ಸರ್ಕಾರ ಉತ್ತಮ ಕೃಷಿ ನೀತಿ ರೂಪಿಸುವ ಪ್ರಯತ್ನದಲ್ಲಿದೆ : ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಕಾರ್ಯದರ್ಶಿ

Policy on good agriculture practice soon-Manoj Ahuja
  • ಉತ್ತಮ ಕೃಷಿ ನೀತಿಗಾಗಿ ಕೈಗಾರಿಕೆಗಳೊಂದಿಗೆ ಕೆಲಸ ಮಾಡಬೇಕಿದೆ
  • ಸೂಕ್ಷ್ಮ ನೀರಾವರಿ ಕೇಂದ್ರ ಸರ್ಕಾರದ ಆದ್ಯತೆಯಾಗಿದೆ

“ಭಾರತೀಯ ಕೃಷಿ ಕ್ಷೇತ್ರದ ಅಭ್ಯುದಯವನ್ನು ಗಮನದಲ್ಲಿ ಇಟ್ಟುಕೊಂಡು, ರೈತರ ಅನುಕೂಲಕ್ಕಾಗಿ ಸರ್ಕಾರ ಉತ್ತಮ ಕೃಷಿ ನೀತಿ ರೂಪಿಸುವ ಬಗ್ಗೆ  ಕಾರ್ಯನಿರತವಾಗಿದೆ” ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಕಾರ್ಯದರ್ಶಿ ಮನೋಜ್ ಅಹುಜ ಹೇಳಿದ್ದಾರೆ.‌

ಮಂಗಳವಾರ ಎಫ್ಐಸಿಸಿಐ ವ್ಯವಸ್ಥೆಗೊಳಿಸಿದ್ದ “ಕೃಷಿಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಪಾಲುದಾರಿಕೆಯ ಸಾಧ್ಯತೆಗಳು” ವಿಷಯವನ್ನು ಕುರಿತು ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ “ಪರಿಸರ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು  ಕೃಷಿಯಲ್ಲಿ ಸುಸ್ಥಿರ ಮತ್ತು ಉತ್ತಮ ಅಭ್ಯಾಸಗಳನ್ನು ಆಚರಣೆಗೆ ತರುವ ಬಗ್ಗೆ ಅಂತಾರಾಷ್ಟ್ರೀಯ ವ್ಯಾಪ್ತಿಯಲ್ಲಿ ಬದ್ಧತೆ ಬೆಳೆಯುತ್ತಿದೆ” ಎಂದು ಹೇಳಿದರು.

"ಈ ಬಗ್ಗೆ ಸರ್ಕಾರ ಇನ್ನೂ ಯಾವುದೇ ನೀತಿ ರೂಪಿಸಿಲ್ಲ. ಈಗ ಉತ್ತಮ ಕೃಷಿ ನೀತಿ ರೂಪಿಸುವ ಅಗತ್ಯವಿದೆ. ನಾವು ಇದಕ್ಕಾಗಿ ಕೈಗಾರಿಕೆಗಳೊಂದಿಗೆ ಕೂಡಿ ಕೆಲಸ ಮಾಡಬೇಕಿದೆ. 'ಸೂಕ್ಷ್ಮ ನೀರಾವರಿ' ಸರ್ಕಾರದ ಆದ್ಯತೆಯಾಗಿದೆ. ಧನ ಸಹಾಯ ನೀಡುವ ಮೂಲಕ ಇದಕ್ಕೂಂದು ಸರಳ ಪದ್ಧತಿಯನ್ನು ರೂಪಿಸಿ, ಆಚರಣೆ ಹಂತದಲ್ಲಿ ಸಬ್ಸಿಡಿ ನೀಡುವ ಮೂಲಕ ಇದನ್ನು ಜಾರಿಗೆ ತರಲು ಚಿಂತನೆ ನಡೆದಿದೆ" ಎಂದು ಅವರು ಹೇಳಿದರು.

“ಡಿಜಿಟಲ್ ಪ್ಲಾಟ್‌ಫಾರಂಗಳ ಮೂಲಕ ರೈತರ ಸಮಸ್ಯೆಗಳಿಗೆ ಸರಳ ಪರಿಹಾರಗಳನ್ನು ಕಂಡುಕೊಳ್ಳುವುದು ಅಗತ್ಯವಾಗಿದೆ. ಮಾಹಿತಿ ತಂತ್ರಜ್ಞಾನದ ಮೂಲಕ ಆರ್ಥಿಕೇತರವಾಗಿ ಸರ್ಕಾರ ಮಧ್ಯಪ್ರವೇಶಿಸಿದಲ್ಲಿ ಇದರ ಉಪಯೋಗ ಪಡೆಯುವ ಸಾಮರ್ಥ್ಯ ರೈತರಲ್ಲಿದೆ. ಈ ತಂತ್ರಜ್ಞಾನದ ಸಹಾಯವನ್ನು ರೈತರಿಗೆ ಒದಗಿಸುವ ಮೂಲಕ ರೈತರ ಲಾಭವನ್ನು ಹೆಚ್ಚಿಸಬಹುದು" ಎಂದು ಅಹುಜ ಹೇಳಿದರು.

"ಕೈಗಾರಿಕೆಗಳ ಕಾಳಜಿ ಬಗ್ಗೆ ಪ್ರಸ್ತಾಪಿಸಿದ ಅವರು “ಗುಣಮಟ್ಟದ ಕೃಷಿ ಒಳಸುರಿಗಳ ಬಗ್ಗೆಯೂ ಸರ್ಕಾರಕ್ಕೆ ಕಾಳಜಿ ಇದೆ. ಇದನ್ನು ಇನ್ನಷ್ಟು  ಉತ್ತಮ ಪಡಿಸುವ ಅಗತ್ಯವಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಯೋಗದೊಂದಿಗೆ ರೈತರ ಉಪಯೋಗಕ್ಕಾಗಿ ಬೀಜ, ಗೊಬ್ಬರ ಮತ್ತು ಕೀಟನಾಶಕಗಳನ್ನು ಪರೀಕ್ಷಿಸುವ ”ರಾಷ್ಟ್ರೀಯ ಮಾನ್ಯತಾ ಮಂಡಳಿ (ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯಕ್ಕಾಗಿ-ಎನ್ಎಬಿಎಲ್)” ಸ್ಥಾಪಿಸಬಹುದು ಅಥವಾ ಲಭ್ಯ ಅವಕಾಶದಲ್ಲಿ ಸದೃಢ ಮಾಹಿತಿ ತಂತ್ರಜ್ಞಾನದ ಮೂಲಕ ಇದನ್ನು ಸಾಧಿಸಬಹುದು" ಎಂದು ವಿವರಿಸಿದರು.

ಕೃಷಿ ಕ್ಷೇತ್ರದಲ್ಲಿ ಸಾರ್ವಜನಿಕ-ಖಾಸಗಿ ಸಹಯೋಗದ ಮಹತ್ವದ ಬಗ್ಗೆ ಪ್ರಸ್ತಾಪಿಸಿದ ಮನೋಜ್ ಅಹುಜ "ಕೃಷಿ ಕ್ಷೇತ್ರದ ಸಮಗ್ರ ʼಮೌಲ್ಯ ಸರಣಿʼ (ಉತ್ಪಾದನಾ ಸ್ಥಳದಿಂದ ಗ್ರಾಹಕರಿಗೆ ಉತ್ತಮ ಸೇವೆಯನ್ನು ತಲುಪಿಸುವ ಪ್ರಕ್ರಿಯೆ) ಯನ್ನು ಸುಧಾರಿಸುವ ಅಗತ್ಯವಿದೆ. ಈ ಮೂಲಕ ಕೈಗಾರಿಕೆ ಮತ್ತ ಕೃಷಿ ಎರಡನ್ನೂ ಲಾಭದಾಯಕಗೊಳಿಸಬಹುದು. ಇದಕ್ಕೆ ಸರ್ಕಾರದ ಮಧ್ಯಪ್ರವೇಶದ ಅಗತ್ಯವಿದ್ದಲ್ಲಿ ನಾವು ಇದಕ್ಕೊಂದು ಚೌಕಟ್ಟನ್ನು ರೂಪಿಸಬೇಕಿದೆ. ಈ ಎರಡೂ ಕ್ಷೇತ್ರಗಳ ನಡುವಿನ ಅಂತರವನ್ನು ಕೂಡಿಸಲು ಸರ್ಕಾರದ ಮಧ್ಯಸ್ಥಿಕೆ ನೆರವಾಗಬಹುದು" ಎಂದು ಹೇಳಿದರು.

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಹಾಗೂ ಸಣ್ಣ ರೈತರ ಕೃಷಿ ವ್ಯಾಪಾರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕಿ ಡಾ. ವಿಜಯಲಕ್ಷ್ಮಿ ನಾದೆಂಡ್ಲ “ ನಾಲ್ಕು ʼಐ”ಗಳು ಕೃಷಿಯ ನೀತಿ ಚೌಕಟ್ಟು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅವೆಂದರೆ; ʼಇನ್ಪುಟ್-ಒಳಸುರಿʼ. ʼಇನ್ಫ್ರಾಸ್ಟಕ್ಚರ್-ಮೂಲಭೂತ ಸೌಕರ್ಯಗಳುʼ, ʼಇನ್ವೆಸ್ಟ್‌ಮೆಂಟ್‌- ಬಂಡವಾಳʼ, ಮತ್ತು ʼಇನ್ಸ್ಟಿಟ್ಯೂಷನ್ಸ್ -ಸಂಸ್ಥೆಗಳುʼ ಆಗಿವೆ. ಕಾರ್ಪೊರೇಟ್ ವಿಭಾಗ ಇದಕ್ಕೆ ಒತ್ತಾಸೆ ನೀಡಿ, ಕೃಷಿಗೆ ಅಗತ್ಯವಾದ ಬಂಡವಾಳವನ್ನು ತೊಡಗಿಸಬಹುದು ಎಂದು ಹೇಳಿದರು.

ಕೃಷಿ ಇಲಾಖೆಯ ಮತ್ತೊಬ್ಬ ಜಂಟಿ ಕಾರ್ಯದರ್ಶಿ ಸ್ಯಾಮ್ಯುಯಲ್ ಪ್ರವೀಣ್ ಕುಮಾರ್ ಮಾತನಾಡಿ, “ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಬೆಸೆಯುವ ಅಂತರ್ಜಾಲದಂತಹ ಭಿನ್ನ ತಂತ್ರಜ್ಞಾನಗಳು ಕೃಷಿಯ ಭವಿಷ್ಯವನ್ನು ಮುನ್ಸೂಚಿಸಬಲ್ಲವು, ಇದರಿಂದ ನಾವು ಕೃಷಿಯನ್ನು ನಷ್ಟ ರಹಿತವನ್ನಾಗಿ ಮಾಡಬಹುದು” ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಕುಮಾರ್,  "ಕೃಷಿ ಕ್ಷೇತ್ರದಲ್ಲಿ ಕೇವಲ ಬಂಡವಾಳ ದೇಶದ ಇಡೀ ಆರ್ಥಿಕ ಚಕ್ರವನ್ನು ಮಾತ್ರ ಉತ್ತೇಜಿಸುತ್ತಿಲ್ಲ, ಜೊತೆಗೆ ಮೌಲ್ಯವರ್ಧನೆಯ ಫಲ ಸಹ ರೈತರಿಗೆ ದೊರಕಿಸಿಕೊಡುವಲ್ಲಿ ಸಹ ಸಹಕಾರಿಯಾಗಿದೆ. ಸಾರ್ವಜನಿಕ-ಖಾಸಗಿ ಸಹಯೋಗದ ಆರ್ಥಿಕ ಮತ್ತು ನಿರ್ವಹಣಾ ಸಾಮರ್ಥ್ಯದೊಂದಿಗೆ ಸರ್ಕಾರದ ಆಡಳಿತಾತ್ಮಕ ಪರಿಣತಿಯೂ ಬೆರೆತಲ್ಲಿ ಹೆಚ್ಚಿನದನ್ನು ಸಾಧಿಸಬಹುದು. ಹೂಡಿಕೆದಾರರು ಭರವಸೆಯೊಂದಿಗೆ ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡಬೇಕು. ನಾವು ವಿವಿಧ ಮೂಲಭೂತ ಸೌಲಭ್ಯ ನಿರ್ಮಾಣ ಕಾರ್ಯಗಳಲ್ಲಿ ಇಬ್ಬರಿಗೂ ಲಾಭದಾಯಕವಾಗುವಂತಹ ವಾತಾವರಣವನ್ನು ರೂಪಿಸುವ ಅಗತ್ಯವಿದೆ" ಎಂದು ವಿವರಿಸಿದರು.

ಎಫ್ಐಸಿಸಿಐನ 'ಕೃಷಿ ಉತ್ಪಾದಕರ ಸಂಘ'ದ ಟಾಸ್ಕ್‌ ಫೋರ್ಸ್ ಅಧ್ಯಕ್ಷ ಪ್ರವೇಶ ಶರ್ಮ ಮಾತಾನಾಡುತ್ತಾ, “ಭಾರತದಲ್ಲಿ ಕೃಷಿಯನ್ನು ಹೊರತುಪಡಿಸಿದರೆ ನೂರಕ್ಕೆ ನೂರು ಖಾಸಗಿ ಎನ್ನುವಂತಹ ಇನ್ನೊಂದು ವಲಯ ಇಲ್ಲ. ಸರ್ಕಾರ ರೂಪಿಸುವ ನೀತಿಗಳು ಕೃಷಿ ಕ್ಷೇತ್ರಕ್ಕೆ ಬಂಡವಾಳದ ಹರಿವು, ಮಾರುಕಟ್ಟೆ ವಿತರಣೆ, ಮತ್ತು ತಾಂತ್ರಿಕತೆ ತಲುಪುವಿಕೆಯ ಚೌಕಟ್ಟುಗಳನ್ನು ಹೊಂದಿರಬೇಕು” ಎಂದರು.

ಟಾಫೆ ಗುಂಪಿನ ಅಧ್ಯಕ್ಷ ಮತ್ತು ಎಫ್ಐಸಿಸಿಐನ ರಾಷ್ಟ್ರೀಯ ಕೃಷಿ ಸಮಿತಿಯ ಅಧ್ಯಕ್ಷ ಟಿ.ಆರ್. ಕೇಶವನ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ, “ಸರ್ಕಾರ ಮತ್ತು ಖಾಸಗಿ ವಲಯಗಳು ಒಂದಾಗಿ ಹೊರಟರೆ ಮಹತ್ವದ್ದನ್ನು ಸಾಧಿಸಬಹುದು” ಎಂದು ಹೇಳಿದರು

ನಿಮಗೆ ಏನು ಅನ್ನಿಸ್ತು?
0 ವೋಟ್