ಆಂಧ್ರಪ್ರದೇಶ | ವಿದ್ಯುತ್‌ ಮೀಟರ್‌ ಅಳವಡಿಕೆ : ಬೀದಿಗಿಳಿದ ಅನಂತಪುರ ಜಿಲ್ಲೆಯ ರೈತರು

fixing of energy meters in Anantapur AP- Farmers Protest
  • ವಿಶ್ವ ಬ್ಯಾಂಕಿನಿಂದ ಪಡೆಯುತ್ತಿರುವ 1000 ಕೋಟಿ ಪೌಂಡ್‌ ಸಾಲಕ್ಕೆ ಪ್ರತಿಯಾಗಿ ಅವರ ಷರತ್ತುಗಳನ್ನು ಪೂರೈಸಲು ಸರ್ಕಾರ ರೈತರನ್ನು ಹಿಂಸಿಸುತ್ತಿದೆ.
  • ಗೌತಮ್ ಅದಾನಿ ಕಂಪನಿ ಈಗಾಗಲೇ ಅನಂತಪುರ ಜಿಲ್ಲೆಯಲ್ಲಿ 40,000 ಎಕರೆ ಭೂಮಿಯನ್ನು ಆಕ್ರಮಿಸಲು ಹೊರಟಿದೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡು ಮಂಡಲದ ಗೊಂಡಿಪಲ್ಲಿ ಗ್ರಾಮದ ರೈತರು ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಮೀಟರ್‌ ಅಳವಡಿಸುವುದರ ವಿರುದ್ಧ ಬೀದಿಗಿಳಿದ್ದಿದ್ದಾರೆ.

ಗೊಂಡಿಪಲ್ಲಿಯ ಈ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ಭಾರತೀಯ ಕಮ್ಯುನಿಸ್ಟ್‌ ಪಾರ್ಟಿ (ಮಾರ್ಕ್ಸಿಸ್ಟ್)‌ ಮತ್ತು ಆಂಧ್ರಪ್ರದೇಶ ರೈತು ಸಂಘಂ ಸದಸ್ಯರು ಒಗ್ಗೂಡಿ ಗೊಂಡಿಪಲ್ಲಿಯತ್ತ ಹೊರಟರು. ಆದರೆ ಅವರನ್ನು ಮಾರ್ಗ ಮಧ್ಯದಲ್ಲಿಯೇ ತಡೆದ ರಾಪ್ತಾಡು ಪೊಲೀಸರು ಪ್ರತಿಭಟನಾಕಾರನ್ನು ಮೀಟರ್‌ ಅಳವಡಿಸುವಲ್ಲಿಗೆ ಹೋಗದಂತೆ ತಡೆದರು.

ನಿನ್ನೆಯಿಂದ ಮೀಟರ್‌ ಅಳವಡಿಕೆ ಕಾರ್ಯ ಆರಂಭವಾಗಿದ್ದು, ಹಿಂದೆಯೇ ರಾಜ್ಯಾದ್ಯಂತ ಪ್ರತಿಭಟನೆ ಸ್ಫೋಟಗೊಂಡಿದೆ. ಇದೆಲ್ಲವನ್ನೂ ರಾಜ್ಯ ಸರ್ಕಾರ ವಿಶ್ವಬ್ಯಾಂಕಿನಿಂದ ಪಡೆಯುತ್ತಿರುವ 1000 ಕೋಟಿ ಪೌಂಡ್‌ ಸಾಲಕ್ಕೆ ಪ್ರತಿಯಾಗಿ, ಅವರ ಷರತ್ತುಗಳನ್ನು ಪೂರೈಸಲು ಹೊರಡುವ ಮೂಲಕ ಸರ್ಕಾರ ರೈತರನ್ನು ಹಿಂಸಿಸಲು ಹೊರಟಿದೆ ಎಂದು ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ವಿ. ರಾಂಭುಪಾಲ್‌ ಹೇಳಿದ್ದಾರೆ.

ರೈತು ಸಂಘದ ಜಿಲ್ಲಾ ಕಾರ್ಯದರ್ಶಿ ಆರ್.‌ ಚಂದ್ರಶೇಖರ್‌ ಮತ್ತು ಸಮಿತಿಯ ಸದಸ್ಯರಾದ ರಾಮಾಂಜನೇಯ ಮತ್ತು ಪಲ್ಲಯ್ಯ ಪೊಲೀಸರ ಕಣ್ಣು ತಪ್ಪಿಸಿ ಮೀಟರ್ ಅಳವಡಿಸುತ್ತಿದ್ದ ಜಾಗವನ್ನು ತಲುಪಿದರು. ಅಲ್ಲಿ ಮೀಟರ್ ಅಳವಡಿಕೆ ವಿರುದ್ಧ ಪ್ರತಿಭಟನೆಗಿಳಿದರು. ನಂತರ ಅವರು ಮಾತನಾಡುತ್ತಾ, “ರೈತರನ್ನು ಹಿಂಸಿಸಲು ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ರಾಜ್ಯ ಸರ್ಕಾರ ಈ ರೈತ ವಿರೋಧಿ ಕಾರ್ಯವನ್ನು ಎಸಗುತ್ತಿದೆ” ಎಂದು  ಹೇಳಿದರು.

“ನಿಸರ್ಗದ ಕೋಪದ ಕಾರಣದಿಂದ ಈಗಾಗಲೇ ರೈತರು ಕುಸಿದು ಹೋಗಿದ್ದಾರೆ. ಈ ಎರಡೂ ಸರ್ಕಾರಗಳು ಕೂಡಿ ರೈತರನ್ನು ನಾಶಮಾಡಲು ಹೊರಟಿವೆ. ಈಗ ಮೀಟರ್‌ ಅಳವಡಿಸಲು ಹೊರಟಿರುವುದರಿಂದ ರೈತರು ನೆಲ ಕಚ್ಚಿಬಿಡುತ್ತಾರೆ. ಆದರೆ ಇದೆಲ್ಲರ ಲಾಭ ಮಾತ್ರ ವಿದ್ಯುತ್‌ ಕಂಪನಿಯ ಒಡೆಯ ಗೌತಮ್‌ ಅದಾನಿಗೆ ಹೋಗುತ್ತದೆ. ಈ ಅದಾನಿ ಕಂಪನಿ ಈಗಾಗಲೇ ಅನಂತಪುರ ಜಿಲ್ಲೆಯ ಬೊಮ್ಮನಹಾಲ್, ಕನ್ನೇಕಲ್ ಮತ್ತು ಮುಡಿಗುಬ್ಬ ಬಳಿ 40,000 ಎಕರೆ ಭೂಮಿಯನ್ನು ಆಕ್ರಮಿಸಲು ಹೊರಟಿದೆ. ಅಲ್ಲಿ ವಿಶ್ವ ಬ್ಯಾಂಕಿನ ನೆರವಿನಿಂದ ಸೌರಶಕ್ತಿ ಮತ್ತು ವಾಯುಶಕ್ತಿ ವಿದ್ಯುತ್‌ ಉತ್ಪಾದನಾ ಘಟಕಗಳನ್ನು ತೆರೆಯಲು ಯೋಜಿಸಿದೆ” ಎಂದು ರೈತು ಸಂಘದ ಜಿಲ್ಲಾ ಕಾರ್ಯದರ್ಶಿ ಆರ್.‌ ಚಂದ್ರಶೇಖರ್ ದೂರಿದ್ದಾರೆ.

ನಿಮಗೆ ಏನು ಅನ್ನಿಸ್ತು?
6 ವೋಟ್