ಬೆಳೆ ವಿಮೆಗೆ ಸಂಬಂಧಿಸಿದಂತೆ ಸ್ಟಷ್ಟ ದಾಖಲಾತಿಗೆ ಹಾವೇರಿ ಜಿಲ್ಲಾಧಿಕಾರಿ ತಾಕೀತು

HAVERI DC Sanjay Shettennavar
  • 2022-23 ನೇ ಸಾಲಿನ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಆಗ್ರಹ
  • ಬೆಳೆ ವಿಮೆಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಕರಾರುವಾಕ್ಕಾಗಿ ದಾಖಲಿಸಿ: ಹಾವೇರಿ ಡಿಸಿ 

ಮುಂಗಾರಿನ ಬೆಳೆಗಳಿಗೆ ಸಂಬಂಧಿಸಿದ ಕೊಯಿಲಿನ ವಿವರಗಳನ್ನು ಕರಾರುವಾಕ್ಕಾಗಿ ಮತ್ತು ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ದಾಖಲೆ ಮಾಡಬೇಕೆಂದು ಹಾವೇರಿಯ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಾಕೀತು ಮಾಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ 2022-23 ನೇ ಸಾಲಿನ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ನಿಯೋಜಿತ ಸಮೀಕ್ಷಾ ಆಧಿಕಾರಿಗಳನ್ನು ಉದ್ದೇಶಿಸಿ ಸಂಜಯ ಶೆಟ್ಟೆಣ್ಣವರ ಅವರು ಮಾತನಾಡುತ್ತಿದ್ದರು. ಬೆಳೆ ವಿಮೆಗೆ ಸಂಬಂಧಿಸಿದ ವಿಮೆ ನೋಂದಣಿ ಮತ್ತು ಸ್ಥಳ ಸಮೀಕ್ಷೆಗಳು ಒಳಗೊಂಡಂತೆ ಪ್ರತಿ ವಿವರವನ್ನೂ ಕರಾರುವಾಕ್ಕಾಗಿ ದಾಖಲಿಸಿ, ನಿರ್ದಿಷ್ಟಪಡಿಸಿದ ಅವಧಿಯೊಳಗೆ ಆಪ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ತಾಕೀತು ಮಾಡಿದರು.

2022-23ನೇ ಸಾಲಿನ ಮುಂಗಾರು ಬೆಳೆಗೆ ಸಂಬಂಧಿಸಿದಂತೆ 3468 ಕಟಾವು ಪ್ರಯೋಗಗಳನ್ನು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (ಪಿಎಂಎಫ್‌ಬಿವೈ) ಅಡಿಯಲ್ಲಿ ಹಾವೇರಿ ಜಿಲ್ಲೆಗೆ ಆಯೋಜಿಸಲಾಗಿದೆ. ಇದಕ್ಕೆ ನಿರ್ದಿಷ್ಟಪಡಿಸಲಾಗಿರುವ ಆಪ್ ಮೂಲಕ ಈ ಎಲ್ಲ ಬೆಳೆ ಪ್ರಯೋಗಗಳನ್ನು ಸಕಾಲದಲ್ಲಿ ಮತ್ತು ಸ್ಪಷ್ಟವಾಗಿ, ಯಾವುದೇ ಸಂದೇಹಗಳಿಗೆ ಎಡೆ ಇಲ್ಲದಂತೆ ದಾಖಲಿಸಬೇಕು ಎಂದು ಸೂಚಿಸಿದರು.

ಬೆಳೆ ಸಮೀಕ್ಷೆ ಆಧರಿಸಿ ಕ್ಷೇತ್ರ ಮರುಹೊಂದಾಣಿಕೆ ವರದಿಯನ್ನು ಮಾರ್ಗಸೂಚಿ ಪ್ರಕಾರ ತಯಾರಿಸಿ, ಋತುವಾರು ನಿಗದಿತ ಅವಧಿಯಲ್ಲಿ ಕಂದಾಯ, ಕೃಷಿ, ನೀರಾವರಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ತಾಲ್ಲೂಕು ಮಟ್ಟದ ವರದಿಗಳನ್ನು ಕಾಲಮಿತಿಯೊಳಗೆ ಸಲ್ಲಿಸಬೇಕು ಎಂದು ತಿಳಿಸಿದರು.

ಮುಂಗಾರು ಬೆಳೆಯ ಅಂಕಿ-ಅಂಶಗಳ ಕುರಿತು ಜಿಲ್ಲೆಯ ಎಲ್ಲ ತಹಸೀಲ್ದಾರರುಗಳು, ತಾಲ್ಲೂಕು ಮಟ್ಟದ ಆಧಿಕಾರಿಗಳ ಸಭೆ ನಡೆಸಿ, ಜಿಲ್ಲಾ ಮಾದರಿಯಲ್ಲಿಯೇ ಸಂಜೆಯೊಳಗೆ ವರದಿಯನ್ನು ಕಳುಹಿಸಿಕೊಡಬೇಕು ಎಂದು ಹೇಳಿದರು. ನಂತರದ 10 ದಿನಗಳಲ್ಲಿ ಇನ್ನೊಂದು ಸಭೆ ನಡೆಸಿ ನಿಗದಿತ ಅವಧಿಯಲ್ಲಿ ಸಮೀಕ್ಷೆಗಳನ್ನು ಮುಗಿಸಬೇಕು ಎಂದು ಅವರು ಸೂಚಿಸಿದರು.

ಯಾವುದೋ ಕಂಪನಿ ಕಳಪೆ ಬೀಜಗಳನ್ನು ಸರಬರಾಜು ಮಾಡಿ, ರೈತರಿಗೆ ನಷ್ಟ ಉಂಟಾಗಿದೆ ಎಂಬ ದೂರು ಬಂದಲ್ಲಿ ಆ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿ, ಸತ್ಯಾಸತ್ಯತೆಗಳ ವರದಿಯನ್ನು ಸಲ್ಲಿಸುವಂತೆ ಜಂಟಿ ನಿರ್ದೇಶಕರಿಗೆ ಹೇಳಿದರು.

ನಿಮಗೆ ಏನು ಅನ್ನಿಸ್ತು?
2 ವೋಟ್