ನೆಲ ಕಚ್ಚಿದ ಬೆಳ್ಳುಳ್ಳಿ ದರ, ತಳ ಹಿಡಿದ ರೈತ: ಕೇಂದ್ರ ಸರ್ಕಾರದ ವಿರುದ್ಧ ರೈತರ ಆಕ್ರೋಶ

  • ಬೆಳ್ಳುಳ್ಳಿ ಬೆಲೆ ₹ 30 ಸಾವಿರದಿಂದ ₹ 10 ಸಾವಿರಕ್ಕೆ ಕುಸಿತ
  • ಕೊಯಿಲಿನ ಪ್ರಮಾಣ ಜಾಸ್ತಿ, ಪಾತಾಳಕ್ಕೆ ಕುಸಿದ ಬೆಲೆ

ಬೆಳ್ಳುಳ್ಳಿ ಬೆಳೆ ರಾಷ್ಟ್ರೀಯ ರೋಗವಾಗಿ ಬೆಳೆಗಾರರನ್ನು ಕಾಡುತ್ತಿದೆ. ಕರ್ನಾಟಕದಲ್ಲಿಯೂ ಕೂಡ ಬೆಳ್ಳುಳ್ಳಿ ಬೆಳೆದ ರೈತರು ಕಣ್ಣೀರು ಹಾಕುತ್ತಿದ್ದಾರೆ. ರಾಜ್ಯದಲ್ಲಿ ಕಳೆದ ವರ್ಷ ಕ್ವಿಂಟಾಲಿಗೆ 25 ರಿಂದ 30 ಸಾವಿರ ರೂ.ಗಳಿದ್ದ ಬೆಳ್ಳುಳ್ಳಿ ಬೆಲೆ ಇಂದು ಎಂಟರಿಂದ ಹತ್ತು ಸಾವಿರ ರೂಪಾಯಿಗಳಿಗೆ ಕುಸಿದಿದೆ.

“ಗುಂಡ್ಲುಪೇಟೆ ತಾಲ್ಲೂಕು ಒಂದರಲ್ಲೇ ಈ ಬಾರಿ 700 ರಿಂದ 800 ಎಕರೆ ಪ್ರದೇಶದಲ್ಲಿ ಬೆಳ್ಳುಳ್ಳಿ ಬೆಳೆಯಲಾಗಿತ್ತು. ರೈತರು ಮೊದಲ ಕಟಾವಿನಲ್ಲಿ ಕ್ವಿಂಟಾಲಿಗೆ ಹತ್ತು ಸಾವಿರ ರೂ. ಕಂಡಿದ್ದರು. ಅದೇ ಬೆಲೆ ಎರಡು, ಮೂರನೇ ಕಟಾವಿನ ಸಮಯಕ್ಕೆ ಕ್ರಮವಾಗಿ ಆರರಿಂದ ಮೂರು ಸಾವಿರಕ್ಕಿಳಿದಿತ್ತು. ಕ್ರಮೇಣ ಕೊಯಿಲಿನ ಪ್ರಮಾಣ ಜಾಸ್ತಿಯಾಗತೊಡಗಿತು. ಬೆಲೆಗಳು ಭೂಮಿಯ ಒಳಕ್ಕೆ ತಲೆ ತೂರಿಸಿಕೊಂಡವು” ಎಂದು ಕೃಷಿ ತಜ್ಞ ಡಾ. ಟಿ ಎಸ್‌ ವಿವೇಕಾನಂದ ಹೇಳಿದ್ದಾರೆ.

“ರಾಜ್ಯದ ಸಾಮಾನ್ಯ ಲೆಕ್ಕಾಚಾರದಂತೆ ಎಕರೆಗೆ ನಾಲ್ಕು ಕ್ವಿಂಟಾಲ್‌ ಬಿತ್ತನೆ ಬೆಳ್ಳುಳ್ಳಿ ಬೇಕು. ಒಂದು ಕ್ವಿಂಟಾಲಿನ ಬೆಲೆ 15,000 ರೂ. ಅಂದರೆ ಎಕರೆಗೆ 60,000 ರೂಪಾಯಿ; ಬೀಜ ಸುಮ್ಮನೆ ಬೆಳೆಯುವುದಿಲ್ಲ, ಅದಕ್ಕೆ ಆರೈಕೆ ಬೇಕು. ಕೂಲಿ, ಗೊಬ್ಬರ, ಔಷಧ ಸೇರಿ ಎಕರೆಗೆ 1.2 ಲಕ್ಷದಿಂದ 1.3 ಲಕ್ಷ ರೂಪಾಯಿ ವೆಚ್ಚವಾಗುತ್ತದೆ” ಎಂದು ರಾಜ್ಯದ ಬೆಳ್ಳುಳ್ಳಿ ಬೆಳೆಗಾರರು ಹೇಳುತ್ತಾರೆ. ಮಧ್ಯಪ್ರದೇಶ ಮತ್ತು ರಾಜಸ್ತಾನ ರಾಜ್ಯಗಳಲ್ಲಿ ಈ ವೆಚ್ಚ ಇನ್ನೂ ಹೆಚ್ಚಿದೆ" ಎಂದು ಅವರು ಹೇಳಿದ್ದಾರೆ.

"ಈ ಸಂಕಷ್ಟ ಕೇವಲ ರಾಜ್ಯದ ರೈತರ ದುರಂತ ಮಾತ್ರ ಅಲ್ಲ. ದೇಶದ ಒಟ್ಟು ಬೆಳ್ಳುಳ್ಳಿ ಉತ್ಪಾದನೆಯ ಬಹುಪಾಲು ಅರ್ಧ ಭಾಗವನ್ನು ಪೂರೈಸುವ ಮಧ್ಯಪ್ರದೇಶ ಮತ್ತು ರಾಜಸ್ತಾನದ ಗಡಿ ಪ್ರದೇಶಗಳಾದ ಮತ್ತು ಬೆಳ್ಳುಳ್ಳಿ ಬೆಲ್ಟ್‌ ಎಂದೇ ಪ್ರಸಿದ್ಧವಾದ ಕೋಟ, ರಾತ್ಲಮ್‌, ಮಂದ್ಸೂರ್, ಜಾ಼ಲ್ವಾರ್‌, ಬರನ್‌, ನೀಮುಚ್‌ ಮತ್ತು ಉಜ್ಜೈನಿಗಳಲ್ಲೂ ಇದಕ್ಕಿಂತ ಹೀನಾಯವಾದ ಸ್ಥಿತಿಯನ್ನು ರೈತರು ಎದುರಿಸುತ್ತಿದ್ದಾರೆ.  ಇಲ್ಲೆಲ್ಲಾ ಕೇಜಿ ಬೆಳ್ಳುಳ್ಳಿಯನ್ನು ಎರಡು ರೂಪಾಯಿಗೆ ಮಾರಾಟ ಮಾಡಬೇಕಾಗಿದೆ" ಎಂದು ಟಿ ಎಸ್ ವಿವೇಕಾನಂದ ಅವರು ಹೇಳಿದ್ದಾರೆ.

“ಕನಿಷ್ಠ ಬೆಂಬಲ ಬೆಲೆಗೆ ಆರಂಭದಿಂದಲೂ ಒತ್ತಾಯಿಸುತ್ತಿರುವ ಸಂಯುಕ್ತ ಕಿಸಾನ್‌ ಮೋರ್ಚಾ ಮತ್ತು ಬೆಳ್ಳುಳ್ಳಿ ಬೆಳೆಗಾರರು ಕೂಡಿ ಈ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಬೆಂಬಲ ಬೆಲೆಯನ್ನು ಘೋಷಿಸಬೇಕು ಮತ್ತು ಖರೀದಿಯನ್ನು ಆರಂಭಿಸಬೇಕು ಎಂದು ಒತ್ತಾಯ ಮಾಡುತ್ತಿವೆ. ಆದರೆ ಈವರೆಗೂ ಸರ್ಕಾರಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಎಲ್ಲರೂ ಕೂಡಿ ಸರ್ಕಾರಗಳ ಈ ರೈತ ವಿರೋಧಿ ನೀತಿಯ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಿದ್ಧತೆ ನಡೆಸಿವೆ” ಎಂದು ಅವರು ತಿಳಿಸಿದ್ದಾರೆ. 

“ಈ ನಡುವೆ, ಬೆಳ್ಳುಳ್ಳಿ ಪೇಸ್ಟ್‌, ಬೆಳ್ಳುಳ್ಳಿ ಸಾಸ್‌, ಬೆಳ್ಳುಳ್ಳಿ ಪುಡಿಗಳನ್ನು ತಯಾರಿಸುತ್ತಿದ್ದ ಕಂಪನಿಗಳು ಸಹ ತಮ್ಮ ಉತ್ಪನ್ನಗಳಿಗೆ ನಿರೀಕ್ಷಿತ ಮಾರುಕಟ್ಟೆ ಇಲ್ಲ ಎಂದು ನೆಪ ಹೇಳಿ, ಖರೀದಿಯನ್ನು ನಿಲ್ಲಿಸಿವೆ” ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಭಾರತೀಯ ಕೃಷಿ ಸಂಶೋಧನಾ ಪರಿಷತ್‌ ಮಾಹಿತಿ ನೀಡುತ್ತಾ, “ಕಡಿಮೆ ಇಳುವರಿಗೆ ಮುಖ್ಯ ಕಾರಣ ವೈರಸ್‌ ಹಾವಳಿ. ಪ್ರತೀ ಬಾರಿಯೂ ಬೆಳ್ಳುಳ್ಳಿ ಬಿತ್ತನೆ ಬೀಜಗಳ ಬಗ್ಗೆ ಎಚ್ಚರ ವಹಿಸಬೇಕು ಮತ್ತು ಆ ಬೀಜ ಮೂಲ ಮತ್ತು ಮಾದರಿಗಳನ್ನು ಬದಲಿಸುತ್ತಿರಬೇಕು ಎಂದು ಹೇಳಿದ್ದೇವೆ. ಅದರಲ್ಲೂ ಮುಖ್ಯವಾಗಿ ಅತ್ಯುನ್ನತ ಮಟ್ಟದ ಬೆಳ್ಳುಳ್ಳಿ ಬೀಜಗಳನ್ನು ಹೊಂದಿರುವ ಮತ್ತು ಇಳುವರಿ ನೀಡುತ್ತಿರುವ ಊಟಿ ಮತ್ತು ಹಿಮಾಚಲ ಪ್ರದೇಶದ ಜನರು ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಹೇಳಿದ್ದೇವೆ" ಎಂದಿದೆ.

"ಒಂದೇ ಮೂಲದ ಬೀಜಗಳನ್ನೇ ಪದೇ ಪದೇ ಬಳಸುತ್ತಾ ಹೋದಲ್ಲಿ ಸಹಜವಾಗಿಯೇ ಇಳುವರಿ ಕುಂಠಿತವಾಗುತ್ತದೆ” ಎಂದು ಐಸಿಎಸ್ಆರ್ ಈರುಳ್ಳಿ ಮತ್ತು ಬೆಳ್ಳುಳ್ಳಿ ಸಂಶೋಧನಾ ವಿಭಾಗದ ನಿರ್ದೇಶಕ ಡಾ ಮೇಜರ್‌ ಸಿಂಗ್‌ ಹೇಳಿದ್ದಾರೆ.

ರಾಜಸ್ತಾನದ ಕೃಷಿ ಇಲಾಖೆಯ ಪ್ರಕಾರ. ಈ ವರ್ಷ ಕೋಟ ವಿಭಾಗ ಒಂದರಲ್ಲೇ 1.5 ಲಕ್ಷ ಹೆಕ್ಟೇರಿನಲ್ಲಿ ಬೆಳ್ಳುಳ್ಳಿ ಬೆಳೆಯಲಾಗಿದೆ. ರೈತರ ಹೇಳಿಕೆಯ ಪ್ರಕಾರ ಪ್ರತಿ ಹೆಕ್ಟೇರಿನಲ್ಲಿ ಸರಾಸರಿ 50 ಕ್ವಿಂಟಾಲ್‌ ಬೆಳ್ಳುಳ್ಳಿ ಬೆಳೆಯಲಾಗಿದೆ ಎಂದು ಇಲಾಖೆ ಹೇಳಿದೆ.

“ಈ ರಾಜ್ಯಗಳಲ್ಲಿ ಬೆಳ್ಳುಳ್ಳಿಯ ಬೆಲೆ ಕೇಜಿಗೆ ಎರಡರಿಂದ ಐದು ರೂ. ಇದೆ. ಆದರೆ, ಇದರಲ್ಲಿ ಶೇ.25 ಭಾಗ ಅದೃಷ್ಟವಂತ ಬೆಳ್ಳುಳ್ಳಿ ಇರುತ್ತದೆ. ಇದು “ಲಾಟರಿ ಹೊಡೆದ ಬೆಳ್ಳುಳ್ಳಿ”. ಇದಕ್ಕೆ ನಾವು ಹೇಳಿದ ಬೆಲೆ ಸಿಗುತ್ತದೆ. ಈ ಬಾರಿ ಇದರ ಪ್ರಮಾಣ ಶೇ. 50ರಷ್ಟು ಇದೆ” ಎಂದು ಸ್ವತಃ ಬೆಳ್ಳುಳ್ಳಿ ಬೆಳೆಗಾರರಾದ ಮತ್ತು ಅಖಿಲ ಭಾರತ ಕಿಸಾನ್‌ ಸಭಾದ ನಾಯಕ ದುಲಿಚಂದ್‌ ಬೋರ್ಡ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಜುಲೈ 11 ರಂದು ಮುಖ್ಯಮಂತ್ರಿ ಮನೆಗೆ ಮುತ್ತಿಗೆ : ಬಡಗಲಪುರ ನಾಗೇಂದ್ರ

“ಬೆಳ್ಳುಳ್ಳಿ  ಬೆಳೆಯಲು ಪ್ರತಿ ಹೆಕ್ಟೇರಿಗೆ 2.5 ಲಕ್ಷ ರೂ. ವೆಚ್ಚವಾಗುತ್ತದೆ. 2018ಲ್ಲಿ ಮಂದಸೋರ್‌ನಲ್ಲಿ ನಡೆದ ಗೋಲಿಬಾರ್‌ ನಂತರ ಕ್ವಿಂಟಾಲ್‌ ಬೆಳ್ಳುಳ್ಳಿಗೆ 3,250 ರೂ.ಗಳನ್ನು ಬೆಂಬಲ ಬೆಲೆಯನ್ನಾಗಿ ನಿಗದಿಪಡಿಸಲಾಗಿತ್ತು. ಆದರೆ ಇದಾದ ನಾಲ್ಕು ವರ್ಷಗಳ ಬಳಿಕ 2957 ರೂ.ಗಳನ್ನು ನಿಗದಿ ಮಾಡಲಾಗಿದೆ. ಈ ನಡುವಿನ ಸಮಯದಲ್ಲಿ ಇದರ ಬೇಸಾಯ ವೆಚ್ಚ ಶೇ.50ರಷ್ಟು ಹೆಚ್ಚಾಗಿದೆ. ಅಷ್ಟೇ ಅಲ್ಲ ಈ ದರಿದ್ರ ದರಕ್ಕೂ ರೈತರಿಂದ ಬೆಳ್ಳುಳ್ಳಿ ಖರೀದಿಸುವುದನ್ನು ಸರ್ಕಾರ ಇನ್ನೂ ಆರಂಭಿಸಿಲ್ಲ. ಕುಯಿಲು ಬಹುಪಾಲು ಕೊನೆಗೊಳ್ಳುತ್ತಾ ಬಂದಿದೆ. ಇದು ರೈತರ ಹತ್ಯೆಗೆ ಸಮಾನವಾದ ಕೃತ್ಯ” ಎಂದು ರಾಷ್ಟ್ರೀಯ ಕಿಸಾನ್‌ ಮಜ್ದೂರ್‌ ಮಹಾ ಸಭಾದ ಅಧ್ಯಕ್ಷ ಮಹೇಶ್‌ ವ್ಯಾಸ್‌ ಹೇಳಿದ್ದಾರೆ. ಈ ಬಗ್ಗೆ 2017ರಲ್ಲಿ ಸಂಘ ಹೋರಾಟ ಮಾಡಿದ್ದನ್ನು ನೆನಪಿಸಿಕೊಂಡಿದ್ಧಾರೆ.

“ಬೆಳ್ಳುಳ್ಳಿ ಬೆಲೆ ಇಡೀ ದೇಶದಾದ್ಯಂತ ಕುಸಿದು, ರೈತರು ಸಾವಿನ ಬಾಗಿಲು ತಟ್ಟುತ್ತಿದ್ದಾರೆ. ರಾಜ್ಯ ಸರ್ಕಾರಗಳನ್ನು ಉರುಳಿಸುವ ಸಂಭ್ರಮದಲ್ಲಿರುವ ಕೇಂದ್ರ ಸರ್ಕಾರ ಉಡಾಫೆಯಲ್ಲಿ ರೈತರನ್ನು ನಿರ್ಲಕ್ಷಿಸುತ್ತಿದೆ” ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿ ಧುರೀಣರೊಬ್ಬರು ತಮ್ಮದೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಈ ವರದಿ ಮಾಡುತ್ತಿರುವ ಹೊತ್ತಿನಲ್ಲಿ ಕರ್ನಾಟಕದ ಯಾವುದೇ ಮಾರಾಟ ಕೇಂದ್ರದಲ್ಲಿ ಕ್ವಿಂಟಾಲ್‌ ಬೆಳ್ಳುಳ್ಳಿಯ ಬೆಲೆ 6000 ರೂ. ದಾಟಿಲ್ಲ. ಶಿವಮೊಗ್ಗ ಕನಿಷ್ಠ: 2000, ಗರಿಷ್ಠ: 4000, ರಾಣಿಬೆನ್ನೂರು ಕನಿಷ್ಠ: 2000, ಗರಿಷ್ಠ: 3200, ಮೈಸೂರು ಕನಿಷ್ಠ: 3000, ಗರಿಷ್ಠ: 4000, ಬೆಂಗಳೂರು ಜೂನ್‌ 23ರಂದು ಕನಿಷ್ಠ: 6,000, ಗರಿಷ್ಠ: 7,000, ದಾವಣಗೆರೆ ಕನಿಷ್ಠ: 1600, ಗರಿಷ್ಠ: 3500,  ಬಂಗಾರಪೇಟೆ: ಕನಿಷ್ಠ: 4000, ಗರಿಷ್ಠ: 5000, ಚಿಕ್ಕಬಳ್ಳಾಪುರ ಕನಿಷ್ಠ: 3000, ಗರಿಷ್ಠ: 5000 ರೂ.ಗಳಿವೆ. ಈ ರೈತರ ಗೋಳನ್ನು ಕೇಳುವವರಾದರೂ ಯಾರು" ಎಂದು ಡಾ ಟಿ ಎಸ್‌ ವಿವೇಕಾನಂದರು ಪ್ರಶ್ನಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್