
- ʼಜನಪ್ರತಿನಿಧಿಗಳು, ರೈತರನ್ನು ಎದುರಿಸಲಾಗದೆ ತಲೆ ಮರೆಸಿಕೊಂಡು ಓಡಾಡುತ್ತಿದ್ದಾರೆʼ
- ʼಟನ್ ಕಬ್ಬಿಗೆ ₹3500 ಎಫ್ಆರ್ಪಿ ದರ, ಕಬ್ಬಿನ ಉಪ ಉತ್ಪನ್ನದ ಲಾಭಾಂಶ ಹಂಚಿರಿʼ
ಕಬ್ಬು ಬೆಳೆಗಾರರ ಒತ್ತಡಕ್ಕೆ ಮಣಿಯದ ಸರ್ಕಾರದ ವಿರುದ್ಧ ರೈತರು ಆಕ್ರೋಶಗೊಂಡಿದ್ದು, ನ.22ರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದಾರೆ.
ಕಬ್ಬು ಬೆಳೆಗೆ ನ್ಯಾಯೋಚಿತ ಹಾಗೂ ಲಾಭದಾಯಕ ಬೆಲೆ(ಎಫ್ಆರ್ಪಿ ದರ) ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ತಿಂಗಳುಗಳಿಂದ ರಾಜ್ಯದ ಹಲವೆಡೆ ರೈತರು ಅಹೋರಾತ್ರಿ ಹೋರಾಟ ನಡೆಸುತ್ತಿದ್ದಾರೆ.
ಅದಾಗ್ಯೂ, ಸರ್ಕಾರ ಬೆಳೆಗಾರರ ಮನವಿಗೆ ಸ್ಪಂದಿಸದೆ ವಿಳಂಬ ನೀತಿ ಅನುಸರಿಸುತ್ತಿದೆ. ಹಾಗಾಗಿ ಮುಖ್ಯಮಂತ್ರಿ ಮನೆ ಮುಂದೆ ನ್ಯಾಯ ಸಿಗುವ ತನಕ ನಿರಂತರ ಪ್ರತಿಭಟನೆ ಮಾಡುತ್ತೇವೆಂದು ರೈತರು ಸಜ್ಜಾಗಿದ್ದಾರೆ.
ಈ ಕುರಿತು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಈ ದಿನ.ಕಾಮ್ಗೆ ಮಾಹಿತಿ ನೀಡಿದ್ದಾರೆ.
"ಕಬ್ಬು ಬೆಳೆಗೆ ಹೆಚ್ಚುವರಿ ದರ ನಿಗದಿ ಕುರಿತು ರಾಜ್ಯ ಸರ್ಕಾರ ನಾಲ್ಕಾರು ಸಭೆಗಳನ್ನು ನಡೆಸಿದಾಗ, ತಜ್ಞರ ಸಮಿತಿ ರಚಿಸಿ ಐದು ದಿನದಲ್ಲಿ ವರದಿ ಪಡೆದು 20ರ ಒಳಗಾಗಿ ರೈತರಿಗೆ ಸಿಹಿ ಸುದ್ದಿ ನೀಡುತ್ತೇವೆಂದು ಹೇಳಲಾಗಿತ್ತು. ಆದರೆ ಈತನಕ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಸಿಎಂ ಅವರನ್ನು ಭೇಟಿ ಮಾಡಿದಾಗಲೂ ರೈತರಿಗೆ ಭರವಸೆ ನೀಡಿದ್ದರು. ನಂಬಿಸಿ ಈ ರೀತಿ ವಿಳಂಬ ನೀತಿ ಅನುಸರಿಸುವುದು ಸರಿಯಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರ ರೈತರು ನಾಲ್ಕು ತಿಂಗಳಿಂದಲೂ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಸಬೂಬು ಹೇಳುತ್ತಾ ತ್ಯಾಪೆ ಹಾಕಲಾಗುತ್ತಿದೆ. ರಾಜ್ಯದಲ್ಲಿರುವ 30 ಲಕ್ಷ ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ಗಂಭೀರ ಪ್ರಯತ್ನ ನಡೆಸುತ್ತಿಲ್ಲ ಬದಲಾಗಿ ರೈತರ ಮೂಗಿಗೆ ತುಪ್ಪ ಸವರೋ ಕೆಲಸ ಮಾಡುತ್ತಿದ್ದಾರೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಹಲವೆಡೆ ಹೆಚ್ಚುತ್ತಿದೆ ಪ್ರತಿಭಟನೆಯ ಕಾವು
ಬೆಳಗಾವಿ ದಾವಣಗೆರೆ, ಧಾರವಾಡ, ಉತ್ತರ ಕನ್ನಡದ ಹಳಿಯಾಳ, ಮಂಡ್ಯ, ಮೈಸೂರು, ಹೂವಿನಹಡಗಲಿ, ಕಲಬುರಗಿ, ಬಿಜಾಪುರ ಬಾಗಲಕೋಟೆ, ಗದಗ, ಚಾಮರಾಜನಗರ, ಹಾಸನ ಬೀದರ್, ಚನ್ನರಾಯಪಟ್ಟಣ, ಕೊಪ್ಪಳ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ನಿರಂತರ ಹೋರಾಟ ನಡೆಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ದೆಹಲಿ ರೈತ ಹೋರಾಟ | ಎರಡನೇ ವರ್ಷದ ನೆನಪಿನಲ್ಲಿ ರೈತ ಚಳವಳಿಯಿಂದ ಕಲಿಯಬೇಕಾದ ಪಾಠಗಳು
"ಕಬ್ಬು ಕಟಾವು ವಿಳಂಬ, ಸಾಗಾಣಿಕೆ ವೆಚ್ಚದಲ್ಲಿ ಸುಲಿಗೆ, ಕಬ್ಬಿನ ಉಪ ಉತ್ಪನ್ನಗಳ ಲಾಭ ಹಂಚಿಕೆ ಮಾಡದೆ ಕಾರ್ಖಾನೆ ಮಾಲೀಕರು ನಿರಂತರವಾಗಿ ರೈತರನ್ನು ವಂಚಿಸುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳು ಮಾತ್ರ ತಲೆ ಮರೆಸಿಕೊಂಡು ಓಡಾಡುತ್ತಿದ್ದಾರೆ. ಇನ್ನಾದರೂ ರೈತರ ಕಣ್ಣಿಗೆ ಮಣ್ಣೆರಚುವುದನ್ನು ನಿಲ್ಲಿಸಿ ಟನ್ ಕಬ್ಬಿಗೆ ₹3500 ಎಫ್ಆರ್ಪಿ ದರ ನಿಗದಿ ಮಾಡಬೇಕು. ಅಲ್ಲಿಯ ತನಕ ಸಿಎಂ ಮನೆ ಮುಂದೆಯೇ ಕೂರುತ್ತೇವೆ" ಎಂದು ಕುರುಬೂರು ಶಾಂತಕುಮಾರ್ ಹೇಳಿದರು.