ಗದಗ | ಜಿಲ್ಲೆಯಲ್ಲಿ ನಿಲ್ಲದ ಮೆಣಸಿನಕಾಯಿ ಕಳ್ಳತನ; ಹೊಲ ಕಾಯುವಲ್ಲಿ ನಿರತರಾದ ರೈತರು

ಗದಗ-ರೋಣ-ಮೆಣಸಿನಕಾಯಿ
  • ಸತತ ಮಳೆಗೆ ಬೆಳೆಹಾನಿಯಾದರೂ ನಿಲ್ಲದ ರೈತರ ಕೃಷಿ ಚಟುವಟಿಕೆ 
  • ಮಳೆಗೆ ಈರುಳ್ಳಿ ನಾಶ; ಮೆಣಸಿನಕಾಯಿ ಕಳ್ಳರನ್ನು ಹಿಡಿಯಲು ದೂರು

ಇಡೀ ರಾಜ್ಯದಾದ್ಯಂತ ಮಳೆಗೆ ಬೆಳೆ ತತ್ತರಿಸಿದರೂ ಕೃಷಿಕರು ತಮ್ಮ ಕಸುಬು ನಿಲ್ಲಿಸಿಲ್ಲ. ಅದೇರೀತಿ ಗದಗ ಜಿಲ್ಲೆಯ ರೈತರೂ ಕೂಡ ಹಲವು ಬೆಳೆಗಳ ಬಿತ್ತನೆ ಮಾಡಿದ್ದು, ಕಳ್ಳರ ಕಾಟಕ್ಕೆ ಬೇಸತ್ತು ಇಡೀ ರಾತ್ರಿ ಹೊಲ ಕಾಯುತ್ತಿದ್ದಾರೆ. 

ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ ಮೆಣಸಿನಕಾಯಿಗೆ ₹ 45,000 ಬೆಲೆ ಇರುವುದರಿಂದ ಬೆಳೆಗಾರರು ಸಂತಸಗೊಂಡಿದ್ದಾರೆ. ಆದರೆ, ರಾತ್ರಿ ಸಮಯದಲ್ಲಿ ಮೆಣಸಿನಕಾಯಿ ಕದಿಯುವ ಪ್ರಕರಣಗಳು ದಾಖಲಾಗುತ್ತಿದ್ದು, ರೈತರು ತಮ್ಮ ಫಸಲು ಉಳಿಸಿಕೊಳ್ಳಲು ಚಳಿಯನ್ನು ಲೆಕ್ಕಿಸದೆ ಹೊಲ-ಗದ್ದೆಯಲ್ಲೆ ಗುಡಿಸಲು ಹಾಕಿ ವಾಸ್ತವ್ಯ ಹೂಡಿದ್ದಾರೆ.

Eedina App

ಕಳೆದ ವರ್ಷ ನವೆಂಬರ್‌ನಲ್ಲಿ ಕ್ವಿಂಟಾಲ್‌ ಮೆಣಸಿನಕಾಯಿ ₹25,000ಗೆ ಇಳಿದಿತ್ತು. ಆದರೆ, ಈ ಬಾರಿ ಬೆಲೆ ದುಪ್ಪಟ್ಟಾಗಿದೆ. ಮೆಣಸಿನಕಾಯಿ ಕಳ್ಳತನ ಸರ್ವೆ ಸಾಮಾನ್ಯವಾಗಿದ್ದು, ಬಹುತೇಕ ಗ್ರಾಮ ಪಂಚಾಯಿತಿಗಳು ತಮ್ಮ ಬೆಳೆಗಳಿಗೆ ರೈತರೇ ಜವಾಬ್ದಾರರು ಎಂದಿವೆ. ರೋಣ ತಾಲೂಕಿನ ಮೂವರು ರೈತರ ಒಂದು ಲಕ್ಷಕ್ಕೂ ಹೆಚ್ಚಿನ ಬೆಲೆಯ ಮೆಣಸಿನಕಾಯಿ ಕಳ್ಳತನವಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

"ಕಳೆದ ಬಾರಿ ಬಿತ್ತನೆ ವೇಳೆ ಮಳೆ ಹೆಚ್ಚಾಗಿದ್ದರಿಂದ ಬೆಳೆಯೇ ಬಂದಿರಲಿಲ್ಲ. ಮಳೆ ಕಮ್ಮಿಯಾದರೂ ಮೆಣಸಿನಕಾಯಿ ಬರಲ್ಲ, ಜಾಸ್ತಿಯಾದರೂ ಫಲವಿಲ್ಲ. ದಿನಕ್ಕೆ ₹400 ಕೂಲಿ, ಸಸಿ ಖರೀದಿ, ನಾಟಿ, ನಿರ್ವಹಣೆ, ಸಾಗಾಣಿಕೆ ವೆಚ್ಚ ಇದರ ನಡುವೆ ಮಳೆಯಾಟ. ಇದೆಲ್ಲವನ್ನು ದಾಟಿ ರೈತರಿಗೆ ಲಾಭಾಂಶ ದೊರೆಯುವ ಪ್ರಮಾಣ ಬೆರಳೆಣಿಕೆಯಷ್ಟು. ಇನ್ನು ಮೆಣಸಿನಕಾಯಿ ಕದಿಯುವ ಮತ್ತು ಬೆಳೆ ಉಳಿಸಿಕೊಳ್ಳಲು ಕಾವಲು ಕಾಯುವ ಪ್ರಸಂಗ ನಮ್ಮಲ್ಲಿ ಸಾಮಾನ್ಯವಾಗಿದೆ" ಎನ್ನುತ್ತಾರೆ ರೋಣ ಕೃಷಿಕ ವೀರಣ್ಣ.

AV Eye Hospital ad

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಗದಗ ಜಿಲ್ಲಾಧ್ಯಕ್ಷ ಚೌಡರೆಡ್ಡಿ ಜಿಲ್ಲೆಯ ರೈತರ ಸ್ಥಿತಿಗತಿ ಕುರಿತು ಈದಿನ.ಕಾಮ್‌ನೊಂದಿಗೆ ಮಾತನಾಡಿದರು.

"ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳು ಸುರಿದ ಮಳೆಗೆ ಈರುಳ್ಳಿ ಬೆಳೆ ಕೊಳೆತಿದೆ. ಮಾರುಕಟ್ಟೆಯಲ್ಲಿ ಬೆಲೆಯಿಲ್ಲದ್ದಕ್ಕೆ ಮೂರು ಎಕರೆಯ ಈರುಳ್ಳಿ ಕಿತ್ತು ಬಿಸಾಡಿರುವೆ. ಹೆಸರುಕಾಳಿಗೆ ₹7000 ಬೆಂಬಲ ಬೆಲೆ ಕೊಡುತ್ತೇವೆಂದು ಸರ್ಕಾರ ಹೇಳಿತ್ತು. ರೈತರೆಲ್ಲ ಬೆಳೆ ಇಟ್ಟುಕೊಂಡು ತಿಂಗಳುಗಟ್ಟಲೆ ಕಾದರೂ ಖರೀದಿ ಕೇಂದ್ರ ತೆರೆಯಲ್ಲಿಲ್ಲ. ತಹಶೀಲ್ದಾರ್‌ ಕಚೇರಿ ಮುಂದೆ ಸತತ ಐದು ದಿನಗಳ ಕಾಲ ರೈತರು ಪ್ರತಿಭಟನೆ ಮಾಡಿದ್ದಕ್ಕೆ ನಾಲ್ಕೈದು ಗಾಡಿಯಷ್ಟು ಖರೀದಿ ಮಾಡಿ ನಂತರ ಹುಳ ಆಗಿದೆ ಎಂದು ವಾಪಸ್‌ ಕಳುಹಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಮಂಡ್ಯ | ರೈತರ ಸಭೆ ನಡೆಸುವ ತಾಕತ್ತು ಮುಖ್ಯಮಂತ್ರಿಗೆ ಯಾಕಿಲ್ಲ: ರೈತರ ಆಕ್ರೋಶ

"ಮೆಣಸಿನಕಾಯಿಗೆ ಇನ್ನೂ ಮಾರುಕಟ್ಟೆ ಆರಂಭವಾಗಿಲ್ಲ, ಡಿಸೆಂಬರ್-ಜನವರಿ ವೇಳೆಗೆ ಮಾರುಕಟ್ಟೆ ಆರಂಭವಾಗಲಿದ್ದು, ಈ ಬಾರಿ ₹40,000 ದರ ಇದೆ. ಮಳೆಗೆ ಸಾಕಷ್ಟು ರೈತರು ಬೆಳೆ ಕಳೆದುಕೊಂಡಿದ್ದು ಕೆಲವರ ಭೂಮಿಯಲ್ಲಷ್ಟೇ ಬೆಳೆ ಉಳಿದಿದೆ. ಈಗ ಮಳೆ ಬೇಕಿದೆ, ಮಲಪ್ರಭಾ ಎಡದಂಡೆ ನಾಲೆಯಲ್ಲಿ ನೀರು ಹರಿಸಿದರೆ ಕಡಲೆ ಬೆಳೆ ಬರುತ್ತದೆ. ಇಲ್ಲವಾದಲ್ಲಿ ಎಕರೆಗೆ ಎರಡ್ಮೂರು ಚೀಲ ಕಡಲೆಕಾಯಿ ಬರುತ್ತದಷ್ಟೆ. ರೈತರ ಪರ ಇಲ್ಲದ ಈ ರಾಜ್ಯ ಸರ್ಕಾರದಿಂದ ಏನನ್ನು ನಿರೀಕ್ಷಿಸುವಂತಿಲ್ಲ ಎಂಬಂತಿದೆ ರೈತರ ಪರಿಸ್ಥಿತಿ" ಎಂದು ಅವರು ದೂರಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app