ಮಕ್ಕಳನ್ನು ತೀವ್ರವಾಗಿ ಕಾಡಲಿದೆ ಬಿಸಿಗಾಳಿಯ ಬಾಧೆ: 2050ರ ಹೊತ್ತಿಗೆ ಅಪಾಯದ ಮಟ್ಟಕ್ಕೆ; ಯೂನಿಸೆಫ್

ಮತ್ತೆ ಮತ್ತೆ ಮರುಕಳಿಸುವ ಬಿಸಿಗಾಳಿಯ ಬಾಧೆ ಮಕ್ಕಳನ್ನು ತೀವ್ರವಾಗಿ ಕಾಡಲಿದೆ; 2050ರ ಹೊತ್ತಿಗೆ ಅತಿರೇಕ ತಲುಪುತ್ತದೆ
  • ಜಗತ್ತಿನ ನಾಲ್ಕು ಮಕ್ಕಳಲ್ಲಿ ಒಂದು ಮಗು ಬಿಸಿಲಿನ ಝಳಕ್ಕೆ ಒಳಗಾಗಿದೆ
  • 2050ರ ಹೊತ್ತಿಗೆ ನಾಲ್ಕರಲ್ಲಿ ಮೂರು ಮಕ್ಕಳು ಈ ಝಳಕ್ಕೆ ಸಿಲುಕಲಿವೆ

ಜಗತ್ತಿನ ಬಹುತೇಕ ಮಕ್ಕಳು ಬಿಸಿಲಿನ ಹೊಡೆತ ಅಥವ ಬಿಸಿಗಾಳಿಯಿಂದ ಉಂಟಾಗುವ ಝಳದ ಪ್ರಕೋಪಕ್ಕೆ ಸಿಲುಕಲಿವೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯೂನಿಸೆಫ್) ವರದಿ ಮಾಡಿದೆ.

ಸಧ್ಯಕ್ಕೆ 55 ಕೋಟಿ 90 ಲಕ್ಷ ಮಕ್ಕಳು ವಾರ್ಷಿಕ 4 ರಿಂದ 5 ಬಾರಿ ಅಪಾಯಕಾರಿ  ಬಿಸಿಗಾಳಿಯ ಹೊಡೆತಕ್ಕೆ ಸಿಕ್ಕುತ್ತಿವೆ ಎಂದು “ದ ಕೋಲ್ಡೆಸ್ಟ್ ಇಯರ್ ಆಫ್ ದ ರೆಸ್ಟ್ ಆಫ್ ದೆರ್ ಲೈವ್ಸ್” ಎಂಬ ವರದಿ ಹೇಳಿದೆ.

Eedina App

2020ರಲ್ಲಿ ಈ ಮಕ್ಕಳ ಸಂಖ್ಯೆ ಶೇ.24 ಆಗಿದೆ. ಆದರೆ 2050ರ ಹೊತ್ತಿಗೆ ಇದು ನಾಲ್ಕು ಪಟ್ಟು ಹೆಚ್ಚಾಗಲಿದ್ದು, ಇದು 150 ಕೋಟಿ ಮಕ್ಕಳನ್ನು ಕಾಡಲಿದೆ ಎಂದು ಈ ವರದಿ ಹೇಳುತ್ತಿದೆ.

“ಅಕ್ಷರಶಃ ಭೂಮಿಯ ಮೇಲಿನ ಪ್ರತಿ ಮಗು ಇದಕ್ಕೆ ಒಳಗಾಗುತ್ತದೆ” ಎನ್ನುವ ಈ ವರದಿ ಹಸಿರು ಮನೆ ಅನಿಲಗಳ ಉತ್ಸರ್ಜನೆ ಕಡಿಮೆ ಇರುವ ಪ್ರದೇಶಗಳನ್ನೂ ಇದು ಕಾಡಲಿದೆ ಮತ್ತು 2050ರ ಹೊತ್ತಿಗೆ 1.7 ಡಿಗ್ರಿ ಸೆಲ್ಷಿಯಸ್ ಹೆಚ್ಚುವರಿ ತಾಪಮಾನವನ್ನು ಎದುರಿಸಬೇಕಾಗುತ್ತದೆ ಎಂದು ಇದು ಎಚ್ಚರಿಸಿದೆ.

AV Eye Hospital ad

15 ದಿನಗಳ ಸರಾಸರಿಯಲ್ಲಿ ಯಾವುದೇ ಸಮಯದಲ್ಲಿ ಸ್ಥಳೀಯ ತಾಪಮಾನಕ್ಕಿಂತ ಶೇ.10 ಬಿಸಿ ಹೆಚ್ಚಾಗುತ್ತದೆ. ಇದು ಮೂರಕ್ಕಿಂತಲೂ ಹೆಚ್ಚು ದಿನ ಸಂಭವಿಸುವ ಸಾಧ್ಯತೆ ಇದೆ ಎಂಬುದು ವರದಿಯ ಮುಖ್ಯಾಂಶಗಳಲ್ಲಿ ಒಂದು.

ಆಟ-ಪಾಠಗಳ ಕಾರಣ ವಯಸ್ಕರಿಗಿಂತ ಹೆಚ್ಚು ಕಾಲ ತೆರೆದ ಬಿಸಿಲಿನಲ್ಲಿ ಬದುಕುವ ಮಕ್ಕಳು ಈ ಬಿಸಿಯಿಂದ ಹಾನಿಗೆ ಈಡಾಗುವ ಸಾಧ್ಯತೆ ಇದೆ.

2020ರ ಅಧ್ಯಯನದ ಪ್ರಕಾರ ಜಗತ್ತಿನ ನಾಲ್ಕು ಮಕ್ಕಳಲ್ಲಿ ಒಂದು ಸರಾಸರಿ 4.7 ದಿನ ಬಿಸಿಲಿನ ಝಳಕ್ಕೆ ಒಳಗಾಗಿದೆ. ಆದರೆ 2050ರ ಹೊತ್ತಿಗೆ ಕಡಿಮೆ ಉತ್ಸರ್ಜನೆಯ ಪರಿಸ್ಥಿತಿಯಲ್ಲಿ ಸಹ ನಾಲ್ಕರಲ್ಲಿ ಮೂರು ಮಕ್ಕಳು ಈ ಝಳಕ್ಕೆ ಸಿಲುಕಲಿವೆ.

ಇದರಲ್ಲಿ ದಕ್ಷಿಣ ಏಷಿಯಾದ ಪಶ್ಚಿಮ ಮತ್ತು ಆಗ್ನೇಯ ಭಾಗಗಳ ಮಕ್ಕಳು, ದಕ್ಷಿಣ ಯೂರೋಪ್ ಮತ್ತು ಉತ್ತರ ಆಫ್ರಿಕದ ಮಕ್ಕಳು ಇದಕ್ಕೆ ಹೆಚ್ಚು ಈಡಾಗಲಿವೆ.

ಈ ಬಿಸಿಲಿನ ಝಳ 2.4 ಡಿಗ್ರಿ ಹೆಚ್ಚಾದರೂ ಸಹ ದಕ್ಷಿಣ ಅಮೆರಿಕದ ಸ್ವಲ್ಪ ಭಾಗ ಮತ್ತು ಆಸ್ಟ್ರೇಲಿಯ ಮತ್ತು ಏಷಿಯಾದ ಹೆಚ್ಚು ಭಾಗ ಈ ಸಮಸ್ಯೆಗೆ ಈಡಾಗಲಿದೆ ಎಂಬುದನ್ನು ಯೂನಿಸೆಫ್ ವರದಿ ಗ್ರಹಿಸಿದೆ.

ಹೀಗೆ ಈ ತಾಪಮಾನ ಹೆಚ್ಚಳದ ಸಮಸ್ಯೆಗೆ ಒಳಗಾಗುವ ಮಕ್ಕಳಲ್ಲಿ ಆರೋಗ್ಯ ಮತ್ತು ಸಾಮಾಜಿಕ ಹಾಗೂ ಶೈಕ್ಷಣಿಕ ತೊಂದರೆಗಳು ವ್ಯಾಪಕವಾಗಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. 

ಈ ಶಾಖ ಹೆಚ್ಚಳವು ಹೀಟ್ ಸ್ಟ್ರೋಕ್ ಅಥವಾವ ಉಷ್ಣಾಧಿಕ್ಯ ಪಾರ್ಶ್ವವಾಯು, ಹೀಟ್ ಸ್ಟ್ರೆಸ್ ಅಥವಾ ಅತಿಶಾಖದ ಮಾನಸಿಕ ಒತ್ತಡ, ಒಗ್ಗದಿರುವಿಕೆ ಅಥವ ಅಲರ್ಜಿ, ಗಂಭೀರ ಉಸಿರಾಟದ ತೊಂದರೆಗಳು, ಆಸ್ತಮಾ, ಸೊಳ್ಳೆ ಜನ್ಯ ಕಾಯಿಲೆಗಳು, ಹೃದಯ ರಕ್ತನಾಳದ ತೊಂದರೆಗಳಿಗೆ ಕಾರಣವಾಗಬಹುದು. ನ್ಯೂನತೆಯ ಪೋಷಣೆ ಮತ್ತು ಅತಿಸಾರ ಸಾಮಾನ್ಯ ಸಂಗತಿಗಳಾಗುತ್ತವೆ ಎಂದು ವರದಿ ಗುರುತಿಸಿದೆ.

ಅತಿ ಧಗೆ ಮಕ್ಕಳು ಮತ್ತು ಕಿಶೋರಾವಸ್ಥೆಯವರಲ್ಲಿ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಗಳಿವೆ. ಜೊತೆಗೆ ಆಘಾತದ ನಂತರದ ಒತ್ತಡದಿಂದಾಗುವ ಅಸ್ವಸ್ಥತೆ (PTSD) ಮತ್ತು ಖಿನ್ನತೆಯ ಸಮಸ್ಯೆಗಳು ಸಹ ಕಾಡಬಹುದು. ಅಲ್ಲದೆ, ಈ ತಾಪ ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಜೀವನೋಪಾಯದ ಮೇಲೆ ಸಹ ಪರಿಣಾಮ ಬೀರಲಿದೆ ಎಂದು ಯೂನಿಸೆಫ್ ಹೇಳಿದೆ.

ಈ ಅತಿ ಶಾಖ ಮಕ್ಕಳ ಆರೋಗ್ಯವನ್ನು ದುರ್ಬಲಗೊಳಿಸುವುದಲ್ಲದೆ, ಪೌಷ್ಟಿಕತೆಯನ್ನು ಕುಂದಿಸಲಿದೆ. ಪರಿಣಾಮ, ಶೈಕ್ಷಣಿಕ ಪ್ರಗತಿ ಮತ್ತು ಹಾಜರಾತಿಯಲ್ಲಿ ಏರುಪೇರುಗಳಾಗಲಿವೆ. ಹೆಚ್ಚಿನ ತಾಪಮಾನ ಮತ್ತು ಕ್ಷೀಣ ಜಲ ಸಂಚಯನ (lower hydration) ಮಕ್ಕಳ ಏಕಾಗ್ರತೆಯನ್ನು ಕುಂಠಿತಗೊಳಿಸುತ್ತದೆ.

ಈ ಬಿಸಿಗಾಳಿಯ ಪ್ರಭಾವದಿಂದ ಉಂಟಾಗುವ ಅವಾಂತರಗಳ ಕಾರಣ ಸಮುದಾಯಗಳು ನೀರು ಮತ್ತು ಆಹಾರಕ್ಕಾಗಿ ಸ್ಫರ್ಧಿಸುವ ಮತ್ತು ದಕ್ಕಿಸಿಕೊಳ್ಳುವ ಒತ್ತಡದಲ್ಲಿ ಬೀಳುತ್ತವೆ. ಏಕೆಂದರೆ, ಅವು ಈ ಬಿಸಿಗಾಳಿಯ ಪ್ರಭಾವದಿಂದ ಹುಲ್ಲುಗಾವಲುಗಳಂತೆಯೇ ಒಣಗಿಹೋಗುತ್ತವೆ. ಆಗ ವಲಸೆ, ಸ್ಥಾನಾಂತರಣಗಳು ಸಾಮಾನ್ಯವಾಗುತ್ತವೆ. ಈ ಬಿಕ್ಕಟ್ಟು/ಘರ್ಷಣೆಯಲ್ಲಿ ಮಕ್ಕಳ ಸುರಕ್ಷತೆ ಸವಾಲಾಗುತ್ತದೆ. ಗಂಭೀರ ದೈಹಿಕ ಹಾನಿ ಮತ್ತು ಹಿಂಸೆಯ ಅಪಾಯಗಳೂ ಇಲ್ಲಿವೆ.

ಮಕ್ಕಳು ಬದಲಾದ ಹವಾಮಾನಕ್ಕೆ ಹೊಂದಿಕೊಂಡು ಬದುಕಲು ಸಿದ್ಧಗೊಳಿಸಿ

ಈ ಅಧ್ಯಯನವು ಹಲವು ಸಂದರ್ಶನಗಳನ್ನೂ ಒಳಗೊಂಡಿದ್ದು, ಇಂಥ ಒಂದು ಮಾತುಕತೆಯಲ್ಲಿ ಜಿಂಬಾಬ್ವೆಯ 19 ವರ್ಷದ ನಕೋಶಿ ನ್ಯಾತಿ ಎಂಬ ಯುವತಿ “ನಿತ್ಯ ಐದು ಕಿ.ಮೀ. ದೂರದ ಶಾಲೆಗೆ ನಡೆದು ಹೋಗುವಾಗ ಬಿಸಿಲ ತಾಪಕ್ಕೆ ಚರ್ಮ ಸುಟ್ಟು ಸುಡರಿಕೊಳ್ಳುತ್ತದೆ. ಬೆವರಿನ ಧಾರೆ ಹರಿದು ಹೋಗುವುದನ್ನು ನನ್ನಿಂದ ಸಹಿಸಲಾಗದು. ಅಂಥ ಧಗೆಯಲ್ಲೂ ಅಂತಿಮ ಪರೀಕ್ಷೆ ಬರೆಯುವಾಗ ನಾವು ಕಾಮನ ಬಿಲ್ಲನ್ನು ಕಾಣಲಿಚ್ಛಿಸುತ್ತೇವೆ. ಆದರೆ, ಅದು ಹೇಗೆ ಸಾಧ್ಯ? ಇದು ನನ್ನೊಬ್ಬಳ ಕತೆ ಅಲ್ಲ, ಈ ನಗರದ ಸಾವಿರಾರು ಮಕ್ಕಳದು” ಎನ್ನುತ್ತಾಳೆ. 

ಇದನ್ನು ಓದಿದ್ದೀರಾ: ಏರುತ್ತಲೇ ಇದೆ ಸಾಗರಗಳ ತಾಪಮಾನ | ಹಕ್ಕಿಗಳ ಮಾರಣಹೋಮ; ಚಂಡಮಾರುತಗಳಿಗೆ ಆಹ್ವಾನ..

ಯೂನಿಸೆಫ್ ದತ್ತಾಂಶಗಳನ್ನು ಗಮನಿಸಿದಾಗ, ಹೊಂದಾಣಿಕೆಯ ಮನಃಸ್ಥಿತಿ ರೂಢಿಸಿಕೊಳ್ಳುವ ಮತ್ತು ಉಪಶಮನದ ಕಾರ್ಯತಂತ್ರಗಳನ್ನು ಯೋಜಿಸುವತ್ತ ಒತ್ತು ನೀಡಿರುವುದು ಅರಿವಾಗುತ್ತದೆ. ಈ ಸಮಸ್ಯೆಗೆ ಸುಲಭ ತುತ್ತಾಗಬಲ್ಲ ಜನ ಸಮುದಾಯಗಳನ್ನು ರಕ್ಷಿಸಲು, ಅವರು ಇಂಥ ಸ್ಥಿತಿಯೊಂದಿಗೆ ಹೊಂದಿಕೊಳ್ಳುವುದಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು ಒದಗಿಸುವ ರಚನಾತ್ಮಕ ಸಾಮಾಜಿಕ ಸೇವೆಯ ಅಗತ್ಯವಿದೆ ಎಂದು ಈ ವರದಿ ಹೇಳುತ್ತದೆ. 

ಈ ನಿಟ್ಟಿನಲ್ಲಿ ಯೂನಿಸೆಫ್ ಎಲ್ಲ ದೇಶಗಳಿಗೆ ಹೇಳುವುದೆಂದರೆ;

  • ಈ ಹವಾಮಾನ ದುರಂತದಿಂದ ಮಕ್ಕಳನ್ನು ಸಂರಕ್ಷಿಸಲು ಸಾಮಾಜಿಕ ಸೇವೆಗಳಿಗೆ ಉತ್ತೇಜನ ನೀಡಿ.
  • ಮಕ್ಕಳು ಬದಲಾದ ಹವಾಮಾನಕ್ಕೆ ಹೊಂದಿಕೊಂಡು ಬದುಕಲು ಸಿದ್ಧಗೊಳಿಸಿ.
  • ಹವಾಮಾನ ಬದಲಾವಣೆಯ ನಿಯಂತ್ರಣ, ಹೊಂದಾಣಿಕೆ, ಉಪಶಮನಗಳಿಗೆ ಮೀಸಲಾದ ನಿಧಿಯಲ್ಲಿ ಮಕ್ಕಳು ಮತ್ತು ಯುವಜನತೆಗೆ ಆದ್ಯತೆ ನೀಡಿ.
  • ಹವಾಮಾನದ ಈ ಮಹಾ ದುರಂತವನ್ನು ಎದುರಿಸಲು ಹಸಿರು ಮನೆ ಅನಿಲಗಳ ವಿಸರ್ಜನೆಯನ್ನು ಕಡಿತಗೊಳಿಸಿ.

ಯೂನಿಸೆಫ್ ಮಾಡಿರುವ “ಮಕ್ಕಳ ಹವಾಮಾನ ಅಪಾಯ ಸೂಚಿ”ಯಲ್ಲಿ ಪಶ್ಚಿಮ ಆಫ್ರಿಕದ ಘಿನಿ ಎಂಬ ದೇಶ ಹವಾಮಾನದ ಪೀಡೆಗೆ ತುತ್ತಾಗಲಿರುವ ಪ್ರಮುಖ ದೇಶಗಳಲ್ಲಿ ನಾಲ್ಕನೆಯದು. ಅತಿರೇಕದ ಮಳೆ ಮತ್ತು ಪ್ರವಾಹಗಳು, ಮಕ್ಕಳ ಬದುಕಿನ ಮೇಲೆ ತೀವ್ರ ಪರಿಣಾಮ ಬೀರುತ್ತವೆ ಮತ್ತು ಮಕ್ಕಳಿಗೆ ಅಪಾರ ಜೀವಹಾನಿ ಸಂಭವಿಸಬಹುದು ಎಂದು ಅಂದಾಜು ಮಾಡಲಾಗಿರುವ ದೇಶ ಇದು. 

ಇಲ್ಲಿನ 22 ವರ್ಷದ ಉಮೊವ್ ಹವ ಡಿಯಲ್ಲೊ ಹೇಳುವಂತೆ “ಈ ದುರಂತವನ್ನು ಎದುರಿಸಲು ಮಕ್ಕಳಿಗೆ ‘ಹವಾಮಾನ ಶಿಕ್ಷಣ’ ಅಗತ್ಯವಿದೆ. ಏಕೆಂದರೆ, ದೇಶದ ಇನ್ನೊಂದು ಭಾಗದಲ್ಲಿ ನೀರಿನ ಕೊರತೆಯ ಕಾರಣ ಕ್ಷಾಮ ತಲೆದೋರುತ್ತದೆ. ಮಕ್ಕಳಿಗೆ ಆಹಾರದ ಕೊರತೆಯಾಗಿ, ಅವು ನ್ಯೂನಪೋಷಣೆಗೆ ಈಡಾಗುತ್ತವೆ” ಎಂದು.

ಈ ಹಿನ್ನೆಲೆಯಲ್ಲಿ ಯೂನಿಸೆಫ್ ತನ್ನ 27ನೇ ವಿಶ್ವರಾಷ್ಟ್ರಗಳ ಸಭೆಯಲ್ಲಿ ಹವಾಮಾನ ಬದಲಾವಣೆ ಕಾರ್ಯ ಚೌಕಟ್ಟಿನ ಒಳಗೆ ಮಕ್ಕಳ ವಿಚಾರ ಕುರಿತ ನಷ್ಟ, ಅಪಾಯಗಳನ್ನು ಅರಿತು ಮಕ್ಕಳನ್ನು ಆಯಾ ಸಮುದಾಯಗಳ ಕೇಂದ್ರವಾಗಿಸುವ ಕುರಿತ ಚರ್ಚೆ ಮತ್ತು ಕ್ರಿಯಾ ಯೋಜನೆ ಮತ್ತು ಬೆಂಬಲಕ್ಕೆ ಆದ್ಯತೆ ನೀಡಲಿದೆ.       

ನಿಮಗೆ ಏನು ಅನ್ನಿಸ್ತು?
0 ವೋಟ್
eedina app