ಕಬ್ಬಿನ ದರ 15 ರೂಪಾಯಿ ಹೆಚ್ಚಳ: ಕೇಂದ್ರ ಸರ್ಕಾರದ ವಿರುದ್ಧ ರೈತರ ಆಕ್ರೋಶ

Rs 15/quintal hike likely in sugarcane FRP to Rs 305 per quintal
  • 2022-23 ನೇ ಸಾಲಿನ ಕಬ್ಬಿನ ದರವನ್ನು ಕ್ವಿಂಟಲ್‌ಗೆ 15 ರೂಪಾಯಿ ಹೆಚ್ಚಳ
  • ಸಕ್ಕರೆ ಇಳುವರಿ ಆಧಾರಿತ ಪ್ರಮಾಣ 10.25. 2021-22ಕ್ಕೆ ಹೋಲಿಸಿದಲ್ಲಿ ಈ ದರ ಶೇ. 2.6 ಹೆಚ್ಚಳ 

ಕೇಂದ್ರ ಸರ್ಕಾರ  2022-23ನೇ ಸಾಲಿನ ಕಬ್ಬಿನ ದರವನ್ನು ಕ್ವಿಂಟಲ್‌ಗೆ 15 ರೂಪಾಯಿ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇದರ ಪ್ರಕಾರ ಈಗ ಸಕ್ಕರೆ ಕಾರ್ಖಾನೆಗಳು ಪ್ರತಿ ಕ್ವಿಂಟಲ್‌ಗೆ 305 ರೂಪಾಯಿಗಳನ್ನು ಬೆಳೆಗಾರರಿಗೆ ಪಾವತಿಸಬೇಕಾಗುತ್ತದೆ. ಸಕ್ಕರೆ ಇಳುವರಿ ಆಧಾರಿತ ಪ್ರಮಾಣ 10.25 ಎಂದು ನಿರ್ಧರಿಸಲಾಗಿದೆ. ಕಳೆದ ವರ್ಷಕ್ಕೆ (2021-22)ಕ್ಕೆ ಹೋಲಿಸಿದಲ್ಲಿ ಈ ದರ ಶೇ. 2.6 ಹೆಚ್ಚಳವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಧಾನ ಮಂತ್ರಿಗಳು ಅಧ್ಯಕ್ಷರಾಗಿರುವ ಆರ್ಥಿಕ ವ್ಯವಹಾರಗಳ ಮೇಲಿನ ಕ್ಯಾಬಿನೆಟ್ ಸಮಿತಿ ಬುಧವಾರ ಸೇರಿದ್ದ ಸಭೆಯಲ್ಲಿ ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ದರ (ಎಫ್ ಆರ್ ಪಿ) ವನ್ನು ಅಕ್ಟೋಬರ್‌ನಿಂದ ನೀಡಲು ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಲಾಗಿದೆ. 

ಐದು ಕೋಟಿ ಕಬ್ಬು ಬೆಳೆಗಾರರು ಮತ್ತು ಅವರ ಅವಲಂಬಿತರು ಹಾಗೂ ಐದು ಲಕ್ಷ ಮಂದಿ ಸಕ್ಕರೆ ಕಾರ್ಖಾನೆಗಳ ನೌಕರರು ಮತ್ತು ಪೂರಕ ಉದ್ಯಮಗಳ ಜನರಿಗೆ ಇದರಿಂದ ನೆರವಾಗುತ್ತದೆ ಎಂದು ಸಮಿತಿ ಹೇಳಿದೆ. 
ರೈತರ ಹಿತಾಸಕ್ತಿಯನ್ನು ಕಾಪಾಡುವ ಕಾರ್ಖಾನೆಗಳ ಇಳುವರಿ ದರ 9.5%ಗಿಂತ ಕಡಿಮೆ ಇದ್ದಲ್ಲಿ ರೈತರಿಂದ ಯಾವುದೇ ಕಡಿತ ಮಾಡುವಂತಿಲ್ಲ. 2021-22ರ ಹಂಗಾಮಿನಲ್ಲಿ  ಪ್ರತಿ ಕ್ವಿಂಟಲ್‌ಗೆ 275.50 ರೂಪಾಯಿ ಪಡೆಯುತ್ತಿದ್ದ ರೈತರು ಈ ದರ ನಿರ್ಣಯದಿಂದಾಗಿ 2022-23ರ ಹಂಗಾಮಿನಲ್ಲಿ 282.125 ರೂಪಾಯಿಗಳನ್ನು ಪ್ರತಿ ಕ್ವಿಂಟಲ್‌ಗೆ ಪಡೆಯುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

“2022-23 ರ ಸಕ್ಕರೆ ಋತುವಿನಲ್ಲಿ ಕಬ್ಬಿನ ಉತ್ಪಾದನೆಯ A2-FL ವೆಚ್ಚವು (ಅಂದರೆ ನಿಜವಾದ ಉತ್ಪಾದನಾ ವೆಚ್ಚ ಮತ್ತು ಕುಟುಂಬ ಕಾರ್ಮಿಕರ ಶ್ರಮ ಮೌಲ್ಯ) ಕ್ವಿಂಟಲ್‌ಗೆ 162 ರುಪಾಯಿ. 10.25% ನಷ್ಟು ಚೇತರಿಕೆಯ ದರದಲ್ಲಿ ಕ್ವಿಂಟಲ್‌ಗೆ 305 ರೂಪಾಯಿಗಳು. ಈ ಎಫ್ ಆರ್ ಪಿ ಉತ್ಪಾದನಾ ವೆಚ್ಚಕ್ಕಿಂತ 88.3% ಹೆಚ್ಚಾಗಿದೆ. ಇದರಿಂದಾಗಿ ರೈತರಿಗೆ ಅವರ ವೆಚ್ಚಕ್ಕಿಂತ 50% ಕ್ಕಿಂತ ಹೆಚ್ಚಿನ ಲಾಭವನ್ನು ನೀಡುವ ಭರವಸೆಯನ್ನು ಖಚಿತಪಡಿಸುತ್ತದೆ.

"ಕೇಂದ್ರ ಸರ್ಕಾರದ ರೈತಪರ ನೀತಿಗಳಿಂದಾಗಿ, ಕಬ್ಬು ಕೃಷಿ ಮತ್ತು ಸಕ್ಕರೆ ಉದ್ಯಮವು ಕಳೆದ 8 ವರ್ಷಗಳಲ್ಲಿ ಬಹಳ ದೂರ ಸಾಗಿದೆ ಮತ್ತು ಈಗ ಸ್ವಯಂ-ಸುಸ್ಥಿರತೆಯ ಮಟ್ಟವನ್ನು ತಲುಪಿದೆ" ಎಂದು ಹೇಳಿಕೆ ತಿಳಿಸಿದೆ. "ಇದು ಸರ್ಕಾರದ ಸಕಾಲಿಕ ಮಧ್ಯಸ್ಥಿಕೆಗಳು ಮತ್ತು ಸಕ್ಕರೆ ಉದ್ಯಮ, ರಾಜ್ಯ ಸರ್ಕಾರಗಳು, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಮತ್ತು ರೈತರ ಸಹಯೋಗದ ಫಲಿತಾಂಶವಾಗಿದೆ" ಎಂದು ವಿವರಿಸಲಾಗಿದೆ.

ಸರ್ಕಾರದ ನಿಲುವು-ರೈತರ ತಕರಾರು

ಈ ದರ ಹೆಚ್ಚಳದ ಆದೇಶಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ “ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕಬ್ಬಿನ ಎಫ್ ಆರ್ ಪಿ ದರ  ರೈತರಿಗೆ ಮಾಡಿರುವ ಅನ್ಯಾಯ. ಕಬ್ಬಿಗೆ ಬಳಸುವ ರಸಗೊಬ್ಬರದ ಪೊಟ್ಯಾಶ್ 850 ರಿಂದ 1700 ರೂಪಾಯಿ, ಡಿಎಪಿ 1000 ದಿಂದ 1350 ರೂಪಾಯಿಗಳಿಗೆ  ಏರಿಕೆಯಾಗಿದೆ. ಕಬ್ಬು ಕಟಾವು ಕೂಲಿ 350 ರಿಂದ 600 ರೂಪಾಯಿಗೆ ಹೆಚ್ಚಿದೆ. ಕಬ್ಬಿನ ಬೀಜದ ಬೆಲೆ 2500 ರಿಂದ 3200 ರೂಪಾಯಿಗೆ ಹೆಚ್ಚಳವಾಗಿದೆ. ಅಂದರೆ, ಕಬ್ಬು ಬೆಳೆಯಲು ಅಗತ್ಯವಾದ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿವೆ. 

ಆದರೆ ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರ ಟನ್ನಿಗೆ ಕೇವಲ 150 ರೂ ಏರಿಕೆ ಮಾಡಿ ದರವನ್ನು ಕ್ವಿಂಟಾಲ್‌ಗೆ 305 ರೂಪಾಯಿ ಎಂದು ನಿಗದಿ ಮಾಡಿದೆ. ಇದು ನ್ಯಾಯವೇ? ಕಬ್ಬು ಬೆಳೆಯುವ ರೈತರು ಪುನರ್ ಪರಿಶೀಲನೆಗೆ ಒತ್ತಾಯಿಸುತ್ತೇವೆ. ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಆಧಾರಿತ ಪ್ರಮಾಣ 10 ರಿಂದ  10.25 ಕೆ ಏರಿಕೆ ಮಾಡಿ, ರೈತರಿಗೆ 50ರೂ ಹೆಚ್ಚುವರಿ ಹೊರೆ ಬರುವಂತೆ ಮಾಡಲಾಗಿದೆ. ಕೇಂದ್ರ ಸರ್ಕಾರ ಕಬ್ಬು ಬೆಳೆಯುವ ರೈತರಿಗೆ ಮತ್ತೊಂದು ರೀತಿ ದ್ರೋಹ ಬಗೆದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. 

ನಿಮಗೆ ಏನು ಅನ್ನಿಸ್ತು?
8 ವೋಟ್