ಕನಿಷ್ಠ ಬೆಂಬಲ ಬೆಲೆ ಸಮಿತಿಗೆ ಕರ್ನಾಟಕ ರಾಜ್ಯ ಕಿಸಾನ್‌ ಮೋರ್ಚಾ ವಿರೋಧ; ಸಮಿತಿಯಲ್ಲಿ ಪಾಲ್ಗೊಳ್ಳದಿರಲು ನಿರ್ಧಾರ

Kuruburu Shantakumar in Press Meet

ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ನಿರ್ಣಯಿಸುವ ಸಮಿತಿ ರಚನೆಗೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ನಿರ್ಧಾರ ಅಸ್ಪಷ್ಟತೆಯಿಂದ ಕೂಡಿದೆ. ಸಮಿತಿಯ ಅಧ್ಯಕ್ಷರು ಯಾರು, ಸಮಿತಿಯ ಕಾಲ ಮಿತಿ ಎಷ್ಟು, ಎಷ್ಟು ದಿವಸ, ತಿಂಗಳು ಅಥವಾ ಎಷ್ಟು ವರ್ಷಗಳಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಬೇಕು ಎಂಬಂತಹ ಮುಖ್ಯ ಅಂಶಗಳ ಬಗ್ಗೆ ಏನನ್ನೂ ಹೇಳದೇ ಸಮಿತಿಯನ್ನು ಘೋಷಿಸುವ ಪಯತ್ನ ಮಾಡಿದೆ ಎಂದು ಕರ್ನಾಟಕ ರಾಜ್ಯ ಕಿಸಾನ್ ಮೋರ್ಚಾ ಆಪಾದಿಸಿದೆ.

ದೇಶದಾದ್ಯಂತ ಲಕ್ಷಾಂತರ ರೈತರು ಮೂರು ಕೃಷಿ ಕಾಯಿದೆಗಳನ್ನೂ ರದ್ದುಪಡಿಸಬೇಕು ಮತ್ತು ಎಂಎಸ್‌ಪಿ ಖಾತರಿ ಕಾಯ್ದೆಯನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿ, ಸಂಯುಕ್ತ ಕಿಸಾನ್ ಮೋರ್ಚಾ ಅಡಿಯಲ್ಲಿ  378 ದಿನಗಳ ಕಾಲ ಹೋರಾಟ ನಡೆಸಿದ್ದರು. ಇದರಲ್ಲಿ 750 ಮಂದಿ ರೈತರು ಮರಣ ಹೊಂದಿದ್ದರು. ರೈತರ ಮೇಲೆ 40 ಸಾವಿರಕ್ಕೂ ಹೆಚ್ಚು ಸುಳ್ಳು ಮೊಕದ್ದಮೆಗಳನ್ನು ಸರ್ಕಾರ ಹೂಡಿತ್ತು. 

ರೈತಪರ ಧೋರಣೆಗಳೊಂದಿಗೆ ಹೋರಾಟದಲ್ಲಿ ಪಾಲ್ಗೊಂಡಿದ್ದ ರೈತ ನಾಯಕರನ್ನು ಕಡೆಗಣಿಸಿ, ಆರಂಭದಿಂದಲೂ ಸರ್ಕಾರದ ಪರವಾದ ನಿಲುವುಗಳನ್ನು ಹೊಂದಿದ್ದ, ಸರ್ಕಾರದ ಮೂರು ಕಾಯಿದೆಗಳನ್ನು ಬೆಂಬಲಿಸುತ್ತಿದ್ದ 26  ಜನರ ಸಮಿತಿಯನ್ನು ಸರ್ಕಾರ ಘೋಷಿಸಿದೆ. ಇದರಲ್ಲಿ ಮೂರು ಜನ ಕಿಸಾನ್ ಮೋರ್ಚಾದ ಪ್ರತಿನಿಧಿಗಳಿಗೆ ಅವಕಾಶ ನೀಡಿದೆ. ಇದು ಹಾಸ್ಯಾಸ್ಪದವಾದ ವಿಚಾರ.

"ಸರ್ಕಾರ ತನ್ನ ಇಷ್ಟದ ಪ್ರಕಾರ ತನಗೆ ಇಷ್ಟ ಬಂದವರನ್ನು ಸಮಿತಿಯಲ್ಲಿ ಸೇರಿಸಿ, ಕೊನೆಯಲ್ಲಿ ಎಸ್‌ಕೆಎಂನ ಮೂರು ಜನರ ಹೆಸರನ್ನು ಕೊಡಿ ಎಂದು ಕೇಳಿರುವುದು ಸಾರಾಸಗಟಾಗಿ ದೇಶದ ರೈತರಿಗೆ ಮಾಡಿರುವ ಅಪಮಾನ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಕರ್ನಾಟಕ ರಾಜ್ಯ ಕಿಸಾನ್ ಮೋರ್ಚಾ ಖಂಡಿಸುತ್ತದೆ. ನಾವು ಈ ಸಮಿತಿಯನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಇದರಲ್ಲಿ ಭಾಗವಹಿಸುವುದಿಲ್ಲ" ಎಂದು ಎಸ್‌ಕೆಎಂ ಹೇಳಿದೆ.

ಈ ಪತ್ರಿಕಾ ಹೇಳಿಕೆಯಲ್ಲಿ ಮೂರು ಕೃಷಿ ಕಾಯಿದೆ ಮತ್ತು ಡಬ್ಲ್ಯುಟಿಒ ಒಪ್ಪಂದದ ಪರವಾಗಿ ವಕಾಲತ್ತು ವಹಿಸಿದ್ದಂತಹ “ಸರ್ಕಾರಿ ರೈತ ಪ್ರತಿನಿಧಿ"ಗಳ ಹೆಸರನ್ನು ಸಹ ಪ್ರಕಟಿಸಿದೆ.

  • ಗುಣವಂತ ಪಾಟೀಲ, ಡಬ್ಲ್ಯುಟಿಒ ಮತ್ತು ಕಾಯಿದೆಗಳ ಪರ ವಾದ ಮಾಡುತ್ತಿದ್ದವರು.
  • ಕೃಷ್ಣವೀರ ಚೌಧುರಿ, ಮಾಜಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದವರು.
  • ಪ್ರಮೇಂದ್ರ ಚೌಧುರಿ, ಆರ್ ಎಸ್‌ ಎಸ್ ಅಂಗಸಂಸ್ಥೆ ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ. 
  • ಪಾಸಾ ಪಾಟೀಲ್, ಮಹಾರಾಷ್ಟ್ರದ ಬಿಜೆಪಿ ಎಂಎಲ್ಸಿ.
  • ಸಂಜಯ್ ಅಗರವಾಲ್, ನಿವೃತ್ತ ಕೃಷಿ ಇಲಾಖೆ ಕಾರ್ಯದರ್ಶಿ ಹಾಗೂ ಬಿಜೆಪಿ ಅಭಿಮಾನಿ.
  • ರಮೇಶ್ ಚಂದ್ರ, ನೀತಿ ಆಯೋಗದ ಸದಸ್ಯ ಮತ್ತು ಮೂರು ಕಾಯಿದೆಗಳ ಪರ ಇದ್ದವರು.
  • ಆನಂದ್, ಕೃಷಿ ಕ್ಷೇತ್ರಕ್ಕೆ ಸಂಬಂಧ ಇಲ್ಲದವರು ಮತ್ತು ಬಿಜೆಪಿ ಜಾಲತಾಣ ನಿರ್ವಾಹಕರು.

ಇಂತಹ ಸದಸ್ಯರಿರುವ ಸಮಿತಿಯಿಂದ ರೈತರು ಯಾವುದೇ ನ್ಯಾಯವನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಈ ಎಲ್ಲ ಕಾರಣಗಳಿಂದ ಎಸ್‌ಕೆಎಂ ಈ ಸಮಿತಿಯನ್ನು ವಿರೋಧಿಸುತ್ತದೆ ಮತ್ತು ಇದರಲ್ಲಿ ಭಾಗಿಯಾಗುವುದನ್ನು ನಿರಾಕರಿಸುತ್ತದೆ ಎಂದು ಹೇಳಿಕೆಯಲ್ಲಿ ಪುನರುಚ್ಚರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಎಂಎಸ್‌ಪಿ ಗ್ಯಾರಂಟಿ ಕಾಯ್ದೆ ಮತ್ತು ಸ್ವಾಮಿನಾಥನ್ ವರದಿಯ ಜಾರಿಗೆ ಒತ್ತಾಯಿಸಿ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ರಾಜ್ಯಗಳ ಕಿಸಾನ್ ಮೋರ್ಚಾ ರಾಜ್ಯ ಘಟಕಗಳ ಪರವಾಗಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್