ಕೊಯಮತ್ತೂರಿನಲ್ಲಿ ದಕ್ಷಿಣ ಭಾರತದ ರೈತರ ಐದು ದಿನಗಳ ಬೃಹತ್ ಸಮಾವೇಶ

South India Farmer Leaders
  • ಕೃಷ್ಣಗಿರಿಯ ಸಮಾವೇಶದಲ್ಲಿ ಹುತಾತ್ಮ ರೈತರಿಗೆ ಶ್ರದ್ಧಾಂಜಲಿ
  • ದಕ್ಷಿಣ ಭಾರತದ ರೈತರ ಸಮಸ್ಯೆಗಳ ಕುರಿತು ಚರ್ಚೆ

ಮುಂದಿನ ತಿಂಗಳು ತಮಿಳುನಾಡಿನ ಕೊಯಮತ್ತೂರಿನಲ್ಲಿ ಐದು ರಾಜ್ಯಗಳ ರೈತರ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.      

ಇತ್ತೀಚೆಗೆ ನಡೆದ ಕೃಷ್ಣಗಿರಿಯ ರೈತ ಸಮಾವೇಶದಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಮೊದಲು ಕೃಷ್ಣಗಿರಿಯ ರೈತ ಸಮಾವೇಶದಲ್ಲಿ ಹುತಾತ್ಮ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮುಂದಿನ ಸಮಾವೇಶವನ್ನು ರೈತಪರ ಹೋರಾಟದಲ್ಲಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಸಾವಿರಾರು ರೈತರ ಸ್ಮರಣಾರ್ಥ ನಡೆಸಲಾಗುವುದು. ಈ ಸಮಾವೇಶವು ದಕ್ಷಿಣ ಭಾರತ ರಾಜ್ಯಗಳ ರೈತರ ಸಮಸ್ಯೆಗಳ ಕುರಿತು ಚರ್ಚಿಸಲಿದೆ ಎಂದು ತಿಳಿಸಲಾಗಿದೆ. 

ಜೊತೆಗೆ ಕೃಷ್ಣಗಿರಿಯ ರೈತ ಸಮಾವೇಶದಲ್ಲಿ ಈ ಕೆಳಕಂಡ ನಿರ್ಣಯಗಳನ್ನು ತಗೆದುಕೊಳ್ಳಲಾಯಿತು
•  ಎಲ್ಲ ಕೃಷಿ ಉತ್ಪನ್ನಗಳಿಗೆ ಖಾತರಿ ಕನಿಷ್ಠ ಬೆಂಬಲ ಬೆಲೆ ನಿಗದಿ ಕಾನೂನು ಜಾರಿಗೆ ತರಬೇಕು
•  ಕೃಷಿ ಉತ್ಪನ್ನ ಹಾಗೂ ಉಪಕರಣಗಳಿಗೆ ವಿಧಿಸಿರುವ ಜಿ ಎಸ್ ಟಿ ರದ್ದುಗೊಳಿಸಬೇಕು
•  ರೈತರ ಕೃಷಿ ಸಾಲ ನೀತಿ ಬದಲಾವಣೆಯಾಗಬೇಕು
•  ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ಹಾನಿಯಾದಲ್ಲಿ ಸರ್ಕಾರ ವಿಶೇಷ ಕ್ರಮ ಕೈಗೊಳ್ಳಬೇಕು 

ಕೇಂದ್ರ ಸರ್ಕಾರದ ಖಾಸಗಿ ಬಂಡವಾಳ ನೀತಿಯಿಂದ ಹಳ್ಳಿಗಳು ಆರ್ಥಿಕವಾಗಿ ದಿವಾಳಿ ಆಗುತ್ತಿವೆ. ಗ್ಯಾಟ್ ಒಪ್ಪಂದ ಜಾರಿಯಾದ ನಂತರ ದೇಶದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ದೇಶದಲ್ಲಿ ಕೃಷಿ ಸಂಸ್ಕೃತಿ ನಾಶವಾಗುತ್ತಿದೆ. ದೇಶದ ಸಂಸ್ಕೃತಿ ಉಳಿಸಲು ಹೋರಾಟ ನಡೆಸುವುದಾಗಿ ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ಇದೇ ಬಿಜೆಪಿ ಸರ್ಕಾರದ ನಡೆಯಿಂದಾಗಿ ರೈತರು ಬಲಿಯಾಗುತ್ತಿದ್ದಾರೆ. ಇದನ್ನು ತಪ್ಪಿಸಲು ದೇಶದಾದ್ಯಂತ ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಸಮಾವೇಶದಲ್ಲಿ ಭಾಗವಹಿಸಿದ್ದ ಕರ್ನಾಟಕದ ರೈತ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.  

ತಮಿಳುನಾಡು ರಾಜ್ಯದ ರೈತ ಮುಖಂಡ ದೈವಸಿಗಮನಿ ಮಾತನಾಡಿ, "ದೆಹಲಿ ರೈತ ಹೋರಾಟದ ಮಾದರಿಯಲ್ಲಿ 5 ರಾಜ್ಯಗಳ ಒಂದು ಲಕ್ಷ ರೈತರು ಕೊಯಮತ್ತೂರಿನಲ್ಲಿ ಸಮಾವೇಶಗೊಂಡು ಸರ್ಕಾರವನ್ನು ಎಚ್ಚರಿಸುವ ಕಾರ್ಯ ಮಾಡುತ್ತದೆ" ಎಂದರು.

ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ರಾಮನ ಗೌಂಡರ್ ಮಾತನಾಡಿ, "ಬ್ಯಾಂಕುಗಳು ಕೃಷಿ ಸಾಲ ನೀಡಲು ರೈತರಿಗೆ ಕಿರುಕುಳ ನೀಡುತ್ತಿವೆ. ಇದರ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯ" ಎಂದು ಹೇಳಿದರು.

ತೆಲಂಗಾಣ ರಾಜ್ಯದ ರೈತ ಮುಖಂಡ ನರಸಿಂಹ ನಾಯ್ಡು ಕೇಂದ್ರ ಸರ್ಕಾರದ ಖಾಸಗಿ ನೀತಿ, ರೈತ ವಿರೋಧಿ ಕಾನೂನುಗಳ ಬಗ್ಗೆ ಮಾತನಾಡಿದರು.  

ಸಮಾವೇಶಕ್ಕೆ ಮೊದಲು ಬೃಹತ್ ರ‍್ಯಾಲಿ ನಡೆಸಲಾಯಿತು. ಸಹಸ್ರಾರು ರೈತರು ಸಮಾವೇಶದಲ್ಲಿ ಭಾಗವಹಿಸಿದ್ದರು.   

ನಿಮಗೆ ಏನು ಅನ್ನಿಸ್ತು?
1 ವೋಟ್