ಮಹಾರಾಷ್ಟ್ರದಲ್ಲಿ ಕುಂಭದ್ರೋಣ ಮಳೆ: ರೈತರ ಆತ್ಮಹತ್ಯೆಗಳ ಪ್ರವಾಹ

ಮಹಾರಾಷ್ಟ್ರದಲ್ಲಿ ಕುಂಭದ್ರೋಣ ಮಳೆ: ರೈತರ ಆತ್ಮಹತ್ಯೆಗಳ ಪ್ರವಾಹ
  • ಜನವರಿ 1, 2022ರಿಂದ ಆಗಸ್ಟ್‌ 15ರವರೆಗೆ ಮರಾಠವಾಡ ಪ್ರದೇಶವೊಂದರಲ್ಲೇ 600 ರೈತರ ಆತ್ಮಹತ್ಯೆ
  • ಮರಾಠವಾಡ, ನಾಂದೇಡ್‌ ಮತ್ತು ಹಿಂಗೋಲಿ ಜಿಲ್ಲೆಗಳಲ್ಲಿ 796,218 ಹೆಕ್ಟೇರ್‌ ಬೆಳೆ ನಾಶವಾಗಿದೆ

ಕರ್ನಾಟಕದ ಯಾದಗಿರಿಯೇ ಮೊದಲಾದ ಹಲವು ಜಿಲ್ಲೆಗಳಲ್ಲಿ ಜುಲೈ ತಿಂಗಳ ಅತಿರೇಕದ ಮಳೆಯಿಂದಾಗಿ ಅಪಾರ ಬೆಳೆಗಳು ನಾಶವಾದ ವಿಚಾರವನ್ನು ಮರೆಯುವ ಮುನ್ನವೇ ಮಹಾರಾಷ್ಟ್ರದಿಂದ ರೈತರ ಆತ್ಮಹತ್ಯೆಗಳ ಮಹಾಪೂರವೇ ಹರಿದು ಬರುತ್ತಿದೆ.

ಜನವರಿ 1, 2022ರಿಂದ ಆಗಸ್ಟ್‌ 15ರವರೆಗೆ ಮರಾಠವಾಡ ಪ್ರದೇಶವೊಂದರಲ್ಲೇ 600 ರೈತರು ಆತ್ಮಹತ್ಯೆಗೆ ಶರಣಾಗಿರುವ ವರದಿ ದೇಶವನ್ನು ಬೆಚ್ಚಿಬೀಳಿಸಿದೆ. ಮರಾಠವಾಡ ಡಿವಿಷನಲ್ ಕಮಿಷನರ್‌ ನೀಡಿರುವ ಅಂಕಿ ಅಂಶಗಳ ಪ್ರಕಾರ ಜುಲೈ 1ನೇ ತಾರೀಖಿನವರೆಗೆ 547 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಾದ ನಂತರದ 15 ದಿನಗಳಲ್ಲಿ ಮತ್ತೆ 37 ಆತ್ಮಹತ್ಯೆಗಳು ಸಂಭವಿಸಿವೆ. 

ಮರಾಠವಾಡದ ಬಹುಪಾಲು ಪ್ರದೇಶವನ್ನು ಒಳಗೊಳ್ಳುವ ಔರಂಗಾಬಾದ್ ವಿಭಾಗವೊಂದರಲ್ಲಿಯೇ 2021ರ 12 ತಿಂಗಳುಗಳಲ್ಲಿ 805 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದರು.

ಮುಖ್ಯವಾಗಿ ಜುಲೈ 11 ಮತ್ತು 12 ರಂದು ಸುರಿದ ಕುಂಭದ್ರೋಣ ಮಳೆ ಮರಾಠವಾಡದ 24 ಜಿಲ್ಲೆಗಳ ಒಂದು ಲಕ್ಷ ರೈತರನ್ನು ಕಂಗಾಲು ಮಾಡಿತ್ತು. ಇಲ್ಲಿನ ತೊಗರಿ, ಮುಸುಕಿನ ಜೋಳ, ಸೋಯಾಬೀನ್‌, ಹತ್ತಿ ಮತ್ತು ಬಾಳೆ ಬೆಳೆಗಳು ಇನ್ನಿಲ್ಲದಂತೆ ನೆಲಕಚ್ಚಿ ನಾಶವಾಗಿದ್ದವು.

"ಅಂಕುಶ್ 28ವರ್ಷ ವಯಸ್ಸಿನ ಯುವ ರೈತ. ಇವನಿಗೆ 4.5ಎಕರೆ ಭೂಮಿ ಇತ್ತು. ಇದಕ್ಕೆಲ್ಲಾ ಹತ್ತಿ ಬಿತ್ತಿದ್ದ. ಸಕಾಲದಲ್ಲಿ ಬ್ಯಾಂಕ್‌ ಸಾಲ ಸಿಗದೇ ಹೋದ ಕಾರಣ ಬಿತ್ತನೆಗಾಗಿ 2 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ. ಆದರೆ, ಮಧ್ಯ ಜುಲೈನಲ್ಲಿ ಅಮರಿಕೊಂಡ ಮಳೆಯಲ್ಲಿ ಇಡೀ ಬಿತ್ತನೆ ನಾಶವಾಗಿ ಹೋಯಿತು."

"ಬಡವರ ಕೈಗೆ ಸಿಗದಷ್ಟು ಹೆಚ್ಚಿರುವ ದಿನಬಳಕೆಯ ವಸ್ತುಗಳನ್ನು ಸಹ ಖರೀದಿಸಲಾಗದೇ ಕಂಗಾಲಾಗಿದ್ದ. ಮನೆಯನ್ನು ನಡೆಸುವುದು ಸಹ ಅವನಿಗೆ ಕಷ್ಟವಾಗಿತ್ತು. ಆಗಾಗ ಹೇಳುತ್ತಿದ್ದ, ʼಇನ್ನು ನನ್ನಿಂದ ಆಗುವುದಿಲ್ಲ. ಮತ್ತೆ ಬಿತ್ತನೆ ಮಾಡುವ ಸಾಮರ್ಥ್ಯ ನನಗಿಲ್ಲ. ಈಗಿರುವ ಸಾಲ ತೀರಿಸಲು ನನಗೆ ಬೇರೆ ದಾರಿಗಳೇ ಇಲ್ಲ. ಈ ಬದುಕೇ ಬೇಡ ಅನ್ನಿಸುತ್ತಿದೆʼ ಎಂದು. ಹೀಗಾಗಿ ಇಂಥ ಅತಿರೇಕದ ನಿರ್ಧಾರಕ್ಕೆ ಹೋಗಿದ್ದಾನೆ. ಇಂದು ಅವನಿಲ್ಲ, ಕುಟುಂಬ ಅನಾಥವಾಗಿದೆ” ಈ ಮಾತುಗಳನ್ನು ಹೇಳಿದ್ದು ಅವನ ಸಮೀಪ ಸಂಬಂಧಿ ಮಧುಕರ್‌ ಜಾಧವ್.

8 ಲಕ್ಷ ಹೆಕ್ಟೇರ್‌ ಬೆಳೆ ನಾಶ

ಮರಾಠವಾಡ ಮತ್ತು ವಿದರ್ಭ ಪ್ರಾಂತ್ಯಗಳಲ್ಲಿ ಜುಲೈ 11 ಮತ್ತು 12ರ ಮಳೆಯ ನಂತರ ಮಾಡಲಾದ ಸಮೀಕ್ಷೆಯ ವರದಿಯನ್ನು 21ರಂದು ಬಿಡುಗಡೆ ಮಾಡಲಾಗಿತ್ತು. ಅದರ ಪ್ರಕಾರ ಸುಮಾರು 796,218 ಹೆಕ್ಟೇರ್‌ ಬೆಳೆ ನಾಶವಾಗಿದೆ ಎಂದು ಹೇಳಲಾಗಿತ್ತು. ಇದರಲ್ಲಿ ಅರ್ಧಭಾಗ ಮರಾಠವಾಡ ಪ್ರದೇಶದ್ದಾದರೆ, ಉಳಿದ ಅರ್ಧ ಭಾಗ ನಾಂದೇಡ್‌ ಮತ್ತು ಹಿಂಗೋಲಿ ಜಿಲ್ಲೆಗಳದ್ದಾಗಿತ್ತು.

"ನನ್ನ ಒಂದೇ ರೆವಿನ್ಯೂ ವಿಭಾಗದಲ್ಲಿ 377,870 ಹೆಕ್ಟೇರ್‌ ಬೆಳೆ ನಾಶವಾಗಿದೆ, ಸುಮಾರು ಒಂದು ಲಕ್ಷ ರೈತರು ಹಾನಿಗೀಡಾಗಿದ್ದಾರೆ" ಎಂದು ಮರಾಠವಾಡ ಜಿಲ್ಲಾ ಕೃಷಿ ಆಧಿಕಾರಿ ಹೇಳಿದ್ದಾರೆ.

ತಪ್ಪು ಹವಾಮಾನದ್ದಲ್ಲ, ಸರ್ಕಾರದ್ದು!

“ಕೆಲವು ತಿಂಗಳುಗಳಿಂದ ರೈತರ ಆತ್ಮಹತ್ಯೆಗಳು ತೀವ್ರವಾಗಿ ಹೆಚ್ಚುತ್ತಿವೆ. ಜುಲೈ ತಿಂಗಳ ಮಳೆ ಬಿತ್ತಿದ್ದ ಬೆಳೆಗಳನ್ನೆಲ್ಲಾ ತೊಳೆದುಕೊಂಡು ಹೋಗಿದೆ” ಎಂಬುದು ಶೇತ್ಕರಿ ಸಂಘಟನೆಯ ಮರಾಠವಾಡ ಪ್ರದೇಶ ಅಧ್ಯಕ್ಷ ಕೈಲಾಶ್‌ ತವಾರ್‌ ಅವರ ಮಾತು. 

"ಇದಕ್ಕೆಲ್ಲಾ ಸರ್ಕಾರವೇ ಹೊಣೆ, ಹವಾಮಾನ ವೈಪರೀತ್ಯವಲ್ಲ. ಕನಿಷ್ಠ ಬೆಂಬಲ ಬೆಲೆಯನ್ನು ನಿರ್ಧರಿಸಲಾಗದ ಸರ್ಕಾರ ರೈತರನ್ನು ಬಲಿ ತಗೆದುಕೊಳ್ಳುತ್ತಿದೆ. ಕಳೆದ ಹಂಗಾಮಿನಲ್ಲಿ ಹೆಸರು ಕಾಳಿನ ಬೆಂಬಲ ಬೆಲೆಯನ್ನು ₹6,500 ಎಂದು ಹೇಳಿತ್ತು. ಆದರೆ, ಅದು ಖರೀದಿ ಮಾಡಿದ್ದು ಕೇವಲ 4,000 ರೂಪಾಯಿಗಳಿಗೆ. ಇದು ಎಲ್ಲ ರೈತ ಉತ್ಪಾದನೆಗಳ ಕಥೆ. ಕನಿಷ್ಠ ಉತ್ಪಾದನಾ ವೆಚ್ಚವನ್ನು ಸಹ ಸರ್ಕಾರ ನೀಡದೇ ಹೋದಲ್ಲಿ ರೈತ ಮತ್ತೇನು ಮಾಡಬಲ್ಲ ಹೇಳಿ?" ಎಂದು ಕೇಳುತ್ತಾರೆ ತವಾರ್.

ಈ ಸುದ್ದಿ ಓದಿದ್ದೀರಾ? : ಹತಾಶೆಯಿಂದ ಸಾವಿಗೆ ಶರಣಾಗುತ್ತಿರುವ ಈ ರೈತನಿಗೆಲ್ಲಿದೆ ಸ್ವಾತಂತ್ರ್ಯ?

ಮುಂದುವರೆದು, "ಅರ್ಜಿ ಹಾಕಿ ತಿಂಗಳುಗಳಾದರೂ ಬ್ಯಾಂಕುಗಳು ಸಾಲ ಬಿಡುಗಡೆ ಮಾಡುವುದಿಲ್ಲ. ಬಿತ್ತನೆ ಕಾಲ ಮುಗಿದು ಹೋಗುವ ಭೀತಿಯಲ್ಲಿ ರೈತರು ಲೇವಾದೇವಿಗಾರರ ಬಳಿ ಕೈಸಾಲ ಮಾಡುತ್ತಾರೆ. ಅವರ ಬಡ್ಡಿ ದರ ಶೇ. 60ರವರೆಗೆ ಇದೆ. ಬಿತ್ತನೆ ಕಾಲ ಮುಗಿದ ನಂತರ ಬ್ಯಾಂಕಿನಿಂದ ಸಾಲ ಬಿಡುಗಡೆಯಾದರೆ, ಆ ದುಡ್ಡಿನಲ್ಲಿ ಲೇವಾದೇವಿಗಾರರ ಬಡ್ಡಿ ಮಾತ್ರ ಕೊಡಲು ಸಾಧ್ಯವಾಗುತ್ತದೆ. ಅತ್ತ ಆ ಕೈಸಾಲದ ಅಸಲೂ ಅಲ್ಲೇ, ಇತ್ತ ಬ್ಯಾಂಕಿನ ಸಾಲವೂ ಇಲ್ಲೇ!  ಇಂಥ ಸ್ಥಿತಿಯಲ್ಲಿ ರೈತನ ಸ್ಥಿತಿ ಏನಾಗಬಹುದು ಚಿಂತಿಸಿ" ಎಂದು ತವಾರ್‌ ನಮಗೇ ಮರುಪ್ರಶ್ನೆ ಹಾಕುತ್ತಾರೆ.

ಸ್ವಾಮಿವಾಥನ್‌ ವರದಿಯಲ್ಲಿ ರೈತರ ಆತ್ಮಹತ್ಯೆಗಳ ಭವಿಷ್ಯ ನುಡಿಯಲಾಗಿದೆ.

“1990ರಿಂದಲೂ ಈ ಆತ್ಮಹತ್ಯೆಗಳ ಸರಣಿ ಮುಂದುವರಿಯುತ್ತಲೇ ಇದೆ” ಎಂದು ಇನ್ನೊಬ್ಬ ರೈತನಾಯಕರಾದ ಅಮರ್‌ ಹಬೀಬ್‌ ಹೇಳುತ್ತಾರೆ.

“ಅತಿ ಮಳೆ ಇಲ್ಲವೇ ಬರ, ಆಲಿಕಲ್ಲು ದಾಳಿ ಇತ್ಯಾದಿಗಳು ರೈತರನ್ನು ಹೈರಾಣಾಗಿಸುತ್ತವೆ. ಬೆಳೆಗಳು ನಾಶವಾಗಿ, ರೈತರನ್ನು ದಿಕ್ಕೆಡಿಸುತ್ತಿವೆ. ಇಂಥ ದಿಕ್ಕೆಟ್ಟ ರೈತನ ಮುಂದೆ ಸಾವು ಬಂದು ನಿಲ್ಲುತ್ತದೆ. ಈ ಸಾವುಗಳಿಗೆ ನಿಸರ್ಗ ಮಾತ್ರ ಕಾರಣ ಅಲ್ಲ. ಸಾವನ್ನು ಎದುರಿಸಿ ನಿಲ್ಲುವಂತಹ ನೈತಿಕ ಬೆಂಬಲ ನೀಡುವ ಕ್ರಮ ನಮ್ಮ ಸರ್ಕಾದ ನೀತಿಯಲ್ಲಿಯೇ ಇಲ್ಲ. ಪ್ರತಿಯಾಗಿ ಸರ್ಕಾರದ ಎಲ್ಲ ನೀತಿಗಳೂ ರೈತರನ್ನು ಆತ್ಮಹತ್ಯೆಯ ಕಡೆಗೆ ದೂಡುವುದಕ್ಕೆ ಮಾತ್ರ ಲಾಯಕ್ಕಾಗವೆ” ಎನ್ನುತ್ತಾರೆ ಹಬೀಬ್.

“ಸ್ವಾಮಿನಾಥನ್‌ ವರದಿಯಲ್ಲಿ ಈ ಸಣ್ಣ, ಅತಿಸಣ್ಣ ರೈತರ ಆತ್ಮಹತ್ಯೆಗಳ ಬಗ್ಗೆ ಈಗಾಗಲೇ ಭವಿಷ್ಯ ನುಡಿಯಲಾಗಿದೆ. ಆ ವರದಿಯನ್ನು ಜಾರಿ ಮಾಡಲು ಸಿದ್ಧರಿಲ್ಲದ ಸರ್ಕಾರಗಳು ರೈತರ ಆತ್ಮಹತ್ಯೆಗಳ ಬಗ್ಗೆ ಮೊಸಳೆ ಕಣ್ಣೀರಿಡುತ್ತಿವೆ” ಎನ್ನುತ್ತಾರೆ ಅವರು.

“ಮಹಾರಾಷ್ಟ್ರ ಭೂಮಿತಿ ಕಾಯ್ದೆ 1961ಕ್ಕೆ ತಿದ್ದುಪಡಿ ತರುವ ಅಗತ್ಯವಿದೆ. ಇದರಿಂದಾಗಿ ರೈತರು ಬೇರೆ ದಾರಿಗಳಿಂದ ಸಹ ಗಳಿಸಬಹುದಾಗಿದೆ. ಇದಕ್ಕಿಂತ ಮುಖ್ಯವಾಗಿ ಸರ್ಕಾರ ರೈತರ ಉತ್ಪನ್ನಗಳಿಗೆ ಕಾಲಕಾಲಕ್ಕೆ ನ್ಯಾಯವಾದ  ದರ ನಿಗದಿ ಮಾಡುವ ಕಾನೂನು ಮಾಡಬೇಕಿದೆ. ಆಮದು ಮತ್ತು ರಫ್ತು ನೀತಿಗಳು ಸಣ್ಣ ರೈತರ ಹಿತಕಾಯುವಂತೆ ರೂಪಿಸಬೇಕಿದೆ” ಎನ್ನುವುದು ಅವರ ಒತ್ತಾಯ. 

“ಇವೆಲ್ಲ ಆಗದೇ ರೈತರ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಅಲ್ಲದೇ, ರೈತರ ಆತ್ಮಹತ್ಯೆಗಳನ್ನೂ ತಡೆಯಲಾಗದು” ಎಂದು ಹಬೀಬ್‌ ಅಭಿಪ್ರಾಯ ಪಡುತ್ತಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180