ಕಬ್ಬಿನ ದರ ನಿಗದಿಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಬ್ಬು ಬೆಳೆಗಾರರ ಸಂಘದ ಧರಣಿ

Sugar Cane Growers with DC Mysore
  • ಬೇಡಿಕೆ ಈಡೇರಿಸಲು ಸರ್ಕಾರಕ್ಕೆ 15 ದಿನಗಳ ಕಾಲಾವಕಾಶ
  • ಬೇಡಿಕೆ ಈಡೇರದಿದ್ದರೆ ವಿಧಾನ ಸೌಧ ಮುತ್ತಿಗೆ ಅನಿವಾರ್ಯ: ಸಂಘದ ಎಚ್ಚರಿಕೆ

ಈ ವರ್ಷದ ಕಬ್ಬಿನ ದರ ನಿಗದಿ ಮಾಡುವಂತೆ ಒತ್ತಾಯಿಸಿ ಸೋಮವಾರ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಧರಣಿ ನಡೆಸಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, "ಕಬ್ಬು ಬೆಲೆಯನ್ನು ನಿಗದಿ ಮಾಡುವಾಗ ರಾಜ್ಯದಲ್ಲಿ ಹೆಚ್ಚಿರುವ ಡೀಸಲ್, ಪೆಟ್ರೋಲ್, ರಸಗೊಬ್ಬರ, ಬಿತ್ತನೆ ಬೀಜ. ಕಟಾವು, ಕೂಲಿ, ಸಾಗಣೆ ವೆಚ್ಚ ಇತ್ಯಾದಿ ಬೆಲೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸಬೇಕು" ಎಂದು ಒತ್ತಾಯಿಸಿದರು.

"ಉತ್ತರ ಪ್ರದೇಶದಲ್ಲಿ ಈಗಾಗಲೇ ಒಂದು ಟನ್ ಕಬ್ಬಿಗೆ ₹ 3,500 ಬೆಲೆ ನಿಗದಿ ಮಾಡಿರುವುದನ್ನು ಸರ್ಕಾರ ಗಮನಿಸಬೇಕು. ಹಾಗೆಯೇ ಕಟಾವು ಸಾಗಣೆ ದರದಲ್ಲಿ ಆಗುತ್ತಿರುವ ಮೋಸವನ್ನು ಗಮನಿಸಬೇಕು" ಎಂದು ಹೇಳಿದರು.

"ರಾಜ್ಯದಲ್ಲಿ ಕಳೆದ ವರ್ಷ ಸುಮಾರು 70 ಸಕ್ಕರೆ ಕಾರ್ಖಾನೆಗಳು ₹ 6.50 ಕೋಟಿ ಮೊತ್ತದ ಕಬ್ಬು ನುರಿಸಿವೆ. ಇವರ ಬಾಬ್ತು ರಾಜ್ಯದ ರೈತರಿಗೆ ಇನ್ನೂ ₹ 300 ಕೋಟಿಯಷ್ಟು ಎಫ್‌ಆರ್‌ಪಿ ಹಣ ಬಾಕಿ ಉಳಿದಿದೆ. ಈ ಬಾಕಿ ಮೊತ್ತಕ್ಕೆ ಕಾನೂನು ಪ್ರಕಾರ ಶೇ. 15 ಬಡ್ಡಿ ಸೇರಿಸಿ ತಕ್ಷಣವೇ ಕೊಡಿಸಬೇಕು" ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

"ಕಬ್ಬು ನುರಿಸುವ ಕೆಲಸವನ್ನು ಈಗಾಗಲೇ ಬಣ್ಣಾರಿ ಅಮ್ಮನ್ ಮೊದಲಾಗಿ ಬಹಳಷ್ಟು ಕಾರ್ಖಾನೆಗಳು ಆರಂಭಿಸಿವೆ. ಕಬ್ಬಿನ ದರ ನಿಗದಿಗೊಳಿಸುವುದು ತಡವಾದರೆ ಹಣ ಪಾವತಿ ಸಹ ತಡವಾಗುತ್ತದೆ. ಈ ಬಗ್ಗೆ 9-6-22 ರಂದು ನಡೆದ ರಾಜ್ಯ ಸರ್ಕಾರದ ಕಬ್ಬು ಖರೀದಿ ಹಾಗೂ ಸರಬರಾಜು ಮಂಡಳಿ ಸಭೆಯಲ್ಲಿ ಭಾಗವಹಿಸಿ ರಾಜ್ಯಾಧ್ಯಕ್ಷನಾಗಿ ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆ ಸಂಕಷ್ಟವನ್ನು ವಿವರಿಸಿದ್ದೇನೆ. ಆದುದರಿಂದ ಸಕ್ಕರೆ ಸಚಿವರು ಕೂಡಲೇ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು" ಎಂದು ಅವರು ಆಗ್ರಹಿಸಿದರು.

"ಪ್ರತಿ ವರ್ಷ ಕಬ್ಬಿನ ಕಟಾವು, ಸಾಗಾಣಿಕಾ ವೆಚ್ಚವನ್ನು ಸಕ್ಕರೆ ಕಾರ್ಖಾನೆಯವರು ಯಾವುದೇ ಮಾನದಂಡವಿಲ್ಲದೆ ರೈತರ ಹಣದಿಂದ ಕಡಿತಗೊಳಿಸುತ್ತಿದ್ದಾರೆ. ಇದು ರೈತರ ಶೋಷಣೆಯಾಗಿದೆ. ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು" ಎಂದು ಅವರು ಒತ್ತಾಯಿಸಿದರು.

"ಕಬ್ಬಿನ ಉಪ ಉತ್ಪನ್ನಗಳ ಲಾಭವನ್ನು ಎರಡು ವರ್ಷಗಳಿಂದ ರೈತರಿಗೆ ನೀಡಿಲ್ಲ. ತೂಕದಲ್ಲಿ, ಇಳುವರಿಯಲ್ಲಿ ಕಡಿಮೆ ತೋರಿಸುತ್ತಿರುವ ಕಾರಣ ರೈತರಿಗೆ ವಂಚನೆಯಾಗುತ್ತಿದೆ. ಇದರೊಂದಿಗೆ ಕೇಂದ್ರ ಸರ್ಕಾರ ಕುದುರೆ ರೇಸ್, ಬೆಟ್ಟಿಂಗ್, ಕ್ಯಾಸಿನೊಗಳನ್ನು ಮಡಿಲೊಳಗಿಟ್ಟುಕೊಂಡು ರೈತ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುತ್ತಿರುವುದು ನ್ಯಾಯ ಸಮ್ಮತವೇ? ಎಂದು  ಅವರು ಪ್ರಶ್ನಿಸಿದರು.

"ಈ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ 15 ದಿನಗಳ ಅವಕಾಶ ನೀಡಲಾಗುತ್ತದೆ. ಆಗದೇ ಹೋದಲ್ಲಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವುದು ಅನಿವಾರ್ಯವಾಗುತ್ತದೆ" ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ಕುರುಬೂರು ಸಿದ್ದೇಶ್, ಹಾಡ್ಯ ರವಿ, ಕೆರೆಹುಂಡಿ ರಾಜಣ್ಣ, ಬರಡನಪುರ ನಾಗರಾಜ್, ಬಿದರಳ್ಳಿ ಮಾದಪ್ಪ, ಕೆಂಡಗಣ್ಣಸ್ವಾಮಿ ಭಾಗವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್