ಕೇಂದ್ರದ 'ಹಿಂದಿ ಕಿಸಾನ್‌ ವಾಹಿನಿ' : ಮೋದಿಯವರ ರೈತ ವಿರೋಧಿ ನಿಲುವು ಮುಚ್ಚಿಕೊಳ್ಳುವ ಯತ್ನ ; ರೈತ ಮುಖಂಡರ ಟೀಕೆ

“ಇದು ಹಿಂದಿ ಹೇರಿಕೆಯ ಪರೋಕ್ಷ ಪ್ರಯೋಗವಾಗಿದೆ. ರೈತರಲ್ಲಿ ಕೇವಲ ಹಿಂದಿ ಮಾತನಾಡುವ ರೈತರು ಮಾತ್ರ ಇಲ್ಲ. ಈ ದೇಶದಲ್ಲಿ ಹಿಂದಿಯೇತರ ರಾಜ್ಯಗಳೇ ಹೆಚ್ಚಿವೆ. ಅಲ್ಲಿರುವ ರೈತರ ಸಂಖ್ಯೆ ಸಹ ಹೆಚ್ಚಿದೆ. ಹಿಂದಿಯೇ ಅರ್ಥವಾಗದ ಆ ಬಹುಸಂಖ್ಯಾತ ರೈತರಿಗೆ ಇದರಿಂದ ಆಗುವ ಪ್ರಯೋಜನವಾದರೂ ಏನು?" ಎಂದು ಹಿಂದಿಯೇತರ ರಾಜ್ಯಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ. 
Dooradarshan

ಕೇಂದ್ರ ಕೃಷಿ ಮಂತ್ರಿ ನರೇಂದ್ರ ಸಿಂಗ್‌ ತೋಮರ್‌ ಮತ್ತು ರಾಜ್ಯ ಸಚಿವರುಗಳಾದ ಶೋಭಾ ಕರಂದ್ಲಾಜೆ ಮತ್ತು ಕೈಲಾಶ್‌ ಚೌಧರಿ ದೆಹಲಿಯ ಕೃಷಿ ಭವನದಲ್ಲಿ ಹೊಸದಾಗಿ ಆರಂಭಿಸಲಾಗಿರುವ ದೂರದರ್ಶನದ ಕಿಸಾನ್‌ ಚಾನೆಲ್‌ನ ಸ್ಟುಡಿಯೋ ಉದ್ಘಾಟನೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ತೋಮರ್‌, "ರೈತರ ನಡುವೆ ಈಗಾಗಲೇ ದೂರದರ್ಶನ ಜನಪ್ರಿಯ ಸುದ್ದಿವಾಹಿನಿಯಾಗಿದೆ. ಈಗ ಈ ಕೃಷಿ ಚಾನಲ್‌ ಮೂಲಕ ರೈತರೊಂದಿಗೆ ಸಂವಹನ ಇನ್ನೂ ಸುಲಭವಾಗಲಿದೆ" ಎಂದರು. 

"ಕೇಂದ್ರ ಸರ್ಕಾರ ಕಳೆದ ಎಂಟು ವರ್ಷಗಳಿಂದ ಕೃಷಿ ಕ್ಷೇತ್ರದಲ್ಲಿ ಅಪಾರವಾದ ಸಾಧನೆಗಳನ್ನು ಮಾಡಿದೆ. ಇಂಥ ಸಮಯದಲ್ಲಿ ರೈತರೊಂದಿಗೆ ಸಂಪರ್ಕ ಹೊಂದಲು ಈ ಚಾನೆಲ್‌ ನೆರವಾಗಲಿದೆ. ರೈತರನ್ನು ಇಂದಿನ ತಾಂತ್ರಿಕತೆಯ ಜೊತೆ ಜೋಡಿಸಿ, ಅವರನ್ನು ಲಾಭದಾಯಕ ಬೆಳೆಗಳತ್ತ ಸೆಳೆಯುವುದು ಮತ್ತು ಅವರ ಆದಾಯವನ್ನು ದ್ವಿಗುಣಗೊಳಿಸುವುದು ಈ ಚಾನಲ್‌ನ ಗುರಿಯಾಗಿದೆ" ಎಂದು ಅವರು ಹೇಳಿದರು.

"ಈ ಚಾನೆಲ್‌ ಕೃಷಿ ಸಚಿವಾಲಯದ ಯೋಜನೆಗಳನ್ನು ರೈತರಿಗೆ ತಲುಪಿಸಲು ಮತ್ತು ಕಾರ್ಯಕ್ರಮಗಳ ಮೂಲಕ ರೈತರಿಗೆ ಅಗತ್ಯ ಮಾಹಿತಿಗಳನ್ನು ವೇಗವಾಗಿ ತಲುಪಿಸಲು ಸಹಾಯ ಮಾಡುತ್ತದೆ" ಎಂದು ಹೇಳಿದ ಸಚಿವರು, ಕೃಷಿ ಭವನದಲ್ಲಿ ತಮ್ಮ ಸ್ಟುಡಿಯೋ ಮಾಡಿದ್ದಕ್ಕಾಗಿ ದೂರದರ್ಶನ ಮತ್ತು ಕಿಸಾನ್‌ ಚಾನೆಲ್‌ ಅನ್ನು ಅಭಿನಂದಿಸಿದರು. 

"ಕೇವಲ ಹಿಂದಿ ಭಾಷೆಯಲ್ಲಿ ಮಾತ್ರ ಪ್ರಸಾರವಾಗುವ ಈ ಚಾನೆಲ್‌ನಲ್ಲಿ ಕೃಷಿ ಸಮಾಚಾರದೊಂದಿಗೆ ಚೌಪಾಲ್‌ ಚರ್ಚಾ, ಗಾಂವ್ ಕಿಸಾನ್‌, ಮಂಡಿ ಖಬರ್‌, ಮೌಸಮ್‌ ಖಬರ್‌, ಹಲೋ ಕಿಸಾನ್‌ (ಒಂದು ಗಂಟೆ ಲೈವ್‌ ಫೋನ್‌ ಇನ್‌ ಕಾರ್ಯಕ್ರಮ), ವಿಚಾರ್‌ ವಿಮರ್ಶ (ಗುಂಪು ಚರ್ಚೆ), ಗುಲ್ದಸ್ತಾ (ಈಶಾನ್ಯ ರಾಜ್ಯಗಳ ಸುದ್ದಿ), ಛತ್‌ ಪರ್‌ ಭಾಗ್‌ ಬಿನಿ (ಮಾಳಿಗೆ ಕೃಷಿ), ಸ್ವಸ್ತ್‌ ಕಿಸಾನ್‌ (ಒಂದು ಗಂಟೆ ಲೈವ್‌ ಫೋನ್‌ ಇನ್‌ ಸಂವಾದ, ರೈತರು-ತಜ್ಞರೊಂದಿಗೆ), ಪಹಲಿ ಕಿರಣ್‌ (ಈಶಾನ್ಯ ರಾಜ್ಯಗಳ ಕೃಷಿ ಸಮಾಚಾರ), ಕೃಷಿ ದರ್ಶನ್‌, ಅಪನ ಪಶು ಚಿಕಿತ್ಸಕ್‌ (ನಮ್ಮ ಪಶು ವೈದ್ಯ), ಕೃಷಿ ವಿಶೇಷ್‌, ಸರ್ಕಾರ್‌ ಆಪ್‌ ಕೆ ಸಾಥ್‌, ಬದಲ್‌ ತೆ ಭಾರತ್‌ ಕ ನಯಾ ಕಿಸಾನ್‌ ಇನ್ನೂ ಮುಂತಾದ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ.

ಇದರ ಬೆನ್ನಲ್ಲೇ, ಇದು ಹಿಂದಿ ಹೇರಿಕೆಯ ಪರೋಕ್ಷ ಪ್ರಯೋಗವಾಗಿದೆ ಎನ್ನುವ ಟೀಕೆಯೂ ವ್ಯಕ್ತವಾಗಿದೆ. ರೈತರಲ್ಲಿ ಕೇವಲ ಹಿಂದಿ ಮಾತನಾಡುವ ರೈತರು ಮಾತ್ರ ಇಲ್ಲ. ಈ ದೇಶದಲ್ಲಿ ಹಿಂದಿಯೇತರ ರಾಜ್ಯಗಳೇ ಹೆಚ್ಚಿವೆ. ಇಲ್ಲಿರುವ ರೈತರ ಸಂಖ್ಯೆ ಸಹ ಹೆಚ್ಚಿದೆ. ಹಿಂದಿಯೇ ಅರ್ಥವಾಗದ ಆ ಬಹುಸಂಖ್ಯಾತ ರೈತರಿಗೆ ಇದರಿಂದ ಆಗುವ ಪ್ರಯೋಜನವಾದರೂ ಏನು ಎಂದು ಹಿಂದಿಯೇತರ ರಾಜ್ಯಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ. 

ಹಿಂದಿ ಕಿಸಾನ್ ವಾಹಿನಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕರ್ನಾಟಕದ ಪ್ರಮುಖ ರೈತನಾಯಕ ಬಡಗಲಪುರ ನಾಗೇಂದ್ರ “ಈ ದಿನ.ಕಾಮ್” ಜೊತೆ ಮಾತನಾಡುತ್ತ "ಭಾರತದಲ್ಲಿ ಹಿಂದಿ ಒಂದೇ ಭಾಷೆ ಇಲ್ಲ. ಇದು ಹಲವು ಭಾಷೆಗಳ ಒಕ್ಕೂಟ. ನಮ್ಮ ರಾಜ್ಯದಿಂದಲೇ ಒಬ್ಬ ಕೃಷಿ ರಾಜ್ಯ ಸಚಿವರಿದ್ದಾರೆ. ಆ ಉದ್ಘಾಟನಾ ಸಮಾರಂಭದಲ್ಲಿ ಅವರೂ ಹಾಜರಿದ್ದರು. ಅವರಿಗೆ ನನ್ನ ರಾಜ್ಯದ ಭಾಷೆಗೆ ನ್ಯಾಯ ಒದಗಿಸಬೇಕು ಅನಿಸದೇ ಹೋದದ್ದು ತುಂಬಾ ವಿಷಾದನೀಯ. ನಾವು ಈ ಏಕ ಭಾಷೆಯ ಹೇರಿಕೆಯನ್ನು ವಿರೋಧಿಸುತ್ತೇವೆ. ಆ ಆದೇಶದ ಪ್ರತಿಗಳನ್ನು ಸುಟ್ಟು ಈ ನಿರ್ಧಾರವನ್ನು ಪ್ರತಿರೋದಿಸುತ್ತೇವೆ. ಕೇಂದ್ರ ಸರ್ಕಾರ ಕೂಡಲೇ ಎಲ್ಲ ಭಾಷೆಗಳಲ್ಲಿ ಈ ಚಾನೆಲ್‌ ಆರಂಭಿಸಬೇಕು. ಈ ಚಾನೆಲ್‌ಗಳು ಸರ್ಕಾರದ ಪರ ಲಾಬಿ ಮಾಡಬಾರದು. ನಿಷ್ಪಕ್ಷಪಾತವಾಗಿ ವರ್ತಿಸಬೇಕು” ಎಂದು ಆಗ್ರಹಿಸಿದರು.

ರಾಜ್ಯ ರೈತ ನಾಯಕ ಮತ್ತು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರಾದ ಕುರುಬೂರು ಶಾಂತಕುಮಾರ್ ಈ ದಿನ.ಕಾಮ್ ಜೊತೆ ಮಾತನಾಡುತ್ತ “ಇದೊಂದು ಸಂವಿಧಾನ ವಿರೋಧಿ ನಡೆ. ಭಾರತ ಬಹು ಭಾಷಾ ದೇಶ. ಇಲ್ಲಿ ಸಂವಿಧಾನ ಒಪ್ಪಿತವಾದ ಹಲವು ಭಾಷೆಗಳಿವೆ. ಅವೆಲ್ಲವನ್ನೂ ಮೂಲೆಗುಂಪು ಮಾಡಿ ಕೇವಲ ಹಿಂದಿಯಲ್ಲಿ ಮಾತ್ರ ಇಂಥ ಚಾನೆಲ್‌ಗಳನ್ನು ಮಾಡುವುದು ದೇಶದ ರೈತರಿಗೆ ಮಾಡುವ ದ್ರೋಹ ಮತ್ತು ಇತರ ಭಾಷೆಯ ರೈತರಿಗೆ ಮಾಡುವ ಅಪಮಾನ. ಈ ಆಡಳಿತ ಪಕ್ಷ ಆರಂಭಿಸುವ ವಾಹಿನಿಗಳು ಸಾಮಾನ್ಯವಾಗಿ ಸರ್ಕಾರದ ಪರವಾಗಿ ಇರುತ್ತವೆ. ಆದರೆ ಅವು ರೈತರ ಪರವಾಗಿ ಇರಬೇಕು. ಈ ಕೂಡಲೇ ಕರ್ನಾಟಕದವರೇ ಆದ ರಾಜ್ಯ ಕೃಷಿ ಮಂತ್ರಿ ಶೋಭಾ ಕರಂದ್ಲಾಜೆ ಅವರು ಈ ಬಗ್ಗೆ ಸರಿಯಾದ ರಾಜ್ಯ ರೈತರ ಪರವಾದ ನಿಲುವನ್ನು ತಳೆಯಬೇಕು. ನಿರ್ಲಕ್ಷಿಸಿದಲ್ಲಿ ಕರ್ನಾಟಕದ ರೈತರಂತೂ ಸುಮ್ಮನೆ ಕೂರುವುದಿಲ್ಲ" ಎಂದು ಕಿಡಿಗಾರಿದರು.

ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್‌ ಪೂಣಚ್ಚ ಅವರು ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಾ “ಕೇಂದ್ರ ಸರ್ಕಾರ ತನ್ನ ರೈತ ವಿರೋಧಿ ನಿಲುವನ್ನು ಮುಚ್ಚಿಕೊಳ್ಳಲು ಈ ಪ್ರಯತ್ನ ಮಾಡಿದೆ. ರೈತರ ಬಳಿ ತನ್ನ ಪರವಾಗಿ ಲಾಬಿ ಮಾಡಲು ಈ ಚಾನೆಲ್‌ ಬಳಸುತ್ತಿದೆ. ಭಾಷೆ ಯಾವುದಾದರೂ ಸರಿ, ಅದಕ್ಕೆ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ಒಂದು ವೇದಿಕೆ ಬೇಕಾಗಿದೆ, ಅಷ್ಟೇ. ಅದರಲ್ಲೂ ಹಿಂದಿ ಭಾಷಿಕ ರಾಜ್ಯಗಳಲ್ಲಿರುವ ರೈತರ ಆಕ್ರೋಶವನ್ನು ಶಮನ ಮಾಡಲು ಈ ಪ್ರಯತ್ನ ಮಾಡಲಾಗುತ್ತಿದೆ” ಎಂದು ಹಿನ್ನೆಲೆಯನ್ನು ತೆರೆದಿಟ್ಟರು.

"ಇದೊಂದು ಪೂರ್ವಯೋಜಿತ ಅಜೆಂಡಾ. ದಕ್ಷಿಣ ಭಾರತ ಅಥವಾ ಈಶಾನ್ಯ ಭಾರತಗಳಲ್ಲಿ ಹಿಂದಿ ಮಾತನಾಡೋಲ್ಲ. ಹಿಂದಿ ಉತ್ತರ ಭಾರತದ ಕೆಲವು ರಾಜ್ಯಗಳ ಭಾಷೆ ಮಾತ್ರ. ಇದು ಮೇಲಿಂದ ಹೇರುವ ಅಜೆಂಡಾ. ಅವರ 'ಒಂದು ದೇಶ-ಒಂದು ಭಾಷೆ' ಘೋಷಣೆಯ ಹೇರಿಕೆ ಇದು. ಇದು ಭಾರತದಲ್ಲಿ ವರ್ಕ್‌ಔಟ್‌ ಆಗದಿರುವ ಅಜೆಂಡಾ. ಇದು ಭಾರತದ ಬಹುತ್ವದ ವಿರುದ್ಧ ಮಾಡುತ್ತಿರುವ ಕುತಂತ್ರ. ಅವರು ಮಾಡಲಿ; ಆದರೆ, ಇದನ್ನು ನಮ್ಮ ರೈತರೇನೂ ನೋಡುವುದಿಲ್ಲ" ಎಂದು ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಹೇಳಿದರು.

ಮುಂದುವರೆದು, “ಮಾಧ್ಯಮಗಳನ್ನು ಅತಿ ಹೆಚ್ಚು ದುರುಪಯೋಗ ಮಾಡಿರುವುದೇ ಅವರು. ಏನು ಕಳೆದ ವರ್ಷ ರೈತ ಹೋರಾಟ ನಡೀತು, ಆ ಹೋರಾಟದಲ್ಲಿ ಸರ್ಕಾರಕ್ಕೆ ಏನು ಡ್ಯಾಮೇಜ್‌ ಆಗಿದೆ, ಅದನ್ನು ಮುಚ್ಚಿಕೊಳ್ಳೋಕೆ ಅವರು ಇಂತಹ ಪ್ರಯತ್ನಗಳನ್ನ ಮಾಡ್ತಾ ಇದ್ದಾರೆ. ಈ ಮೂಲಕ ರೈತ ಸಂಘಟನೆಗಳ ವಿರುದ್ದ ಪ್ರತೀಕಾರ ಮಾಡಲು ಹೊರಟಿದ್ದಾರೆ. ಈಗಾಗಲೇ ರೈತ ಸಂಘಟನೆಗಳನ್ನು ಒಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ಇದನ್ನೂ ಒಂದು ಉಪಕರಣವಾಗಿ ಬಳಸಿಕೊಂಡರೆ ಆಶ್ಚರ್ಯವೇನಿಲ್ಲ. ರೈತರ 'ಬ್ರೈನ್‌ ವಾಶ್' ಮಾಡಲು ಈ ಪ್ರಯತ್ನ ಮಾಡಿದ್ದಾರೆ. ಇದು ಪ್ರಾದೇಶಿಕ ಭಾಷೆಯ ವಿಷಯ ಮಾತ್ರ ಅಲ್ಲ, ಆ ವಾಹಿನಿಯಲ್ಲಿ ಯೋಜಿಸಿರುವ 'ಕಂಟೆಂಟ್' ಪರಿಶೀಲಿಸಿ, ಅದರ ವಿರುದ್ಧ ಸಹ ಪ್ರತಿಭಟಿಸಬೇಕಿದೆ” ಎಂದು ಹೇಳಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್