ಕೇವಲ ಮೂರು ಜಿಲ್ಲೆಗಳಲ್ಲಿ ಮಾತ್ರ ಭತ್ತಕ್ಕೆ ಬೆಂಬಲ ಬೆಲೆ; ಸರ್ಕಾರದ ತಾರತಮ್ಯ ನೀತಿ ವಿರುದ್ಧ ರೈತರ ಆಕ್ರೋಶ

Rice-Plants
  • ಆಯ್ದ ಮೂರು ಜಿಲ್ಲೆಗಳಲ್ಲಿ ಮಾತ್ರ ಭತ್ತಕ್ಕೆ ₹500 ಪ್ರೋತ್ಸಾಹ ಧನ ನಿಗದಿ ವಿಚಾರ
  • ಎಲ್ಲ ಪ್ರಮುಖ ಆಹಾರ ಬೆಳೆಗಳಿಗೂ ಕಾನೂನಾತ್ಮಕವಾಗಿ ಎಂಎಸ್‌ಪಿ ಜಾರಿಗೆ ಆಗ್ರಹ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ (ಎಂಎಸ್‌ಪಿ) ಭತ್ತ ಖರೀದಿಸುವ ಸಂದರ್ಭದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಾತ್ರ ಭತ್ತಕ್ಕೆ ಕ್ವಿಂಟಾಲ್‌ಗೆ ₹500 ಪ್ರೋತ್ಸಾಹ ಧನ ಘೋಷಿಸಿರುವ ಕೇಂದ್ರ-ರಾಜ್ಯ ಸರ್ಕಾರಗಳ ನಡೆಯ ವಿರುದ್ಧ ಉಳಿದ ಜಿಲ್ಲೆಗಳ ರೈತರು ಆಕ್ರೋಶ  ವ್ಯಕ್ತಪಡಿಸುತ್ತಿದ್ದಾರೆ.

ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ಸೂಚಿಸಿರುವ ಕಜೆ, ಜಯ, ಪಂಚಮುಖಿ, ಸಹ್ಯಾದ್ರಿ, ಉಮಾ, ಅಭಿಲಾಷ, ಜ್ಯೋತಿ ತಳಿಯ ಭತ್ತಗಳಿಗೆ ಮಾತ್ರ ಪ್ರತಿ ಕ್ವಿಂಟಾಲ್‌ಗೆ ₹500 ಪ್ರೋತ್ಸಾಹ ಧನ (ಎಕ್ಸ್‌ಗ್ರೇಷಿಯಾ) ನಿಗದಿ ಮಾಡಿದೆ. ಪಡಿತರ ವ್ಯವಸ್ಥೆಯಲ್ಲಿ ಕರಾವಳಿ ಭಾಗಕ್ಕೆ ಕುಚಲಕ್ಕಿ ವಿತರಿಸಲು ಮೂರು ಜಿಲ್ಲೆಗಳಲ್ಲಿ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆಯಡಿ (ಎಂಎಸ್‌ಪಿ) ಭತ್ತ ಖರೀದಿಸಲು ಆದೇಶ ನೀಡಿದ್ದು, ನವೆಂಬರ್ 21ರಿಂದ ರೈತರ ನೋಂದಣಿ ಆರಂಭವಾಗಿದೆ.

ಈ ಮೂರು ಜಿಲ್ಲೆಗಳಲ್ಲಿ ಖರೀದಿಸುವ ಉಮಾ, ಅಭಿಲಾಷ, ಜ್ಯೋತಿ, ಜೆ, ಜಯ, ಪಂಚಮುಖಿ, ಸಹ್ಯಾದ್ರಿಯ ಸಾಮಾನ್ಯ ಭತ್ತವನ್ನು ಪ್ರತಿ ಕ್ವಿಂಟಾಲ್‌ಗೆ ₹2,040 ನೀಡಿ ಹಾಗೂ ಗ್ರೇಡ್ ‘ಎ’ ಭತ್ತಕ್ಕೆ ₹ 2,060 ಬೆಂಬಲ ಬೆಲೆಯಡಿ ನಿಗದಿಪಡಿಸಲಾಗಿದ್ದು, ಪ್ರತಿ ರೈತರಿಂದ ಎಕರೆಗೆ 16 ಕ್ವಿಂಟಾಲ್‌ನಂತೆ 40 ಕ್ವಿಂಟಾಲ್‌ ಮಿತಿಯಲ್ಲಿ ಭತ್ತ ಖರೀದಿಸುವುದು. ಹೀಗೆ ಖರೀದಿಸುವ ಪ್ರತಿ ಕ್ವಿಂಟಾಲ್‌ ಭತ್ತಕ್ಕೆ ₹500 ಪ್ರೋತ್ಸಾಹ ಧನ ನೀಡುತ್ತಿದ್ದು, ಅದಕ್ಕಾಗಿ ಹಣಕಾಸು ಸಚಿವಾಲಯ ₹100 ಕೋಟಿ ಹಣ ನೀಡಿದೆ.

ಆದರೆ ಕುಚಲಕ್ಕಿಯ ಜ್ಯೋತಿ ಮತ್ತಿತರ ತಳಿಯ ಭತ್ತವನ್ನು ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲೂ ಬೆಳೆಯಲಾಗುತ್ತದೆ. ಹಾಗಾಗಿ ಸರ್ಕಾರ ಈ ಪ್ರೋತ್ಸಾಹಧನವನ್ನು ಕೇವಲ ಮೂರು ಜಿಲ್ಲೆಗಳಿಗೆ ಮಾತ್ರ ನೀಡುವುದು ರೈತರ ನಡುವೆ ಸರ್ಕಾರ ತಾರತಮ್ಯ ಎಸಗಿದಂತೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗುತ್ತಿದೆ.

ಈ ಬಗ್ಗೆ ಶಿವಮೊಗ್ಗ ಜಿಲ್ಲೆ ಹಸಿರು ಸೇನೆ ಮುಖಂಡರಾದ ಕೆ ಟಿ ಗಂಗಾಧರ್‌, ಈ ದಿನ.ಕಾಮ್‌ಗೆ ಪ್ರತಿಕ್ರಿಯೆ ನೀಡಿ, "ದಕ್ಷಿಣ ಕನ್ನಡ ಜಿಲ್ಲೆ ಭತ್ತ ಬೆಳೆಯಲು ಅನುಕೂಲವಾದ ವಾತಾವರಣವನ್ನು ಹೊಂದಿದ್ದರೂ ವಿಪರೀತ ಸುರಿಯುವ ಮಳೆಯಿಂದ ಸತ್ವಯುತ ಮಣ್ಣು ನಿರಂತರವಾಗಿ ಕೊಚ್ಚಿ ಹೋಗುತ್ತದೆ. ಹಾಗಾಗಿ ಅಲ್ಲಿ ಮೂಲ ಹಾಗೂ ಸಂರಕ್ಷಿತವಾಗಬೇಕಾದ ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಪ್ರೋತ್ಸಾಹ ಧನ ನೀಡಲಿ. ಮಲೆನಾಡಿನಲ್ಲಿಯೂ ಕುಚಲಕ್ಕಿಗೆ ಸಂಬಂಧಿಸಿದ ಸಾಂಪ್ರದಾಯಿಕ ಭತ್ತದ ತಳಿಗಳಿದ್ದು, ಅವುಗಳನ್ನು ಸಂರಕ್ಷಿಸಿ ಪ್ರೋಹ್ಸಾಹ ನೀಡಬೇಕಿದೆ. ಹಾಗಾಗಿ ರಾಜ್ಯದ ಎಲ್ಲ ರೈತರ ಭತ್ತದ ಬೆಳೆಗಳಿಗೆ ಬೆಂಬಲ ಬೆಲೆ ಮತ್ತು ಪ್ರೋತ್ಸಾಹ ಧನ ನೀಡಿ ಖರೀದಿ ಮಾಡಲು ಸರ್ಕಾರ ಮುಂದಾಗಬೇಕು" ಎಂದರು.

ಈ ಸುದ್ದಿ ಓದಿದ್ದೀರಾ? ದೆಹಲಿ ರೈತ ಹೋರಾಟ | ಎರಡನೇ ವರ್ಷದ ನೆನಪಿನಲ್ಲಿ ರೈತ ಚಳವಳಿಯಿಂದ ಕಲಿಯಬೇಕಾದ ಪಾಠಗಳು

"ಭತ್ತ ಕಟಾವು ಆರಂಭಕ್ಕೂ ಮುನ್ನ ಕ್ವಿಂಟಾಲ್‌ ಭತ್ತಕ್ಕೆ ₹3100 ಇದ್ದ ಭತ್ತದ ಬೆಲೆ ಈಗ ₹2100ಕ್ಕೆ ಇಳಿದಿದೆ. ಹಾಗಾಗಿ ಆಹಾರ ಬೆಳೆಗಳ ಬೆಲೆ ಸದಾ ಸ್ಥಿರವಾಗಿರಬೇಕು, ಆಗ ಆಹಾರ ಉತ್ಪಾದನೆ ಸ್ಥಿರವಾಗುತ್ತದೆ. ಆಗ ಸಹಜವಾಗಿ ಆಹಾರ ಅಭದ್ರತೆ ನಿಯಂತ್ರಣಕ್ಕೆ ಬರುತ್ತದೆ. ಅದಕ್ಕಾಗಿ, ಕರಾವಳಿ ಮಧ್ಯ ಕರ್ನಾಟಕಗಳಲ್ಲಿ ಪ್ರಮುಖ ಆಹಾರ ಬೆಳೆಯಾದ ಭತ್ತಕ್ಕೆ, ಬೀದರ್‌ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ತೊಗರಿ, ಹಾಸನ, ಚಿತ್ರದುರ್ಗ ಭಾಗಗಳ ರಾಗಿ ಬೆಳೆ ಸೇರಿದಂತೆ ಎಲ್ಲ ಪ್ರಮುಖ ಆಹಾರ ಬೆಳೆಗಳಿಗೂ ಕಾನೂನಾತ್ಮಕವಾಗಿ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಕಡ್ಡಾಯವಾಗಿ ಜಾರಿ ಮಾಡಬೇಕು" ಎಂದು ಅವರು ಒತ್ತಾಯಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180