ನರಗುಂದ ಬಂಡಾಯದ 42ನೇ ವರ್ಷಾಚರಣೆ: ಹುತಾತ್ಮರ ನೆಲದಲ್ಲಿ ಬೃಹತ್ ರೈತ ಸಮಾವೇಶ

ನರಗುಂದದ ಬಂಡಾಯದ 42ನೇ ವರ್ಷಾಚರಣೆಯ ನೆನಪು:
  • 42ನೇ ರೈತ ಹುತಾತ್ಮ ದಿನಾಚರಣೆ ಮತ್ತು ಬೃಹತ್ ರೈತ ಸಮಾವೇಶ
  • ಎಸ್‌ಕೆಎಂ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರಿಂದ ಚಾಲನೆ

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರೈತಸೇನಾ-ಕರ್ನಾಟಕ ಜಂಟಿ ಸಹಯೋಗದಲ್ಲಿ 42ನೇ ರೈತ ಹುತಾತ್ಮ ದಿನಾಚರಣೆ ಮತ್ತು ಬೃಹತ್ ರೈತ ಸಮಾವೇಶವನ್ನು ದಿನಾಂಕ: 21-7-2022 ರಂದು ಗದಗ ಜಿಲ್ಲೆಯ ನರಗುಂದದಲ್ಲಿ ಆಯೋಜಿಸಲಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ಸಂಚಾಲಕ ಪ್ರೊ. ಯೋಗೇಂದ್ರ ಯಾದವ್ ಬೆಳಗ್ಗೆ 11ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ರೈತ ಸಂಘ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯದ ರೈತ ಚಳವಳಿಯ ಇತಿಹಾಸದಲ್ಲಿ ಮೈಲಿಗಲ್ಲಾಗಿ ನಿಂತಿರುವ ಮತ್ತು ಕೃಷಿ ವಲಯವೂ ಸೇರಿದಂತೆ ನಾಡಿನ ಚಳವಳಿ, ಸಾಮಾಜಿಕ, ಆರ್ಥಿಕ ವಲಯಗಳಲ್ಲಿ ಮಹತ್ತರ ಬದಲಾವಣೆಗಳಿಗೆ ಕಾರಣೀಭೂತವಾದ ನರಗುಂದ ಬಂಡಾಯದ 42ನೇ ವರ್ಷಾಚರಣೆಯ ನೆನಪಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ರಾಜ್ಯ ರೈತ ಸಂಘ ಹೇಳಿದೆ.

ಇದು ಕೇವಲ ನಾಮಮಾತ್ರದ ಸಮಾವೇಶವಾಗಿರದೇ ಹಲವು ಗಂಭೀರ ವಿಷಯಗಳ ಚರ್ಚಾ ವೇದಿಕೆ ಸಹ ಆಗಿದೆ. 

ಮುಖ್ಯವಾಗಿ: 

  • ಮಹದಾಯಿ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು
  • ರೈತ ವಿರೋಧಿ ಮಸೂದೆಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ
  • ಕನಿಷ್ಠ ಬೆಂಬಲ ಬೆಲೆ ಖಾತ್ರಿಗಾಗಿ ಒತ್ತಾಯ
  • ಕೃಷ್ಣ-ಕಾವೇರಿ ಕೊಳ್ಳದ ಯೋಜನೆಗಳನ್ನು ಚುರುಕುಗೊಳಿಸುವ ಬಗ್ಗೆ
  • ಪ್ಯಾಕೇಜ್ ಆಹಾರ ಪದಾರ್ಥಗಳ ಮೇಲಿನ ಜಿಎಸ್‌ಟಿ ಕೈಬಿಡುವ ಬಗ್ಗೆ
  • ಪ್ರವಾಹಪೀಡಿತ ಪ್ರದೇಶಗಳ ನಷ್ಟ ಪರಿಹಾರಗಳಿಗೆ ವೈಜ್ಞಾನಿಕ ನಿಯಮ ರೂಪಿಸುವ ಕುರಿತು ಈ ಸಮಾವೇಶದಲ್ಲಿ ಚರ್ಚಿಸಲಾಗುವುದು ಮತ್ತು ಸರ್ಕಾರದ ಮೇಲೆ ಇದಕ್ಕಾಗಿ ಒತ್ತಡ ಹಾಕುವ ಉದ್ದೇಶವನ್ನು ಈ ಸಮಾವೇಶ ಹೊಂದಿದೆ.

ಇದರೊಂದಿಗೆ, ಕಳೆದ ವರ್ಷ ಮೂರು ಕೃಷಿ ಕಾಯಿದೆಗಳ ವಿರುದ್ಧ ರೈತರು ನಡೆಸಿದ ಹೋರಾಟದ ಫಲವಾಗಿ ಕೇಂದ್ರ ಸರ್ಕಾರವು ಕೃಷಿ ಕಾಯಿದೆಗಳನ್ನು ಹಿಂಪಡೆದಿತ್ತು. ಆದರೆ, ಅದರ ಭಾಗವಾಗಿಯೇ ರಾಜ್ಯದಲ್ಲಿ ರೂಪಿಸಲಾಗಿದ್ದ ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆಗಳನ್ನು ರಾಜ್ಯ ಸರ್ಕಾರ ಹಾಗೆಯೇ ಉಳಿಸಿಕೊಂಡು ರೈತರನ್ನು ಹಿಂಸಿಸಲು ಹೊರಟಿದೆ. ಸದರಿ ಕಾನೂನುಗಳ ವಿರುದ್ಧ ಸಹ ಹೋರಾಟ ರೂಪಿಸಲು ಈ ಸಮಾವೇಶ ಚಾಲನೆ ನೀಡಲಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಇವಲ್ಲದೆ, ಪಠ್ಯ ಪುಸ್ತ ಪರಿಷ್ಕರಣೆಯ ನೆಪದಲ್ಲಿ ನಾಡಿನ ಸಾಂಸ್ಕೃತಿಕ ವಿಸ್ತಾರಕ್ಕೆ ಧಕ್ಕೆ ಉಂಟುಮಾಡಿರುವ ಪ್ರಯತ್ನ, ಕೃಷಿ ಪರಿಕರಗಳು ಮತ್ತು ರಸಗೊಬ್ಬರಗಳ ಬೆಲೆ ಹೆಚ್ಚಳ, ಸ್ವಾಮಿನಾಥನ್ ವರದಿಯ ಜಾರಿ, ವಿದ್ಯುತ್ ತಿದ್ದುಪಡಿ ಕರಡಿನ ವಾಪಸಾತಿ, ಹಸಿರು ಶಾಲಿಗೆ ಅಪಮಾನ ಮಾಡುವ ಜನರ ವಿರುದ್ಧ ಎಚ್ಚರಿಕೆ ನೀಡುವ ವಿಷಯಗಳು ಸಹ ಇಲ್ಲಿ ಚರ್ಚೆಗೆ ಬರಲಿವೆ ಎಂದು ರಾಜ್ಯ ರೈತ ಸಂಘಟನೆ ಹೇಳಿದೆ.

ಸಮಾವೇಶದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರೈತಸೇನಾ-ಕರ್ನಾಟಕದ ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕುಗಳ ನಾಯಕರು ಭಾಗವಹಿಸಲಿದ್ದಾರೆ. ಕರ್ನಾಟಕ ಜನಶಕ್ತಿ, ಜನಾಂದೋಲನ ಮಹಾ ಮೈತ್ರಿ, ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆಗಳು ಈ ಸಮಾವೇಶಕ್ಕೆ ಸಹಕಾರ ನೀಡುತ್ತಿವೆ.

ನಿಮಗೆ ಏನು ಅನ್ನಿಸ್ತು?
1 ವೋಟ್