹದ್ದೇ ಇನ್ನೊಂದು ಸಮಸ್ಯೆಯೆಂದರೆ, ರೈತರು ಇನ್ನೇನು ಮುಂದಿನ ಬೆಳೆಯನ್ನು ಯೋಜಿಸುವ ಸಮಯದಲ್ಲಿ ಕೇಂದ್ರ ಸರ್ಕಾರ ರಫ್ತು ಪ್ರಕ್ರಿಯೆಯ ಮೇಲೆ ಮತ್ತೆ ಮತ್ತೆ ನಿರ್ಬಂಧ ವಿಧಿಸುತ್ತಿದೆ. ಇತ್ತೀಚೆಗೆ ಗೋಧಿ, ಸಕ್ಕರೆ ಮತ್ತು ಈರುಳ್ಳಿಯ ಮೇಲಿನ ರಫ್ತು ನಿಷೇಧವನ್ನು ಗಮನಿಸಿದರೆ ಇದು ನಮಗೆ ಅರ್ಥವಾಗುತ್ತದೆ. ಈ ಮೂಲಕ ರೈತರ ನಷ್ಟಕ್ಕೆ ವಾಣಿಜ್ಯ ಸಚಿವಾಲಯ ನೇರ ಕಾರಣವಾಗಿದೆ. ಇದು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಗಾರರ ಆತಂಕದ ಮೂಲವಾಗಿದೆ” ಎಂದು ಸಂಘ ವಿವರಿಸಿದೆ.

“ಇದರೊಂದಿಗೆ ದುರ್ಬಲ ವಿಮಾ ನೀತಿ, ಮಾರುಕಟ್ಟೆ ಬೆಲೆಗಳು ಆನಿಶ್ಷಿತತೆಯೂ ಸೇರಿ ಮುಂದಿನ ಹಂಗಾಮಿವಲ್ಲಿ ರೈತರು ಈ ಬೆಳೆಗಳನ್ನು ಬೆಳೆಯಲು ಹಿಂಜರಿಯುತ್ತಾರೆ. ಇದು ರಾಷ್ಟ್ರೀಯ ಕೃಷಿ ಉತ್ಪನ್ನ ಪ್ರಮಾಣವನ್ನು ಕುಂಠಿತಗೊಳಿಸಿ ರಾಷ್ಟ್ರವನ್ನು ಆಮದುಗಳ ಮೇಲೆ ಅವಲಂಬಿತವಾಗುವಂತೆ ಮಾಡುತ್ತದೆ. ಒಂದು ವೇಳೆ ಇವನ್ನೆಲ್ಲಾ ಬದಿಗಿಟ್ಟು ರೈತ ಹೆಚ್ಚಿನ ಉತ್ಪಾದನೆ ಮಾಡಿದರೆ ಪರಿಸ್ಥಿತಿ ತಿರುಗಾಮರುಗಾ ಆಗುತ್ತದೆ. ಇಂತಹ ಹೊತ್ತಿನಲ್ಲಿ ವಾಣಿಜ್ಯ ಸಚಿವಾಲಯ ಕಠಿಣ ನಿರ್ಧಾರವನ್ನು ತಗೆದುಕೊಂಡು ಆ ಹೆಚ್ಚುವರಿಯನ್ನು ರಫ್ತು ಮಾಡುವ ಪ್ರಯತ್ನ ಮಾಡಬೇಕು. ಆದರೆ, ಹಾಗೆ ಆಗದೇ ಇರುವುದರಿಂದ ರೈತರು ತೀವ್ರ ನಷ್ಟಕ್ಕೆ ಈಡಾಗುತ್ತಿದ್ದಾರೆ” ಎಂದು ಸಂಘದ ಆಡಳಿತ ಮಂಡಳಿಯ ಸದಸ್ಯರು ಹೇಳಿದ್ದಾರೆ.

ಭಾರತೀಯ ಕಿಸಾನ್ ಸಂಘವು ಮುಂದುವರೆದು, “ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದಲ್ಲಿ ತಳಮಟ್ಟದಿಂದ ಮಾಡಲಾಗುವ ಬೆಳೆಗಳ ಅಂದಾಜು ಇಳುವರಿ, ಬೆಲೆಗಳು ಇತ್ಯಾದಿಗಳ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಅಂಕಿಅಂಶಗಳು ಲಭ್ಯವಿರುತ್ತವೆ. ಆದರೆ ಇವನ್ನು ಕೃಷಿ ಸಚಿವಾಲಯದಿಂದ ಪಡೆದುಕೊಳ್ಳುವುದನ್ನು ವಾಣಿಜ್ಯ ಸಚಿವಾಲಯ ಅಪಮಾನಕರವೆಂದು ಭಾವಿಸಿದೆ. ಹೀಗಾಗಿ ಯಾವುದೇ ನ್ಯಾಯ ಸಮ್ಮತ ಉದ್ದೇಶವಿಲ್ಲದೆ ರಫ್ತು ಆಮದುಗಳನ್ನು ನಿಷೇಧಿಸಲಾಗುತ್ತದೆ. ಹೀಗಾಗಿಯೇ ಕೇಂದ್ರ ಸರ್ಕಾರದ ವಿಮಾ ನೀತಿ ರೈತರ ನಷ್ಟ ಭರ್ತಿ ಮಾಡುವಲ್ಲಿ ವಿಫಲವಾಗುತ್ತಿದೆ ಮತ್ತು ವಾಣಿಜ್ಯ ಸಚಿವಾಲಯ ರೈತರಿಗೆ ಮತ್ತು ಕೃಷಿ ಉತ್ಪನ್ನಗಳಿಗೆ ಉದ್ದೇಶಪೂರ್ವಕವಾಗಿ ಹಾನಿ ಮಾಡಲೆಂದೇ ಇದನ್ನೆಲ್ಲಾ ಮಾಡುತ್ತಿದೆಯೇನೋ ಎಂಬ ಸಂದೇಹ ಹುಟ್ಟುತ್ತದೆ” ಎಂದು ಹೇಳಿದೆ.

“ವಾಣಿಜ್ಯ ಸಚಿವಾಲಯವು ತನ್ನೆಲ್ಲ ಹೆಗ್ಗಳಿಕೆಗಳನ್ನು ಬದಿಗಿರಿಸಿ ಕೃಷಿ ಸಚಿವಾಲಯದೊಂದಿಗೆ ಕುಳಿತು ಬೆಳೆಗಳು, ಉತ್ಪಾದನೆಯ ಪ್ರಮಾಣ, ಇವುಗಳನ್ನು ಆಧರಿಸಿದ ಬೆಲೆಗಳ ಏರಿಳಿತ ಇತ್ಯಾದಿಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ ಒಂದು ಮುಂದಾಲೋಚಿತ ಯೋಜನೆಯೊಂದಿಗೆ ತನ್ನ ನೀತಿ ನಿಲುವುಗಳನ್ನು ರೂಪಿಸಿಕೊಳ್ಳುವ ಮೂಲಕ ದೇಶದ ಆಮದು, ರಫ್ತುಗಳನ್ನು ರಾಷ್ಟ್ರೀಯ ಹಿತಾಸಕ್ತಿಯ ಪರವಾಗಿ ಯೋಜಿಸಬಹುದು ಮತ್ತು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಬಹುದು” ಎಂದು ತನ್ನ ಬಿಕೆಎಸ್ ತನ್ನ ಶಿಫಾರಸ್ಸುಗಳಲ್ಲಿ ಹೇಳಿದೆ.

“ಆಮದು ಅಥವಾ ರಫ್ತುಗಳ ಪ್ರಮಾಣವನ್ನು ಪರಿಗಣಿಸುವಾಗ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಒದಗಿಸುವ ಮಾಹಿತಿ ಮತ್ತು ಇನ್ನಿತರ ಪ್ರಾಥಮಿಕ ಮಾಹಿತಿ ಆಧರಿಸಿ ಆಮದಿನ ಪ್ರಮಾಣವನ್ನು ನಿರ್ಧರಿಸಬೇಕು. ಉಳಿದ ಹೆಚ್ಚುವರಿ ಉತ್ಪನ್ನಗಳನ್ನು ರಫ್ತಿಗೆ ಮುಕ್ತವಾಗಿಡಬೇಕು” ಎಂದು ಬಿಕೆಎಸ್‌ ಹೇಳಿದೆ.

ತನ್ನ ಮುಂದುವರೆದ ಬೇಡಿಕೆಗಳಲ್ಲಿ ಬಿಕೆಎಸ್‌ ರಫ್ತು ಸಬ್ಸಿಡಿ ನೀಡಲು ಒತ್ತಾಯಿಸಿದೆ. “ಒಂದು ಪಕ್ಷ ಇಲ್ಲಿಂದ ರಫ್ತು ಮಾಡಲಾಗುವ ದೇಶದಲ್ಲಿ ಕೆಲವೊಮ್ಮೆ ಆ ವಸ್ತುವಿನ ಬೆಲೆ ನಮ್ಮ ದೇಶದ ಬೆಲೆಗಿಂತ ಕಡಿಮೆ ಇದ್ದಲ್ಲಿ ಮತ್ತು ಅಲ್ಲಿ ನಿರಂತರವಾದ ಬೇಡಿಕೆ ಇದ್ದಲ್ಲಿ ವ್ಯತ್ಯಾಸದ ಮೊತ್ತವನ್ನು ಸಬ್ಸಿಡಿ ಮೂಲಕ ಸರ್ಕಾರ ತುಂಬಿಕೊಡಬೇಕು. ಇದರಿಂದ ಗ್ರಾಹಕರ ವಿಶ್ವಾಸ ಗಳಿಸಬಹುದು. ಪರಿಣಾಮ, ವ್ಯಾಪಾರದ ನಿರಂತರತೆಯನ್ನು ಕಾಪಾಡಿಕೊಳ್ಳಬಹುದು. ಈ ಎಲ್ಲ ಪ್ರಕ್ರಿಯೆಗಳಿಗೆ ಸುಗಮ ಚಲನೆಗಾಗಿ ಸಂಬಂಧಿಸಿದ ಅಧಿಕಾರಿ ಅಥವಾ ಅಧಿಕಾರಿ ವೃಂದವನ್ನು ಹೊಣೆಗಾರರನ್ನಾಗಿ ಮಾಡಬೇಕು" ಎಂದು ಹೇಳಿದೆ.

ಭಾರತೀಯ ಜನತಾ ಪಕ್ಷದ ಅಂಗಸಂಸ್ಥೆಯೇ ಅದರ ಕೃಷಿ ನೀತಿಗಳ ವಿರುದ್ಧ ಧ್ವನಿ ಎತ್ತಿರುವುದು ಇಲ್ಲಿನ ಗಮನಾರ್ಹ ವಿಚಾರವಾಗಿದೆ.

ನಿಮಗೆ ಏನು ಅನ್ನಿಸ್ತು?
6 ವೋಟ್