ಬಾಸುಮತಿ ಭತ್ತದ ಬೆಳೆಗೆ 10 ಕೀಟನಾಶಕ ಸಿಂಪರಣೆ ನಿಷೇಧ: ಪಂಜಾಬ್‌ ಸರ್ಕಾರ

Punjab bans use of 10 insecticides for basmati crop
  • ಬಾಸುಮತಿ ಭತ್ತದ ಬೆಳೆಗೆ 10 ರಾಸಾಯನಿಕ ಸಿಂಪರಣೆ ನಿಷೇಧ
  • ನಿಷೇಧ ಕೇವಲ ಆರು ದಿನಗಳು ಮಾತ್ರ: ಅಕ್ಕಿ ಗುಣಮಟ್ಟ ವೃದ್ಧಿಗೆ ತಂತ್ರ

ಕೆಲವು ಕೀಟನಾಶಕಗಳ ಸಿಂಪರಣೆಯ ಕಾರಣ ಬಾಸುಮತಿ ಅಕ್ಕಿಯ ರಫ್ತಿನ ಮೇಲೆ ನಿರ್ಬಂಧ ಬೀಳುತ್ತಿದೆ. ಆದ ಕಾರಣ ಬಾಸುಮತಿ ಭತ್ತದ ಬೆಳೆಗೆ 10 ಔಷಧಗಳ ಸಿಂಪರಣೆಯನ್ನು ನಿಷೇಧಿಸಲಾಗುತ್ತಿದೆ ಎಂದು ಪಂಜಾಬಿನ ಕೃಷಿ ಸಚಿವ ಕುಲದೀಪ್ ಸಿಂಗ್‌ ಧಾಲಿವಾಲ್‌ ಹೇಳಿದ್ದಾರೆ.

ನಿಷೇಧಿತ ಕೀಟನಾಶಕಗಳ ಪಟ್ಟಿಯನ್ನು ಪಂಜಾಬ್‌ ಕೃಷಿ ಇಲಾಖೆ ಬಿಡುಗಡೆ ಮಾಡಿದ್ದು, ಅದರ ಪ್ರಕಾರ, ಅಸ್ಫೇಟ್‌, ಬ್ಯೂಪ್ರೊಫೆಸಿನ್‌, ಕ್ಲೊರೋಪೈರಿಫಾಸ್, ಮೆಥಾಮಿಡೊಫಾಸ್‌, ಪ್ರೊಪಿಕೋನಜೋಲ್‌, ಥಿಯೊಮೆಥಾಕ್ಸಾಮ್, ಪ್ರೊಫೆನೊಫೋಸ್, ಐಸೊಪ್ರೋಥೊಯೊಲೇನ್‌, ಕರ್ಬೆಂಡಾಜೈಮ್ ಮತ್ತು ಟ್ರೈಸಿಕ್ಲಾಜೋಲ್ ಕೀಟನಾಶಕಗಳನ್ನು ನಿಷೇಧಿಸಲಾಗಿದೆ.

ರಾಜ್ಯದ ಪ್ರತಿಷ್ಠೆಯ ಸಂಕೇತದಂತಿರುವ ಬಾಸುಮತಿ ಅಕ್ಕಿಗೆ ಈ ಕೀಟನಾಶಕಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಟ್ಟ ಹೆಸರನ್ನು ತರುತ್ತಿವೆ. ಈ ಕೀಟನಾಶಕಗಳ ಅಂಶ ಅಕ್ಕಿಯಲ್ಲಿ ಉಳಿಯುತ್ತಿದ್ದು, ಆ ಕುರಿತ ಪರೀಕ್ಷೆಗಳಲ್ಲಿ ಅಪಾಯಕಾರಿ ವಿಷದ ಅಂಶ ಪತ್ತೆಯಾಗುತ್ತಿದೆ. ಆ ಹಿನ್ನೆಲೆಯಲ್ಲಿ ಈ ನಿಷೇಧ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಈ ಔಷಧಗಳ ನಿಷೇಧ ಕೇವಲ ಆರು ದಿನಗಳು ಮಾತ್ರ ಚಾಲ್ತಿಯಲ್ಲಿರುತ್ತದೆ. ಈ ಅವಧಿಯಲ್ಲಿ ಈ ಔಷಧಗಳನ್ನು ಸಿಂಪರಣೆ ಮಾಡದೆ ಇರುವುದರಿಂದ ಅಕ್ಕಿಯ ಗುಣಮಟ್ಟ ಉತ್ತಮಗೊಳ್ಳುತ್ತದೆ ಎಂದು ಧಾಲಿವಾಲ್‌ ಹೇಳಿದ್ದಾರೆ.

ಈ ಅವಧಿಯಲ್ಲಿ ಈ ಔಷಧಗಳ ಸಾಗಾಣಿಕೆ, ದಾಸ್ತಾನು, ಮಾರಾಟ ಮತ್ತು ಸಿಂಪರಣೆಗಳನ್ನು ನಿಷೇಧಿಸಲಾಗಿದೆ. ಇವುಗಳ ಬಳಕೆಯ ದುಷ್ಪರಿಣಾಮಗಳ ಬಗ್ಗೆ ರಾಜ್ಯದ ಅಕ್ಕಿ ಗಿರಣಿಗಳ ಮಾಲೀಕರು ಮತ್ತು ರಫ್ತುದಾರರ ಸಂಘಟನೆಯಿಂದ ಸಹ ಪ್ರತಿರೋಧಗಳು ಬಂದಿವೆ. ಅವರ ಹೇಳಿಕೆಯ ಪ್ರಕಾರ ಬಾಸುಮತಿ ಅಕ್ಕಿಯಲ್ಲಿ ಮಾನ್ಯ ಮಾಡಲಾಗಿರುವ ಗರಿಷ್ಠ ಮಟ್ಟಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಕೀಟನಾಶಕಗಳ ಅಂಶ ಪತ್ತೆಯಾಗಿದೆ ಎನ್ನಲಾಗಿದೆ.

ಹೀಗಾಗಿ, ಈ ಕೃಷಿ ರಾಸಾಯನಿಕಗಳನ್ನು ನಿಷೇಧಿಸುವಂತೆ ಈ ಸಂಘಟನೆ ಮನವಿಯನ್ನೂ ಮಾಡಿತ್ತು ಎಂದು ಧಾಲಿವಾಲ್‌ ಹೇಳಿದ್ದಾರೆ. ಹಾಗೆಯೇ, ಲೂಧಿಯಾನ ಕೃಷಿ ವಿಶ್ವವಿದ್ಯಾಲಯ ಇದಕ್ಕೆ ಪರ್ಯಾಯವಾಗಿ ಬೇರೆ ಕೀಟನಾಶಕಗಳ ಬಳಕೆಗೆ ಸಲಹೆ ನೀಡಿದೆ. ಈ ಪರ್ಯಾಯ ಔಷಧಗಳ ಬಳಕೆಯಿಂದ ಅಕ್ಕಿಯಲ್ಲಿ ಅದರ ಶೇಷಗಳು ಉಳಿಯುವುದಿಲ್ಲ ಎಂದು ಹೇಳಿದೆ. ಅವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಕೃಷಿ ಸಚಿವರು ವಿವರಣೆ ನೀಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್