ಸುದ್ದಿ ವಿವರ | ಇಪ್ಪತ್ತು ವರ್ಷಗಳಲ್ಲೇ ಭಾರೀ ಕುಸಿತ ಕಂಡ ಗೋಧಿ ಇಳುವರಿ

Panjab Farmer

ಉತ್ತರ ಭಾರತ ಈಗಾಲೇ ಬಿಸಿ ಗಾಳಿ ಮತ್ತು ಏರುತ್ತಿರುವ ತಾಪಮಾನಕ್ಕೆ ತತ್ತರಿಸಿದೆ. ಈ ಶಾಖದ ಪರಿಣಾಮ ಬೆಳೆಗಳ ಮೇಲಾಗುತ್ತಿದೆ. ಗೋದಿ ಕಣಜವಾಗಿರುವ ರಾಜ್ಯಗಳಲ್ಲಿ ಈ ಬಾರಿ ಇಳುವರಿ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ದೇಶದಲ್ಲಿ ಹವಾಮಾನ ವೈಪರೀತ್ಯವು ಕೃಷಿ, ಆಹಾರದ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮ ಬೀರುತ್ತಿದೆ. ಈ ಕುರಿತ ವಿವರ ಇಲ್ಲಿದೆ

ಬೆಳೆ ಹಾನಿ ಕಂಡುಬಂದದ್ದು ಎಲ್ಲಿ?

ಪಂಜಾಬ್‌ನ ಮಾನ್ಸಾ ಜಿಲ್ಲೆಯ ರೈತರೊಬ್ಬರು ತಮ್ಮ ಹೊಲದಲ್ಲಿ ಕಟಾವಿಗೆ ಬಂದ ಧಾನ್ಯವನ್ನು ನೋಡಿದಾಗ ಕಂದು ಬಣ್ಣಕ್ಕೆ ತಿರುಗಿದ್ದು ಕಂಡುಬಂತು. ನಂತರ ಈ ಬೆಳೆಯನ್ನು ʼಕ್ರಾಪ್ ಕಟಿಂಗ್ ಎಕ್ಸ್‌ಪರಿಮೆಂಟ್ʼಗೆ ಒಳಪಡಿಸಲಾಯಿತು. ಈ ಪ್ರಯೋಗದಿಂದ ಸಿಕ್ಕ ಅಂಕಿ-ಅಂಶಗಳು ಬೆಳೆಗೆ ಹಾನಿಯಾಗಿರುವ ವಿಷಯವನ್ನು ಖಚಿತಪಡಿಸಿವೆ. ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲೂ ಇದೇ ಬಗೆಯ ಬೆಳೆ ಹಾನಿ ಕಂಡುಬಂದಿದೆ. ಗೋಧಿಯ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದ ಈ ರಾಜ್ಯಗಳಲ್ಲಿ, ಎರಡು ದಶಕಗಳಲ್ಲೇ ಅತ್ಯಂತ ಕಡಿಮೆ ಇಳುವರಿ ಇದಾಗಿದೆ ಎನ್ನುತ್ತಿವೆ ವರದಿಯ ಅಂಕಿ-ಅಂಶ. ಈ ರಾಜ್ಯಗಳಲ್ಲಾದ ಹವಾಮಾನ ವೈಪರೀತ್ಯ ಇದಕ್ಕೆ ಮುಖ್ಯ ಕಾರಣ.

ಇಳುವರಿ ಕುಂಟಿತವಾಗಿರುವ ಪ್ರಮಾಣವೆಷ್ಟು?

ಪಂಜಾಬ್‌ನಲ್ಲಿ ಪ್ರತೀ ಹೆಕ್ಟೇರ್‌ಗೆ 43 ಕ್ವಿಂಟಾಲ್ ಗೋಧಿ ಇಳುವರಿ ಕುಸಿತವಾಗಿದೆ. 2010ರಲ್ಲಿ ಈ ಪ್ರಮಾಣ ಶೇಕಡ ಎಂಟರಷ್ಟಿತ್ತು. ಈ ಬಾರಿ ಶೇಕಡ 20ರಷ್ಟಿದೆ. ಇದರಿಂದಾಗಿ ರೈತರಿಗೆ ಒಂದು ಕ್ವಿಂಟಾಲ್‌ಗೆ 12,000ದಿಂದ 18,000 ರೂಪಾಯಿಗಳ ನಷ್ಟವಾಗಿದ್ದು, ಸಾಲದ ಸುಳಿಗೆ ಸಿಲುಕಿಸಿದೆ. ಉತ್ತರ ಪ್ರದೇಶದಲ್ಲಿ ಇಳುವರಿ ಶೇಕಡ 118ರಷ್ಟು ಕಡಿಮೆಯಾಗಿದ್ದರೆ, ಹರಿಯಾಣದಲ್ಲಿ ಶೇಕಡ 19ರಷ್ಟು ಕುಸಿದಿದೆ. ಕೃಷಿ ಸಚಿವಾಲಯ ಈ ವರ್ಷ 111.32 ಮಿಲಿಯನ್ ಟನ್ ಗೋಧಿ ಇಳುವರಿ ದಾಖಲಾಗುವ ಮುನ್ಸೂಚನೆ ನೀಡಿತ್ತು. ಆದರೆ, ಪ್ರಸ್ತುತ 106.41 ಮಿಲಿಯನ್ ಟನ್ ಇಳುವರಿ ಮಾತ್ರ ಕಟಾವಾಗಿದೆ. ಸರ್ಕಾರ ಅಂದುಕೊಂಡಿದ್ದಕ್ಕಿಂತ ಶೇಕಡ 5ರಷ್ಟು ಇಳುವರಿ ಕಡಿಮೆಯಾಗಿದೆ.

ಈ ಸುದ್ದಿ ಓದಿದ್ದಿರಾ: ಭಾರತದಿಂದ ರಫ್ತಾಗುವ ಕೃಷಿ ಉತ್ಪನ್ನಗಳ ಗುಣಮಟ್ಟದ ಕಳವಳ; ರಚನಾತ್ಮಕ ಬದಲಾವಣೆ ಅಗತ್ಯವಿದೆ ಎಂದ ತಜ್ಞರು

ಇಳುವರಿ ಕುಂಟಿತ ಇದೇ ಮೊದಲು?

ಇಲ್ಲ, ಈ ಹಿಂದೆಯೂ ಈ ಬೆಳವಣಿಗೆಯಾಗಿತ್ತು; ಆದರೆ, ಇಳುವರಿ ಈ ಪ್ರಮಾಣದಲ್ಲಿ ಕುಸಿದಿರಲಿಲ್ಲ.   2022ರ ಮಾರ್ಚ್‌ನಲ್ಲಿ ಗೋಧಿ ಬೆಳೆಯುವ ರಾಜ್ಯಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ವರೆಗೂ ಏರಿಕೆಯಾಗಿತ್ತು. ಇದು ಈ ರಾಜ್ಯಗಳಲ್ಲಿನ ದಾಖಲೆಯ ತಾಪಮಾನ. ಪರಿಣಾಮವಾಗಿ ಬೆಳೆಗಳು ನಾಶವಾಗಿದ್ದು, ಇಳುವರಿ ಕುಸಿದಿದೆ. 2010ರಲ್ಲಿ ಕೂಡ ಇದೇ ಕಾರಣಕ್ಕೆ ಇಳುವರಿ ಕುಂಟಿವಾಗಿತ್ತು. 2019ರಲ್ಲಿ ಪರಿಸ್ಥಿತಿ ಮತ್ತೆ ಸುಧಾರಿಸಿತ್ತು.

ತಜ್ಞರು ಏನು ಹೇಳುತ್ತಾರೆ?

"ಇತ್ತೀಚಿನ ಹವಾಮಾನ ಬದಲಾವಣೆ ಆತಂಕ ಹುಟ್ಟಿಸುವಂತಿವೆ. ಗೋಧಿ ಬೆಳೆಯುವ ಪ್ರದೇಶಗಳು ಮುಂದೊಂದು ದಿನ ಶೀತ ಪ್ರದೇಶಗಳಾಗಿ ಬದಲಾಗಬಹುದು. ಜೊತೆಗೆ, ಗೋಧಿಯ ಕಣಜವಾಗಿರುವ ಈ ಪ್ರದೇಶಗಳು ತನ್ನ ಮೂಲ ಸ್ವರೂಪ ಕಳೆದುಕೊಳ್ಳುವ ಸಾಧ್ಯತೆ ಇದೆ," ಎನ್ನುತ್ತಾರೆ ವಿಜ್ಞಾನಿಗಳು. ಭಾರತದ ಕೃಷಿ ಮೇಲೆ ಹವಾಮಾನದ ಪ್ರಭಾವದ ಕುರಿತು ಕೇಂದ್ರ ಸರ್ಕಾರ 2016ರಲ್ಲಿ ವರದಿಯೊಂದನ್ನು ತಯಾರಿಸಿತ್ತು. "2.5 ಡಿಗ್ರಿ ಸೆಲ್ಸಿಯಸ್‌ನಿಂದ 4.9 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಏರಿಕೆಯಾಗಲಿದೆ. ಇದರಿಂದ ಗೋಧಿ ಇಳುವರಿ ಶೇಕಡ 41ರಿಂದ ಶೇಕಡ 52ರಷ್ಟು ಕಡಿಮೆಯಾಗಲಿದೆ," ಎಂದು ಆ ವರದಿಯಲ್ಲಿ ಎಚ್ಚರಿಸಲಾಗಿತ್ತು.

ವಿವಿಧ ಮೂಲಗಳಿಂದ
ನಿಮಗೆ ಏನು ಅನ್ನಿಸ್ತು?
0 ವೋಟ್