ಕಬ್ಬಿನ ಬೆಳೆಗೆ ಸಿಗದ ಎಫ್‌ಆರ್‌ಪಿ ದರ: ಜುಲೈ 11ರಂದು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ

Badagalapura Nagendra in Press Conference
  • ಮೂರು ವರ್ಷಗಳಿಂದಲೂ ಕಬ್ಬು ನಿಯಂತ್ರಣ ಮಂಡಳಿ ಸಭೆ ನಡೆಸಿಲ್ಲ
  • ಜುಲೈ 2ರಂದು ದಾವಣಗೆರೆಯಲ್ಲಿ ರೈತ ಸಂಘದ ರಾಜ್ಯ ಕಾರ್ಯಕಾರಿಣಿ

ಸರ್ಕಾರವು ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸ್ಪಂದಿಸದಿರುವ ಹಿನ್ನೆಲೆಯಲ್ಲಿ ಜುಲೈ 11ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

“ಸರ್ಕಾರ ಮೂರು ವರ್ಷಗಳಿಂದಲೂ ಕಬ್ಬು ನಿಯಂತ್ರಣ ಮಂಡಳಿ ಸಭೆಯನ್ನು ನಡೆಸಿಲ್ಲ. ಎಸ್ಎಪಿ (ಸ್ಟೇಟ್ ಅಡ್ವೈಸರಿ ಪ್ರೈಸ್) ಅನ್ನೂ ಕೂಡ ನಾಲ್ಕು ವರ್ಷಗಳಿಂದ ನೀಡಿಲ್ಲ. ಸಕ್ಕರೆ ಕಾರ್ಖಾನೆಗಳ ಮಾಲೀಕರು ಎಫ್ಆರ್‌ಪಿ (ನ್ಯಾಯಸಮ್ಮತ ಹಾಗೂ ಮೌಲ್ಯಾಧಾರಿತ ಬೆಲೆ)ಗಿಂತಲೂ ಕಡಿಮೆ ಬಿಲ್ ಕೊಡುತ್ತಿದ್ದು, ತೂಕದಲ್ಲೂ ಮೋಸ ಮಾಡುತ್ತಿದ್ದಾರೆ. ಇವುಗಳನ್ನು ಸರ್ಕಾರದ ಗಮನಕ್ಕೆ ತಂದರೂ ಕೂಡ ಇದುವರೆಗೂ ಸರ್ಕಾರದಿಂದ ಯಾವುದೇ ಸ್ಪಂದನೆ ಇಲ್ಲ. ಹೀಗಾಗಿ ತೀವ್ರ ಹೋರಾಟ ಕೈಗೊಳ್ಳಲಾಗುವುದು” ಎಂದು ನಾಗೇಂದ್ರ ಅವರು ಮೈಸೂರಿನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

“ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂದು ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಆ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ. ಜೊತೆಗೆ ಕೃಷಿ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಕೃಷಿ ಕ್ಷೇತ್ರಕ್ಕೆ ಇನ್ನಷ್ಟು ಸಂಕಷ್ಟಗಳನ್ನು ತಂದೊಡ್ಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗುವ ಸಂಭವವಿದೆ. ಕೃಷಿ ಕ್ಷೇತ್ರಕ್ಕೆ ಸಿಗಬೇಕಾದ ಯಾವುದೇ ಸವಲತ್ತುಗಳನ್ನು ಒದಗಿಸುತ್ತಿಲ್ಲ, ಕಬ್ಬಿಗೆ ಎಫ್ಆರ್‌ಪಿಯಂತೆ ರೈತರಿಗೆ ಹಣ ಸಿಗುವಂತೆ ಎಚ್ಚರ ವಹಿಸಬೇಕು" ಎಂದು ಅವರು ಒತ್ತಾಯಿಸಿದರು.

“ಕೃಷಿಗೆ ಬಳಸುವ ಎಲ್ಲ ವಸ್ತುಗಳ ಬೆಲೆ ದುಬಾರಿಯಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದೆ. ಕೀಟನಾಶಕ, ಗೊಬ್ಬರ, ಬಿತ್ತನೆ ಬೀಜ ಹೀಗೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿರುವುದು ಖಂಡನೀಯವಾಗಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

"ಜುಲೈ 11ರ ಹೋರಾಟಕ್ಕೂ ಮುಂಚಿತವಾಗಿ ಜುಲೈ 2ರಂದು ದಾವಣಗೆರೆ ಎಪಿಎಂಸಿಯಲ್ಲಿ ನಡೆಯುವ ರಾಜ್ಯ ಕಾರ್ಯಕಾರಿಣಿಯಲ್ಲಿ ಈ ಕರಿತು ಚರ್ಚಿಸಲಾಗುವುದು. 30 ಜಿಲ್ಲೆಗಳ ಪದಾಧಿಕಾರಿಗಳು ಈ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮತ್ತು ರೈತ ಸಂಘದ ಮುಂದಿನ ರಾಜಕೀಯ ನಡೆಯ ಕುರಿತು ಸಮಾಲೋಚಿಸಲಾಗುವುದು" ಎಂದು ಅವರು ಹೇಳಿದರು. 

"ರೈತ ಸಂಘದ ಕೆಲವು ನಾಯಕರು ಹಸಿರು ಟವೆಲ್ ದುರುಪಯೋಗ ಮಾಡಿಕೊಳ್ಳುತ್ತಿರುವುದು ಹಾಗೂ ಅದರ ಮೌಲ್ಯ–ಘನತೆಗೆ ಮಸಿ ಬಳಿಯುತ್ತಿರುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಗುತ್ತದೆ’ ಎಂದು ಬಡಗಲಪುರ ನಾಗೇಂದ್ರ ವಿವರಿಸಿದರು. 

"ರೈತ ಚಳವಳಿಯನ್ನು ಹತ್ತಿಕ್ಕಲು ಸರ್ಕಾರ ಹನ್ನಾರ ನಡೆಸುತ್ತಿದೆ. ಹಾಗಾಗಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗುತ್ತಿದ್ದೇವೆ. ಜೊತೆಗೆ ರೈತ ಸಂಘದ ಬಣಗಳು ಹೇಗೆ ಒಗ್ಗಟ್ಟಾಗಬೇಕು ಎಂಬುದರ ಬಗ್ಗೆ ಸೈದ್ಧಾಂತಿಕ ಸ್ಪಷ್ಟತೆಯನ್ನು ಪಡೆಯಬೇಕಾಗಿದೆ. ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ನಿರಂತರ ಹೋರಾಟ ರೂಪಿಸಲಾಗುವುದು" ಎಂದು ಬಡಗಲಪುರ ನಾಗೇಂದ್ರ ಅವರು ಮಾಹಿತಿ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್