ಸುದ್ದಿ ವಿವರ | ಗೋಧಿ ರಫ್ತು ಮಾಡಲು ಹೊರಟ ಕೇಂದ್ರ ಸರ್ಕಾರ ತೆಪ್ಪಗಾಗಿದ್ದು ಏಕೆ?

ಏಪ್ರಿಲ್‌ ತಿಂಗಳ ಉದ್ದಕ್ಕೂ ಕೇಂದ್ರ ಸರ್ಕಾರ ಮತ್ತು ಸರ್ಕಾರದ ಸಚಿವಾಲಯಗಳು ವಿದೇಶಕ್ಕೆ ಗೋಧಿ ರಫ್ತು ಮಾಡಿ ಲಾಭಗಳಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದವು, ಜಾಗತಿಕ ಘೋಷಣೆಯನ್ನೂ ಕೂಗಿದ್ದಾರೆ. ಆದರೆ ಏಪ್ರಿಲ್‌ನ ಹಣದುಬ್ಬರದ ವಿವರ ಸರ್ಕಾರದ ಯೋಜನೆಗಳಿಗೆ ದೊಡ್ಡ ಹೊಡೆತ ನೀಡಿದೆ. ಯು ಟರ್ನ್ ನಿರ್ಧಾರ ಅನಿವಾರ್ಯವಾಗಿಸಿದೆ.
Wheat India

ಶುಕ್ರವಾರ ತಡ ರಾತ್ರಿ ನೀಡಿರುವ ಪ್ರಕಟಣೆಯಲ್ಲಿ ಕೇಂದ್ರ ಸರ್ಕಾರ ಗೋಧಿ ರಫ್ತನ್ನು ನಿಷೇಧಿಸಿದೆ. ರಾಷ್ಟ್ರೀಯ ಆಹಾರ ಭದ್ರತೆ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಗಂಭೀರ ಬಿರುಬೇಸಗೆಯಿಂದಾಗಿ ರಾಷ್ಟ್ರೀಯ ಗೋಧಿ ಉತ್ಪನ್ನದಲ್ಲಿ ದೊಡ್ಡ ಪ್ರಮಾಣದಲ್ಲಿ ಕುಸಿತವಾಗಿರುವುದು ಒಂದೆಡೆಯಾದರೆ, ದೇಶದಲ್ಇ ಆಹಾರ ಬೆಲೆಗಳು ಏರಿರುವುದು ಮತ್ತು ಮುಖ್ಯವಾಗಿ ದವಸ- ಧಾನ್ಯಗಳ ಬೆಲೆಯೇರಿಕೆಯೂ ಇಂತಹ ನಿರ್ಧಾರ ಕೈಗೊಳ್ಳುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಬಿದ್ದಿದೆ.

ಈಗಾಗಲೇ ಒಪ್ಪಂದ ಮಾಡಿಕೊಂಡ ಖಾಸಗಿ ವ್ಯಾಪಾರಸ್ಥರಿಗೆ ಸರ್ಕಾರದ ಗೋಧಿ ನಿಷೇಧದ ಆದೇಶ ಅನ್ವಯಿಸುವುದಿಲ್ಲ. ಹೊಸದಾಗಿ ರಫ್ತು ಒಪ್ಪಂದ ಮಾಡಿಕೊಳ್ಳುವ ವಿಚಾರಕ್ಕೆ ಆದೇಶ ಅನ್ವಯಿಸಲಿದೆ. “ಈಗಾಗಲೇ ಒಪ್ಪಂದ ಮಾಡಿಕೊಂಡು ಹಿಂಪಡೆಯಲು ಸಾಧ್ಯವಿಲ್ಲದ ಪ್ರಕರಣಗಳಲ್ಲಿ ಮಾತ್ರವೇ ಗೋಧಿ ರಫ್ತಿಗೆ ಅವಕಾಶ ನೀಡಲಾಗುವುದು. ಉಳಿದಂತೆ ಸರ್ಕಾರದ ಪರವಾನಗಿ ಇಲ್ಲದೆ ರಫ್ತು ಮಾಡುವಂತಿಲ್ಲ” ಎಂದು ಆದೇಶ ಹೇಳಿದೆ.

ಮೇ 13ರಂದು ಅಧಿಕ ಪ್ರೊಟೀನ್ ಮತ್ತು ಸಾಮಾನ್ಯ ಮೃದು ವಿಧದ ಗೋಧಿಯನ್ನೂ ‘ಉಚಿತ’ದಿಂದ ‘ನಿಷೇಧಿತ’ ವಿಭಾಗಕ್ಕೆ  ಸೇರಿಸಲಾಗಿದೆ. ಹೀಗಾಗಿ ತಮ್ಮ ಆಹಾರ ಭದ್ರತೆ ಅಗತ್ಯಗಳಿಗೆ ಇತರ ದೇಶಗಳು ಬೇಡಿಕೆ ಇಟ್ಟಾಗ ಮತ್ತು ಆ ಸರ್ಕಾರಗಳ ಅಗತ್ಯಕ್ಕೆ ತಕ್ಕಂತೆ ಕೇಂದ್ರ ಸರ್ಕಾರದ ಪರವಾನಗಿ ಪಡೆದು ಗೋಧಿ ರಫ್ತು ಮಾಡಬಹುದಾಗಿದೆ. ಇದಕ್ಕಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪರವಾನಗಿ ಪಡೆದುಕೊಳ್ಳಬಹುದು ಎಂದು ಸರ್ಕಾರದ ಪ್ರಕಟಣೆಯಲ್ಲಿ ಹೇಳಲಾಗಿದೆ.

ಗೋಧಿ ರಫ್ತಿಗೆ ನಿಯೋಗ ಕಳುಹಿಸಲು ಸಿದ್ಧತೆ ನಡೆಸಿದ್ದ ಸರ್ಕಾರ

ಮೊರಕ್ಕೊ, ಟುನಿಶಿಯ, ಇಂಡೋನೇಷ್ಯಾ, ಫಿಲಿಪ್ಪೀನ್ಸ್, ಥಾಯ್ಲಂಡ್, ವಿಯೆಟ್ನಾಂ, ಟರ್ಕಿ, ಅಲ್ಜೀರಿಯ ಮತ್ತು ಲೆಬನಾನ್‌ಗೆ ಗೋಧಿ ರಫ್ತಿಗೆ ನಿಯೋಗ ಕಳುಹಿಸುವ ಬಗ್ಗೆಯೂ ವಾಣಿಜ್ಯ ಸಚಿವಾಲಯ ಮೇ 13ರಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು. ಆದರೆ ಮರುದಿನವೇ ಬಂದ ರಫ್ತು ನಿಷೇಧ ಆದೇಶದ ಯು ಟರ್ನ್, ಸರ್ಕಾರದ ಬಳಿ ಎಷ್ಟು ಮಾಹಿತಿಯ ಕೊರತೆಯಿದೆ ಎನ್ನುವುದಕ್ಕೆ ಉತ್ತಮ ಉದಾಹರಣೆ.

ವಾಣಿಜ್ಯ ಇಲಾಖೆ ಗೋಧಿ ರಫ್ತಿಗೆ ಸಂಬಂಧಿಸಿ ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಇಲಾಖೆಗಳ ಜೊತೆಗೆ ಸಭೆ ನಡೆಸಿತ್ತು. ರೈತರು, ವ್ಯಾಪಾರಸ್ಥರು ಮತ್ತು ರಫ್ತುದಾರರ ಜೊತೆಗೂ ಹರಿಯಾಣದ ಕರ್ನಲ್‌ನಲ್ಲಿ ಸಭೆ ನಡೆಸಲಾಗಿತ್ತು. 

ಆಹಾರ ಬೆಲೆ ಏರಿಕೆ ಬಿಸಿ

ಏಪ್ರಿಲ್‌ನಲ್ಲಿ ವಾರ್ಷಿಕ ಗ್ರಾಹಕ ಬೆಲೆಯ ಹಣದುಬ್ಬರ ದರ ಶೇ. 7.79ರಷ್ಟು ತಲುಪಿದೆ ಮತ್ತು ಚಿಲ್ಲರೆ ಆಹಾರ ಹಣದುಬ್ಬರ ಇನ್ನೂ ಹೆಚ್ಚು ಶೇ 8.38ಗೆ ತಲುಪಿದೆ ಎಂದು ಅಂಕಿ- ಅಂಶ ಹೊರಬಿದ್ದ ತಕ್ಷಣ ನರೇಂದ್ರ ಮೋದಿ ಸರ್ಕಾರ ದೇಶದಲ್ಲಿ ಗೋಧಿ ರಫ್ತನ್ನು ನಿಷೇಧಿಸಿ ಆದೇಶ ನೀಡಿದೆ.

ಮಾರ್ಚ್‌ 31, 2022ರಲ್ಲಿ ಮುಗಿದ ವಿತ್ತೀಯ ವರ್ಷದಲ್ಲಿ ಭಾರತ ಅತ್ಯಧಿಕ 2.05 ಶತಕೋಟಿ ಡಾಲರ್‌ಗಳಷ್ಟು ಸಾರ್ವಕಾಲಿಕ ಅತ್ಯಧಿಕ ಆದಾಯವನ್ನು ಗೋಧಿ ರಫ್ತಿನಿಂದ ಪಡೆದುಕೊಂಡಿದೆ ಎಂದು ಕೃಷಿ ಸಚಿವಾಲಯವೇ ಘೋಷಿಸಿತ್ತು.  ಇದೇ ಲೆಕ್ಕಾಚಾರದಲ್ಲಿ ಕೇಂದ್ರ ಕೃಷಿ ಸಚಿವಾಲಯ ಈ ವರ್ಷವೂ ಹಲವು ದೇಶಗಳ ಆಹಾರ ಕೊರತೆ ನೀಗಿಸಲು ಗೋಧಿ ರಫ್ತಿಗೆ ಉತ್ತೇಜಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿತ್ತು. ವಾಣಿಜ್ಯ ಮತ್ತು ಉದ್ಯಮ ಸಚಿವ ಪೀಯೂಶ್ ಗೋಯಲ್ ಏಪ್ರಿಲ್ 15ರಂದು ಮಾಡಿರುವ ಟ್ವೀಟ್‌ನಲ್ಲಿ, "ಭಾರತೀಯ ರೈತರು ಅತ್ಯಧಿಕ ಬೆಳೆ ಬೆಳೆದಿದ್ದಾರೆ, ವಿಶ್ವಕ್ಕೇ ಆಹಾರ ನೀಡಲು ಭಾರತ ಸಿದ್ಧವಾಗಿದೆ” ಎಂದಿದ್ದರು. 


ಜರ್ಮನಿಯಲ್ಲಿ ಆಹಾರ ರಫ್ತು ಘೋಷಿಸಿದ್ದ ಪ್ರಧಾನಿ

ಜಾಗತಿಕವಾಗಿ ಗೋಧಿಯ ಕೊರತೆ ಕಂಡುಬಂದಿರುವಾಗ ಭಾರತ ವಿಶ್ವಕ್ಕೆ ಆಹಾರ ನೀಡಲು ಸಿದ್ಧವಾಗಿದೆ ಎಂದು ಪ್ರಧಾನಿ ಮೋದಿ ವಾರದ ಹಿಂದೆ ಜರ್ಮನಿಯಲ್ಲಿ ಭಾಷಣ ಮಾಡಿದ್ದರು. “ಮಾನವೀಯತೆ ಬಿಕ್ಕಟ್ಟು ಎದುರಾದಾಗಲೆಲ್ಲಾ, ಭಾರತವೇ ಪರಿಹಾರ ಸೂಚಿಸುತ್ತದೆ” ಎಂದು ಅವರು ಹೇಳಿದ್ದರು. ಆದರೆ ಈ ಘೋಷಣೆಯ ಸಂದರ್ಭದಲ್ಲಿ ಅವರು ಭಾರತದ ವಸ್ತುಸ್ಥಿತಿಯ ಬಗ್ಗೆ ವಿಶ್ಲೇಷಣೆ ಮಾಡಿರಲಿಲ್ಲ.

ಈ ವರ್ಷ ದೇಶದಲ್ಲಿ ಸರ್ಕಾರಿ ಸಂಸ್ಥೆಗಳಿಂದ ಗೋಧಿ ಸಂಗ್ರಹದ ಪ್ರಮಾಣ 15 ವರ್ಷಗಳಲ್ಲೇ ಅತೀ ಕಡಿಮೆಯಾಗಿದೆ. ಕೇವಲ 1.8 ಕೋಟಿ ಟನ್‌ಗಳಷ್ಟೇ (ಎಂಟಿ) ಗೋಧಿಯನ್ನು ಈ ಋತುವಿನಲ್ಲಿ ಸರ್ಕಾರ ಸಂಗ್ರಹಿಸಿದೆ. 2021-22ರಲ್ಲಿ ದಾಖಲೆ 4.33 ಕೋಟಿ ಟನ್‌ಗಳಷ್ಟು ಗೋಧಿ ಸಂಗ್ರಹಿಸಲಾಗಿತ್ತು.  ಸಾಮಾನ್ಯವಾಗಿ ಏಪ್ರಿಲ್‌ನಿಂದ ಮೇ ನಡುವೆ ಗೋಧಿಯನ್ನು ಬೆಂಬಲ ಬೆಲೆ ನೀಡಿ ಸರ್ಕಾರ ಖರೀದಿಸುತ್ತದೆ. 

ಅಖಿಲ ಭಾರತ ಮಾಸಿಕ ಚಿಲ್ಲರೆ ಸರಾಸರಿ ಬೆಲೆಯ ಪ್ರಕಾರ, ಕಳೆದ ವಾರ ಗೋಧಿ ಹಿಟ್ಟಿನ ಸರಾಸರಿ ಬೆಲೆ ಪ್ರತಿ ಕೆಜಿಗೆ ₹32.38. ಉತ್ಪಾದನೆಯಲ್ಲಿನ ಕುಸಿತ ಮತ್ತು ಖಾಸಗಿ ಖರೀದಿದಾರರಿಂದ ಹೆಚ್ಚಿನ ಬೇಡಿಕೆಯಿಂದಾಗಿ ಸರ್ಕಾರವು ಗೋಧಿಗೆ ₹2015 ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ.

ಜೊತೆಗೆ, ಸರ್ಕಾರಿ ಸಂಸ್ಥೆಗಳಿಂದ ಸಾರ್ವಜನಿಕ ಸಂಗ್ರಹಣೆಯು ಗುರಿಗಿಂತ ಕಡಿಮೆಯಿರುತ್ತದೆ ಎಂದು ನಿರೀಕ್ಷಿಸಲಾಗಿತ್ತು. "ಪ್ರಸಕ್ತ ರಬಿ ಮಾರುಕಟ್ಟೆ ಕಾಲದಲ್ಲಿ ಗೋಧಿ ಸಂಗ್ರಹಣೆಯು 195 ಲಕ್ಷ ಟನ್‌ಗಳಷ್ಟಿರುತ್ತದೆ. ಇದು ಸರ್ಕಾರದ ಆರಂಭಿಕ ಸಂಗ್ರಹಣೆ ಗುರಿಯಾದ 444 ಲಕ್ಷ ಟನ್‌ಗಳು ಮತ್ತು ಕಳೆದ ವರ್ಷದ 433 ಲಕ್ಷ ಟನ್‌ಗಳ ನೈಜ ಸಂಗ್ರಹಕ್ಕಿಂತ ಗಮನಾರ್ಹ ಕಡಿಮೆಯಾಗಿದೆ" ಎಂದು ಆಹಾರ ಸಚಿವಾಲಯದ ಅಂದಾಜು ವಿವರ ನೀಡಿದೆ.

ಭಾರತೀಯ ಆಹಾರ ನಿಗಮದ ಪೋರ್ಟಲ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಏಪ್ರಿಲ್ 28ರವರೆಗೆ 156.92 ಲಕ್ಷ ಟನ್ ಗೋಧಿ ಸಂಗ್ರಹಿಸಲಾಗಿದೆ. 2022-23 ಆರ್ಥಿಕ ವರ್ಷದ ಆರಂಭದಲ್ಲಿ ಆಹಾರ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ 190 ಲಕ್ಷ ಟನ್‌ಗಳಷ್ಟಿರುತ್ತದೆ. ಇದು ಪ್ರಸಕ್ತ ಋತುವಿನಲ್ಲಿ 195 ಲಕ್ಷ ಟನ್ ಸಂಗ್ರಹಣೆಯಿಂದ 385 ಲಕ್ಷ ಟನ್‌ಗಳಿಗೆ ಏರುವ ನಿರೀಕ್ಷೆಯಿದೆ. 

Image
Wheat India

ಈ ಸುದ್ದಿಯನ್ನು ಓದಿದ್ದೀರಾ?ಜಾಗತಿಕ ನಾಯಕರಾಗುವ ಮೋದಿ ಕನಸು; ಗ್ರಾಹಕರಿಗೆ ತಟ್ಟಿದ ಗೋಧಿ ಬೆಲೆ ಏರಿಕೆಯ ಬಿಸಿ

ಕುಸಿದ ಗೋಧಿ ಉತ್ಪಾದನೆ

ಮಾರ್ಚ್‌ನಲ್ಲಿ ತಾಪಮಾನದ ಹಠಾತ್ ಹೆಚ್ಚಳವು ಸರ್ಕಾರದ ಭರವಸೆ ಕುಗ್ಗಿಸಿತ್ತು. 2021-22ರ ಒಟ್ಟು ಗೋಧಿ ಉತ್ಪಾದನೆಯು ಗುರಿಗಿಂತ ಕಡಿಮೆಯಾಗಬಹುದು ಎಂದು ಅಧಿಕಾರಿಗಳು ಹೇಳಿದ್ದರು. ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಕಳೆದ ವಾರ, "ಗೋಧಿ ಉತ್ಪಾದನೆಯು ಸುಮಾರು 105 ದಶಲಕ್ಷ ಟನ್ ಆಗುವ ನಿರೀಕ್ಷೆಯಿದೆ" ಎಂದು ಹೇಳಿದ್ದರು. ಗೋಧಿ ಇಳುವರಿ ಕುಸಿತಕ್ಕೆ ಬೇಸಿಗೆಯ ಆರಂಭವೇ ಕಾರಣ ಎಂದು ಆಹಾರ ಸಚಿವಾಲಯ ಹೊರಡಿಸಿದ ಹೇಳಿಕೆಯಲ್ಲಿಯೂ ಉಲ್ಲೇಖಿಸಲಾಗಿದೆ. 

ರಫ್ತು ಒಪ್ಪಂದಗಳು

ಈ ಎಲ್ಲಾ ಇಳುವರಿ ಕುಸಿತದ ಮಾಹಿತಿ ನಡುವೆ ಈಗಾಗಲೇ 40 ಲಕ್ಷ ಟನ್ ಗೋಧಿ ರಫ್ತಿಗೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಏಪ್ರಿಲ್‌ನಲ್ಲಿ 11 ಲಕ್ಷ ಟನ್ ರಫ್ತು ಮಾಡಲಾಗಿದೆ ಎಂದು ಆಹಾರ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಭಾರತ ಕಳೆದ ವರ್ಷ (2021-22) ಸುಮಾರು 70 ಲಕ್ಷ ಟನ್ ಗೋಧಿ ರಫ್ತು ಮಾಡಿದೆ. 

ಉಕ್ರೇನ್ ಯುದ್ಧದಿಂದಾಗಿ ಗೋಧಿ ಬೆಲೆಯ ಏರಿಕೆಯಾಗಿದ್ದು, ಭಾರತದ ಗೋಧಿಗೆ ಸಾಗರೋತ್ತರ ಬೇಡಿಕೆ ಹೆಚ್ಚಾಗಿರುವ ಕಾರಣ ಗೋಧಿ ಹಿಟ್ಟಿನ ಬೆಲೆಯು ನಿರಂತರವಾಗಿ ಏರುತ್ತಿದೆ ಎಂದು ಮೂಲಗಳು ತಿಳಿಸಿವೆ.

ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರವು 2017ರ ಮಾರ್ಚ್‌ನಲ್ಲಿ ಗರಿಷ್ಠ ಶೇ. 7.62ರಷ್ಟು ದಾಖಲಾಗಿತ್ತು. 2022ರ ಮಾರ್ಚ್‌ನಲ್ಲಿ ಸಾರ್ವಜನಿಕ ವಿತರಣೆಯ ಹೊರತಾಗಿ ಗೋಧಿ ಬೆಲೆಯ ಪ್ರಮಾಣ ಶೇ. 7.77ಕ್ಕೆ ತಲುಪಿದೆ. ಈ ಎಲ್ಲದರ ನಡುವೆ ಏಪ್ರಿಲ್‌ ತಿಂಗಳ ಉದ್ದಕ್ಕೂ ಕೇಂದ್ರ ಸರ್ಕಾರ ಮತ್ತು ಸರ್ಕಾರದ ಸಚಿವಾಲಯಗಳು ವಿದೇಶಕ್ಕೆ ಗೋಧಿ ರಫ್ತು ಮಾಡಿ ಲಾಭಗಳಿಸುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದವು, ಜಾಗತಿಕ ಘೋಷಣೆ ಕೂಗಿದ್ದಾರೆ. ಆದರೆ ಏಪ್ರಿಲ್‌ನ ಹಣದುಬ್ಬರದ ವಿವರ ಸರ್ಕಾರದ ಯೋಜನೆಗಳಿಗೆ ದೊಡ್ಡ ಹೊಡೆತ ನೀಡಿದೆ. ಯು ಟರ್ನ್ ನಿರ್ಧಾರ ಅನಿವಾರ್ಯವಾಗಿಸಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್