ಆಹಾರ ಸುರಕ್ಷಾ ಪ್ರಾಧಿಕಾರದಿಂದ ಕಲಬೆರಕೆ ಎಣ್ಣೆಗಳ ವಿರುದ್ಧ ಜಾಗೃತಿ ಅಭಿಯಾನ

FSSAI Launches Campaign Against Sale of Adulterated Edible Oil
  • ಅಗ್ರಿಮೋನ್ ಮಿಶ್ರಿತ ಸಾಸಿವೆ ಎಣ್ಣೆಯ ಸೇವನೆಯಿಂದ  “ಎಪಿಡೆಮಿಕ್ ಡ್ರೋಪ್ಸಿ” ರೋಗ 
  • ಕಲಬೆರಕೆ ಕಂಡುಬಂದಲ್ಲಿ ತೈಲ ಉತ್ಪಾದನಾ ಕೇಂದ್ರಗಳ ವಿರುದ್ಧ ಕಠಿಣ ಕ್ರಮ 

ಕಲಬೆರಕೆ ಎಣ್ಣೆಗಳ ವಿರುದ್ಧದ ಜಾಗೃತಿ ಅಭಿಯಾನವನ್ನು ಭಾರತದ ಆಹಾರ ಸುರಕ್ಷಾ ಪ್ರಾಧಿಕಾರ ಸೋಮವಾರದಿಂದ ಆರಂಭಿಸಿದೆ. ಇದು ಆಗಸ್ಟ್‌ 14ರವರಗೆ ನಡೆಯಲಿದೆ ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ಈ ಅವಧಿಯಲ್ಲಿ ದೇಶದ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಮತ್ತು ಖನಿಜ ತೈಲಗಳ ಹೆಸರಿನಲ್ಲಿ ಮಾರಾಟಕ್ಕೆ ಲಭ್ಯವಿರುವ ಸುಮಾರು 126 ಮಾದರಿಯ ಎಲ್ಲ ತೈಲಗಳನ್ನು ತೈಲ ಪರೀಕ್ಷಾ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಯಾವುದೇ ಮಾದರಿಯಲ್ಲಿ ಕಲಬೆರಕೆ ಕಂಡುಬಂದಲ್ಲಿ ಅಂತಹ ಸಸ್ಯ ತೈಲ ರಿಫೈನರಿಗಳು, ತೈಲ ಸಮ್ಮಿಶ್ರಣ ಘಟಕಗಳು ಮತ್ತಿತರ ತೈಲ ಉತ್ಪಾದನಾ ಕೇಂದ್ರಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಕಲಬೆರಕೆ ತೈಲಗಳ ನಿಯಂತ್ರಣಕ್ಕೆ ದಿಟ್ಟ ಹೆಜ್ಜೆ ಮುಂದಿಟ್ಟಿರುವ ಆಹಾರ ಸುರಕ್ಷಾ ಪ್ರಾಧಿಕಾರ ಬ್ರಾಂಡೆಡ್ ಮತ್ತು ಬ್ರಾಂಡ್ ರಹಿತವಾದ ಎಲ್ಲ ಎಣ್ಣೆಗಳನ್ನೂ ಪರೀಕ್ಷಿಸಿ ಕಲಬೆರಕೆ ಜಾಲವನ್ನು ಭೇದಿಸಲು ಹೊರಟಿದೆ. ಈ ಕಲಬೆರಕೆ ತೈಲಗಳ ಬಳಕೆ ಮನುಷ್ಯರ ಆರೋಗ್ಯದ ಮೇಲೆ, ಮುಖ್ಯವಾಗಿ ಹೃದಯದ ಮೇಲೆ, ತೀವ್ರ ಪರಿಣಾಮ ಬೀರುತ್ತವೆ. ಇತ್ತೀಚೆಗೆ ಇವುಗಳ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ ಎಲ್ಲ ತೈಲ ಉತ್ಪಾದಕರ, ಎಲ್ಲ ಅಳತೆಯ ತೈಲ ಮಾದರಿಗಳನ್ನು ಪರೀಕ್ಷಿಸಲು ಪ್ರಾಧಿಕಾರ ಮುಂದಾಗಿದೆ.

ಈ ರೀತಿ ಕಾನೂನುಬಾಹಿರ ಕಲಬೆರಕೆ ಚಟವಟಿಕೆಗಳು ಕಂಡುಬಂದಲ್ಲಿ ಆಂತಹ ಕಂಪನಿ, ಘಟಕಗಳ ಬಾಗಿಲು ಮುಚ್ಚಿಸಲಾಗುತ್ತದೆ ಎಂದು ಪ್ರಾಧಿಕಾರ ಹೇಳಿದೆ. ಕೊರೋನ ಅವಧಿಯಲ್ಲಿ ಇಂತಹ ಕಲಬೆರಕೆಯಲ್ಲಿ ನಿರತವಾಗಿದ್ದ ಎಂಟು ಕಂಪನಿಗಳನ್ನು ಗುರುತಿಸಲಾಗಿತ್ತು. ಆದರೆ, ಆ ಸಾಂಕ್ರಾಮಿಕದ ಅವಧಿಯಲ್ಲಿದ್ದ ಗೊಂದಲಗಳ ಕಾರಣ ಅವುಗಳ ಮೇಲೆ ಕ್ರಮ ಕೈಗೊಳ್ಳಲಾಗಿರಲಿಲ್ಲ.

ಕಲಬೆರಕೆ ಎಣ್ಣೆಯಿಂದ ಆರೋಗ್ಯ, ಚರ್ಮದ ಸಮಸ್ಯೆ

ಸಾಸಿವೆ ಎಣ್ಣೆಯ ಜೊತೆ ಅಗ್ರಿಮೋನ್ ತೈಲವನ್ನು ಮಿಶ್ರಣ ಮಾಡಲಾಗುತ್ತದೆ. ಈ ಎಣ್ಣೆಯನ್ನು ಸ್ವಲ್ಪಕಾಲ ಸೇವಿಸಿದರೂ ಸಹ ಅದರಿಂದ “ಎಪಿಡೆಮಿಕ್ ಡ್ರೋಪ್ಸಿ” ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಉಸಿರಾಟದ ಒತ್ತಡ, ಕೆಂಪು ರಕ್ತ ಕಣಗಳ ಕ್ಷೀಣಿಸುವಿಕೆ ಮತ್ತು ಸಾವು ಇದರ ಪರಿಣಾಮಗಳಾಗಿರುತ್ತವೆ.

ಸಾಮಾನ್ಯವಾಗಿ ಸೌಂದರ್ಯವರ್ಧಕಗಳಲ್ಲಿ ಬಳಸಲಾಗುವ ಖನಿಜ ತೈಲಗಳು ತ್ವಚೆಯ ಆರ್ದ್ರತೆಯನ್ನು ಸಂರಕ್ಷಿಸುವ ಕೆಲಸ ಮಾಡುತ್ತವೆ. ನಾವು ಮುಖಕ್ಕೆ ಹಚ್ಚಲು ಬಳಸುವ ಆರ್ದ್ರತೆ ರಕ್ಷಕ ಕ್ರೀಮುಗಳು, ಫೌಂಡೇಷನ್ ಕ್ರೀಮುಗಳೇ ಮೊದಲಾಗಿ ಇಂತಹ ಎಲ್ಲ ಸೌಂದರ್ಯವರ್ಧಕಗಳಲ್ಲಿರುವ ಈ ತೈಲಗಳು ಕಲಬೆರಕೆಯಾಗಿದ್ದಲ್ಲಿ ಅವು ಚರ್ಮದ ಮೇಲೆ ದುಷ್ಪರಿಣಾಮವನ್ನು ಉಂಟುಮಾಡುತ್ತವೆ ಎಂದು ಹೇಳಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್