ಗ್ರೀನ್ ಬಡ್ಸ್ ಕಂಪನಿ ವಂಚನೆ ಪ್ರಕರಣ : ಠೇವಣಿದಾರರ ಹಣ ವಾಪಸ್ ಕೊಡಿಸಲು ರೈತ ಸಂಘದ ಆಗ್ರಹ

ಗ್ರೀನ್ ಬಡ್ಸ್ ಕಂಪನಿಯು ಗ್ರಾಮೀಣ ಭಾಗದಲ್ಲಿ 2 ಲಕ್ಷಕ್ಕೂ ಹೆಚ್ಚು ಬಡಜನರು ಹಾಗೂ ಮುಗ್ಧ ರೈತ ಮಹಿಳೆಯರಿಗೆ ಲಕ್ಷಾಂತರ ರೂಪಾಯಿಗಳನ್ನು ಮೋಸ ಮಾಡಿದೆ. ಈಗಾಗಲೇ ಈ ಸಮಸ್ಯೆಯಿಂದ 25ಕ್ಕೂ ಹೆಚ್ಚು ಠೇವಣಿದಾರರು, ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Chief Secretary of Karnataka Receiving Memorandum from Farmer leaders
  • ಗ್ರಾಮೀಣ ಭಾಗದ ಬಡವರು, ರೈತ ಮಹಿಳೆಯರಿಗೆ ವಂಚನೆ
  • ಠೇವಣಿದಾರರಿಗೆ ಹಣ ವಾಪಸ್ ರೈತ ಮುಖಂಡರ ಒತ್ತಾಯ

ಗ್ರೀನ್ ಬಡ್ಸ್ ಕಂಪನಿಯಿಂದ ರಾಜ್ಯಾದ್ಯಂತ ಸುಮಾರು 2 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಭಾಗದ ಬಡಜನರು, ರೈತ ಮಹಿಳೆಯರಿಗೆ ವಂಚಿಸಿದ ಪ್ರಕರಣವನ್ನು ಆದಷ್ಟು ಬೇಗ ಇತ್ಯರ್ಥಪಡಿಸಬೇಕೆಂದು ರೈತ ಸಂಘ ಒತ್ತಾಯಿಸಿದೆ.

ಮೋಸ ಹೋದ ಠೇವಣಿದಾರರಿಗೆ ಹಣ ವಾಪಸ್ ಕೊಡಿಸಲು ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರಿನ ವಿಧಾನಸೌಧದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದನಾ ಶರ್ಮ ಅವರನ್ನು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್‌ ಭೇಟಿ ಮಾಡಿ ಒತ್ತಾಯಿಸಿದರು

ಇದಕ್ಕೆ ಸ್ಪಂದಿಸಿದ ಮುಖ್ಯ ಕಾರ್ಯದರ್ಶಿಗಳು ಈ ಪ್ರಕರಣದ ತನಿಖಾ ವಿಶೇಷಾಧಿಕಾರಿ ಆದಿತ್ಯ ಬಿಸ್ವಾಸ್ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ, ಚರ್ಚಿಸಿ ಸಮಸ್ಯೆಯನ್ನು ಅರಿತು, ಶೀಘ್ರವೇ ಸಮಸ್ಯೆಯನ್ನು ಪರಿಹರಿಸಬೇಕು ಹಾಗೂ ಸಂಬಂಧಪಟ್ಟ ವರದಿಯ ಬಗ್ಗೆ ಮಾಹಿತಿ ನೀಡಬೇಕೆಂದು ಸೂಚನೆ ನೀಡಿದರು.

ಇದು ಗ್ರೀನ್ ಬಡ್ಸ್ ಠೇವಣಿದಾರರಿಗೆ ಸಂತೋಷ ತರುವ ಬೆಳವಣಿಗೆಯಾಗಿದೆ.

ಆನಂತರ ಮಾತನಾಡಿದ ಕುರುಬೂರು ಶಾಂತಕುಮಾರ್, “ಗ್ರೀನ್ ಬಡ್ಸ್ ಕಂಪನಿಯು ಗ್ರಾಮೀಣ ಭಾಗದಲ್ಲಿ 2 ಲಕ್ಷಕ್ಕೂ ಹೆಚ್ಚು ಬಡಜನರು ಹಾಗೂ ಮುಗ್ಧ ರೈತ ಮಹಿಳೆಯರಿಗೆ ಲಕ್ಷಾಂತರ ರೂಪಾಯಿ ಮೋಸ ಮಾಡಿದೆ” ಎಂದು ಹೇಳಿದರು.
“2013ರಿಂದಲೂ ರಾಜ್ಯ ಕಬ್ಬು ಬೆಳೆಗಾರರ ಸಂಘ ಮತ್ತು ಗ್ರೀನ್ ಬಡ್ಸ್ ಕಾರ್ಯಕರ್ತರು ಹಾಗೂ ಠೇವಣಿದಾರರ ರಕ್ಷಣಾ ಸಮಿತಿಯ ನಿರಂತರ ಹೋರಾಟ ನಡೆಸಿದ ಕಾರಣ ಸರ್ಕಾರ ಸಿಐಡಿ ತನಿಖೆ ಮಾಡಿಸಿತು. ಈ ಮೂಲಕ ಕಂಪನಿಯ 150 ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುವ ಆಸ್ತಿಗಳನ್ನು ವಶ ಪಡಿಸಿಕೊಂಡಿತು. ಇದರ ವಿಚಾರಣೆಗೆ ಬೆಂಗಳೂರಿನಲ್ಲಿ ವಿಶೇಷ ನ್ಯಾಯಾಲಯವನ್ನು ಸಹ ರಚಿಸಿದೆ” ಎಂದು ಹಿನ್ನೆಲೆಯನ್ನು ವಿವರಿಸಿದರು.

ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನ್ಯಾಯಾಲಯಕ್ಕೆ ಸೂಕ್ತ ದಾಖಲೆ ಒದಗಿಸಬೇಕು ಮತ್ತು ಹರಾಜು ಪ್ರಕ್ರಿಯೆಯನ್ನು ಮಾಡಲು ನ್ಯಾಯಾಲಯದ ಅನುಮತಿ ಪಡೆಯಬೇಕಾಗಿದೆ. ಆದರೆ ಇದರ ವಿಶೇಷ ಅಧಿಕಾರಿಯನ್ನು ಪದೇಪದೇ ವರ್ಗಾವಣೆ ಮಾಡುತ್ತಿರುವುದರಿಂದ ಇಡೀ ಪ್ರಕ್ರಿಯೆ ವಿಳಂಬವಾಗುತ್ತಿದೆ. ಇಲ್ಲಿಗಾಗಲೇ ಈ ಗ್ರೀನ್ ಬಡ್ಸ್ ಸಮಸ್ಯೆಯಿಂದ 25ಕ್ಕೂ ಹೆಚ್ಚು ಠೇವಣಿದಾರರು, ಹೆಚ್ಚಾಗಿ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಅದಕ್ಕೆ ಸ್ಪಂದಿಸಿದ ವಂದಿತಾ ಶರ್ಮಾ ಅವರು ಚುನಾವಣೆ ಕಾರ್ಯ ನಿಮಿತ್ತ ಸಂಬಂಧಿಸಿದ ಅಧಿಕಾರಿಗಳು ವರ್ಗಾವಣೆಗೂಂಡಿದ್ದು, ಈಗ ಅವರನ್ನು ಅದೇ ಜಾಗಕ್ಕೆ ತರಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಗ್ರೀನ್ ಬಡ್ಸ್ ಕಾರ್ಯಕರ್ತರು ಹಾಗೂ ಠೇವಣಿದಾರರ ರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್ ಇದ್ದರು.

ಇದೇ ಸಂದರ್ಭದಲ್ಲಿ ರಾಜ್ಯಾದ್ಯಂತ ಇರುವ ಸರ್ಕಾರಿ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಸಮಸ್ಯೆಗಳನ್ನು ಅರಿತು ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಮುಖ್ಯ ಕಾರ್ಯದರ್ಶಿಯನ್ನು ರೈತ ಸಂಘದವರು ಒತ್ತಾಯಿಸಿದರು. 

ನಿಮಗೆ ಏನು ಅನ್ನಿಸ್ತು?
1 ವೋಟ್