ನರಗುಂದ ಬಂಡಾಯ: ಕರ್ನಾಟಕದ ಚರಿತ್ರೆಗೆ ತಿರುವು ನೀಡಿದ ಕರಾಳ ಘಟನೆ

1980ರ ಜುಲೈ 21 ನರಗುಂದ ರೈತ ಬಂಡಾಯದ ದಿನ. ಅವತ್ತು ನರಗುಂದದಲ್ಲಿ ನಡೆದ ಘಟನೆ ಮುಂದೆ ಕರ್ನಾಟಕದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ರಂಗಗಳಲ್ಲಿ ಬಹಳ ದೊಡ್ಡ ಬದಲಾವಣೆಗಳಿಗೆ ಕಾರಣವಾಯಿತು. ಇವತ್ತು ಕರ್ನಾಟಕ ರಾಜ್ಯ ರೈತ ಸಂಘವು ಹಲವು ಪ್ರಗತಿಪರ ಸಂಘಟನೆಗಳೊಂದಿಗೆ ಸೇರಿ ನರಗುಂದದಲ್ಲಿ ಹುತಾತ್ಮ ದಿನಾಚರಣೆ ಮತ್ತು ಬೃಹತ್ ರೈತ ಸಮಾವೇಶ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ನರಗುಂದ ರೈತ ಬಂಡಾಯಕ್ಕೆ ಕಾರಣವಾದ ಅಂಶಗಳನ್ನು ಮತ್ತು ಅಂದಿನ ವಿದ್ಯಮಾನಗಳನ್ನು ವಿವರಿಸುವ ಲೇಖನ ಇಲ್ಲಿದೆ.
ನರಗುಂದ ಬಂಡಾಯ: ಬಹು ಪೌಷ್ಠಿಕಾಂಶಗಳ ಒಂದು ಕರಾಳ ನೆನಪು

ಸ್ವಾತಂತ್ರ್ಯಪೂರ್ವದ ಚರಿತ್ರೆಯನ್ನು ಕೆದಕಿದರೆ ಸಾಮ್ರಾಜ್ಯಶಾಹಿಯ ವಿರುದ್ಧ ಬಂಡೆದ್ದ ಹಲವು ಊರು, ಪಟ್ಟಣ, ನಗರಗಳು ನಮ್ಮ ಗಮನ ಸೆಳೆಯುತ್ತವೆ. ಆದರೆ, ಸ್ವಾತಂತ್ರ್ಯಾನಂತರದಲ್ಲೂ ತಾವೇ ಆಯ್ಕೆ ಮಾಡಿದ ಸರ್ಕಾರಗಳ ನಿರ್ದಯತೆ ವಿರುದ್ಧ ಬಂಡಾಯದ ಕಿಡಿಯನ್ನು ಚೆಲ್ಲಿದ ಹೆಚ್ಚು ಊರುಗಳು ನಮಗೆ ಕಾಣುವುದಿಲ್ಲ. ಅಂಥದ್ದೊಂದು ದಿಢೀರ್ ಗಮನ ಸೆಳೆಯುವ ಊರೊಂದು ಕರ್ನಾಟಕದಲ್ಲಿದ್ದರೆ ಅದರ ಹೆಸರು: ನರಗುಂದ. 

“ಬಂಡಾಯ”ದ ಲೇಬಲ್ ಅನ್ನು ಶಾಶ್ವತವಾಗಿ ಅಂಟಿಸಿಕೊಂಡಿರುವ ಈ ಪಟ್ಟಣ ಹಿಂದೊಮ್ಮೆ ಧಾರವಾಡ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರವಾಗಿತ್ತು. ಈಗ ಗದಗ ಜಿಲ್ಲೆಯ ಭಾಗವಾಗಿದೆ. ಈ ನರಗುಂದ ಹೆಸರಿನಲ್ಲಿ ಹುಡುಕಿದರೆ ನಮಗೆ ಎರಡು ಬಂಡಾಯಗಳು ಕಾಣುತ್ತವೆ. ಒಂದು 1857ರ ನರಗುಂದ ಬಂಡಾಯ. ದಾದಾಜಿರಾಯನ ವಂಶದ ವಾರಸುದಾರ ಬಾಬಾಸಾಹೇಬನಿಗೆ ವಾರಸುದಾರರಿರಲಿಲ್ಲ. ದತ್ತು ಸ್ವೀಕಾರಕ್ಕೆ ಬ್ರಿಟಿಷರ ಅನುಮತಿ ಇರಲಿಲ್ಲ. ಬಾಬಾಸಾಹೇಬ ಇದನ್ನು ಪ್ರತಿಭಟಿಸಿ ಬಂಡೆದ್ದ. ಭಾರತದ 1857ರ ಬಂಡಾಯದಲ್ಲಿ ನರಗುಂದ ಪ್ರಧಾನ ಪಾತ್ರ ವಹಿಸಿತು. ಆಗ ಬ್ರಿಟಿಷರು ನಡೆಸಿದ ಆಕ್ರಮಣವನ್ನು ಇಲ್ಲಿಯ ಜನರು ರೋಷಾವೇಶದಿಂದಲೇ ಎದುರಿಸಿದರು. ಇದು ಸ್ವಾತಂತ್ರ್ಯಪೂರ್ವದ ಬಂಡಾಯ. ಇಲ್ಲಿ ತಾತ್ಕಾಲಿಕವಾಗಿ ಬಂಡಾಯಗಾರರು ಗೆಲುವನ್ನು ಸಾಧಿಸಿದರು. ಆದರೆ, 1858ರಲ್ಲಿ ಬ್ರಿಟಿಷರು ಬಾಬಾಸಾಹೇಬನನ್ನು ಮಣಿಸಿ ಕೋಟೆಯನ್ನು ಕೆಡವಿದರು.

ಅಷ್ಟಾಗಿ ದೇಶಕ್ಕೆ ಸ್ವಾತಂತ್ರ್ಯ ಬರಲು 90 ವರ್ಷಗಳೇ ಹಿಡಿದವು. ಇದಾದ 33 ವರ್ಷಗಳ ನಂತರ ಇಲ್ಲಿನ ಕಂಗೆಟ್ಟ ರೈತ ಸಮೂಹ ಮತ್ತೆ ತನ್ನದೇ ದೇಶೀಯರಿಂದ ನಡೆಸಲ್ಪಡುತ್ತಿದ್ದ ಸರ್ಕಾರದ ವಿರುದ್ಧ ಬಂಡೇಳುವ ಮೂಲಕ ನರಗುಂದದ ಬಂಡಾಯ ಪರಂಪರೆಯನ್ನು ರಕ್ತದಲ್ಲಿ ದಾಖಲಿಸಿದ್ದು ಮಾತ್ರ ಐತಿಹಾಸಿಕ ದುರಂತ.

1980ರವರೆಗೂ ಈ ಭೌಗೋಳಿಕ ಪ್ರದೇಶ ಒಣ ಬಯಲು ಸೀಮೆ. ಆದರೆ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ನೀರಿನ ಕೊರತೆಯನ್ನು ಗಮನಿಸಿ 70ರ ದಶಕದಲ್ಲಿ ಮಲಪ್ರಭ ನದಿಗೆ ನವಿಲು ತೀರ್ಥದಲ್ಲಿ ಜಲಾಶಯವನ್ನು ನಿರ್ಮಿಸಲಾಯಿತು. ಇದಾದ ನಂತರ ಅಲ್ಲಿನ ಸುತ್ತಮುತ್ತಲ ತಾಲ್ಲೂಕುಗಳು ನೀರಾವರಿ ಅಚ್ಚುಕಟ್ಟು ಪ್ರದೇಶಗಳಾದವು. 

Image
Gundu Rao

ಆವರೆಗೂ 5-6 ರೂಪಾಯಿ ಕಂದಾಯ ಕಟ್ಟಿಕೊಂಡು ಬದುಕಿದ್ದ ಭೂಮಿಗಳನ್ನು ಕರ್ನಾಟಕ ನೀರಾವರಿ ಕಾಯ್ದೆಯ ಅಡಿಗೆ ತರಲಾಯಿತು. 1957ರ ಈ ಮೂಲ ಕಾಯಿದೆಗೆ 1974ರಲ್ಲಿ ತಿದ್ದುಪಡಿ ಮಾಡಿ “ಬೆಟರ್‌ಮೆಂಟ್ ಲೆವಿ ಅಂಡ್ ವಾಟರ್ ರೇಟ್” ಎಂದು ಹೆಸರಿಸಲಾಗಿತ್ತು. ಇದರ ಪ್ರಕಾರ, ಶಾಶ್ವತ ಮೂಲದಿಂದ ನೀರಾವರಿ ಒದಗಿಸುವ ಪ್ರದೇಶಗಳಿಗೆ ತೆರಿಗೆ ವಿಧಿಸುವುದು ಕಡ್ಡಾಯವಾಗಿತ್ತು. ಹೊಸ ತಿದ್ದುಪಡಿ ನಿಗದಿಗೊಳಿಸಿದ್ದಂತೆ ಆ ತೆರಿಗೆ ಎಕರೆಗೆ 1,500 ರೂಪಾಯಿ ಆಗಿತ್ತು. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ಆಗ ಅಲ್ಲಿನ ಭೂಮಿಯ ಬೆಲೆ ಹೆಚ್ಚೆಂದರೆ 1,500 ರಿಂದ 2,000 ರೂಪಾಯಿಗಳಿದ್ದವು. ಈಗ ಯೋಚಿಸ ಬೇಕಾದ ಸಂಗತಿ ಎಂದರೆ, ಪ್ರತಿ ವರ್ಷ ಸರ್ಕಾರ ನಿಗದಿ ಮಾಡಿರುವ ತೆರಿಗೆ ಪಾವತಿಸುವುದರ ಅರ್ಥ, ಅವರದೇ ಜಮೀನನ್ನು ಅವರೇ ಮತ್ತೆ ಖರೀದಿ ಮಾಡಿದಂತಾಗುತ್ತಿತ್ತು.

ಈ ಸರ್ಕಾರಿ ಪವಾಡಗಳನ್ನೂ ಮೀರಿ, ಇಲ್ಲಿ ಇನ್ನೂ ಅನೇಕ ಕುಚೋದ್ಯಗಳು ಸಂಭವಿಸಿದ್ದವು. ಉದಾಹರಣೆಗೆ; ಅನೇಕರ ಜಮೀನುಗಳು ನೀರು ತುಂಬಿದ ಹೊಂಡಗಳಾದರೆ, ಮತ್ತೆ ಕೆಲವರ ಜಮೀನುಗಳಿಗೆ ನೀರೇ ತಲುಪುತ್ತಿರಲಿಲ್ಲ. ಇದು ನೀರಾವರಿ ಇಲಾಖೆಯ ಹಣ ಮಾಡುವ ಹುನ್ನಾರದ ಪರಿಣಾಮಗಳಾಗಿದ್ದವು. ಇವೆಲ್ಲದರ ಎಫೆಕ್ಟಿನಿಂದಾಗಿ ಮೊದಲೇ ನೀರಾವರಿ ಭೂಮಿಯ ನಿರ್ವಹಣೆಯ ಅರಿವಿಲ್ಲದ ಈ ಭಾಗದ ಬಹುತೇಕ ಭೂಮಿ ಸವಳು ಹಿಡಿಯಿತು. ಜೊತೆಗೆ ಆಕಾಶ ಮುಖಿಯಾಗಿದ್ದ ರಸಗೊಬ್ಬರಗಳ ಬೆಲೆ, ಇದನ್ನು ಆಧರಿಸಿ ಹಿಮಾಲಯವೇರಿದ್ದ ಬೀಜ ಮತ್ತು ಕೀಟನಾಶಕಗಳ ಬೆಲೆಗಳು ರೈತರನ್ನು ಹೈರಾಣಾಗಿಸಿದ್ದವು. ಆದರೂ, ಯಾರೂ ತೆರಿಗೆ ತಪ್ಪಿಸುವಂತಿರಲಿಲ್ಲ.  

ಆಗ ರಾಜ್ಯವನ್ನು ಗುಂಡೂರಾಯರು ಆಳುತ್ತಿದ್ದರೆ ದೇಶವನ್ನು ಇಂದಿರಾ ಗಾಂಧಿ ಅವರು ಅಳುತ್ತಿದ್ದರು. ಜಿಲ್ಲೆಯನ್ನು ಐಎಎಸ್ ಅಧಿಕಾರಿಗಳಾದ ರೇಣುಕಾ ವಿಶ್ವನಾಥ್ ಎಂಬ ಜಿಲ್ಲಾಧಿಕಾರಿ ಮತ್ತು ವಿಶೇಷ ಜಿಲ್ಲಾಧಿಕಾರಿ ವಿ. ಗೋವಿಂದರಾಜು ಆಳುತ್ತಿದ್ದರು. ಆಗ ಉಪವಿಭಾಗವಾಗಿದ್ದ ಗದಗ ಮುಂಡರಗಿ, ರೋಣ, ನರಗುಂದ ತಾಲ್ಲೂಕುಗಳನ್ನು ಒಳಗೊಂಡಿತ್ತು. ಈ ಉಪ ವಿಭಾಗವನ್ನು ಐ. ಎಂ. ವಿಠ್ಠಲಮೂರ್ತಿ ಎಂಬ ಅಧಿಕಾರಿ ಆಳುತ್ತಿದ್ದರು. ಇಂದಿಗೆ ಖ್ಯಾತ ಕಮ್ಯುನಿಸ್ಟ್ ನಾಯಕ ಜಿ. ಎನ್, ನಾಗರಾಜ್ ಅಂದಿಗೆ ನರಗುಂದ ತಾಲ್ಲೂಕು ಕೃಷಿ ಅಧಿಕಾರಿಯಾಗಿದ್ದರು.

Image
naragunda banadaya

ಈ ಎಲ್ಲರಿಗೂ ರೈತರು ಕಂಗಾಲಾಗಿರುವ ಸಂಗತಿಯ ಅರಿವಿತ್ತು. ಆದರೆ, ಗುಂಡೂರಾಯರಂತೆ ಅಧಿಕಾರಿಗಳೂ  ನಿರ್ದಯರಾಗಿದ್ದರು. ಕಾನೂನನ್ನು ಯಥಾವತ್ತಾಗಿ ಈಗಿಂದೀಗಲೇ ಅನುಷ್ಠಾನಗೊಳಿಸಿ ಕೀರ್ತಿ ಸಂಪಾದನೆಯ ಉಮೇದಿನಲ್ಲಿದ್ದರು. 

ಆದರೆ, ಈ ಬಂಡಾಯದ ಬಗ್ಗೆ ತಮ್ಮ ಅನುಭವವನ್ನು ದಾಖಲಿಸಿರುವ ಜಿ. ಎನ್, ನಾಗರಾಜ್ (ಜಿ.ಎನ್.ಎನ್.) ಬರೆಯುತ್ತಾ “ನರಗುಂದ ಮಲಪ್ರಭಾ ಅಣೆಕಟ್ಟಿನ ನೀರಾವರಿ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿತ್ತು. ನೆರೆಯ ನವಲಗುಂದ ಹಾಗೂ ಸವದತ್ತಿ ತಾಲ್ಲೂಕುಗಳ ಹೆಚ್ಚಿನ ಪ್ರದೇಶ, ರೋಣ, ರಾಮದುರ್ಗ ತಾಲ್ಲೂಕುಗಳ ಕೆಲವು ಗ್ರಾಮಗಳು ಇದೇ ನೀರಾವರಿ ಪ್ರದೇಶದ ಭಾಗವಾಗಿದ್ದವು. ಹೀಗಾಗಿ ಪಕ್ಕದ ನವಲಗುಂದ ತಾಲೂಕಿನಂತೆಯೇ ನರಗುಂದದ ರೈತರೂ ಸಮಸ್ಯೆಗಳನ್ನು ಅನುಭವಿಸುತ್ತಿದ್ದರು ಎಂದು ರೈತರೊಂದಿಗೆ ಮಾತನಾಡುವಾಗ ಮೇಲ್ನೋಟಕ್ಕೆ ಕಂಡಿತ್ತು” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ನರಗುಂದ ಬಂಡಾಯದ 42ನೇ ವರ್ಷಾಚರಣೆ: ಹುತಾತ್ಮರ ನೆಲದಲ್ಲಿ ಬೃಹತ್ ರೈತ ಸಮಾವೇಶ

ಮುಂದುವರೆದು, “ಮತ್ತೆ ಅಧಿಕಾರಕ್ಕೆ ಬಂದಿದ್ದ ಇಂದಿರಾಗಾಂಧಿ ಸರ್ಕಾರ ರಸಗೊಬ್ಬರಗಳ ಬೆಲೆ ಏರಿಸಿತ್ತು. ಇಲ್ಲಿಯ ರೈತರು ಬೆಳೆಯುತ್ತಿದ್ದ ಪ್ರಧಾನ ಬೆಳೆ ಹೈಬ್ರಿಡ್ ಹತ್ತಿಯ ವರಲಕ್ಷ್ಮಿ ಎಂಬ ತಳಿ. ಅದು ಬೇರೆ ಬೆಳೆಗಳಿಗಿಂತ ದೀರ್ಘ ಕಾಲದ ಬೆಳೆ ಹಾಗೂ ವಿಪರೀತ ಖರ್ಚಿನದು. ರಸಗೊಬ್ಬರಗಳ, ಅದಕ್ಕಿಂತ ಹೆಚ್ಚಾಗಿ ಕೀಟನಾಶಕಗಳ ವೆಚ್ಚ ಬಹಳ. ಆ ವರ್ಷ ಹತ್ತಿಯ ಬೆಲೆ ವಿಪರೀತ ಕುಸಿದು ಹೋಗಿತ್ತು. ಹಿಂದಿನ ವರ್ಷ ಒಂದು ಕ್ವಿಂಟಾಲಿಗೆ ಸಾವಿರ ರೂ ಇದ್ದರೆ ಈ ವರ್ಷ ಕೇವಲ ಮುನ್ನೂರೈವತ್ತು ರೂ ಇತ್ತು. ಇದರಿಂದ ಬೆಳೆಯ ಖರ್ಚಿನ ಅರ್ಧ ಕೂಡಾ ದಕ್ಕಲಿಲ್ಲ” ಎಂದು ಬರೆದಿದ್ದಾರೆ.

ಇದರ ಅರ್ಥ, ಅಲ್ಲಿಗಾಗಲೇ ರೈತ ಸಮುದಾಯ ರೋಸಿ, ಬಂಡಾಯದ ಧಗೆ ಹೊಗೆಯಾಡುತ್ತಿತ್ತು ಎಂದಾಗುತ್ತದೆ. ಆನಂತರದಲ್ಲಿ ಘಟನೆಗಳಿಗೆ ವೇಗ ಬಂದಿತ್ತು. ಅತೃಪ್ತ ರೈತರು ಸಂಘಟಿತರಾಗುತ್ತಾ ಹೋದರು. ಅಲ್ಲಲ್ಲಿ ನಡೆಯುತ್ತಿದ್ದ ಸಣ್ಣ ಸಭೆ, ಚರ್ಚೆಗಳು ಒಗ್ಗೂಡುತ್ತಾ ಅಂತಿಮವಾಗಿ “ನವಲಗುಂದ ತಾಲೂಕಿನಲ್ಲಿ ಆರಂಭವಾದ ಹೋರಾಟ ನೆರೆಯ ನರಗುಂದಕ್ಕೂ, ಸೌದತ್ತಿಗೂ ಹಬ್ಬಿತು. ನರಗುಂದದಲ್ಲಿ ತಹಸೀಲ್ದಾರ್ ಕಚೇರಿ ಮುಂದೆ ನಿತ್ಯ ಸತ್ಯಾಗ್ರಹ ಆರಂಭವಾಯಿತು. ಮೂರು ತಿಂಗಳಿಗೂ ಹೆಚ್ಚು  ಸತ್ಯಾಗ್ರಹ ನಡೆದರೂ ಸರ್ಕಾರ ಗಮನ ನೀಡಲಿಲ್ಲ” ಎನ್ನುತ್ತಾರೆ ಜಿ.ಎನ್.ಎನ್.

ಸರ್ಕಾರಿ ಹೊಡೆತಗಳಿಂದಾಗಿ ತತ್ತರಿಸಿ ಹೋಗಿದ್ದ ಜನಸಮೂಹದ ನಡುವೆ ಕಿಡಿಯೊಂದರ ಅಗತ್ಯವಿತ್ತು. ಅದು ಜನರ ಮನಸ್ಸುಗಳಿಗೆ ತಗುಲಿಯಾಗಿತ್ತು. 1980ರ ಜುಲೈ 21ರಂದು ಬೆಳಗ್ಗೆ ಹತ್ತಾರು ಸಾವಿರ ರೈತರು ನರಗುಂದದಲ್ಲಿ  ಸೇರಿದರು. ಅಂದಿಗೆ ಒಂದು ಗ್ರಾಮಾವಸ್ಥೆಯಲಿದ್ದ ನರಗುಂದಕ್ಕೆ ಈ ಸಂಖ್ಯೆ ಬಹಳ ದೊಡ್ಡದು. ಬಂದವರೇ ಸರ್ಕಾರಿ ಕಚೇರಿಗಳಿಗೆ ಬೀಗ ಹಾಕಿಸಿದರು. ಮೆರವಣಿಗೆ ತಾಲ್ಲೂಕು ಕಚೇರಿಯತ್ತ ಸಾಗಿತು. ಅಂತಿಮವಾಗಿ ಹತ್ತಾರು ಸಾವಿರ ರೈತರ ಸಾಗರವೇ ತಹಸೀಲ್ದಾರರ ಕಚೇರಿ ಆವರಣದಲ್ಲಿ ಜಮಾವಣೆಯಾಯಿತು.

ಈ ಸುದ್ದಿ ಓದಿದ್ದೀರಾ?: ನರಗುಂದ ರೈತ ಹುತಾತ್ಮ ದಿನಾಚರಣೆ: ರೈತರು ಮತ್ತು ಬಿಜೆಪಿಗರ ನಡುವೆ ಮಾತಿನ ಚಕಮಕಿ

ಕಚೇರಿಯಲ್ಲಿ ತಹಸೀಲ್ದಾರರು ಇರಲಿಲ್ಲ. ಆನಂತರ ಬಂದರು. ಅವರನ್ನು ಒಳಗೆ ಬಿಡಲಿಲ್ಲ. ತಹಸೀಲ್ದಾರ್ ಪಟ್ಟು ಹಿಡಿದರು, ರೈತರು ಒಪ್ಪಲಿಲ್ಲ. ತಹಸೀಲ್ದಾರ್ ಡಿಸಿಯನ್ನು ಸಂಪರ್ಕಿಸಿ, ಪೊಲೀಸರನ್ನು ಕರೆಸಿದರು. ಒಬ್ಬ ಡಿವೈಎಸ್ಪಿ ಮತ್ತು ಇನ್ಸ್‌ಪೆಕ್ಟರ್ ಬಂದರು. ರೈತರನ್ನು ಕೇಳಿದರು, ಹೆದರಿಸಿದರು, ಬೆದರಿಸಿದರು. ಅದರೆ, ರೈತರು ಒಪ್ಪಲಿಲ್ಲ. “ಹೋಗುವುದಿದ್ದರೆ ನಮ್ಮ ಮೇಲಿಂದ ನಡೆದುಕೊಂಡು ಹೋಗಿ” ಎಂದು ಅಡ್ಡ ಮಲಗಿದರು. ದುರದೃಷ್ಟವಶಾತ್, ತಹಸೀಲ್ದಾರರು ಅಕ್ಷರಶಃ ಹಾಗೇ ಮಾಡಿದರು. ಆ ನಡೆಯ ಮೂಲಕ ಕರ್ನಾಟಕದ ರಾಜಕೀಯ ಇತಿಹಾಸವನ್ನೇ ಬದಲಿಸಿಬಿಟ್ಟರು.

ತಹಸೀಲ್ದಾರರ ಆ ನಡೆ ಇನ್ನೂ ಮೆರವಣಿಗೆಯಲ್ಲಿದ್ದ ಅಸಂಖ್ಯಾತ ರೈತರನ್ನು ತಲುಪಿತು. ಮುಂದಿನದೆಲ್ಲಾ ಆಯೋಮಯ. ರೈತರ ಗುಂಪು ತಹಸೀಲ್ದಾರರ ಕಚೇರಿ ಹೊಕ್ಕಿತು. ಜೊತೆಯಲ್ಲಿದ್ದ ಡಿವೈಎಸ್ಪಿ ಮತ್ತು ಇನ್ಸ್‌ಪೆಕ್ಟರನ್ನೂ ಸೇರಿಸಿ ತಾರಾಮಾರಿ ಬಾರಿಸಿತು. ತಹಸೀಲ್ದಾರರ ಕಿವಿ ಹರಿದು ಹೋಯಿತು. ಪೊಲೀಸರ ತಲೆಗಳು ಒಡೆದವು. ರೈತರೆಲ್ಲರನ್ನು ಕಂಗಾಲಾಗಿಸಿದ್ದ ದಾಖಲೆಗಳನ್ನು ಕಂಡ ರೈತರು ಅವಕ್ಕೆ ಬೆಂಕಿ ಹಚ್ಚಿದರು. ಇಡೀ ತಹಸೀಲ್ದಾರರ ಕಚೇರಿ ಬೆಂಕಿಗಾಹುತಿಯಾಯಿತು.

ಈ ನಡುವೆ ಒಂದು ಆಚಾತುರ್ಯ ನಡೆಯಿತು. ರೈತರ ಆಕ್ರೋಶವನ್ನು ನಿಯಂತ್ರಿಸಲಾಗದ ಅಲ್ಲಿದ್ದ ಏಕೈಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಟೇಲ್ ಹಠಾತ್ತಾಗಿ ಗುಂಡು ಹಾರಿಸಿಬಿಟ್ಟರು. ಪ್ರತಿಭಟನೆಗೆ ಬಂದಿದ್ದ ಚಿಕ್ಕ ನರಗುಂದದ ಒಬ್ಬ ರೈತ ಸ್ಥಳದಲ್ಲೇ ನೆಲಕ್ಕುರುಳಿದ. ನಂತರದ ಕತೆ ಹೇಳತೀರದ್ದು. ತಾಲ್ಲೂಕು ಕೇಂದ್ರದಲ್ಲಿದ್ದ ಎಲ್ಲ ಕಚೇರಿಗಳೂ ಬೆಂಕಿಗೆ ಆಹುತಿಯಾದವು.

ಇದಾದ ನಂತರ ಏನಾಗಬಹುದೆಂದು ಯಾರಾದರೂ ಊಹಿಸಬಹುದು. ಅಹಂಕಾರಿ ಸರ್ಕಾರದ ಅವಿವೇಕಿ ಮುಖ್ಯಮಂತ್ರಿಯ ನಾಯಕತ್ವದಲ್ಲಿ ಬಂಡಾಯದ ಬೆಂಕಿ ಇಡೀ ರಾಜ್ಯವನ್ನು ಆವರಿಸಿತು. ಸಾವಿರಾರು ಜನ ರೈತರು ಭೂಗತರಾದರು, ಸಾವಿರಾರು ಜನ ರೈತರು ಕಣ್ಮರೆಯಾದರು, ನೂರಾರು ಜನ ಸಾವನ್ನಪ್ಪಿದರು. ತಿಂಗಳಾನುಗಟ್ಟಲೆ ರಾಜ್ಯ ಹೊತ್ತಿ ಉರಿಯಿತು.

ಆದರೆ, ಆ ಬಂಡಾಯ ಕರ್ನಾಟಕದ ಭವಿಷ್ಯವನ್ನೇ ಬದಲಿಸಿ ಬಿಟ್ಟಿತು.      

ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಕಾಲಿಟ್ಟಿತು. ಗುಂಡೂರಾವ್ ರಾಜಕೀಯ ಜೀವನವನ್ನೇ ಕಳೆದುಕೊಂಡರು. ಪ್ರಾಂತ ರೈತ ಸಂಘ ಕರ್ನಾಟಕ ರಾಜ್ಯ ರೈತಸಂಘವಾಗಿ ಬೆಳೆಯಿತು. ಪ್ರೊ. ಎಂ.ಡಿ. ನಂಜುಂಡಸ್ವಾಮಿ, ಸುಂದರೇಶ್ ಮುಂತಾದ ರೈತ ನಾಯಕರು ಮುಂಚೂಣಿಗೆ ಬಂದರು. ದಶಕಗಳ ಕಾಲ ರೈತರು ಸರ್ಕಾರಗಳನ್ನು ನಿಯಂತ್ರಿಸುವ ಸ್ಥಿತಿ ತಲುಪಿದರು. ಮುಂದಿನ ಮತ್ತು ಈ ಬಂಡಾಯದ ಆನುಷಂಗಿಕ ಬೆಳವಣಿಗೆಗಳು ಕರ್ನಾಟಕದ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಚರಿತ್ರೆಯನ್ನು ರೂಪಿಸಿದ ನಿರ್ಣಾಯಕ ಅಂಶಗಳಾದವು.

ನಿಮಗೆ ಏನು ಅನ್ನಿಸ್ತು?
2 ವೋಟ್