
- ಕಾಫಿ ಬೋರ್ಡ್ ನೇತೃತ್ವದಲ್ಲಿ ಕಾಫಿ ಕ್ಷೇತ್ರೋತ್ಸವ ಕಾರ್ಯಕ್ರಮ
- ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶ
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಠಸಾಗರದಲ್ಲಿ ನ.17ರಂದು ಕಾಫಿ ಕ್ಷೇತ್ರೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
ಜಿಲ್ಲಾ ಕಾಫಿ ಮಂಡಳಿ ವಿಸ್ತರಣಾ ವಿಭಾಗ (ಕಾಫಿ ಬೋರ್ಡ್) ವತಿಯಿಂದ ಕಾರ್ಯಕ್ರಮ ನಡೆಸಲಾಗುತ್ತಿದ್ದು, "ವಿಚಾರ ಸಂಕಿರಣ, ಕಾಫಿ ಕೃಷಿ ವಸ್ತು ಪ್ರದರ್ಶನ ಹಾಗೂ ಕೃಷಿ ಚಿಂತನ ಮಂಥನದ ʼಟ್ರೇಲರ್ʼ ಕೃತಿ ಬಿಡುಗಡೆಯಾಗಲಿದೆ.
ಈ ಬಗ್ಗೆ ಕಾಫಿ ಬೋರ್ಡ್ ಉಪ ನಿರ್ದೇಶಕ ಡಾ. ಮಲ್ಲಿಕಾರ್ಜುನ್ ಈ ದಿನ.ಕಾಮ್ಗೆ ಮಾಹಿತಿ ನೀಡಿ, "12 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಕಾಫಿ ಕ್ಷೇತ್ರೋತ್ಸವ ಆಯೋಜಿಸಲಾಗಿತ್ತು. ಆ ನಂತರದಲ್ಲಿ ಕ್ಷೇತ್ರೋತ್ಸವ ಮಾಡಿರಲಿಲ್ಲ. ಈಗ ಮತ್ತೆ ಕಾಫಿ ಬೋರ್ಡ್ ಆ ನಿಟ್ಟಿನಲ್ಲಿ ಕಾರ್ಯನಿರ್ವಹಣೆಗೆ ಮುಂದಾಗಿದ್ದು, ಕಾಫಿ ಬೆಳೆಗಾರರು, ಸಾರ್ವಜನಿಕರು ಮತ್ತು ಆಸಕ್ತ ನಾಗರಿಕರು ಭಾಗಿಯಾಗಬಹುದು" ಎಂದು ಮಾಹಿತಿ ನೀಡಿದರು.
"ಕಾಫಿ ಬೆಳೆಗೆ ಕಾಡುವ ಕೀಟ ಬಾಧೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಹೊಸ ಆವಿಷ್ಕಾರ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳ್ಳಲಿದೆ. ʼಶಾಟ್ ಹೋಲ್ ಬೋಲ್ ಕಂಟ್ರೋಲ್ʼ ಮಾದರಿಯಲ್ಲಿ ಲೂರ್ ಎಂಬ ದ್ರಾವಣವನ್ನು ಗಿಡಕ್ಕೆ ಕಟ್ಟಲಾಗುತ್ತದೆ. ಕೀಟಗಳು ಆಕರ್ಷಣೆಗೊಂಡು ಬಂದಾಗ ಅಂಟಿಕೊಂಡು ಸಾವನ್ನಪ್ಪುತ್ತವೆ. ಆಗ ಕಾಫಿ ಗಿಡಕ್ಕೆ ಹುಳಗಳ ಕಾಟ ಇರುವುದಿಲ್ಲ" ಎಂದು ಅವರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಸಕಲೇಶಪುರ | ನಿಲ್ಲದ ಕಾಡಾನೆ ಹಾವಳಿ; ಅಡಿಕೆ, ಬಾಳೆ, ಕಾಫಿ ಭತ್ತದ ಬೆಳೆ ಹಾನಿ
ಅಲ್ಲದೆ, "ಕೃಷಿಯಿಂದ ವಿಮುಖರಾಗುತ್ತಿರುವ ರೈತರನ್ನು, ಯುವ ಜನರನ್ನು ಮತ್ತೆ ಕೃಷಿ ಕಡೆಗೆ ಒಲವು ಮೂಡಿಸಲು, ವ್ಯವಸಾಯದಲ್ಲಿ ತೊಡಗುವಂತೆ ಮಾಡಲು ಆಲೋಚನೆಗಳನ್ನು ʼಸೆಟ್ʼ ಮಾಡಿಕೊಳ್ಳಬೇಕಾದ ವಿಧಾನವನ್ನು ಕೃಷಿ ಚಿಂತನ ಮಂಥನದ ʼಟ್ರೇಲರ್ʼ ಕೃತಿಯಲ್ಲಿ ವಿವರಿಸಲಾಗಿದೆ. ಕೃಷಿ ಸಂಬಂಧಿಸಿದಂತೆ ಹಲವಾರು ಅಗತ್ಯ ಮಾಹಿತಿಗಳು ದೊರೆಯಲಿವೆʼ ಎಂದು ಡಾ. ಮಲ್ಲಿಕಾರ್ಜುನ್ ವಿವರಿಸಿದರು.
ಕಾಫಿ ಮಂಡಳಿಯ ಕಾರ್ಯದರ್ಶಿ ಹಾಗೂ ಸಿ.ಇ.ಓ ಡಾ. ಕೆ ಜಿ ಜಗದೀಶ್ ಸೇರಿದಂತೆ ಹಲವು ಗಣ್ಯರು ಕೃಷಿ ವಿಜ್ಞಾನಿಗಳು, ಮಾರ್ಗದರ್ಶಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು.