ಎಂಎಸ್‌ಪಿ ಸಮಿತಿಯಲ್ಲಿ ಪಂಜಾಬ್ ರೈತರಿಗಿಲ್ಲ ಸ್ಥಾನ; ಇರುವವರೆಲ್ಲ ರೈತ ವಿರೋಧಿಗಳು; ಸಂಸದೆ ಹರ್‌ಸಿಮ್ರತ್‌ ಕೌರ್‌

  • ರೈತರ ಹೆಸರಿನಲ್ಲಿರುವ ಐದೂ ಜನರು ರೈತವಿರೋಧಿ ಕಾನೂನುಗಳ ಸಮರ್ಥಕರು.
  • ಪಂಜಾಬಿನ ರೈತ ನಾಯಕರನ್ನು ಒಳಗೊಂಡ ಹೊಸ ಸಮಿತಿಯನ್ನು ರಚಿಸಬೇಕು.

ಕೇಂದ್ರ ಸರ್ಕಾರ ನೇಮಿಸಿರುವ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸಮಿತಿಯಲ್ಲಿ ರೈತರ ಹೆಸರಿನಲ್ಲಿ ಸೇರ್ಪಡೆಗೊಂಡಿರುವ ಐದೂ ಜನರು ಈ ಹಿಂದೆ ಮೋದಿ ಸರ್ಕಾರ ಜಾರಿಗೆ ತಂದಿದ್ದ ಮೂರು ರೈತ ವಿರೋಧಿ ಕಾನೂನುಗಳ ಸಮರ್ಥಕರಾಗಿದ್ದರು ಎಂದು ಹರ್ ಸಿಮ್ರತ್ ಕೌರ್ ನಿನ್ನೆ ಲೋಕಸಭೆಯಲ್ಲಿ ಹೇಳಿದ್ದಾರೆ.

ಗುರುವಾರ ಲೋಕಸಭೆಯಲ್ಲಿ ಮಾತನಾಡುತ್ತಿದ್ದ ಶಿರೋಮಣಿ ಅಕಾಲಿ ದಳದ ಸಂಸತ್ ಸದಸ್ಯೆ ಕೌರ್, “ಸರ್ಕಾರ ಈಗ ರಚಿಸಿರುವ ಕನಿಷ್ಠ ಬೆಂಬಲ ಬೆಲೆ ಸಮಿತಿಯನ್ನು ವಜಾ ಮಾಡಿ, ಪಂಜಾಬಿನ ರೈತ ನಾಯಕರನ್ನು ಒಳಗೊಂಡ ಹೊಸ ಸಮಿತಿಯನ್ನು ರಚಿಸಬೇಕು” ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

“ರೈತರಿಗೆ ನ್ಯಾಯ ಒದಗಿಸಲು ರಚಿಸಲಾಗಿರುವ ಕನಿಷ್ಠ ಬೆಂಬಲ ಬೆಲೆ ಸಮಿತಿಯಲ್ಲಿ ಈಗ ಸರ್ಕಾರದಿಂದ ರೈತರ ಹೆಸರಿನಲ್ಲಿ ನೇಮಿಸಲ್ಪಟ್ಟಿರುವ ಐದೂ ಮಂದಿ ರೈತ ಹೋರಾಟದ ವಿರುದ್ಧ ಇದ್ದವರು ಮತ್ತು ಆ ಮೂರು ಕಪ್ಪು ಕಾನೂನುಗಳ ಪರವಾಗಿ ವಕಾಲತ್ತು ವಹಿಸಿದ್ದವರು” ಎಂದು ಅವರು ಆರೋಪಿಸಿದ್ದಾರೆ.

ಈ ಸಮಿತಿ ರಚನೆ ಬಗ್ಗೆ ಗೆಜೆಟ್‌ನಲ್ಲಿ ನೀಡಿರುವ ಪ್ರಕಟಣೆಯಲ್ಲಿ “ಈ ಸಮಿತಿಯು ಕನಿಷ್ಠ ಬೆಂಬಲ ಬೆಲೆಯ ಪ್ರಸ್ತಾಪವನ್ನು ಹೆಚ್ಚು ಪರಿಣಾಮಕಾರಿ ಮತ್ತು ಪಾರದರ್ಶಕ ಮಾಡಲು ಪ್ರಯತ್ನಿಸುತ್ತದೆ” ಎಂಬ ಅಸ್ಪಷ್ಟ ಗುರಿಯನ್ನು ನೀಡಲಾಗಿದೆ. ಇದರಿಂದ ಈ ಸಮಿತಿ ರಚನೆಯ ಮೂಲ ಉದ್ದೇಶವನ್ನೇ ತಿರುಚಿದಂತಾಗಿದೆ ಎಂದು ಹೇಳಿದ್ದಾರೆ.

"ಎಲ್ಲರಿಗೆ ತಿಳಿದಿರುವಂತೆ ಪಂಜಾಬ್ ದೇಶದ ಆಹಾರ ಉಗ್ರಾಣ. ಇದೇ ರೈತರೇ ಮೂರು ಕಪ್ಪು ಕಾನೂನುಗಳ ವಿರುದ್ಧ ಯುದ್ಧ ಹೂಡಿ ಜಯಗಳಿಸಿದವರು. ಈಗ ನೋಡಿದರೆ ಕೇಂದ್ರ ಸರ್ಕಾರ ಸಮಿತಿಯಲ್ಲಿ ಒಂದೇ ಒಂದು ಸದಸ್ಯತ್ವವನ್ನೂ ಪಂಜಾಬ್ ರಾಜ್ಯಕ್ಕೆ ನೀಡಿಲ್ಲ. ಸರ್ಕಾರ ಕೂಡಲೇ ಇಡೀ ಸಮಿತಿಯನ್ನು ಪುನರ್ ರಚಿಸಿ, ಪಂಜಾಬ್ ರಾಜ್ಯಕ್ಕೆ ನೀಡಬೇಕಾದ ಪ್ರಾತಿನಿಧ್ಯವನ್ನು ನೀಡಬೇಕು" ಎಂದು ಕೌರ್ ಆಗ್ರಹಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್