ಹತ್ತು ದಿನದಲ್ಲಿ ಕಬ್ಬು ಬೆಲೆ ನಿಗದಿ ಮಾಡಿ: ಇಲ್ಲದಿದ್ದರೆ ರಸ್ತಾ ರೋಕೋ ಚಳವಳಿ; ಕುರುಬೂರು ಶಾಂತಕುಮಾರ್ ಎಚ್ಚರಿಕೆ

Fix MSP on Sugarcane with in 10 days-Otherwise RASTA ROKO will is inevitable
  • ಹತ್ತು ದಿನದೊಳಗೆ ಕಬ್ಬಿನ ಬೆಂಬಲ ಬೆಲೆ ನಿಗದಿ ಮಾಡದೇ ಹೋದಲ್ಲಿ ರಸ್ತಾ ರೋಕೋ ಚಳವಳಿ
  • 2014ರಲ್ಲಿ ₹ 2500, 2022ರಲ್ಲಿ ಕೂಡ ₹ 2500; ಇದ್ಯಾವ ನ್ಯಾಯ ಸರ್!!

"ಕಬ್ಬು ದರ ನಿಗದಿ ಮಾಡಲು ಈವರೆಗೂ ಯಾರು ಯಾರನ್ನು ಭೇಟಿ ಮಾಡಬೇಕಿತ್ತೋ ಎಲ್ಲರನ್ನೂ ಭೇಟಿ ಮಾಡಿ ಮನವಿ ಸಲ್ಲಿಸಿ ಆಗಿದೆ. ಆದರೆ, ಈವರೆಗೂ ಬೆಲೆ ನಿಗದಿ ಆಗಿಲ್ಲ. ಬನ್ನಾರಿಯಮ್ಮ ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಟನ್ನಿಗೆ ₹2,500 ಪಾವತಿಸುತ್ತಿದೆ. ಹೀಗಾಗಿ ರೈತರು ಕಂಗಾಲಾಗಿದ್ದಾರೆ. ಇನ್ನು ಹತ್ತು ದಿನದ ಒಳಗೆ ಕಬ್ಬಿನ ಬೆಂಬಲ ಬೆಲೆ ನಿಗದಿ ಮಾಡದೇ ಹೋದಲ್ಲಿ ರಸ್ತಾ ರೋಕೋ ಚಳವಳಿಯನ್ನು ಹಮ್ಮಿಕೊಳ್ಳವುದು ಅನಿವಾರ್ಯವಾಗುತ್ತದೆ" ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ನಂಜನಗೂಡಿನ ಎಪಿಎಂಸಿ ಸಭಾಂಗಣದಲ್ಲಿ ಶುಕ್ರವಾರ ರೈತ ಸಭೆ ನಡೆಸಿ ಮಾತನಾಡುತ್ತಿದ್ದ ಅವರು, "ಕಬ್ಬಿನ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ರಾಜ್ಯಪೂರ್ತಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗಿದೆ. ಇನ್ನೂ ಮುಂದುವರಿದು, ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಆದರೂ ಸರ್ಕಾರ ಈವರೆಗೂ ಯಾವುದೇ ಕ್ರಮ ತಗೆದುಕೊಂಡಿಲ್ಲ. ಹಾಗಾಗಿ ಸರ್ಕಾರ ಹೋರಾಟ ಮಾಡುವುದನ್ನು ಅನಿವಾರ್ಯ ಮಾಡುತ್ತಿದೆ" ಎಂದು ಹೇಳಿದರು.

ಸದ್ಯಕ್ಕೆ ಬನ್ನಾರಿಯಮ್ಮ ಸಕ್ಕರೆ ಕಾರ್ಖಾನೆ ಟನ್ನು ಕಬ್ಬಿಗೆ ₹ 2,500 ಕೊಡುತ್ತಿದೆ. ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚಗಳನ್ನು ಅವರಿಷ್ಟದಂತೆ ಕಡಿತ ಮಾಡುತ್ತಿದ್ದಾರೆ. ಇದು ಸಾರಾಸಗಟು ಮೋಸ ಮಾಡಿದಂತೆ ಎಂದು ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸುರೇಶ್ ಸಂಪಗೊನ್ ಎಂಬುವವರು, “ಇದಾವ ನ್ಯಾಯ ಸರ್, 2014ರಲ್ಲಿ 2500 ರೂಪಾಯಿ!, 2022ರಲ್ಲಿ ಕೂಡ 2500 ರೂಪಾಯಿ!!. ತಮ್ಮ ಬೆಂಬಲಕ್ಕೆ ರೈತರು ಸದಾ ಇರುತ್ತಾರೆ. ಸರ್ಕಾರದ ವಿರುದ್ಧ ಧ್ವನಿ ಎತ್ತಿ ಸರ್” ಎಂದಿದ್ದಾರೆ.

ಸಭೆಯಲ್ಲಿ ಜಿಲ್ಲಾಧ್ಯಕ್ಷ ಪಿ. ಸೋಮಶೇಖರ್, ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ, ಕಿರಗಸೂರು ಶಂಕರ್, ಬಿ.ಪಿ. ಪರಶಿವಮೂರ್ತಿ, ನಂಜನಗೂಡು ತಾಲ್ಲೂಕು ಹಾಡ್ಯ ರವಿ, ಅಂಬಳೆ ಮಹದೇವ ಸ್ವಾಮಿ, ಮಂಜುನಾಥ್, ಸಿಂಧುವಳ್ಳಿ ಬಸವಣ್ಣ, ಬರಡನಪುರ ನಾಗರಾಜ್ ಮುಂತಾದವರು ಭಾಗವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್