ಕೂಡಲೇ ಎಂಎಸ್‌ಪಿ ಸಮಿತಿ ರಚಿಸಿ; ಆಹಾರ ಧಾನ್ಯ ದಾಸ್ತಾನು ಕುರಿತ ಶ್ವೇತಪತ್ರ ಬಿಡುಗಡೆ ಮಾಡಿ: ಕಾಂಗ್ರೆಸ್‌ ಒತ್ತಾಯ

Deepender Singh Hooda Congress Leader
  • ಆಹಾರ ಧಾನ್ಯಗಳ ದಾಸ್ತಾನು ಕಳೆದ 15 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಇದೆ  
  • ಎಸ್‌ಕೆಎಂನ “ವಿಶ್ವಾಸದ್ರೋಹದ ಸೆಮಿನಾರ್”ಗಳಿಗೆ ಕಾಂಗ್ರೆಸ್‌ನ ನೈತಿಕ ಬೆಂಬಲ 

ದೆಹಲಿ ಗಡಿಗಳಲ್ಲಿ ಧರಣಿ ನಿರತ ರೈತರಿಗೆ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ನೀಡಿದ ಭರವಸೆಯಂತೆ ಎಂಎಸ್‌ಪಿ ಸಮಿತಿಯನ್ನು ಕೂಡಲೇ ರಚಿಸಬೇಕೆಂದು ಕಾಂಗ್ರೆಸ್‌ ಪಕ್ಷವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಇದೇ ಸಂದರ್ಭದಲ್ಲಿ ಆಹಾರ ಧಾನ್ಯಗಳ ದಾಸ್ತಾನನ್ನು ಕುರಿತ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. 

"ನಾವು ಈ ಕೂಡಲೇ ಕನಿಷ್ಠ ಬೆಂಬಲ ಬೆಲೆ ಸಮಿತಿಯನ್ನು ರಚಿಸಬೇಕೆಂದು ಒತ್ತಾಯಿಸುತ್ತಿದ್ದೇವೆ. ಸರ್ಕಾರ ಕೂಡಲೇ ಇದನ್ನು ಕಾರ್ಯಗತ ಮಾಡಬೇಕು" ಎಂದು ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ.

ಆಹಾರ ಧಾನ್ಯಗಳ ಕುರಿತ ವಾಸ್ತವಾಂಶಗಳನ್ನು ಬಿಡುಗಡೆ ಮಾಡಿದ ಕಾಂಗ್ರೆಸ್‌ ನಾಯಕ ದೀಪೇಂದರ್‌ ಸಿಂಗ್‌ ಹೂಡ, "ಆಹಾರ ಧಾನ್ಯಗಳ ದಾಸ್ತಾನು ಕಳೆದ 15 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಇದೆ ಮತ್ತು ತಲಾವಾರು ದಾಸ್ತಾನು ಕಳೆದ 50 ವರ್ಷಗಳಿಗಿಂತ ಕಡಿಮೆ ಇದೆ" ಎಂದು ಹೇಳಿದ್ದಾರೆ.

"ಇದಕ್ಕೆ ಕಾರಣ ಬಿಜೆಪಿ ಆಡಳಿತ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಗುಜರಾತ್‌ ಸೇರಿದಂತೆ 10 ರಾಜ್ಯಗಳಲ್ಲಿ ಗೋಧಿ ಸಂಗ್ರಹಣೆಯ ಪ್ರಮಾಣವನ್ನು ಶೇ. 10ರಷ್ಟು ಕಡಿಮೆ ಮಾಡಿದೆ. ಹಾಗೆಯೇ ಈ ಕೂಡಲೇ ಆಹಾರ ಧಾನ್ಯಗಳ ಸಂಗ್ರಹಣೆಯ ಬಗ್ಗೆ ಶ್ವೇತ ಪತ್ರವನ್ನು ಹೊರಡಿಸಬೇಕು. ಅದರಲ್ಲಿ ಗೋಧಿ ರಫ್ತಿನಿಂದ ಯಾರಿಗೆ ಲಾಭವಾಗುತ್ತಿದೆ ಎಂದು ಸ್ಪಷ್ಟಪಡಿಸಬೇಕು" ಎಂದು ಅವರು ಆಗ್ರಹಿಸಿದ್ದಾರೆ. "ಆ ಶ್ವೇತ ಪತ್ರದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಧಾನ್ಯ ಸಂಗ್ರಹಣೆಯ ನೀತಿಯನ್ನು ಸಹ ಸ್ಪಷ್ಟಪಡಿಸಬೇಕು" ಎಂದು ಅವರು ಒತ್ತಾಯಿಸಿದ್ದಾರೆ. 

"ಕಾಂಗ್ರೆಸ್‌ ರೈತರ ಪರವಾಗಿದ್ದು, ಇದೇ ಜುಲೈ 18ರಂದು ಆರಂಭವಾಗುವ ಮುಂಗಾರು ಸಂಸತ್‌ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಲಿದೆ. ಹಾಗೆಯೇ ಜುಲೈ 18 ರಿಂದ 31ರವರೆಗೆ ಸಂಯುಕ್ತ ಕಿಸಾನ್‌ ಮೋರ್ಚಾ ಏರ್ಪಡಿಸಲಿರುವ “ವಿಶ್ವಾಸದ್ರೋಹದ ಸೆಮಿನಾರ್”ಗಳಿಗೆ ಕಾಂಗ್ರೆಸ್‌ನ ನೈತಿಕ ಬೆಂಬಲ ನೀಡಲಿದೆ ಎಂದು ಅವರು ತಿಳಿಸಿದರು.

"ಬಿಜೆಪಿ ಸರ್ಕಾರ ರೈತರನ್ನು ಶೋಷಣೆ ಮಾಡಿ ಬೃಹತ್‌ ಕೈಗಾರಿಕೋದ್ಯಮಿಗಳಿಗೆ ಸಹಾಯ ಮಾಡುವ ಉದ್ದೇಶ ಹೊಂದಿದೆ. ನಾವು ಹೀಗಾಗಲು ಬಿಡುವುದಿಲ್ಲ" ಎಂದು ಕಾಂಗ್ರೆಸ್ ಹೇಳಿದೆ.

"ಸರ್ಕಾರದ ಇಂತಹ ನೀತಿಯಿಂದಾಗಿ ದೇಶದ ಆಹಾರ ಭದ್ರತೆ, ರೈತರ ಆದಾಯ ಭದ್ರತೆ ವಿಷಯಗಳು ಅಪಾಯದಲ್ಲಿವೆ. ಈ ಅಪಾಯ ದೇಶದ ಜನತೆಯನ್ನು ಮತ್ತು ರೈತರನ್ನು, ಇದರೊಂದಿಗೆ ಇಡೀ ದೇಶವನ್ನು ಆತಂಕಕ್ಕೆ ಈಡುಮಾಡಿವೆ" ಎಂದು ಅವರು ಆಪಾದಿಸಿದರು. 

ಮುಂದುವರಿದು ಮಾತನಾಡಿದ ಹೂಡ, "ಇದೊಂದು “ಜುಮ್ಲಾ” ಸರ್ಕಾರ. ಇದು ನೀಡಿದ್ದ ಎಲ್ಲ ಭರವಸೆಗಳು ಸುಳ್ಳಾಗಿವೆ. ರೈತರ ಆದಾಯ ದ್ವಿಗುಣ, ಎರಡು ಕೋಟಿ ಉದ್ಯೋಗಗಳು ಮತ್ತು ಕಪ್ಪು ಹಣ ವಾಪಸ್ ತರುವ ನಾಟಕಗಳೇ ಇದಕ್ಕೆ ಸಾಕ್ಷಿ" ಎಂದರು.

ರೈತರ ಎಲ್ಲ ಹೋರಾಟಗಳಿಗೂ ಕಾಂಗ್ರೆಸ್‌ ಬೆಂಬಲ ನೀಡುತ್ತದೆ ಎಂದು ಅವರು ಪುನರುಚ್ಚರಿಸಿದರು.

ಕೇಂದ್ರ ಕೃಷಿ ಮಂತ್ರಿ ತೋಮರ್‌ ಹೇಳಿದ್ದೇನು?
ಕಳೆದ ಸಂಸತ್‌ ಅಧಿವೇಶನದಲ್ಲಿ ಕೇಂದ್ರ ಕೃಷಿ ಮಂತ್ರಿ ನರೇಂದ್ರ ಸಿಂಗ್‌ ತೋಮರ್‌ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡುತ್ತಾ “ಸರ್ಕಾರ ಎಂಎಸ್‌ಪಿ ಸಮಿತಿ ರಚಿಸಲು ಸಿದ್ಧವಾಗಿದೆ. ಈ ಸಮಿತಿಗೆ 2-3 ರೈತ ಸಂಘದ ಪ್ರತಿನಿಧಿಗಳ ಹೆಸರನ್ನು ಸೂಚಿಸುವಂತೆ ಕೋರಲಾಗಿತ್ತು. ಆದರೆ, ಈವರೆಗೂ ಅವರು ಹೆಸರುಗಳನ್ನು ಕಳುಹಿಸಿ ಕೊಟ್ಟಿಲ್ಲ” ಎಂದು ಹೇಳಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್