ಕನಿಷ್ಠ ಬೆಂಬಲ ಬೆಲೆ ಸಮಿತಿಯನ್ನು ತಿರಸ್ಕರಿಸಿದ ಸಂಯುಕ್ತ ಕಿಸಾನ್‌ ಮೋರ್ಚಾ; ಸಮಿತಿಯ ಭಾಗವಾಗಲು ನಿರಾಕರಣೆ

Samyukta Kisan Morcha Rejects MSP Panel
  • ʼಸರ್ಕಾರಿ ರೈತರನ್ನುʼ ಈ ಸಮಿತಿಯಲ್ಲಿ ಸೇರ್ಪಡೆ ಮಾಡಲಾಗಿದೆ. 
  • ಕಾರ್ಪೋರೇಟ್ ಜನರನ್ನು ಸಹ ಈ ಸಮಿತಿಯಲ್ಲಿ ಸೇರಿಸಲಾಗಿದೆ. 

ಕೇಂದ್ರ ಸರ್ಕಾರ ಸೋಮವಾರ ರಚಿಸಿದ್ದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸಮಿತಿಯನ್ನು ತಿರಸ್ಕರಿಸಿ, ಅದರಲ್ಲಿ ಭಾಗಿಯಾಗಲು ಸಂಯುಕ್ತ ಕಿಸಾನ್‌ ಮೋರ್ಚಾ ನಿರಾಕರಿಸಿದೆ.

ಕಳೆದ ವರ್ಷ ಕೇಂದ್ರ ಸರ್ಕಾರ ಜಾರಿ ಮಾಡಿದ್ದ ಮೂರು ರೈತ ವಿರೋಧಿ ಕಾನೂನುಗಳನ್ನು ಹಿಂದೆ ಪಡೆಯಲು ಚಳವಳಿ ಹೂಡಿದ್ದ ರೈತ ಸಂಘಟನೆಗಳ ಒತ್ತಾಯಕ್ಕೆ ಮಣಿದಿದ್ದ ಕೇಂದ್ರ ಸರ್ಕಾರ, ಆ ಮೂರು ಕಾನೂನುಗಳನ್ನು ಹಿಂದೆ ಪಡೆದಿತ್ತು. ಈ ಹಿಂಪಡೆದ ತೀರ್ಮಾನವನ್ನು ಘೋಷಿಸುವ ಸಮಯದಲ್ಲಿ ಪ್ರಧಾನ ಮಂತ್ರಿ ಮೋದಿಯವರು ರೈತರ ಇತರ ಬೇಡಿಕೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದರು. 

ಈ ಇತರ ಬೇಡಿಕೆಗಳಲ್ಲಿ ಎಂಎಸ್‌ಪಿ ಸಮಿತಿಯ ರಚನೆ ಪ್ರಧಾನವಾಗಿತ್ತು. ಅಂದಿನ ಘೋಷಣೆಯಲ್ಲಿ ಮೋದಿಯವರು ಈ ಬೇಡಿಕೆಯನ್ನು ಬೇಷರತ್ತಾಗಿ ಒಪ್ಪಿಕೊಂಡು, ಸಮಿತಿಯನ್ನು ರಚಿಸುವ ವಾಗ್ದಾನ ಮಾಡಿದ್ದರು.

ಆದರೆ, ಮುಷ್ಕರ ಕೊನೆಗೊಂಡು ವರ್ಷಗಳೇ ಕಳೆದರೂ ಕೇಂದ್ರ ಸರ್ಕಾರ ಆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ ಧೋರಣೆ ತಾಳಿತ್ತು. ಇದರಿಂದ ಅಸಮಾಧಾನಗೊಂಡ ರೈತರು ಮುಂಗಾರು ಅಧಿವೇಶನಕ್ಕೆ ಒಂದು ತಿಂಗಳ ಮುಂಚಿತವಾಗಿಯೇ ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ದೇಶದಾದ್ಯಂತ ಪ್ರತಿಭಟನೆ, ಸಭೆ ಮತ್ತು ಹರತಾಳಗಳನ್ನು ಆರಂಭಿಸಿದ್ದರು. 

ಇದರಿಂದ ಮತ್ತೆ ಎಚ್ಚೆತ್ತ ಕೇಂದ್ರ ಸರ್ಕಾರ, ಈ ಅಧಿವೇಶನದಲ್ಲಿ ಇದೇ ಸೋಮವಾರ ಸಮಿತಿ ರಚನೆಯನ್ನು ಘೋಷಿಸಿತು. ಈ ಸಮಿತಿಗೆ ನಿವೃತ್ತ ಕೃಷಿ ಕಾರ್ಯದರ್ಶಿ ಸಂಜಯ್‌ ಅಗರ್‌ವಾಲ್‌ ಅವರನ್ನು ಆಧ್ಯಕ್ಷರನ್ನಾಗಿ ನೇಮಕ ಮಾಡಿತು. ಇವರ ಆಧ್ಯಕ್ಷತೆಯ ಅಡಿಯಲ್ಲಿ ನೀತಿ ಆಯೋಗದ ಸದಸ್ಯ ರಮೇಶ್‌ ಚಂದ್‌, ಭಾರತೀಯ ಆರ್ಥಿಕ ಅಭಿವೃದ್ಧಿ ಸಂಸ್ಥೆಯ ಕೃಷಿ ಅರ್ಥಶಾಸ್ತ್ರಜ್ಞ ಸಿಎಸ್‌ಸಿ ಶೇಖರ್‌, ಅಹಮದಾಬಾದಿನ ಐಐಎಂ ಸಂಸ್ಥೆಯ ಸುಖಪಾಲ್‌ ಸಿಂಗ್‌, ಕೃಷಿ ವೆಚ್ಚ ಮತ್ತು ದರಗಳ ಆಯೋಗದ ಹಿರಿಯ ಸದಸ್ಯ  ನವೀನ್‌ ಪಿ ಸಿಂಗ್ ಇದ್ದಾರೆ. 

ಇವರೊಂದಿಗೆ ರಾಷ್ಟ್ರೀಯ ಪ್ರಶಸ್ತಿ ಪಡೆದ ಭರತ್‌ ಭೂಷಣ್‌ ತ್ಯಾಗಿ, ಇತರೆ ರೈತ ಸಂಘಟನೆಗಳ ಸದಸ್ಯರಾದ ಗುಣವಂತ ಪಾಟೀಲ್‌, ಕೃಷ್ಣೇಶ್ವರ ಚೌಧುರಿ, ಪ್ರಮೋದ್‌ ಕುಮಾರ್‌ ಚೌಧುರಿ, ಗುಣಿ ಪ್ರಕಾಶ್‌ ಮತ್ತು ಸಯ್ಯದ್‌ ಪಾಷಾ ಪಾಟೀಲ್ ಇವರುಗಳನ್ನು ಸೇರಿಸಲಾಗಿತ್ತು.

ಜೊತೆಗೆ, ಇಫ್ಕೋ ಅಧ್ಯಕ್ಷ ದಿಲೀಪ್‌ ಸಂಘಾನಿ ಮತ್ತು ಸಿ.ಎನ್.ಆರ್.ಐ ಜನರಲ್‌ ಸೆಕ್ರೆಟರಿ  ಬಿನೋದ್‌ ಆನಂದ್‌ ಇವರನ್ನೂ ಸೇರಿಸಲಾಗಿತ್ತು. ಇವರ ಜೊತೆಗೆ ಕೃಷಿ ವಿಶ್ವವಿದ್ಯಾಲಯಗಳ ಐದು ಮಂದಿ ಹಿರಿಯ ಸದಸ್ಯರು ಮತ್ತು ಕರ್ನಾಟಕ, ಆಂಧ್ರ ಪ್ರದೇಶ, ಸಿಕ್ಕಿಂ ಮತ್ತು ಒಡಿಸ್ಸಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳನ್ನು ಇದರಲ್ಲಿ ಸೇರಿಸಲಾಗಿದೆ.

ಇವರೆಲ್ಲರನ್ನೂ ಒಳಗೊಂಡಂತೆ 29 ಮಂದಿ ಸದಸ್ಯರನ್ನು ನೇಮಕ ಮಾಡಿ ಗೆಜೆಟ್‌ ಪ್ರಕಟಣೆ ನೀಡಿದೆ.

ಇದರಲ್ಲಿ ಮೂರು ಮಂದಿ ರೈತ ಪ್ರತಿನಿಧಿಗಳಿಗೆ ಅವಕಾಶವನ್ನು ಕಲ್ಪಿಸಲಾಗಿತ್ತು. ಮತ್ತು ಈ ಮೂರು ಹೆಸರುಗಳನ್ನು ಸೂಚಿಸುವಂತೆ ಎಸ್‌ಕೆಎಂ ಸಂಘಟನೆಯನ್ನು ಕೋರಲಾಗಿದೆ ಎಂದು ತಿಳಿಸಲಾಗಿತ್ತು.  ಆದರೆ, ಎಸ್‌ಕೆಎಂ ಪ್ರತಿನಿಧಿಗಳ ಸಭೆಯಲ್ಲಿ “ಈ ಸಮಿತಿಯನ್ನು ತಿರಸ್ಕರಿಸುವಂತೆ ಮತ್ತು ಈ ಸಮಿತಿಯಲ್ಲಿ ಪಾಲ್ಗೊಳ್ಳದಿರುವಂತೆ ತೀರ್ಮಾನ ತಗೆದುಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಎಸ್‌ಕೆಎಂ ಸ್ಪಷ್ಟಪಡಿಸಿದೆ. 

“ಯಾರು ಈ ಹಿಂದೆ ಅದೇ ಮೂರು ರೈತ ವಿರೋಧಿ ಕಾನೂನುಗಳನ್ನು ಬೆಂಬಲಿಸಿದ್ದರೋ ಅಂತಹ ʼಸರ್ಕಾರಿ ರೈತರನ್ನುʼ ಈ ಸಮಿತಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಇದರಿಂದ ನಿಜವಾದ ರೈತರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಆದ್ದರಿಂದ ನಾವು ಈ ಸಮಿತಿಯನ್ನು ತಿರಸ್ಕರಿಸುತ್ತೇವೆ ಮತ್ತು ಇದರಲ್ಲಿ ಭಾಗವಹಿಸುವುದಿಲ್ಲ” ಎಂದು ಎಸ್‌ಕೆಎಂ ನಾಯಕರು ತಮ್ಮ ನಿಲುವನ್ನು ಖಚಿತಪಡಿಸಿದ್ದಾರೆ.

ಕಿಸಾನ್ ಮೋರ್ಚಾ ನಾಯಕರ ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅಭಿಮನ್ಯು ಕೋಹರ್ ಈ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಮುಂದುವರಿದು, "ಕಾರ್ಪೋರೇಟ್ ಜನರನ್ನು ಸಹ ಈ ಸಮಿತಿಯಲ್ಲಿ ಸೇರಿಸಲಾಗಿದೆ. ಇದು ಉದ್ದೇಶ್ಯಪೂರ್ವಕವಾಗಿ ಮಾಡಲಾಗುತ್ತಿರುವ ಪಿತೂರಿ. ಈ ಬಗ್ಗೆ ವಿವರವಾದ ಹೇಳಿಕೆಯನ್ನು ಬೇಗನೆ ಬಿಡುಗಡೆ ಮಾಡಲಾಗುತ್ತದೆ" ಎಂದು ಹೇಳಿದರು. 

ನಿಮಗೆ ಏನು ಅನ್ನಿಸ್ತು?
0 ವೋಟ್