ಭತ್ತ: ದಶಕದಲ್ಲೇ ಅತೀ ಕಡಿಮೆ ಬಿತ್ತನೆ. ದೇಶವನ್ನು ಕಾಡಲಿದೆ ಆಹಾರ ಭದ್ರತೆಯ ಆತಂಕ

ಇದೇ ಜುಲೈ 8, 2022 ರಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ ಈ ದಿನಾಂಕದವರೆಗೂ 72 ಲಕ್ಷ 20 ಸಾವಿರ ಹೆಕ್ಟೇರ್‌ಗಳಲ್ಲಿ ಮಾತ್ರ ಭತ್ತದ ನಾಟಿ ಆಗಿದೆ. ಕಳೆದ 10 ವರ್ಷಗಳ ಇದೇ ದಿನಾಂಕದ ಸರಾಸರಿ ಬಿತ್ತನೆಗೆ ಹೋಲಿಸಿದಲ್ಲಿ ಈ ಬಾರಿಯ ಬಿತ್ತನೆ ಶೇ. 24ರಷ್ಟು ಕಡಿಮೆ ಇದೆ.
Lowest area under paddy in a decade in India

ಇದೇ ಜುಲೈ 8, 2022 ರಂದು ಕೇಂದ್ರ ಕೃಷಿ ಮತ್ತು  ರೈತ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ ಈ  ದಿನಾಂಕದವರೆಗೂ (ಜುಲೈ 8)  72 ಲಕ್ಷ 20 ಸಾವಿರ ಹೆಕ್ಟೇರ್‌ಗಳಲ್ಲಿ ಮಾತ್ರ ಭತ್ತದ ನಾಟಿ ಆಗಿದೆ. ಕಳೆದ 10 ವರ್ಷಗಳ ಇದೇ ದಿನಾಂಕದ ಸರಾಸರಿ ಬಿತ್ತನೆಗೆ ಹೋಲಿಸಿದಲ್ಲಿ ಈ ಬಾರಿಯ ಬಿತ್ತನೆ ತುಂಬಾ ಕಡಿಮೆ ಇದೆ.

ಉದಾಹರಣೆಗೆ, ಜುಲೈ 13, 2012 ರಲ್ಲಿ 96ಲಕ್ಷ 70ಸಾವಿರ ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿತ್ತು. ಆನಂತರ ವರ್ಷಗಳಲ್ಲಿ 80 ಲಕ್ಷ 90 ಸಾವಿರ ಹೆಕ್ಟೇರ್‌ಗಳಿಂದ ಹಿಡಿದು 1ಕೋಟಿ 25 ಲಕ್ಷ 70 ಸಾವಿರ ಹೆಕ್ಟೇರ್‌ಗಳವರೆಗೆ  ಬಿತ್ತನೆಯಾಗಿತ್ತು.

2021ಕ್ಕೆ ಹೋಲಿಸಿದಲ್ಲಿ ಈ ಬಾರಿ ಶೇ. 24ರಷ್ಟು ಬಿತ್ತನೆ ಕಡಿಮೆಯಾಗಿದೆ. ಪ್ರಾಥಮಿಕವಾಗಿ, ದೇಶಾದ್ಯಂತ  ಜೂನ್‌ ತಿಂಗಳಿನಲ್ಲಿ ಮುಂಗಾರು ಮಳೆಯ ಕೊರತೆ ತಲೆದೋರಿದ್ದು ಇದಕ್ಕೆ ಮೊದಲ ಕಾರಣ. ಜುಲೈ ತಿಂಗಳಿನಲ್ಲಿ ಈ ಬಿತ್ತನೆಯ ವೇಗ ಹೆಚ್ಚಾಗಿ, ತನ್ನ ಉದ್ದೇಶಿತ ಪ್ರಮಾಣಕ್ಕೆ ಬಿತ್ತನೆ ತಲುಪದೇ ಹೋದಲ್ಲಿ, ಅಕ್ಕಿಯೇ ಪ್ರಧಾನ ಆಹಾರ ಬೆಳೆಯಾಗಿರುವ ಈ ದೇಶದಲ್ಲಿ ಆಹಾರದ ಕೊರತೆ ತಲೆದೋರುವುದರಲ್ಲಿ ಸಂದೇಹವಿಲ್ಲ. ಇದು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೇಲೆ ಸಹ ಕೆಟ್ಟ ಪರಿಣಾಮ ಬೀರುವುದು ನಿಶ್ಚಿತ.

ಈಗಾಗಲೇ ಕಳೆದ ಮಾರ್ಚ್‌ ತಿಂಗಳಿನ ಬಿಸಿಲಿನ ಝಳದ ಕಾರಣದಿಂದ ಗೋಧಿ ಇಳುವರಿಯಲ್ಲಿ ಕೊರತೆಯಾಗಿರುವುದು ಪರಿಸ್ಥಿತಿಯನ್ನು ಹೆಚ್ಚು ಸಂಕೀರ್ಣಗೊಳಿಸಿದೆ. ಹಾಗಾಗಿಯೇ ಈ ಬಾರಿಯ ಸರ್ಕಾರದ ಗೋಧಿ ಸಂಗ್ರಹಣೆಯಲ್ಲಿ ದಾಖಲೆ ಕುಸಿತ ಕಂಡು ಬಂದಿದೆ. 2022-23ರ ಉದ್ದೇಶಿತ ಹಿಂಗಾರು ಸಂಗ್ರಹಣೆಯಲ್ಲಿ ಈ ಕೊರತೆಯ ಪ್ರಮಾಣ ಶೇ. 56.6 ಆಗಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013ರ ಅಡಿಯಲ್ಲಿ ಈಗಾಗಲೇ ಅನೇಕ ರಾಜ್ಯಗಳು ಕೊರತೆ ಬಿದ್ದಿರುವ ಗೋಧಿಯ ಜಾಗದಲ್ಲಿ ಅಕ್ಕಿಯನ್ನು ಸಂಗ್ರಹಿಸಲು ಯೋಜಿಸಿವೆ.

ಪರಿಸ್ಥಿತಿಯನ್ನು ಹತ್ತಿರದಿಂದ ಪರಿಶೀಲಿಸುತ್ತಿರುವ  ಆಹಾರ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸಚಿವಾಲಯ ಭತ್ತದ ಬಿತ್ತನೆಗೆ ಹೆಚ್ಚು ಪ್ರೋತ್ಸಾಹಿಸುತ್ತಿರುವುದು ಕೊರತೆಯ ಸೂಚನೆಯಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ದೇಶದ ಭತ್ತದ ಕಣಜಗಳೆಂದೇ ಹೆಸರಾದ ಪಂಜಾಬ್‌, ಹರಿಯಾಣ, ಬಿಹಾರ್‌, ಒಡಿಸ್ಸಾ ಮತ್ತು ಛತ್ತೀಸ್‌ಘಡಗಳಲ್ಲಿ ಭತ್ತ ಬಿತ್ತನೆಯ ಪ್ರಮಾಣ ತುಂಬಾ ಕಡಿಮೆ ಇರುವುದು ಹೊರ ನೋಟದಲ್ಲೇ ವೇದ್ಯವಾಗುತ್ತಿದೆ.

ಈ ಮುಂಗಾರಿನ  ಮುಖ್ಯ ಬೆಳೆಗಳಾದ ಭತ್ತ, ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳು, ಒರಟು ಧಾನ್ಯಗಳು, ಕಬ್ಬು, ಹತ್ತಿ ಮತ್ತು ಸೆಣಬನ್ನೂ ಒಳಗೊಂಡಂತೆ ಇದೇ ಜೂನ್‌ 8ಕ್ಕೆ ಕೊನೆಯಾದಂತೆ 62 ಲಕ್ಷ 92 ಸಾವಿರ ಹೆಕ್ಟೇರುಗಳಲ್ಲಿ ಮಾತ್ರ ಬಿತ್ತನೆಯಾಗಿವೆ. ಇದು ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದಲ್ಲಿ ಶೇ. 16 ಕಡಿಮೆ ಇದೆ.

ಈ ಮುಂಗಾರು ಬಿತ್ತನೆಯಲ್ಲಿ ಜೋಳ, ಮುಸುಕಿನ ಜೋಳ, ನವಣೆ, ರಾಗಿಯೇ ಮೊದಲಾದ ಒರಟು ಧಾನ್ಯಗಳು ಈ ಬಾರಿ ತೀವ್ರ ಕುಸಿತ ಕಂಡಿವೆ. 2021ಕ್ಕೆ ಹೋಲಿಸಿದಲ್ಲಿ ಇವುಗಳ ಕೊರತೆಯ ಪ್ರಮಾಣ  ಶೇ. 76.43 ಇದೆ ಎಂದು ಇಲಾಖೆಯ ದತ್ತಾಂಶಗಳು ಹೇಳುತ್ತಿವೆ.

ಸಾಮಾನ್ಯವಾಗಿ ಜೂನ್‌ ತಿಂಗಳ ಅಂತ್ಯದ ವೇಳೆಗೆ ಬಹುಪಾಲು ಬಿತ್ತನೆ ಮುಗಿದು ಹೋಗಿರುತ್ತಿತ್ತು. ಆದರೆ ಈ ಬಾರಿ ಆ ಅವಧಿಯ ಹೊತ್ತಿಗಾಗಲೇ ಶೇ. 8 ಕಡಿಮೆಯಾಗಿತ್ತು. 18 ರಾಜ್ಯಗಳಲ್ಲಿ ಸಂಭವಿಸಿರುವ ಈ ಬಿತ್ತನೆ ಕೊರತೆಗೆ ಬಹುಪಾಲು ಮುಂಗಾರು ಮಳೆಯ ಕೊರತೆಯೇ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಈ ಬಾರಿ ಭಾರತದ ದಕ್ಷಿಣ ಪರ್ಯಾಯ ದ್ವೀಪ, ಪೂರ್ವ ಮತ್ತು ಈಶಾನ್ಯ ಭಾಗಗಳು, ಮಧ್ಯ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಮುಂಗಾರು ಮಳೆ ಬಹುಪಾಲು ಕೈಕೊಟ್ಟಿದೆ.

ದಕ್ಷಿಣ, ಪೂರ್ವ ಮತ್ತು ಮಧ್ಯ ಭಾರತಗಳ ಬಹುತೇಕ ರೈತರು ಅತ್ಯಂತ ಸಣ್ಣ ಹಿಡುವಳಿಗಳನ್ನು ಹೊಂದಿರುವ ಬಡಜನರಾಗಿದ್ದಾರೆ. ಒಂದು ಸಾರಿ ಬಿತ್ತನೆ ವಿಫಲವಾದಲ್ಲಿ ಮತ್ತೊಮ್ಮೆ ಬಿತ್ತನೆ ಮಾಡುವ ಚೈತನ್ಯ ಅವರಲ್ಲಿಲ್ಲ.

ಸಮೀಕ್ಷೆಯ ಪ್ರಕಾರ ಮಧ್ಯ ಪ್ರದೇಶ, ಜಾರ್ಖಂಡ್‌, ಮಹಾರಾಷ್ಟ್ರ, ಕರ್ನಾಟಕ, ಒಡಿಸ್ಸಾ  ಮತ್ತು ಛತ್ತೀಸ್‌ಗಡದ ರೈತರು ಈ ಮಳೆ ಮತ್ತು ಬಿತ್ತನೆಯ ಸಮಸ್ಯೆಗಳಿಂದಾಗಿ ತೀವ್ರ ನಷ್ಟದಲ್ಲಿದ್ದಾರೆ ಎಂದು ಹೇಳಲಾಗಿದೆ.

ಜುಲೈ 8ರ ವರೆಗಿನ ಮುಂಗಾರು ಮಳೆಯ ಪ್ರಮಾಣ ಕನಿಷ್ಟ ಎಂಟು ರಾಜ್ಯಗಳನ್ನು ಕಾಡುತ್ತಿದೆ. ಇದರಲ್ಲಿ ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ, ಒಡಿಸ್ಸಾ ಮತ್ತು ಕೇರಳ ರಾಜ್ಯಗಳೂ ಸೇರಿವೆ. ಜುಲೈ ಅಂತ್ಯದ ಒಳಗೆ ವಾಡಿಕೆಯಂತೆ ಬಾಕಿ ಇರುವ ಮಳೆ ಬಾರದೇ ಹೋದಲ್ಲಿ ದೇಶ ಆಹಾರ ಭದ್ರತೆಗೆ ಸಂಬಂಧಿಸಿದಂತೆ ಕಠಿಣ ಪರಿಸ್ಥಿತಿಯನ್ನು ಎದುರಿಸುವುದು ನಿಶ್ಚಿತ ಎಂದು ತಜ್ಞರು ಅನುಮಾನಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್