ಪಿಎಂ ಕಿಸಾನ್‌ ಯೋಜನೆ | ಫಲಾನುಭವಿಗಳ ಸಂಖ್ಯೆ 10 ಕೋಟಿ ದಾಟಿದೆ: ಕೇಂದ್ರ ಸರ್ಕಾರ

kissan samman yojan
  • ಇದುವರೆಗೆ ಈ ಯೋಜನೆಯಡಿ 12 ಕಂತು ಹಣ ಬಿಡುಗಡೆ; ಸಚಿವಾಲಯ
  • ಫಲಾನುಭವಿಗಳ ಸಂಖ್ಯೆ ಕುಸಿಯುತ್ತಿದೆ ಎಂದು ಪ್ರತಿಪಕ್ಷ ನಾಯಕರ ಆರೋಪ

ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಫಲಾನುಭವಿಗಳ ಸಂಖ್ಯೆ 10 ಕೋಟಿ ದಾಟಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

"ಪಿಎಂ ಕಿಸಾನ್‌ ಯೋಜನೆಯಡಿ ನೋಂದಣಿಯಾದ ಭೂಮಿ ಹೊಂದಿರುವ ದೇಶದ ಎಲ್ಲ ರೈತ ಕುಟುಂಬಗಳಿಗೆ ಮೂರು ಸಮಾನ ಕಂತುಗಳಲ್ಲಿ ಒಟ್ಟು ₹6,000 ಸಹಾಯಧನ ಒದಗಿಸಲಾಗಿದೆ ಎಂದು ಕೇಂದ್ರ ಹೇಳಿದ್ದು, 2019ರಲ್ಲಿ ಯೋಜನೆ ಆರಂಭವಾದಾಗ 3.16 ಕೋಟಿ ರೈತರು ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದರು. ಆದರೆ ಈಗ ಅದರ ಮೂರು ಪಟ್ಟು ರೈತರು ಪಿಎಂ ಕಿಸಾನ್‌ ಯೋಜನೆಯ ಫಲಾನುಭವಿಗಳಾಗಿದ್ದಾರೆ" ಎಂದಿದೆ.

Eedina App

ಸೋಮವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಪಿಎಂ ಕಿಸಾನ್‌ ಯೋಜನೆಯಡಿ ಸೌಲಭ್ಯ ಪಡೆಯುವ ಫಲಾನುಭವಿಗಳ ಸಂಖ್ಯೆ ಪ್ರತಿ ಕಂತಿನಲ್ಲೂ ಕಡಿಮೆಯಾಗುತ್ತಿದೆ ಎಂದು ಆರೋಪಿಸಿದ್ದರು. ಕೇಂದ್ರ ಸರ್ಕಾರ ಯೋಜನೆಯ ಸಮರ್ಪಕವಾಗಿ ಜಾರಿ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದರು. ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಪಿಎಂ ಕಿಸಾನ್‌ ಯೋಜನೆ ಫಲಾನುಭವಿಗಳ ಸಂಖ್ಯೆ ಕೋಟಿ ದಾಟಿರುವುದಾಗಿ ತಿಳಿಸಿದೆ.

"ಪಿಎಂ-ಕಿಸಾನ್ ಯೋಜನೆ ಆರಂಭವಾದ ಮೂರು ವರ್ಷಗಳಲ್ಲಿ ಅಗತ್ಯವಿರುವ ಕೋಟಿಗಟ್ಟಲೆ ರೈತರಿಗೆ ₹ 2 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಸಹಾಯವನ್ನು ಒದಗಿಸಿದ್ದು, ಸರ್ಕಾರದಿಂದ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ. ಇದುವರೆಗೆ ಈ ಯೋಜನೆಯಡಿ 12 ಕಂತುಗಳ ಹಣ ಬಿಡುಗಡೆ ಮಾಡಲಾಗಿದೆ" ಎಂದು ಕೇಂದ್ರ ಕೃಷಿ ಸಚಿವಾಲಯ ಮಾಹಿತಿ ನೀಡಿದೆ.

AV Eye Hospital ad

ಈ ಸುದ್ದಿ ಓದಿದ್ದೀರಾ? ದೆಹಲಿ ರೈತ ಹೋರಾಟಕ್ಕೆ 2 ವರ್ಷ | ಕೃಷಿ ಕಾಯ್ದೆ ಹಿಂಪಡೆಯದ ರಾಜ್ಯ ಸರ್ಕಾರ; ನ.26ಕ್ಕೆ ಬೃಹತ್‌ ಪ್ರತಿಭಟನೆ

"ಈ ಯೋಜನೆಯ ಅನುಷ್ಟಾನಕ್ಕೆ ಯಾವುದೇ ಮಧ್ಯವರ್ತಿಗಳಿಲ್ಲ. ನೋಂದಣಿ ಮತ್ತು ಫಲಾನುಭವಿಗಳ ಪರಿಶೀಲನೆ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಕಾಪಾಡಿಕೊಂಡಿದ್ದು, ಪ್ರತಿಯೊಬ್ಬ ರೈತರಿಂದ ಸ್ವಯಂ ದಾಖಲೆ ನೋಂದಣಿ ಮಾಡಿಸಿ ಅವುಗಳ ಆಧಾರದ ಮೇಲೆ ಅರ್ಹರನ್ನು ಗುರುತಿಸಿ ಸೌಲಭ್ಯ ಒದಗಿಸುತ್ತಿದ್ದು, ಉನ್ನತ ಆರ್ಥಿಕ ಸ್ಥಿತಿಯಲ್ಲಿರುವ ರೈತರನ್ನು ಈ ಕಾರ್ಯಕ್ರಮದಿಂದ ಹೊರಗಿಡಲಾಗಿದೆ. ಅಲ್ಲದೆ, ಈ ಯೋಜನೆಯಲ್ಲಿ ಮತ್ತಷ್ಟು ಪಾರದರ್ಶಕತೆಯನ್ನು ತರಲು ರೈತರ ಇ-ಕೆವೈಸಿ ಮತ್ತು ಆಧಾರ್ ಕಾರ್ಡ್‌ ಮಾಹಿತಿ ಕಡ್ಡಾಯಗೊಳಿಸಿ ಸಹಾಯಧನ ಪಾವತಿ ಮಾಡಲಾಗುತ್ತಿದೆ" ಎಂದು ಸಚಿವಾಲಯ ವಿವರಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app