ಆಮದು ಅಡಕೆ ಮೇಲೆ ಅಬಕಾರಿ ಸುಂಕ: ಮರುಸ್ಥಾಪಿಸುವಂತೆ ಕೇಂದ್ರಕ್ಕೆ ರಾಜ್ಯದ ನಿಯೋಗದಿಂದ ಮನವಿ

adike manavi
  • ಅಡಿಕೆ ಬೆಳೆಗಾರರ ನಿಯೋಗದಿಂದ ಕೇಂದ್ರ ಸಚಿವರ ಭೇಟಿ
  • ರಾಜ್ಯದ ಅಡಿಕೆ ಬೆಳೆಗಾರರ ಹಿತ ಕಾಯುವಂತೆ ಮನವಿ ಸಲ್ಲಿಕೆ

ಹೊರ ದೇಶಗಳಿಂದ ಆಮದು ಮಾಡಿಕೊಳ್ಳುವ ಅಡಕೆಯ ಮೇಲೆ ವಿಧಿಸುವ ಅಬಕಾರಿ ಸುಂಕವನ್ನು ಮರುಸ್ಥಾಪನೆ ಮಾಡುವಂತೆ ರಾಜ್ಯದ ಅಡಕೆ ಬೆಳೆಗಾರರ ನಿಯೋಗವು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ದೆಹಲಿಗೆ ತೆರಳಿದ್ದು, ಸಂಬಂಧಪಟ್ಟವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದೆ.

ಅಡಕೆ ಬೆಳೆಗಾರರ ನೇತೃತ್ವದ ನಿಯೋಗವು ವಿದೇಶಗಳಿಂದ ಕರ್ನಾಟಕಕ್ಕೆ ಆಮದು ಮಾಡಿಕೊಂಡ ಅಡಕೆ ಮೇಲೆ 110% ಅಬಕಾರಿ ಸುಂಕವನ್ನು ಮರುಸ್ಥಾಪಿಸುವಂತೆ ಮನವಿ ಮಾಡಿದೆ.

ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ರಾಜ್ಯದ ಅಡಕೆ ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡುವ ದೃಷ್ಠಿಯಿಂದ ಅಡಿಕೆ ಮೇಲಿನ ಅಬಕಾರಿ ಸುಂಕವನ್ನು 110% ಪುನಃಸ್ಥಾಪಿಸುವಂತೆ ಕೇಂದ್ರವನ್ನು ಒತ್ತಾಯಿಸುತ್ತಿದ್ದೇವೆ ಎಂದರು.

ಅಡಕೆ ಬೆಳೆಯನ್ನು ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ರಾಜ್ಯದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸರಿಸುಮಾರು ಆರು ಕೋಟಿ ಕುಟುಂಬಗಳು ಈ ಬೆಳೆಯಿಂದ ಉದ್ಯೋಗ ನೆಚ್ಚಿಕೊಂಡಿದ್ದರೆ, ಕರ್ನಾಟಕವೊಂದರಲ್ಲಿಯೇ ಸುಮಾರು 50 ಲಕ್ಷ ಜನರು ಈ ಬೆಳೆಯಲ್ಲೇ ಬದುಕು ಸಾಗಿಸುತ್ತಿದ್ದಾರೆ. ಈ ಬಹುವಾರ್ಷಿಕ ಬೆಳೆಯಾದ ಅಡಕೆಯನ್ನು ನಂಬಿರುವ ರೈತರು ಅನ್ಯ ಬೆಳೆಗಳನ್ನು ಬೆಳೆಯುವುದಿಲ್ಲ. ಒಂದು ಕ್ವಿಂಟಾಲ್ ಅಡಿಕೆಗೆ ₹50,000 ಕ್ಕಿಂದ ಕಡಿಮೆ ಬೆಲೆ ಬಂದರೆ ರೈತರ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ, ಆರ್ಥಿಕವಾಗಿಯೂ ಹೈರಾಣಾಗುತ್ತಾರೆ ಎಂಬ ಅಂಶವನ್ನು ನಿಯೋಗವು ಮನವಿ ಪತ್ರದಲ್ಲಿ ಉಲ್ಲೇಖಿಸಿ ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಕೇಂದ್ರಕ್ಕೆ ಮನದಟ್ಟು ಮಾಡಿಸುವ ಪ್ರಯತ್ನ ಮಾಡಿದೆ.

ಕೇಂದ್ರ ಸರ್ಕಾರದ ಅಧಿಸೂಚನೆಗೂ ಮುನ್ನ ತಿಂಗಳಿಗೆ 2500 ಟನ್ ಅಡಕೆ ಆಮದು ಮಾಡಿಕೊಳ್ಳುತ್ತಿದ್ದರು. ಈಗ ತಿಂಗಳಿಗೆ 8,000 ಟನ್‌ಗೆ ಆಮದು ಪ್ರಮಾಣ ಹೆಚ್ಚಿದೆ. ಒಂದು ಕೆಜಿ ಅಡಕೆಗೆ ₹360 ಬೆಲೆ ಏರಿಕೆಯಾಗಿದ್ದು, ಆಮದು ಮಾಡಿಕೊಂಡ ಅಡಕೆಯ ಬೆಲೆ ಕೆಜಿಗೆ ₹271 ಮಾತ್ರ ಇದೆ ಎಂದು ರಾಜ್ಯದ ಅಡಕೆ ಬೆಳೆಗಾರರ ನಿಯೋಗವು ತಿಳಿಸಿದೆ.

ಈ ಸುದ್ದಿ ಓದಿದ್ದೀರಾ? ಕುರಿಗಾಹಿ ಮತ್ತು ಖರೀದಿದಾರರಿಗೆ ಸೇತು ಬಂಧುವಾದ 'ಮೊಬೈಲ್ ಆ್ಯಪ್'

ಆಮದುದಾರರು, 2022 ರ ಫೆಬ್ರವರಿಯಲ್ಲಿ ಅಡಿಕೆ ಆಮದು ಸುಂಕ ಕುರಿತಂತೆ ಕೇಂದ್ರ ಹೊರಡಿಸಿದ  ಅಧಿಸೂಚನೆಯಲ್ಲಿ ಲೋಪದೋಷಗಳಿರುವುದನ್ನು ಗುರುತಿಸಿದ್ದಾರೆ. ಆಮದುದಾರರು 110% ಸುಂಕ ಪಾವತಿಸದೆ ಒಂದು ಕೆಜಿ ಅಡಿಕೆಗೆ ₹271 ಗಳನ್ನು ನೀಡಿ ಅಡಿಕೆಯನ್ನು ಆಮದು ಮಾಡಿಕೊಂಡಿದ್ದಾರೆಂದು ನಿಯೋಗ ಹೇಳಿದೆ. ಹಾಗಾಗಿ ಎಲ್ಲ ವಿಧದ ಅಡಕೆ ಆಮದು ಮೇಲೆ 110% ಅಬಕಾರಿ ಸುಂಕ ಪುನಃಸ್ಥಾಪಿಸುವಂತೆ ಒತ್ತಾಯಿಸುತ್ತಿದ್ದೇವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ವೇಳೆ ರಾಜ್ಯದ ಅಡಕೆ ಬೆಳೆಗಾರರ ನಿಯೋಗವು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಹಾಗೂ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿ ಅಡಿಕೆ ಬೆಳೆಗಾರರಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿತು.

ನಿಯೋಗದಲ್ಲಿ ಶಾಸಕ ಹರತಾಳ್ ಹಾಲಪ್ಪ, ಮಾಜಿ ಶಾಸಕ ಡಿ ಎನ್ ಜೀವರಾಜ್, ಸೆಂಟ್ರಲ್ ಅರೆಕಾನಟ್ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಲಿಮಿಟೆಡ್ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಇತರರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್